
ದರ್ಶನ್ 55ನೇ ಸಿನಿಮಾ ಯಾರದ್ದು?
ಈ ಪ್ರಶ್ನೆ ಉದ್ಭವವಾಗಲು ಕಾರಣ ದರ್ಶನ್ ಹುಟ್ಟುಹಬ್ಬದ ದಿನ ಪ್ರಕಟವಾದ ಎರಡು ಜಾಹೀರಾತು. ಫೆ.16ರಂದು ದರ್ಶನ್ ಹುಟ್ಟುಹಬ್ಬ ಪ್ರಯುಕ್ತ ಒಂದೆಡೆ ನಿರ್ಮಾಪಕ ಎಂ.ಜಿ. ರಾಮಮೂರ್ತಿ ‘ಡಿ 55’ ಹೆಸರಲ್ಲೇ ದರ್ಶನ್ ಅವರಿಗೆ ಶುಭಾಶಯ ಕೋರಿದ್ದರು. ಅವರ ಹಾಗೆಯೇ ನಿರ್ಮಾಪಕ ದುಷ್ಯಂತ್ ಕೂಡ ‘ಡಿ 55’ ಶೀರ್ಷಿಕೆಯಲ್ಲಿ ವಿಶ್ ಮಾಡಿದ್ದರು. ದರ್ಶನ್ ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರ ಪ್ರೇಮಿಗಳಿಗೆ ಇದು ಕನ್‌ಫ್ಯೂಸ್ ಮಾಡಿದ್ದಷ್ಟೇ ಅಲ್ಲ, ಗೊಂದಲ ಸೃಷ್ಟಿಯಾಗಿತ್ತು. ದರ್ಶನ್ ೫೫ನೇ ಚಿತ್ರಕ್ಕೆ ಫಿಕ್ಸ್ ಆದ ನಿಜವಾದ ನಿರ್ಮಾಪಕ ಯಾರು? ದರ್ಶನ್ ಕಾಲ್‌ಶೀಟ್ ನೀಡಿದ್ದು ಯಾರಿಗೆ? ಇತ್ಯಾದಿ ಪ್ರಶ್ನೆಗಳು ಬಹು ಚರ್ಚೆಗಳಿಗೆ ಒಳಗಾಗಿತ್ತು.
ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಡಿ 55 ಚಿತ್ರ ನಿರ್ಮಾಣದ ಅವಕಾಶ ಮೆಜೆಸ್ಟಿಕ್ ನಿರ್ಮಾಪಕ ಎಂಜಿ ರಾಮಮೂರ್ತಿಯವರಿಗೆ ಸಿಕ್ಕಿದೆ.
ಡಿ55 ಚಿತ್ರಕ್ಕೆ ನಾನೇ ನಿರ್ಮಾಪಕ: ರಾಮಮೂರ್ತಿ
ಈ ಕುರಿತು ರಾಮಮೂರ್ತಿ, ‘ಡಿ 55 ಚಿತ್ರಕ್ಕೆ ನಾನೇ ನಿಜವಾದ ನಿರ್ಮಾಪಕ. ದರ್ಶನ್ ಅವರನ್ನು ಕೇಳಿಕೊಂಡೇ ‘ಡಿ 55’ಫಿಕ್ಸ್ ಮಾಡಿಕೊಂಡಿದ್ದೇನೆ. ಸದ್ಯಕ್ಕೆ ಟೈಟಲ್ ಏನು ಅನ್ನೋದು ಫಿಕ್ಸ್ ಆಗಿಲ್ಲ. ಕತೆಗೆ ಏನು ಸೂಕ್ತ ಎನಿಸುತ್ತೋ ಅದನ್ನು ಫೈನಲ್ ಮಾಡಿಕೊಳ್ಳುವುದು ಖಚಿತ. ದರ್ಶನ್ ಅವರ 55ನೇ ಚಿತ್ರ ಇದಾಗಿದ್ದರಿಂದ ‘ಡಿ 55’ ಎನ್ನುವುದು ಕೂಡ ಚಿತ್ರದ ಟೈಟಲ್ ಆಗಬಹುದು. ನಿರ್ದೇಶಕರು ಯಾರು, ನಾಯಕಿ ಯಾರು ಎನ್ನುವುದು ಸಹ ಇನ್ನು ಫೈನಲ್ ಆಗಿಲ್ಲ. ಎರಡ್ಮೂರು ಕತೆ ಕೇಳಿದ್ದೇನೆ. ದರ್ಶನ್ ಅವರ ಮ್ಯಾನರಿಸಂಗೆ, ಫ್ಯಾನ್ಸ್‌ಗೆ ತಕ್ಕಂತಹ ಕತೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ತಯಾರಿ ನಡೆದಿದೆ. ದರ್ಶನ್ ಅಭಿಪ್ರಾಯದ ಪ್ರಕಾರವೇ ನಾವು ಸಿನಿಮಾ ಶುರು ಮಾಡುತ್ತೇವೆ. ‘ಡಿ 55’ ನಮ್ಮದೇ ಆಗಿರುತ್ತದೆ’ ಎನ್ನುತ್ತಾರೆ.
ನಮ್ಮದೇನು ಅಭ್ಯಂತರವಿಲ್ಲ: ದುಷ್ಯಂತ್
‘ನಾನು ಕೂಡ ದರ್ಶನ್ ಅವರ ಗಮನಕ್ಕೆ ತಂದೇ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದೆ. ಆದರೆ, ನಿರ್ಮಾಪಕ ಎಂ.ಜಿ. ರಾಮಮೂರ್ತಿ ಕೂಡ ದರ್ಶನ್ ೫೫ನೇ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಈಗ ಗೊತ್ತಾಗಿದೆ. ಅವರು ಮುಂಚೆನೇ
ಶುರು ಮಾಡುವುದಾದರೆ ನಮ್ಮದೇನು ಅಭ್ಯಂತರವಿಲ್ಲ. ನನ್ನದು ದರ್ಶನ್ ಅಭಿನಯದ ೫೬ನೇ ಸಿನಿಮಾವಾದರೂ ಸಂತೋಷ. ದರ್ಶನ್ ಅವರ ಜತೆಗೆ ಸಿನಿಮಾ ಮಾಡಲು ಅವಕಾಶ ಸಿಕ್ಕಿದ್ದೇ ಸಂತೋಷ. ಅನಗತ್ಯ ವಿವಾದ ಮಾಡಿಕೊಳ್ಳಲು ನಮಗಿಷ್ಟ ಇಲ್ಲ. ಮಿಲನ ಪ್ರಕಾಶ್ ನಮ್ಮ ಚಿತ್ರದ ನಿರ್ದೇಶಕರು. ದರ್ಶನ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಸೆಪ್ಟೆಂಬರ್ ಅಥವಾ ನವೆಂಬರ್ ತಿಂಗಳಲ್ಲಿ ನಮ್ಮ ಸಿನಿಮಾ ಶುರು’ ಎನ್ನುತ್ತಾರೆ ಮತ್ತೊಬ್ಬ ನಿರ್ಮಾಪಕ ದುಷ್ಯಂತ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.