ಜುಗಾರಿ ಬ್ರದರ್ಸ್‌ ಆಗಿ ಜಾನಿ ಲಿವರ್‌- ಸಾಧು ಕೋಕಿಲ!

By Web DeskFirst Published May 2, 2019, 10:41 AM IST
Highlights

ಬಾಲಿವುಡ್‌ ಸಿನಿಮಾಗಳಲ್ಲಿ ನಟ ಜಾನಿ ಲಿವರ್‌ ನೋಡಿದವರಿಗೆ ಕನ್ನಡದ ಹೆಸರಾಂತ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ನೆನಪಾಗಿದ್ದು ಸುಳ್ಳಲ್ಲ. ಹಾಸ್ಯ ನಟರಾಗಿ ಜಾನಿ ಲಿವರ್‌ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಾಗ, ಸಾಧು ಕೋಕಿಲ ಅವರ ಸಹೋದರರೇ ಇರಬೇಕೆಂದು ಕನ್ನಡದ ಪ್ರೇಕ್ಷಕರು ಮಾತನಾಡಿಕೊಂಡಿದ್ದು ಇತ್ತಂತೆ. ಅದೇನು ಕಾಕತಾಳೀಯವೋ ಗೊತ್ತಿಲ್ಲ. ಆಗಲೇ ಸಾಧು ಕೋಕಿಲ, ಜಾನಿಲಿವರ್‌ ಅವರನ್ನು ಗುರುವಾಗಿ ಸ್ವೀಕರಿಸಿದ್ದರು.

ಒಂದೊಮ್ಮೆ ಮುಂಬೈಗೂ ಹೋಗಿ ಜಾನಿ ಲಿವರ್‌ ಅವರನ್ನು ಭೇಟಿ ಆಗಿಯೂ ಬಂದಿದ್ದರಂತೆ. ಈಗ ಅವರಿಬ್ಬರ ನಂಟು ಇನ್ನೊಂದು ಹಂತಕ್ಕೆ ಬಂದು ನಿಂತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಇದೇ ಮೊದಲು ಈ ಜೋಡಿ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ಆ ಅಪರೂಪದ ದೃಶ್ಯಕ್ಕೆ ಸಾಕ್ಷಿ ಆಗುತ್ತಿದೆ ಮುರಳೀ ಕೃಷ್ಣ ನಿರ್ದೇಶನದ ‘ಗರ’ ಚಿತ್ರ.

ಮೇ 3 ರಿಂದ 'ಗರ' ದರ್ಬಾರ್‌ ಶುರು

ನಿರೂಪಕ ರೆಹಮಾನ್‌ ಇದೇ ಮೊದಲು ನಾಯಕ ನಟರಾಗಿ ಅಭಿನಯಿಸಿರುವ ಚಿತ್ರವಿದು. ಇದೇ ವಾರ ತೆರೆಗೆ ಬರುತ್ತಿದೆ. ವಿಭಿನ್ನವಾದ ಟೈಟಲ್‌, ಅದರ ಜತೆಗೆ ವಿಶಿಷ್ಟವಾದ ಕತೆಯೂ ಸೇರಿ ಹಲವು ಕಾರಣಕ್ಕೆ ಈ ಚಿತ್ರ ಸುದ್ದಿಯಲ್ಲಿದೆ. ವಿಶೇಷವಾಗಿ, ಜಾನಿ ಲಿವರ್‌ ಹಾಗೂ ಸಾಧು ಕೋಕಿಲ ಜೋಡಿಯೂ ಇಲ್ಲಿ ಪ್ರಮುಖ ಆಕರ್ಷಣೆ ಆಗಿದೆ. ಇದೇ ಮೊದಲ ಬಾರಿಗೆ ಈ ಜೋಡಿಯನ್ನು ‘ಜುಗಾರಿ ಬದರ್ಸ್‌’ ಆಗಿ ತೆರೆ ಮೇಲೆ ತೋರಿಸಲು ಮುಂದಾಗಿದ್ದಾರೆ ನಿರ್ದೇಶಕ ಮುರಳೀ ಕೃಷ್ಣ. ‘ಹಾಸ್ಯ ನಟರಾದ ಜಾನಿಲಿವರ್‌ ಹಾಗೂ ಸಾಧು ಕೋಕಿಲ ನೋಡುವುದಕ್ಕೂ ಒಂದೇ ಥರ ಇದ್ದಾರೆ. ಬರೀ ನೋಟದಲ್ಲಿ ಮಾತ್ರವಲ್ಲ, ನಟನೆಯ ಅವರ ಪ್ರತಿಭೆಯಲ್ಲೂ ಸಾಕಷ್ಟುಸಾಮ್ಯತೆಯಿದೆ. ಅವರಿಬ್ಬರನ್ನು ಒಂದಾಗಿ ತೋರಿಸಬೇಕೆನ್ನುವ ನನ್ನೊಳಗಿನ ತುಡಿತಕ್ಕಿದ್ದ ಪ್ರಮುಖ ಕಾರಣಗಳಲ್ಲಿ ಅದು ಕೂಡ ಒಂದಾಗಿತ್ತು' ಎನ್ನುವ ಮೂಲಕ ಮೊದಲ ಬಾರಿಗೆ ಬಾಲಿವುಡ್‌ ನಟ ಜಾನಿ ಲಿವರ್‌ ಅವರನ್ನು ಕನ್ನಡಕ್ಕೆ ಕರೆ ತಂದಿದ್ದರ ಹಿಂದಿನ ಉದ್ದೇಶವನ್ನು ಬಿಚ್ಚಿಡುತ್ತಾರೆ ನಿರ್ದೇಶಕರು.

ನನ್ನ ಪ್ರಕಾರ ಜಾನಿ ಲಿವರ್‌ ಅಪರೂಪದ ಹಾಸ್ಯ ನಟ. ಅವರನ್ನು ಭೇಟಿ ಮಾಡಲು ಮುಂಬೈನ ಅವರ ನಿವಾಸಕ್ಕೆ ಹೋದಾಗ ಅವರ ಮನೆಯಲ್ಲಿ ಚಾರ್ಲಿ ಚಾಪ್ಲಿನ್‌ ಫೋಟೋಗಳೇ ಹೆಚ್ಚಿದ್ದವು. ಅದಕ್ಕೆ ಕಾರಣವನ್ನು ಹೇಳಿಕೊಂಡರು. ಚಾಪ್ಲಿನ್‌ ನೋವಿನಲ್ಲೂ ನಗು ತರಿಸಿ, ಪ್ರಪಂಚಕ್ಕೆ ಸಂದೇಶ ಕೊಟ್ಟಮಹಾನ್‌ ಕಲಾವಿದ. ಹಾಸ್ಯಕ್ಕೆ ಇರುವ ಮಹತ್ವ ಅದು. ಆತನೇ ನನಗೆ ಸ್ಫೂರ್ತಿ ಎಂದಿದ್ದರು. ಆ ಮಾತು ನನಗೆ ತುಂಬಾ ಹಿಡಿಸಿತು. ಅವರನ್ನು ಕರೆ ತರಲು ಅದೂ ಮತ್ತಷ್ಟುಕಾರಣವಾಯಿತು.- ಮುರಳೀ ಕೃಷ್ಣ, ನಿರ್ದೇಶಕ

‘ನಾನೊಬ್ಬ ಫಿಲ್ಮ್‌ ಮೇಕರ್‌. ಕನ್ನಡದ ಜತೆಗೆ ಹಿಂದಿ ಸೇರಿ ಬೇರೆ ಬೇರೆ ಭಾಷೆಯ ಸಿನಿಮಾ ನೋಡುವುದು ನನ್ನ ಅಭ್ಯಾಸ. ತುಂಬಾ ವರ್ಷಗಳ ಹಿಂದೆ ನಾನು ಹಿಂದಿ ಸಿನಿಮಾ ನೋಡುವಾಗ ಅಲ್ಲಿ ಗಮನ ಸೆಳೆದವರು ಹಾಸ್ಯ ನಟ ಜಾನಿ ಲಿವರ್‌. ಆ ನಂತರ ಕನ್ನಡದಲ್ಲಿ ಹಾಸ್ಯ ನಟರಾಗಿಯೂ ದೊಡ್ಡ ಹೆಸರು ಮಾಡಿದ ಸಾಧು ಕೋಕಿಲ ಅವರನ್ನು ಕಂಡಾಗ ಜಾನಿ ಲಿವರ್‌ ನೆನಪಾಗುತ್ತಿದ್ದರು. ಜಾನಿ ಲಿವರ್‌ ನೋಡಿದಾಗ ಸಾಧು ಕೋಕಿಲ ನೆನಪಾಗುತ್ತಿದ್ದರು. ಆ ಜೋಡಿಯನ್ನು ಒಂದಾಗಿ ತೋರಿಸಿದರೆ ಹೇಗೆ ಎನ್ನುವ ನನ್ನ ಆಲೋಚನೆಗೆ ಈಗ ವೇದಿಕೆ ಸಿಕ್ಕಿತು. ‘ಗರ’ದ ಹಾಸ್ಯ ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ತರಬೇಕೆಂದಾಗ ತಕ್ಷಣವೇ ನೆನಪಾಗಿದ್ದು ಈ ಜೋಡಿ.ಅದೃಷ್ಟಎನ್ನುವ ಹಾಗೆ ಅವರಿಬ್ಬರು ಒಪ್ಪಿಕೊಂಡರು. ನಿರೀಕ್ಷೆಯಂತೆ ಚಿತ್ರದಲ್ಲಿ ಅದ್ಭುತವಾಗಿಯೂ ಅಭಿನಯಿಸಿದ್ದಾರೆ’ ಎನ್ನುತ್ತಾರೆ ಮುರುಳೀ ಕೃಷ್ಣ.

ಗರ ಚಿತ್ರದಲ್ಲಿ ನೇಹಾ ಖಳನಾಯಕಿ

ಕನ್ನಡ ಸಿನಿಮಾಗಳಲ್ಲೀಗ ಹಾಸ್ಯ ಅಂದ್ರೆ ಡಬ್ಬಲ್‌ ಮೀನಿಂಗ್‌ ಇರಲೇಬೇಕು ಎನ್ನುವರ ಸಂಖ್ಯೆ ಹೆಚ್ಚಿದೆ. ಆದರೆ ಈ ಜೋಡಿಯ ಹಾಸ್ಯ ಸನ್ನಿವೇಶಗಳಲ್ಲಿ ಒಂದೇ ಒಂದು ಡಬಲ್‌ ಮೀನಿಂಗ್‌ ಡೈಲಾಗ್‌ ಇಲ್ವಂತೆ. ಕತೆಯ ಸನ್ನಿವೇಶಗಳಿಗೆ ತಕ್ಕಂತೆ ಈ ಜೋಡಿ ಹಾಸ್ಯದ ಹೊನಲು ಹರಿಸಿದ್ದು ವಿಶೇಷ ಎನ್ನುತ್ತಿದೆ ಚಿತ್ರತಂಡ. ಇವರಿಬ್ಬರ ಜತೆಗೆ ರೆಹಮಾನ್‌ ಕೂಡ ಸೇರಿಕೊಂಡಿದ್ದಾರಂತೆ. ಐಟಂ ಸಾಂಗ್ಸ್‌ನಲ್ಲೂ ಜಾನಿ ಲಿವರ್‌ ಹಾಗೂ ಸಾಧು ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಬಾಲಿವುಡ್‌ನ ಹೆಸರಾಂತ ನೃತ್ಯ ನಿರ್ದೇಶಕಿ ಸರೋಜ್‌ ಖಾನ್‌ ನೃತ್ಯ ನಿರ್ದೇಶನವಿದೆ. ‘ಹಾಸ್ಯ ಸನ್ನಿವೇಶಗಳೆಂದರೆ ಸಾಮಾನ್ಯವಾಗಿ ಅವು ಪ್ರತ್ಯೇಕವಾಗಿ ಕಾಣಿಸಿಕೊಳ್ಳುವುದೇ ಹೆಚ್ಚು. ಆದರೆ ಇಲ್ಲಿ ಹಾಗಿಲ್ಲ. ಕತೆಗೆ ಪೂರಕವಾಗಿಯೇ ಕಾಮಿಡಿಯೂ ಇದೆ. ಹಾಗಾಗಿ ಚಿತ್ರದ ಉದ್ದಕ್ಕೂ ಜಾನಿ ಲಿವರ್‌ ಮತ್ತು ಸಾಧು ಕೋಕಿಲ ಕಾಣಿಸಿಕೊಳ್ಳುತ್ತಾರೆ’ ಎನ್ನುವ ವಿಶ್ವಾಸದ ಮಾತು ನಿರ್ದೇಶಕರದ್ದು.

click me!