'ಚಂದ್ರಮುಖಿ' ಯಾರಿಗೂ 'ಪ್ರಾಣಸಖಿ' ಯಾಕೆ ಆಗಿಲ್ಲ? ಐವಿಎಫ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾವನಾ ರಾಮಣ್ಣ!

Published : Jul 07, 2025, 01:45 PM IST
Bhavana Ramanna

ಸಾರಾಂಶ

'ನಾನು ಕೃತಕ ಗರ್ಭಧಾರಣೆ (IVF) ಮೂಲಕ ಪ್ರಗ್ನಂಟ್ ಆಗಿದ್ದೇನೆ, ಮುಂದೆ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ' ಎಂಬುದನ್ನು ಹೊರಜಗತ್ತಿಗೆ ಹೇಳಿದ್ದೇನೆ. ಈಗಾಗಲೇ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳಲ್ಲಿ ಇದು ನಡೆದಿದೆ. ಮದುವೆಯಾಗದೇ ನಾನು ತಾಯಿಯಾಗುತ್ತಿದ್ದೇನೆ ಎಂಬುದು ಹಲವರಿಗೆ ಕಷ್ಟದ ಸಂಗತಿ..

ಕನ್ನಡದ ನಟಿ ಭಾವನಾ ರಾಮಣ್ಣ (Bhavana Ramanna) ಅವರು ಕೃತಕ ಗರ್ಭಧಾರಣೆ (In Vitro Fertilization) ಮೂಲಕ ಗರ್ಭ ಧರಿಸಿ ಮಾಧ್ಯಮಗಳ ಮುಂದೆ ಬಂದಿದ್ದು ಗೊತ್ತೇ ಇದೆ. ಸದ್ಯ ಈ ಸುದ್ದಿ ಕರ್ನಾಟಕದ ತುಂಬೆಲ್ಲಾ ಸೌಂಡ್ ಮಾಡುತ್ತಿರುವುದು ಸುಳ್ಳಲ್ಲ. ಐವಿಎಫ್ ಚಿಕತ್ಸೆ ಮೂಲಕ ಅವಳಿ ಮಕ್ಕಳಿಗೆ ತಾಯಿ ಆಗುತ್ತಿರುವ ಭಾವನಾ ಅವರು ಈ ಬಗ್ಗೆ ಸುದ್ದಿ ಮಾಧ್ಯಮಗಳ ಮುಂದೆ ಸ್ಪಷ್ಟತೆ ನೀಡಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ಜೊತೆ ಮಾತನ್ನಾಡಿರುವ ನಟಿ ಭಾವನಾ ಅವರು ಹೇಳಿದ್ದೇನು? ಇಲ್ಲಿದೆ ನೋಡಿ...

'ನಾನು ಕೃತಕ ಗರ್ಭಧಾರಣೆ (IVF) ಮೂಲಕ ಪ್ರಗ್ನಂಟ್ ಆಗಿದ್ದೇನೆ, ಮುಂದೆ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ' ಎಂಬುದನ್ನು ಹೊರಜಗತ್ತಿಗೆ ಹೇಳಿದ್ದೇನೆ. ಈಗಾಗಲೇ ನಮ್ಮ ದೇಶವೂ ಸೇರಿದಂತೆ ಹಲವು ದೇಶಗಳಲ್ಲಿ ಇದು ನಡೆದಿದೆ. ಮದುವೆಯಾಗದೇ ನಾನು ತಾಯಿಯಾಗುತ್ತಿದ್ದೇನೆ ಎಂಬುದು ಹಲವರಿಗೆ ಅರ್ಥಮಾಡಿಕೊಳ್ಳಲು ಕಷ್ಟದ ಸಂಗತಿ ಆಗಿರಬಹುದು. ಆದರೆ, ಇದು ನಮ್ಮ ದೇಶದ ಕಾನೂನಿನ ಪ್ರಕಾರವೇ ನಾನು ಆಯ್ಕೆ ಮಾಡಿಕೊಂಡಿದ್ದು. ಈ ಬಗ್ಗೆ ನನಗೆ ಕ್ಲಾರಿಟಿ ಇದೆ, ಯಾವುದೇ ಗೊಂದಲವಿಲ್ಲ.

ಹಾಗಂತ ನಾನು ಪುರುಷ ವಿರೋಧಿ ಅಲ್ಲ, ಮದುವೆ ವಿರೋಧಿಯೂ ಅಲ್ಲ. ನಾನು ಸದ್ಯ ಇರುವ ಪರಿಸ್ಥಿತಿಯಲ್ಲಿ ಇದು ನನಗೆ ಸೂಕ್ತ ಆಯ್ಕೆ ಎನ್ನಿಸಿ ನಾನು ಇದನ್ನು ಅಳವಡಿಸಿಕೊಂಡಿದ್ದೇನೆ. ಈ ಬಗ್ಗೆ ನನಗೆ ಅಹಂಕಾರವಾಗಲೀ ಕೀಳರಿಮೆಯಾಗಲೀ ಎರಡೂ ಇಲ್ಲ. ಈ ದೇಶದ ಕಾನೂನು ನನಗೆ ಕೊಟ್ಟಿರುವ ಹಕ್ಕನ್ನು ಬಳಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿಯೇ ನಾನು ತಾಯಿ ಆಗಲು ನಿರ್ಧಾರ ಮಾಡಿದ್ದೇನೆ, ಇದಕ್ಕೆ ನಮ್ಮ ಮನೆಯಲ್ಲಿ ಹಾಗೂ ನನ್ನ ಆಪ್ತರು, ಬಂಧುಗಳ ಒಪ್ಪಿಗೆ ಸಹ ಇದೆ. ಸಮಾಜ ಎಂಬುದು ಶುರುವಾಗುವುದೇ ಮನೆಯಿಂದ. ಹೀಗಾಗಿ ನನಗೆ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ತಾಯ್ತನ ಅನುಭವಿಸುವುದು ನನ್ನ ಹಕ್ಕು, ಆ ಬಗ್ಗೆ ಕಾನೂನಿನ ಮೂಲಕವೇ ಹೋಗುವುದು ನನ್ನ ಕರ್ತವ್ಯ ಎಂಬ ಅರಿವಿದೆ ನನಗೆ.

ಪುರುಷನ ಹಂಗಿಲ್ಲದೇ ನಾನು ತಾಯಿ ಆಗಬೇಕು ಎಂಬುದು ಸಹ ನನ್ನ ಉದ್ದೇಶವಲ್ಲ. ಕೃತಕ ಗರ್ಭಧಾರಣೆಯಲ್ಲೂ ಪುರುಷತ್ವದ ಮಿಲನದ ಕ್ರಿಯೆ ಇದ್ದೇ ಇರುತ್ತದೆ. ಆದರೆ, ನನ್ನ ಉದ್ಧೇಶ ಹಲವರಿಗೆ ಅರ್ಥವೇ ಆಗಿಲ್ಲ. ನನಗೆ ನನ್ನ ಅಪ್ಪನನ್ನು ಅವರ ಮುಪ್ಪಿನ ಈ ವಯಸ್ಸಿನಲ್ಲಿ ಜೊತೆಗಿದ್ದು ನೋಡಿಕೊಳ್ಳಬೇಕು. ಸಾಮಾನ್ಯದಂತೆ ಮದುವೆಯಾದರೆ ನಾನು ಗಂಡನ ಮನೆಗೆ ಹೋಗಬೇಕಾಗುತ್ತದೆ. ಅಲ್ಲಿಗೆ ಅಪ್ಪನನ್ನು ಕರೆದುಕೊಂಡು ಹೋಗಲು ನನಗೆ ಇಷ್ಟವಿಲ್ಲ. ಹಾಗಂತ, ನನ್ನ ಗಂಡ ನಾನಿರುವ ಮನೆಗೇ ಬಂದು ಇರಲಿ ಎಂದು ಹೇಳಲು ಕೂಡ ನಾನು ಬಯಸುವುದಿಲ್ಲ. ಜೊತೆಗೆ, ನನ್ನ ಜನ್ಮಸಿದ್ಧ ಹಕ್ಕು ಆಗಿರುವ ತಾಯ್ತನವನ್ನು ನಾನು ಅನುಭವಿಸುವ ಮನಸ್ಸೂ ಇದೆ.

ಮುಖ್ಯವಾಗಿ ಈ ಕಾರಣಕ್ಕೆ ನಾನು ಕೃತಕ ಗರ್ಭಧಾರಣೆ ಮಾಡಿಸಿಕೊಂಡು ತಾಯಿ ಆಗುತ್ತಿದ್ದೇನೆ. ಪುರುಷರ ದೇಹ ಸಾಂಗತ್ಯ ವಿರೋಧಿಸುವ ಸಾಧ್ವಿ ಹಣೆಪಟ್ಟಿ ಕಟ್ಟಬೇಕಾಗಿಲ್ಲ. ನಾನು ಅದನ್ನು ವಿರೋಧಿಸುವುದೂ ಇಲ್ಲ. ಮುಂದೊಂದು ದಿನ ನನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕರೆ ನಾನು ಮದುವೆ ಕೂಡ ಆಗಬಹುದು, ಸಂಸಾರವನ್ನೂ ಮಾಡಬಹುದು. ನಾನು ಯಾವುದನ್ನೂ ವಿರೋಧಿಸುವುದಿಲ್ಲ. ಆದರೆ, ನನ್ನ ಆಯ್ಕೆಯನ್ನು ನಾನು ಮಾಡಿಕೊಂಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಕ್ಲಾರಿಟಿ ಇದೆ ಅಷ್ಟೇ.

ಆದರೆ, ನನ್ನ ದಾರಿಯನ್ನೇ ಬೇರೆಯವರು ಆಯ್ಕೆ ಮಾಡಿಕೊಳ್ಳಬೇಕೆಂಬ ಒತ್ತಾಯ ನನ್ನದಲ್ಲ, ಅವರವರ ಬದುಕು ಅವರದು. ನಾನು ಮಾಡಿರುವ ನಿರ್ಧಾರ ಬೇರೆಯವರಿಗೆ ಖುಷಿ ಕೊಟ್ಟಿದೆ, ಕೆಲವರಿಗೆ ಮಾದರಿ ಎಂಬ ಮಾತಿಗೆ ನನಗೆ ಖಂಡಿತ ಖುಷಿ, ಹೆಮ್ಮೆ ಇದೆ. ಆದರೆ, ಇದನ್ನು ವಿರೋಧಿಸುವವರ ಬಗ್ಗೆಯೂ ನನಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಲೈಫ್ ಹಾಗೂ ನಿರ್ಧಾರ ನಮ್ಮ ಹಕ್ಕು. ನನ್ನಿಂದ ಸಮಾಜ ಹಾಳಾಗುತ್ತದೆ ಅಥವಾ ಉದ್ಧಾರ ಆಗುತ್ತದೆ ಎಂಬ ಯಾವುದೇ ಮಾತಿಗೆ ಬಗ್ಗೆ ನನಗೆ ಸಹಮತ ಇಲ್ಲ. ನಾನೀಗ ಸದ್ಯಕ್ಕೆ ಅವಳಿ ಮಕ್ಕಳಿಗೆ ತಾಯಿಯಾಗುವ ಹಾದಿಯಲ್ಲಿದ್ದೇನೆ. ಆ ಖುಷಿಯಲ್ಲಿ ದಿನ ಕಳೆಯುತ್ತಿದ್ದೇನೆ' ಎಂದಿದ್ದಾರೆ 'ಚಂದ್ರಮುಖಿ ಪ್ರಾಣಸಖಿ' ಸಿನಿಮಾ ಖ್ಯಾತಿಯ ನಟಿ ಭಾವನಾ ರಾಮಣ್ಣ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!