ಬೆಂಗಳೂರು: ಯಶ್ ಮನೆಯ ಸಿನಿಮಾ ಎಂದರೆ ಎಲ್ಲರೂ ಕುತೂಹಲದಿಂದ ನೋಡುತ್ತಾರೆ. ಆ ನಿರೀಕ್ಷೆಗಳು ಸುಳ್ಳಾಗಬಾರದು. ನಾನೇ ನಿರ್ಮಾಪಕಿಯಾಗಿದ್ದರೂ ಏನಾದರೂ ಆದರೆ ಯಶ್ ಉತ್ತರ ಕೊಡಬೇಕಾಗುತ್ತದೆ. ಹೀಗಾಗಿ ಒಳ್ಳೆಯ ಸಿನಿಮಾ ಮಾಡಿ. ಕಲಾವಿದರು, ತಂತ್ರಜ್ಞರು ಯಾರು ಬೇಕೋ ನೀವೇ ಸೆಲೆಕ್ಟ್ ಮಾಡಿಕೊಳ್ಳಿ ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ನನ್ನ ನಿರೀಕ್ಷೆಗಿಂತ ಹೆಚ್ಚಾಗಿಯೇ ಅವರು ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂಬುದಕ್ಕೆ ಟೀಸರ್ ಸಾಕ್ಷಿ. ಸಿನಿಮಾ ಏನು ಕೇಳುತ್ತದೋ ಅದನ್ನು ಕೊಡಬೇಕು ಎಂಬುದು ನಾನು ಯಶ್‌ನಿಂದ ಕಲಿತಿದ್ದೇನೆ. ಅದನ್ನೇ ನನ್ನ ಮೊದಲ ನಿರ್ಮಾಣದ ಚಿತ್ರದಲ್ಲೂ ಪಾಲಿಸಿದ್ದೇನೆ’. ಹೀಗೆ ಹೇಳಿದ್ದು ಯಶ್ ತಾಯಿ ಪುಷ್ಪ ಅರುಣ್‌ಕುಮಾರ್. ಅವರ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಚಿತ್ರದ ನಾಯಕ ಪೃಥ್ವಿ ಅಂಬಾರ್, ‘ನನಗೆ ಈ ಚಿತ್ರದ ಶೂಟಿಂಗ್ ಮುಗಿಯುವ ತನಕ ನಿರ್ಮಾಪಕರು ಯಾರೆಂದು ಗೊತ್ತಿರಲಿಲ್ಲ. ಕೊನೆಗೆ ನಿರ್ಮಾಪಕರು ಯಾರೆಂದು ಗೊತ್ತಾದ ಮೇಲೆಯೇ ನಾನು ಪುಷ್ಪ ಅರುಣ್‌ಕುಮಾರ್ ಮನೆಗೆ ಹೋಗಿದ್ದು. ಅವರ ಕಾಲಿಗೆ ನಮಸ್ಕರಿಸಿದಾಗ ‘ನನ್ನ ಮಗನಿಗಿಂತ ಚೆನ್ನಾಗಿ ಬೆಳೆಯಪ್ಪ’ ಎಂದು ಹಾರೈಸಿದರು’ ಎಂದರು.