ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಂದಾದ ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಚಂದ್ರಮುಖಿ’ (2005) ಸಿನಿಮಾದ ಹಿಂದಿನ ಹಲವು ಅಪರೂಪದ ಮತ್ತು ಕುತೂಹಲಕಾರಿ ಸಂಗತಿಗಳು ಇದೀಗ ಗಮನ ಸೆಳೆಯುತ್ತಿವೆ. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ ‘ಆಪ್ತಮಿತ್ರ’ ಚಿತ್ರದ ಯಶಸ್ಸಿನ ಬಳಿಕ ತಮಿಳಿನಲ್ಲಿ ತಯಾರಾದ ‘ಚಂದ್ರಮುಖಿ’ ಚಿತ್ರದಲ್ಲಿ ಶೀರ್ಷಿಕೆಯಿಂದ ಹಿಡಿದು ನಾಯಕಿಯ ಆಯ್ಕೆಯವರೆಗೆ ನಡೆದ ರೋಚಕ ಘಟನೆಗಳ ವಿವರ ಇಲ್ಲಿದೆ.
ಕನ್ನಡದಲ್ಲಿ ಡಾ. ವಿಷ್ಣುವರ್ಧನ್ ಅವರು ‘ಹೌಲಾ ಹೌಲಾ’ ಎಂಬ ಮ್ಯಾನರಿಸಂ ಬಳಸುತ್ತಿದ್ದರು. ಆದರೆ ತಮಿಳಿನಲ್ಲಿ ಅದಕ್ಕಿಂತಲೂ ಹೆಚ್ಚು ‘ಹೆವಿ’ ಆಗಿರುವ ಮ್ಯಾನರಿಸಂ ಬೇಕು ಎಂದು ನಿರ್ಧರಿಸಲಾಯಿತು. ಅದೇ ರೀತಿ ‘ನಾಗವಲ್ಲಿ’ ಎಂಬ ಹೆಸರನ್ನೂ ಬದಲಿಸಿ, ಅದಕ್ಕಿಂತ ಪ್ರಭಾವಶಾಲಿಯಾಗಿರುವ ‘ಚಂದ್ರಮುಖಿ’ ಎಂದು ಹೆಸರಿಡಲಾಯಿತು. ಇನ್ನು ರಜನಿಕಾಂತ್ ಅವರು ಬಾಲ್ಯದಲ್ಲಿ ಮರಾಠಿ ನಾಟಕವೊಂದರಲ್ಲಿ ನಟಿಸುತ್ತಿದ್ದಾಗ ಬಳಸುತ್ತಿದ್ದ ‘ಲಕಲಕ ಲಕಲಕ’ ಎಂಬ ನಿರ್ದಿಷ್ಟ ಪದ (Catchphrase) ಈ ಸಿನಿಮಾಗೆ ತಂದು ಬಳಸಿಕೊಂಡರು. ಅದು ಚಿತ್ರದ ಹೈಲೈಟ್ ಆಯಿತು.
ಚಂದ್ರಮುಖಿ ಪಾತ್ರಕ್ಕೆ ಮೊದಲು ಸ್ನೇಹಾ, ಸಿಮ್ರಾನ್ ಮತ್ತು ರೀಮಾ ಸೇನ್ ಎಂಬ ಮೂವರು ನಟಿಯರ ಹೆಸರುಗಳನ್ನು ಪರಿಗಣಿಸಲಾಗಿತ್ತು. ಅದರಲ್ಲಿ ಅಂತಿಮವಾಗಿ ಸಿಮ್ರಾನ್ ಆಯ್ಕೆಯಾದರು. ರಜನಿಕಾಂತ್ ಪಕ್ಕದಲ್ಲಿ ನಯನತಾರಾ ನಟಿಸುತ್ತಿದ್ದರೆ, ಸಿಮ್ರಾನ್ ಜೊತೆ ಚಿತ್ರೀಕರಣವೂ ಆರಂಭವಾಗಿ 3 ದಿನಗಳ ಶೂಟಿಂಗ್ ಸಹ ಮುಗಿದಿತ್ತು. ಆದರೆ ಅದೇ ಸಮಯದಲ್ಲಿ ಸಿಮ್ರಾನ್ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿತು. ಚಿತ್ರಕ್ಕೆ ಹೆಚ್ಚಿನ ದಿನಗಳ ಕಾಲ್ಶೀಟ್ ಅಗತ್ಯವಿದ್ದ ಕಾರಣ ಅವರಿಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಆಗ ಮೊದಲೇ ಜ್ಯೋತಿಕಾ ಅವರ ಹಣೆಯಲ್ಲಿ ಬರೆದಿದ್ದಂತೆ ಆ ಪಾತ್ರ ಅವರಿಗೆ ಒಲಿದುಬಂತು. ಜ್ಯೋತಿಕಾ ಕೂಡ ಆ ಪಾತ್ರ ಮಾಡಲು ಉತ್ಸುಕರಾಗಿದ್ದರಿಂದ ‘ಚಂದ್ರಮುಖಿ’ಯಾಗಿ ಮಿಂಚಿದರು.
ಮೂಲ ಮಲಯಾಳಂನ ‘ಮಣಿಚಿತ್ರತಾಳ್’ ಚಿತ್ರದ ನಟಿ ಶೋಭನಾ ಅವರು, ಈ ಹಿಂದೆ ತೆಲುಗಿನಲ್ಲಿ ‘ಮಿಸ್ಟರ್ ಪೆಳ್ಳಾಂ’ ಹಾಗೂ ‘ಶ್ರೀಕಾರಂ’ ಸಿನಿಮಾಗಳನ್ನು ನಿರ್ಮಿಸಿದ್ದ ಪಾರ್ಥಸಾರಥಿ ಅವರಿಗೆ ‘ಮಣಿಚಿತ್ರತಾಳ್’ ಡಿವಿಡಿ ನೀಡಿ, "ಇದು ತುಂಬಾ ಚೆನ್ನಾಗಿದೆ, ತೆಲುಗಿನಲ್ಲಿ ರಿಮೇಕ್ ಮಾಡಿ" ಎಂದು ಸಲಹೆ ನೀಡಿದ್ದರಂತೆ. ಆದರೆ ಅವರು ಆಸಕ್ತಿ ತೋರಿಸಲಿಲ್ಲ. ನಂತರ ಕರುಣಾಕರ್ ರೆಡ್ಡಿ, ಮಹೇಶ್ ಬಾಬು ಮತ್ತು ರಮೇಶ್ ಬಾಬು ಸೇರಿ ತಮಿಳಿನ ‘ಚಂದ್ರಮುಖಿ’ಯನ್ನು ತೆಲುಗಿಗೆ ಡಬ್ ಮಾಡಿದರು. ತೆಲುಗಿನಲ್ಲೂ ನೇರ ತೆಲುಗು ಸಿನಿಮಾದಷ್ಟೇ ಕಲೆಕ್ಷನ್ ಮಾಡಿ ಹಿಂದೆಂದೂ ಕಂಡು ಕೇಳರಿಯದ ವಸೂಲಿಯ ಮಳೆ ಸುರಿಸಿತು.
ಚೆನ್ನೈನಲ್ಲಿರುವ ಶಿವಾಜಿ ಗಣೇಶನ್ ಅವರ ಸ್ವಂತ ಚಿತ್ರಮಂದಿರ ‘ಶಾಂತಿ ಥಿಯೇಟರ್’ನಲ್ಲಿ ‘ಚಂದ್ರಮುಖಿ’ ಸಿನಿಮಾ ಬರೋಬ್ಬರಿ 804 ದಿನಗಳ ಕಾಲ ಪ್ರದರ್ಶನ ಕಂಡಿತು. ಈ ಹಿಂದೆ 1944ರಲ್ಲಿ ತ್ಯಾಗರಾಜ ಭಾಗವತರ್ ನಟನೆಯ ‘ಹರಿದಾಸ್’ ಸಿನಿಮಾ ಸುಮಾರು 768ಕ್ಕೂ ಹೆಚ್ಚು ದಿನ ಪ್ರದರ್ಶನಗೊಂಡಿದ್ದ ದಾಖಲೆಯನ್ನು 2005ರಲ್ಲಿ ರಜನಿಕಾಂತ್ ಅವರ ‘ಚಂದ್ರಮುಖಿ’ ಬ್ರೇಕ್ ಮಾಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.