ಚಿತ್ರ ವಿಮರ್ಶೆ: ಕೌಟುಂಬಿಕ ಒಳ ಸುಳಿಯ ‘ಫಾರ್ಚುನರ್’

By Kannadaprabha NewsFirst Published Jan 7, 2019, 9:10 AM IST
Highlights

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿ ಅಂತಾರೆ. ಸಾವಿರ ಬಿಡಿ, ಸಾವಿರದಲ್ಲಿ ಒಂದೇ ಒಂದು ಸುಳ್ಳು ಹೇಳಿ ಮದುವೆ ಆದ ಹುಡುಗನ ಸ್ಥಿತ್ಯಂತರ ಬದುಕಿನ ಕತೆಯೇ ಈ ಚಿತ್ರ.

ದೇಶಾದ್ರಿ ಹೊಸ್ಮನೆ

ಇನ್ನು ಫಾರ್ಚುನರ್ ಅಂದ್ರೆ ಅದೃಷ್ಟ. ಹಾಗೆಯೇ ಫಾರ್ಚುನರ್ ಎನ್ನುವುದು ಅದ್ದೂರಿ ಕಾರಿನ ಒಂದು ಬ್ರ್ಯಾಂಡ್ ಕೂಡ. ಅದು ಈ ಹೊತ್ತಿಗೆ ರಿಚ್ ಸ್ಟೇಟಸ್‌ನ ಪ್ರತೀಕ. ಅಂತಹ ಕಾರುಗಳಲ್ಲಿ ಐಷಾರಾಮಿಯಾಗಿ ತಿರುಗಾಡುವ ವ್ಯಕ್ತಿತ್ವಗಳು, ಮೇಲ್ನೋಟಕ್ಕೆ ಸುಖಿಗಳಂತೆ ಕಾಣಿಸಿಕೊಂಡರೂ, ಅಂತರ್ಯದಲ್ಲಿ ಎಷ್ಟೆಲ್ಲಾ ತಾಕಲಾಟಗಳಲ್ಲಿ ಸಿಲುಕಿವೆ ಎನ್ನುವುದನ್ನು ಸೂಚ್ಯವಾಗಿ ತೋರಿಸುವುದಕ್ಕೂ ಫಾರ್ಚುನರ್ ಕಾರು ಇಲ್ಲಿ ಸಾಂಕೇತಿಕ. ಹಾಗಾಗಿ ಫಾರ್ಚುನರ್ ಅಂದ್ರೆ ಅದೃಷ್ಟ ಅಂದುಕೊಂಡರೂ, ಅದು ಅದ್ದೂರಿ ಸ್ಟೇಟಸ್‌ನ ಮನುಷ್ಯರ ಒಳ ವ್ಯಕ್ತಿತ್ವದ ಪ್ರತೀಕವೂ ಹೌದು.

ಪಾರ್ಥ(ದಿಗಂತ್ ಮಂಚಾಲೆ) ಅನು(ಸೋನು ಗೌಡ), ಶ್ರುತಿ(ಸ್ವಾತಿ ಶರ್ಮ) ಹಾಗೂ ಸ್ವಾಮಿ(ರತನ್ ಲಾಲ್) ಈ ಕತೆಯ ಪ್ರಮುಖ ಪಾತ್ರಗಳು. ಅಷ್ಟು ವ್ಯಕ್ತಿಗಳಲ್ಲೂ ವೈರುಧ್ಯದ ಮನಸ್ಥಿತಿ. ಹುಟ್ಟು ಸೋಮಾರಿಯಂತೆ ಕಾಣುವ ಎಂಎಲ್‌ಎ ಮಗ ಪಾರ್ಥನಿಗೆ ಸ್ವಾಭಿಮಾನವೇ ಇಲ್ಲ. ಸುಳ್ಳು ಹೇಳುತ್ತಾ ಫಾರ್ಚುನರ್ ಕಾರಿನಲ್ಲಿ ತಿರುಗಾಡುವುದು, ಅಮ್ಮ ಕೊಟ್ಟ ದುಡ್ಡಿನಲ್ಲೇ ಶೋಕಿ ಮಾಡುವುದೇ ಆತನ ಕಾಯಕ. ಆತನ ಬದುಕಲ್ಲಿ ಆಕಸ್ಮಿಕವಾಗಿ ಬಂದವಳು ಅನು. ಆಕೆ ಮಹತ್ವಕಾಂಕ್ಷೆಯ ಹುಡುಗಿ. ಕಾರ್ಪೊರೇಟ್ ಕಂಪನಿಯಲ್ಲಿ ಉದ್ಯೋಗಿ. ಪಾರ್ಥನಲ್ಲಿದ್ದ ಫಾರ್ಚುನರ್ ಕಾರು, ಆತ ಹೆಣೆದ ಸುಳ್ಳನ್ನೇ ಸತ್ಯವೆಂದು ನಂಬಿ ಮದುವೆಯಾಗಿ ಬಂದವಳು. ಕೊನೆಗೆ ತಿಳಿದಿದ್ದು ತಾನು ಮೋಸ ಹೋದೆ ಅಂತ. ಮತ್ತೊಂದೆಡೆ ಕಾರ್ಪೊರೇಟ್ ಉದ್ಯೋಗಿ ಸ್ವಾಮಿಗೆ ಅನು ಮೇಲೆ ಆಸೆ. ಆದರೂ, ಅಮ್ಮನ ಮಾತಿಗೆ ಬೆಲೆಕೊಟ್ಟು ಹಳ್ಳಿ ಹುಡುಗಿ ಶ್ರುತಿಯನ್ನು ಮದುವೆ ಆಗುತ್ತಾನೆ. ಅದೇ ಕಾರಣಕ್ಕೆ ನಾಲ್ವರದ್ದು ನಾಲ್ಕು ದಿಕ್ಕು. ಅಲ್ಲಿಂದ ಕತೆಗೆ ಟ್ವಿಸ್ಟು.

ಇರುವದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವ ಇವತ್ತಿನ ಆಧುನಿಕ ಮನಸ್ಸುಗಳ ಪ್ರತೀಕವೇ ಅನು ಮತ್ತು ಸ್ವಾಮಿ. ಅತ್ತ ಇರುವುದರಲ್ಲೇ ಸುಖ ಕಾಣುವ, ಇಷ್ಟಪಟ್ಟವರಲ್ಲೇ ಬದುಕು ಕಟ್ಟಿಕೊಳ್ಳುವ ವ್ಯಕ್ತಿಗಳಾಗಿ ಪಾರ್ಥ ಮತ್ತು ಶ್ರುತಿ ಕಾಣುತ್ತಾರೆ. ಅವರೇನು ಹೆಚ್ಚೇನು ಓದದವರು. ಆ ಮೂಲಕ ಸಂಸಾರಿಕ ಒಳಸುಳಿಯ ಬೇಗುದಿಯನ್ನು ಶೋಧಿಸುವ ಈ ಕತೆಯ ಮೊದಲಾರ್ಧ ಕುತೂಹಲಕಾರಿ. ದ್ವಿತೀಯಾರ್ಧದಲ್ಲಿ ಕತೆಗೆ ಇನ್ನೇನೋ ಬೇಕಿತ್ತು ಅಂತೆನಿಸಿದರೂ, ಸಂಕೀರ್ಣವಾದ ಕತೆಯನ್ನು ಸೊಗಸಾಗಿ ಹೆಣೆದ ನಿರ್ದೇಶಕರ ಪ್ರಯತ್ನ ಪ್ರಶಂಸನೀಯ.

ಸೋಮಾರಿ, ಬೇಜವಾಬ್ದಾರಿ ವ್ಯಕ್ತಿಯೊಬ್ಬನ ಪಾತ್ರ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ದಿಗಂತ್ ಸಮರ್ಥ ನಟ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಹಳ್ಳಿ ಹುಡುಗಿ ಆಗಿ ಸ್ವಾತಿ ಶರ್ಮ ಮೆಚ್ಚುಗೆ ಪಡೆಯುತ್ತಾರೆ. ಸೋನು ಗೌಡ ಪಾತ್ರ ಪೋಷಣೆಯಲ್ಲಿ ಪಕ್ವತೆ ಕಾಣಿಸುತ್ತದೆ. ಅದೇ ಮಾತು ಉಳಿದವರ ಅಭಿನಯಕ್ಕೂ ಸಲ್ಲುತ್ತದೆ. ಸಂಗೀತ, ಛಾಯಾಗ್ರಹಣ, ತಾಂತ್ರಿಕ ಕೆಲಸಗಳು ಅಷ್ಟಕಷ್ಟೇ ಎನಿಸಿದರೂ, ಬದಲಾದ ಕಾಲದಲ್ಲಿ ಹೊಯ್ದಾಟಕ್ಕೆ ಸಿಲುಕಿದ ಯುವ ಮನಸ್ಸುಗಳ ಈ ಕತೆ ನಮ್ಮ ನಡುವಿನ ಕತೆಯಾಗಿ ಮನ ಮುಟ್ಟುತ್ತದೆ. ಪ್ರೀತಿ, ಪ್ರೇಮದ ನಡುವೆ ಇದೊಂದು ಪಕ್ಕಾ ಕೌಟುಂಬಿಕ ಕತೆಯಾಗಿ ರಂಜಿಸುತ್ತದೆ.

ಚಿತ್ರ:  ಫಾರ್ಚುನರ್

ತಾರಾಗಣ: ದಿಗಂತ್, ಸೋನು ಗೌಡ, ಸ್ವಾತಿ ಶರ್ಮಾ, ರಾಜಬಾಲ್ವಾಡಿ, ನವೀನ್ ಕೃಷ್ಣ, ರತನ್ ಲಾಲ್, ಕಲ್ಯಾಣಿ, ಲಕ್ಷ್ಮಿಸಿದ್ದಯ್ಯ

ನಿರ್ದೇಶನ: ಮಂಜುನಾಥ್ ಜೆ ಅನಿವಾರ್ಯ

ಸಂಗೀತ: ಪೂರ್ಣಚಂದ್ರ ತೇಜಸ್ವಿ

ಛಾಯಾಗ್ರಹಣ: ಮಧುಸೂದನ್

ರೇಟಿಂಗ್: ***

click me!