
ರಾಜೇಶ್ ಶೆಟ್ಟಿ
ರೇಟಿಂಗ್- 3
ಬಿಳಿ ಸ್ಕ್ರೀನ್ ಮುಂದೆ ಕುಳಿತರೆ ಆರಂಭದಲ್ಲೇ ಕಿವಿಗೆ ಬೀಳುವುದು ರಾಜ್ ಬಿ ಶೆಟ್ಟಿಅಲಿಯಾಸ್ ಗುಬ್ಬಿ ಧ್ವನಿ. ರಾಜ್ ಪ್ರೇಕ್ಷಕರಿಗೆ ತಮ್ಮ ನಟನೆ ಮೂಲಕ ಎಷ್ಟುಪ್ರಭಾವ ಬೀರಿದ್ದಾರೆ ಎಂದರೆ ಅವರನ್ನು ನೋಡಿದ ತಕ್ಷಣವೇ ಮುಖದಲ್ಲಿ ನಗು ಮೂಡುತ್ತದೆ. ಅವರ ವಿಷಾದ ಭರಿತ ಧ್ವನಿಯಲ್ಲೇ ಎಲ್ಲೋ ಎಡವಟ್ಟಾಗಿದೆ ಅಂತನ್ನಿಸುವುದಕ್ಕೆ ಶುರುವಾಗಿ ಮಂದಹಾಸ ಮೂಡುತ್ತದೆ. ಅಷ್ಟರ ಮಟ್ಟಿಗೆ ಆರಂಭದಲ್ಲೇ ಟಪಕ್ಕನೆ ಸೆಳೆಯುತ್ತದೆ ಸಿನಿಮಾ. ಅದು ಈ ಸಿನಿಮಾದ ಹೆಗ್ಗಳಿಕೆ.
ಒಂದು ಮೊಟ್ಟೆಕತೆಯಲ್ಲಿ ಆರಂಭವಾಗಿದ್ದ ರಾಜ್ ಶೆಟ್ಟಿಯವರ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ನೋವು ಇಲ್ಲೂ ಮುಂದುವರಿದಿದೆ. ಆ ಬೇಸರ, ಕಸಿನ್‌ಗಳ ಮದುವೆ ಯಾವಾಗ ಎಂಬ ಪ್ರಶ್ನೆ, ಅದಕ್ಕೊಂದು ಭಾಷಣ, ನಾಲ್ಕೈದು ಬ್ರೇಕಪ್ಪು, ಸ್ನೇಹಿತನ ಎಡವಟ್ಟು ಇವೆಲ್ಲಾ ಸೇರಿಕೊಂಡು ಒಂದು ಹಂತಕ್ಕೆ ಬರುವಷ್ಟರಲ್ಲಿ ಗುಬ್ಬಿಗೊಂದು ಹುಡುಗಿ ಸಿಗುತ್ತಾಳೆ ಮತ್ತು ಅವನ ಜೀವನ ಮತ್ತೊಂದು ರೇಂಜಿಗೆ ಹಾಳಾಗುತ್ತದೆ. ಮುಂದೈತೆ ಮಾರಿಹಬ್ಬ.
ಈ ಸಿನಿಮಾದ ನಿಜವಾದ ಶಕ್ತಿ ಕಲಾವಿದರು. ಒಂದೊಂದು ಡೈಲಾಗಿಗೂ ಅವರು ಕೊಡುವ ಎಕ್ಸ್‌ಪ್ರೆಷನ್ನು ಮತ್ತು ಅವರು ಡೈಲಾಗ್ ಹೇಳುವ ಟೈಮಿಂಗ್‌ನಿಂದ ನೋಡುಗರು ಮಂತ್ರಮುಗ್ಧ. ಕತೆ ಒಂಚೂರು ಎಳೆದಂತಾಯಿತು ಅಂತ ಯೋಚನೆ ಬರುವಷ್ಟರಲ್ಲಿ ಯಾರಾದರೊಬ್ಬರು ಏನೋ ಲುಕ್ಕು ಕೊಟ್ಟು ನಗಿಸಿಬಿಡುತ್ತಾರೆ. ಹಾಗಾಗಿ ರಾಜ್ ಬಿ ಶೆಟ್ಟಿ, ಸುಜಯ್ ಶಾಸ್ತ್ರಿ, ಗಿರಿ, ಪ್ರಮೋದ್ ಶೆಟ್ಟಿ, ಶೋಭರಾಜ್ ಮನಸ್ಸಲ್ಲಿ ಉಳಿದುಕೊಂಡುಬಿಡುತ್ತಾರೆ. ಅದರಲ್ಲೂ ಹಲ್ಲಿ ಪಾತ್ರಧಾರಿ ಮತ್ತು ಸಂಭಾಷಣಾಕಾರ ಪ್ರಸನ್ನ ಈ ಸಿನಿಮಾದ ಜಾದೂಗಾರರು.
ಬಾಲಿವುಡ್‌ನಲ್ಲಿ ಆಗಾಗ ಬಳಸುವ, ಕನ್ನಡಕ್ಕೆ ಅಪರೂಪ ಅನ್ನಿಸುವ ಜಾನರ್‌ನ ಕತೆಯುಳ್ಳ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆದರೆ ನಗಿಸಬೇಕು ಅನ್ನುವ ಅವರ ಉತ್ಸಾಹ ಎಷ್ಟುಜಾಸ್ತಿ ಇದೆ ಎಂದರೆ ಕೆಲವೊಂದು ಸನ್ನಿವೇಶಗಳು ಸಿಲ್ಲಿ ಅನ್ನಿಸುತ್ತದೆ. ಅದದನ್ನೇ ಹೇಳುತ್ತಿದ್ದಾರೆ ಅನ್ನಿಸಿದಾಗ ಚೂಯಿಂಗ್‌ಗಮ್‌ನಂತೆ ಭಾಸವಾಗುತ್ತದೆ. ಚಿತ್ರಕತೆ ಬಿಗಿಯಾಗಿದ್ದರೆ ಎಲ್ಲೋ ಹೋಗಬಹುದಾಗಿದ್ದ ಸಿನಿಮಾ ಅಲ್ಲಲ್ಲೇ ಉಳಿದಿರುವುದಕ್ಕೆ ಒಂಚೂರು ವಿಷಾದ.
ನಿರ್ದೇಶನ: ಸುಜಯ್ ಶಾಸ್ತ್ರಿ
ತಾರಾಗಣ: ರಾಜ್ ಬಿ ಶೆಟ್ಟಿ, ಸುಜಯ್ ಶಾಸ್ತ್ರಿ, ಕವಿತಾ ಗೌಡ, ಪ್ರಮೋದ್ ಶೆಟ್ಟಿ, ಶೋಭರಾಜ್, ಗಿರೀಶ್ ಶಿವಣ್ಣ, ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್
ಸಾಗುವ ರಸ್ತೆಯಲ್ಲಿ ಕೆಲವು ತಗ್ಗುಗಳಿದ್ದು ಪಯಣ ನಿಧಾನವಾಗುತ್ತಿದೆ ಎಂದೆನಿಸಿದರೂ ನಗುವೇ ಪಯಣಿಗರನ್ನು ಕಾಪಾಡುತ್ತದೆ ಎನ್ನುವುದು ಸಿನಿಮಾ ನೋಡಿದ ನಂತರ ಆಗಬಹುದಾದ ಜ್ಞಾನೋದಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.