
ಕನ್ನಡದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ (S Narayan) ವಿರುದ್ಧ ಸೊಸೆ ಆರೋಪ ಮಾಡಿ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಗೊತ್ತೇ ಇದೆ. ಇದೀಗ ಈ ಬಗ್ಗೆ ನಿರ್ದೇಶಕ ಎಸ್ ನಾರಾಯಣ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ಏಷ್ಯಾ ನೆಟ್ ಸುವರ್ಣ ನ್ಯೂಸ್ ಗೆ ನಿರ್ದೇಶಕ ಎಸ್ ನಾರಾಯಣ್ ಹೇಳಿಕೆ ಹೀಗಿದೆ :-
“ಇದು ನಂಗೆ ಸೊಸೆ ತಂದ ಸೌಭಾಗ್ಯ“.. ನಾನು ಕಾಮಿಡಿ ಸಿನಿಮಾ ಮಾಡಿದ್ದೇನೆ. ನನ್ನ ಲೈಫ್ ಅಲ್ಲಿ ಇದೊಂದು ಕಾಮಿಡಿ ವಿಚಾರವಾಗಿದೆ ಎನ್ನಬೇಕು. ಇದು ನನ್ನ ಮುಖಕ್ಕೆ ಮಸಿ ಬಾಳಿಯೋ ಕೆಲಸ ಅಷ್ಟೇ. ಇದರಿಂದ ಅವರ ಕೈಗೂ ಮಸಿ ಹತ್ತಿಕೊಳ್ಳುತ್ತೆ.. ನಾನೇನು, ನನ್ನ ವ್ಯಕ್ತಿತ್ವವೇನು ಎಂಬುದು ಎಲರಿಗೂ ಗೊತ್ತು.
ಒಂದೂವರೆ ವರ್ಷದ ಹಿಂದೆ ಸೊಸೆ ಮನೆ ಬಿಟ್ಟು ಹೋಗಿದ್ದಾರೆ. ಸಂತೋಷ ಬಯಸಿ ಮನೆ ಬಿಟ್ಟು ಹೀಗಿದ್ದಾರೆ. ಈಗ ನನ್ನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಹಾಗೂ ಎಫ್ಐಆರ್ ಆಗಿದೆ. ನಾನೇನಾದ್ರೂ ಹೇಳಿದ್ರೆ ಅವರಿಗೆ ತೊಂದರೆ ಆಗುತ್ತೆ. ಅವರ ಖುಷಿ ಅವರ ಸಂತೋಷಕ್ಕೆ ಹೀಗಿದ್ದಾರೆ, ಅವರು ಚನ್ನಾಗಿ ಇರಲಿ ಅಷ್ಟೇ..!
ವರದಕ್ಷಿಣೆ ವಿರುದ್ದ ಸಮರ ಸಾರಿ ಜೀವನ ಮಾಡಿರೋದು ನಾನು. ಈಗಿನ ಹೆಣ್ಣುಮಕ್ಕಳಿಗೆ ಅತ್ತೆ ಮಾವನ ಮೇಲೆ ಆರೋಪ ಮಾಡೋದು ಅಸ್ತ್ರವಾಗಿಬಿಟ್ಟಿದೆ. ಈ ದೇಶದಲ್ಲಿ ಎಲ್ಲಾ ಅತ್ತೆ ಮಾವಂದಿರುಗೂ ಇದು ಕಟ್ಟಿಟ್ಟ ಬುತ್ತಿ. ಪ್ರೀತಿಸಿ ಮದುವೆ ಆಗಿದ್ದಾರೆ. ಅವರ ಪ್ರೀತಿಗೆ ನಾವು ಅಡ್ಡಿ ಪಡಿಸಿಲ್ಲ. ಪ್ರೀತಿ ಅಂದ್ರೆ ಕಷ್ಟ ಸುಖ ಎಲ್ಲವನ್ನೂ ಹಂಚಿಕೊಂಡು ಹೋಗಬೇಕು. ಕೆಲಸ ಇಲ್ಲ ಅಂತ ಕಾರಣ ಕೊಟ್ಟಿದ್ದಾರೆ..' ಎಂದಿದ್ದಾರೆ ಎಸ್ ನಾರಾಯಣ್ ಅವರು.
ಬೆಳಕಿಗೆ ಬಂದಿರುವ ಘಟನೆ ಹಿನ್ನೆಲೆ:
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಎಸ್. ನಾರಾಯಣ್ ಎ2 ಆರೋಪಿಯಾಗಿದ್ದು, ಅವರ ಪುತ್ರ ಪವನ್ ಮತ್ತು ಪತ್ನಿ ಭಾಗ್ಯಲಕ್ಷ್ಮಿ ವಿರುದ್ಧವೂ ದೂರು ದಾಖಲಾಗಿದೆ. ಎಸ್. ನಾರಾಯಣ್ ಪುತ್ರ ಪವನ್‌ನ ಪತ್ನಿ ಪವಿತ್ರಾ ಈ ದೂರನ್ನು ಸಲ್ಲಿಸಿದ್ದಾರೆ.
2021ರಲ್ಲಿ ಎಸ್ ನಾರಾಯಣ್‌ರ ಪುತ್ರ ಪವನ್ ಮತ್ತು ಪವಿತ್ರಾ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ವೇಳೆ ₹1 ಲಕ್ಷ ರೂಪಾಯಿ ಮೌಲ್ಯದ ಉಂಗುರ ಸೇರಿದಂತೆ ಮದುವೆ ಖರ್ಚನ್ನು ಪವಿತ್ರಾ ಕುಟುಂಬ ಭರಿಸಿತ್ತು. ಆದರೆ, ಮದುವೆಯ ಬಳಿಕ ಹೆಚ್ಚಿನ ಹಣಕ್ಕೆ ಒತ್ತಾಯ ಮಾಡಲಾಗಿದೆ ಎಂದು ಪವಿತ್ರಾ ಆರೋಪಿಸಿದ್ದಾರೆ. ಓದಿರದ ಕಾರಣ ಕೆಲಸವಿಲ್ಲದೆ ಮನೆಯಲ್ಲೇ ಇದ್ದ ಪವನ್‌ಗೆ ಪವಿತ್ರಾ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ಈ ನಡುವೆ ಪತಿ ಪವನ್ ಕೈಯಲ್ಲಿ ಕಾಸು ಇಲ್ಲದೇ ಇದ್ರೂ ತನ್ನ 'ಕಲಾ ಸಾಮ್ರಾಟ್ ಟೀಂ ಅಕಾಡೆಮಿ ಆಫ್ ಫಿಲ್ಮ್ ಇನ್‌ಸ್ಟಿಟ್ಯೂಟ್' ಪ್ರಾರಂಭಿಸಿದರು. ಅದಕ್ಕಾಗಿ ಮತ್ತೆ ಪತ್ನಿ ಪವಿತ್ರಾ ಬಳಿ ಹಣಕ್ಕೆ ಒತ್ತಾಯ ಮಾಡಿದ್ದರು.
ಕಲಾ ಸಾಮ್ರಾಟ್ ಟೀಂ ಅಕಾಡಮಿ ನಷ್ಟ:
ಪವನ್ ತನ್ನ ಕಲಾ ಸಾಮ್ರಾಟ್ ಟೀಂ ಅಕಾಡಮಿ ಎಂಬ ಫಿಲ್ಮ್ ಇನ್‌ಸ್ಟಿಟ್ಯೂಟ್ ಪ್ರಾರಂಭಕ್ಕೆ ಪವಿತ್ರಾ ಬಳಿ ಹಣ ಕೇಳಿದ್ದರು. ಈ ವೇಳೆ ಪವಿತ್ರಾ ತಮ್ಮ ತಾಯಿಯ ಒಡವೆಯನ್ನು ಕೊಟ್ಟಿದ್ದರು. ಆದರೆ, ಇನ್‌ಸ್ಟಿಟ್ಯೂಟ್ ಲಾಸ್ ಆಗಿ ಮುಚ್ಚಿತು. ಆ ಬಳಿಕ ಪವಿತ್ರಾ ಮತ್ತೆ ₹10 ಲಕ್ಷ ಸಾಲ ಮಾಡಿ ಪವನ್‌ಗೆ ನೀಡಿದ್ದರು. ಇಷ್ಟೆಲ್ಲ ಹಣ ನೀಡಿದರೂ ಸಹ ಹಣ ತರುವಂತೆ ಪೀಡಿಸಿದ್ದಾರೆ. ಪತಿ ಜೊತೆಗೆ ಮಾವ ಎಸ್. ನಾರಾಯಣ್, ಅತ್ತೆ ಭಾಗ್ಯಲಕ್ಷ್ಮಿ ಮೂವರು ಪವಿತ್ರಾ ಮೇಲೆ ಹಲ್ಲೆ ಮಾಡಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ದೂರಲಾಗಿದೆ.
ಪವಿತ್ರಾಳನ್ನ ಹೊರಹಾಕಿದ್ದ ಎಸ್ ನಾರಾಯಣ ಕುಟುಂಬ:
ಜಗಳದ ಬಳಿಕ ನನ್ನನ್ನ ಮನೆಯಿಂದ ಹೊರಹಾಕಿದ್ದಾರೆ ಎಂದು ಪವಿತ್ರಾ ಆರೋಪಿಸಿದ್ದಾರೆ. 'ನನಗೆ ಮತ್ತು ನನ್ನ ಮಗನಿಗೆ ಯಾವುದೇ ತೊಂದರೆಯಾದರೆ ಇವರುಗಳೇ ಕಾರಣ' ಎಂದು ಎಸ್. ನಾರಾಯಣ್, ಭಾಗ್ಯಲಕ್ಷ್ಮಿ ಮತ್ತು ಪವನ್ ವಿರುದ್ಧ ಆರೋಪಿಸಿ ಕಾನೂನು ಕ್ರಮಕ್ಕೆ ಪೊಲೀಸರಿಗೆ ಪವಿತ್ರಾ ದೂರು ನೀಡಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು:
ವರದಕ್ಷಿಣೆ ಆರೋಪದಡಿ ಎಸ್ ನಾರಾಯಣ ಕುಟುಂಬದ ವಿರುದ್ಧ ಪವಿತ್ರಾ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಘಟನೆ ಕನ್ನಡ ಚಿತ್ರರಂಗದಲ್ಲಿ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಮುಂದೇನು ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.