ಆದಿಪುರುಷ್‌ ಸಿನಿಮಾ ಬಜೆಟ್‌ಗಿಂತ ಕಡಿಮೆ ಹಣದಲ್ಲಿ ಚಂದ್ರಯಾನ-3 ಪ್ರಯಾಣ ಮಾಡಲಿದೆ ಇಸ್ರೋ!

By Santosh Naik  |  First Published Jul 13, 2023, 4:09 PM IST

ಚಂದ್ರನ ಮೇಲೆ ನೆಲೆಯೂರುವ ನಿಟ್ಟಿನಲ್ಲಿ ಇಸ್ರೋ ಚಂದ್ರಯಾನ-3ಯನ್ನು ನಾಳೆ ನಭಕ್ಕೆ ಉಡಾವಣೆ ಮಾಡಲಿದೆ. ಇದರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಭಾರತದ ಚಂದ್ರಯಾನ-3, ಓಂ ರಾವುತ್‌ ಅವರ ಆದಿಪುರುಷ್‌ಗಿಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದೆ ಎಂದಿದ್ದಾರೆ.


ನವದೆಹಲಿ (ಜು.13): ಸಿನಿಮಾ ಪ್ರೇಮಿಗಳು ಎಂದಿಗೂ ಆದಿಪುರುಷ್‌ ಚಿತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ಬಿಡುಗಡೆಗಿಂತ ಮುಂಚೆ ಚಿತ್ರ ಎಷ್ಟು ದೊಡ್ಡ ಪ್ರಮಾಣದಲ್ಲಿ ನಿರೀಕ್ಷೆ ಹುಟ್ಟಿಸಿತ್ತೆಂದರೆ, ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲಿಯೇ ಅದೆಲ್ಲವೂ ಪಾತಾಳಕ್ಕೆ ಕುಸಿದಿದ್ದವು. ರಾಮಯಾಣದ ದೈವೀ ಸ್ವರೂಪಿ ಪಾತ್ರಗಳನ್ನು ಚಿತ್ರದಲ್ಲಿ ಚಿತ್ರಿಸಿದ ರೀತಿಗೆ ಭಾರೀ ಪ್ರಮಾಣದ ಆಕ್ರೋಶ ವ್ಯಕ್ತವಾಗಿತ್ತು. ಟ್ರೇಲರ್‌ ಬಿಡುಡೆಯಾದ ಬಳಿಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲಿಯೇ ನಿರ್ದೇಶಕ ಓಂ ರಾವುತ್‌ ಕೆಲವೊಂದು ಬದಲಾವಣೆಗಳನ್ನೂ ಮಾಡಿದರಾದರೂ ಇದರಿಂದ ಯಾವುದೇ ವ್ಯತ್ಯಾಸವಾಗುರಲಿಲ್ಲ. ಪ್ರೇಕ್ಷಕರ ಮನ ಮುಟ್ಟುವಲ್ಲಿ ಈ ಚಿತ್ರ ವಿಫಲವಾಗಿತ್ತು. ರಾಮಾಯಣದ ರಾಮ, ಸೀತೆ, ರಾವಣ, ಹನುಮಂತನನ್ನು ಮಾರ್ವಲ್‌ ಸೂಪರ್‌ ಹೀರೋಗಳಂತೆ ನಿರ್ದೇಶಕ ಚಿತ್ರೀಕರಿಸಿದ್ದರು. ಆದರೆ, ಇದು ರಾಮಾಯಣದ ಅವಹೇಳನ ಎಂದೇ ಜನರು ಭಾವಿಸಿದರು. ಇದರಿಂದಾಗಿ ಆದಿಪುರುಷ್‌ ಚಿತ್ರ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್‌ ಕೂಡ ಮಾಡಲು ಸಾಧ್ಯವಾಗಿಲ್ಲ. ಇನ್ನೊಂದೆಡೆ ಕೋರ್ಟ್‌ ಕೂಡ ಚಿತ್ರದ ನಿರ್ದೇಶಕ, ಸಂಭಾಷಣೆಗಾರ ಹಾಗೂ ಸೆನ್ಸಾರ್‌ ಮಂಡಳಿ ಸದಸ್ಯರಿಗೆ ಛೀಮಾರಿ ಹಾಕಿತ್ತು.

ಚಿತ್ರ ಬಿಡುಗಡೆಯಾಗಿ ಒಂದು ತಿಂಗಳಾದರೂ, ಆದಿಪುರುಷ್‌ಅನ್ನು ಟ್ರೋಲ್‌ ಮಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಭಾರೀ ಬಜೆಟ್‌ನಲ್ಲ ಅದರಲ್ಲೂ ಭಾರತೀಯ ಸಿನಿಮಾರಂಗದ ಇತಿಹಾಸದ ಗರಿಷ್ಠ ಬಜೆಟ್‌ನ ಸಿನಿಮಾ ಎನ್ನುವ ಖ್ಯಾತಿಯೊಂದಿಗೆ ತೆರೆಗೆ ಬಂದಿತ್ತಾದರೂ, ಇದು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಈ ನಡುವೆ ಟ್ವಿಟರ್‌ ಬಳಕೆದಾರರೊಬ್ಬರು ಆದಿಪುರುಷ್‌ ಸಿನಿಮಾದ ಬಜೆಟ್‌ ಹಾಗೂ ಇಸ್ರೋದ ಚಂದ್ರಯಾನದ ಬಜೆಟ್‌ನ ಬಗ್ಗೆ ಕುತೂಹಲಕಾರಿಯಾದ ಅಂಶವನ್ನು ತಿಳಿಸಿದ್ದು ಇದು ವೈರಲ್‌ ಆಗಿದೆ.

ಓಂ ರಾವುತ್‌ ಅವರ ಆದಿಪುರುಷರ್‌ ಸಿನಿಮಾಗಿಂತ ಕಡಿಮೆ ಬಜೆಟ್‌ನಲ್ಲಿ ಇಸ್ರೋ, ಚಂದ್ರಯಾನ-3 ಮಾಡಲಿದೆ ಎಂದು ಟ್ವಿಟರ್‌ ಬಳಕೆದಾರ ರವಿ ಸುತಾನ್‌ ಜಾನಿ ಬರೆದುಕೊಂಡಿದ್ದಾರೆ. ಆದಿಪುರುಷ್‌ ಸಿನಿಮಾದ ಬಜೆಟ್‌ ಅಂದಾಜು 700 ಕೋಟಿಯಾಗಿದ್ದರೆ, ಇಸ್ರೋದ ಚಂಚ್ರಯಾನ-3ಯ ಬಜೆಟ್‌ 615 ಕೋಟಿ ರೂಪಾಯಿದೆ. ಇದು ನಮ್ಮ ಆದ್ಯತೆಗಳ ಬಗ್ಗೆ ಉತ್ತಮ ತಿಳುವಳಿಕೆ ನೀಡುತ್ತದೆ ಎಂದು ಬರೆದಿದ್ದಾರೆ.

ವಿಶ್ವದ ಇತರ ದೇಶಗಳ ಸ್ಪೇಸ್‌ ಏಜೆನ್ಸಿಗಳಿಗೆ ಇರುವ ಬಜೆಟ್‌ಅನ್ನು ಗಮನಿಸಿದರೆ, ಇಸ್ರೋಗೆ ಸರ್ಕಾರ ಹೆಚ್ಚಿನ ಬಜೆಟ್‌ ನೀಡಬೇಕು ಎಂದು ಪಾರ್ಥ್‌ ಸಾನೆ ಎನ್ನುವವರು ಬರೆದಿದ್ದಾರೆ. 'ನಿಮ್ಮ ಟ್ವೀಟ್‌ಅನ್ನು ಒಪ್ಪಿದ್ದೇನೆ.. ಸುಳ್ಳು ಪ್ರಚಾರ ಮಾಡುವ ಚಿತ್ರಗಳಿಗೆ ಹಾಕುವ ಹೂಡಿಕೆಯನ್ನೂ ಮೋದಿ ಇಸ್ರೋಗೆ ನೀಡಬೇಕು' ಎಂದು ಹೇಳಿದ್ದಾರೆ. ಹಾಗೇನಾದರೂ ಸರ್ದಾರ್‌ ಪಟೇಲ್‌ ಪ್ರತಿಮೆ ಬಗ್ಗೆ ಮಾತನಾಡಿದರೆ, ಉಳಿದವರೆಲ್ಲರೂ ಉರಿದುಕೊಂಡು ಸಾಯ್ತಾರೆ..' ಎಂದು ಮಯಾಂಕ್‌ ಎನ್ನುವರು ಬರೆದಿದ್ದಾರೆ. 'ಬಿಹಾರದಲ್ಲಿ ಮುರಿದು ಹೋದ ಬ್ರಿಜ್‌ನ ಬೆಲೆ 1700 ಕೋಟಿ ರೂಪಾಯಿ. ಯಾವ್ಯಾವುದೋ ಹೋಲಿಕೆಗಳನ್ನು ಮಾಡೋದು ಸರಿಯಲ್ಲ' ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ಜುಲೈ 14 ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡ್ಡಯನ: ಇಸ್ರೋ ಅಧಿಕೃತ ಘೋಷಣೆ

Tap to resize

Latest Videos

'ಅಣ್ಣಾ ನಿಮ್ದು ಯಾವ ರೀತಿಯ ಲಾಜಿಕ್‌ ಅನ್ನೋದೇ ಅರ್ಥವಾಗಿಲ್ಲ. ಆದಿಪುರುಷ್‌ ಸಿನಿಮಾವನ್ನು ಸಾರ್ವಜನಿಕರ ಹಣದಿಂದ ಮಾಡಿದ್ದಲ್ಲ. ಇದೊಂದು ಕಮರ್ಷಿಯಲ್‌ ಪ್ರಾಜೆಕ್ಟ್‌. ದುಡ್ಡು ಮಾಡುವ ಉದ್ದೇಶದಿಂದಲೇ ಇದಕ್ಕೆ ಹಣ ಹಾಕಿರುತ್ತಾರೆ.  ಇವರು 1 ಸಾವಿರವೋ 2 ಸಾವಿರ ಕೋಟಿಯನ್ನು ಹೂಡಿಕೆ ಮಾಡಿರುತ್ತಾರೆ. ಆದರೆ, ಚಂದ್ರಯಾನ ಯೋಜನೆ ಅನ್ನೋದು ಸಾರ್ವಜನಿಕರ ಹಣದಲ್ಲಿ ಮಾಡಿರುವಂಥದ್ದು' ಎಂದು ಬರೆದಿದ್ದಾರೆ.

Chandrayaan-3: ಜುಲೈ 13ಕ್ಕೆ ಭಾರತದ ಚಂದ್ರಯಾನ!

ಮೂಲಗಳ ಪ್ರಕಾರ ಆದಿಪುರುಷ್‌ ಸಿನಿಮಾದ ಬಜೆಟ್‌ 700 ಕೋಟಿ ರೂಪಾಯಿ. ಕೆಲವೊಂದು ವರದಿಗಳ ಪ್ರಕಾರ 650 ರಿಂದ 675 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗಿದೆ. ಇನ್ನೂ ಕೆಲವೆಡೆ 500 ಕೋಟಿಯಲ್ಲಿ ಇದರ ನಿರ್ಮಾಣವಾಗಿದೆ ಎನ್ನಲಾಗಿದೆ. ಕೆಟ್ಟ ವಿಎಫ್‌ಎಕ್ಸ್‌ನ ಕಾರಣದಿಂದಾಗಿ ಟೀಕೆಗಳು ಬಂದ ಬಳಿಕ ಕೆಲವು ದೃಶ್ಯಗಳನ್ನು ಮರು ನಿರ್ಮಾಣ ಮಾಡಲಾಗಿದೆ ಇದು ಬಜೆಟ್‌ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹಾಗೇನಾದರೂ ಆದಲ್ಲಿ ಇದು ಭಾರತದ ಅತ್ಯಂತ ದುಬಾರಿ ಚಿತ್ರ ಎನ್ನುವುದು ಖಚಿತ. ಬಾಹುಬಲಿ-1 ಚಿತ್ರ 180 ಕೋಟಿಯಲ್ಲಿ ನಿರ್ಮಾಣವಾಗಿದ್ದರೆ, 2ನೇ ಭಾಗ 250 ಕೋಟಿಯಲ್ಲಿ ನಿರ್ಮಾಣವಾಗಿತ್ತು. ಆರ್‌ಆರ್‌ಆರ್‌ ಸಿನಿಮಾ 550 ಕೋಟಿಯಲ್ಲಿ ನಿರ್ಮಾಣವಾಗಿತ್ತು.

click me!