
ಹಾವು ಎಂದರೆ ಸಾಕು, ಮೈ ಜುಮ್ಮೆನ್ನುತ್ತದೆ. ಅದರಲ್ಲೂ ವಿಷಪೂರಿತ ನಾಗರಹಾವನ್ನು ಸಾಕುವುದೆಂದರೆ ಸಾಮಾನ್ಯ ಮಾತಲ್ಲ. ಆದರೆ ಖ್ಯಾತ ಗಾಯಕ ಕೈಲಾಶ್ ಖೇರ್ ಬರೋಬ್ಬರಿ ಮೂರು ತಿಂಗಳ ಕಾಲ ನಾಗರಹಾವನ್ನು ಸಾಕಿದ್ದರಂತೆ! ಅಷ್ಟೇ ಅಲ್ಲ, ತಾವು ಮಲಗುವ ಹೊದಿಕೆಯಲ್ಲೇ ಅದಕ್ಕೂ ಜಾಗ ನೀಡುತ್ತಿದ್ದರಂತೆ. ತಮ್ಮ ಜೀವನದ ಈ ಅಚ್ಚರಿಯ ಘಟನೆಯನ್ನು ಇತ್ತೀಚಿನ ಪಾಡ್ಕಾಸ್ಟ್ನಲ್ಲಿ ಅವರು ಹಂಚಿಕೊಂಡಿದ್ದಾರೆ.
ಪದ್ಮಶ್ರೀ ಪುರಸ್ಕೃತ ಗಾಯಕ, ಸಂಗೀತ ಸಂಯೋಜಕ ಕೈಲಾಶ್ ಖೇರ್ ತಮ್ಮ ಹಾಡುಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಶಿವನ ಪರಮಭಕ್ತರಾಗಿರುವ ಅವರು ಇದೀಗ ತಮ್ಮ ಜೀವನದ ಯಾರೂ ಊಹಿಸದ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಸುಮಾರು 20ನೇ ವಯಸ್ಸಿನಲ್ಲಿದ್ದಾಗ ಮೂರು ತಿಂಗಳ ಕಾಲ ನಾಗರಹಾವೊಂದನ್ನು ಸಾಕಿದ್ದರಂತೆ. ಅದನ್ನು ತಮ್ಮ ಬ್ಯಾಗ್ನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದರಂತೆ. ಚಳಿಗಾಲದಲ್ಲಿ ತಮ್ಮ ಹೊದಿಕೆಯಲ್ಲೇ ಅದರೊಂದಿಗೆ ಮಲಗುತ್ತಿದ್ದರಂತೆ. ಆದರೆ ಕೊನೆಗೆ ಆ ಹಾವನ್ನು ಕಾಡಿಗೆ ಬಿಡಲು ನಿರ್ಧರಿಸಿದ್ದೇಕೆ ಎಂಬುದನ್ನೂ ವಿವರಿಸಿದ್ದಾರೆ.
'ನಮಗೆ ಸಾವಿನ ಭಯವೂ ಇರಲಿಲ್ಲ' ಎಂದ ಕೈಲಾಶ್ ಖೇರ್!
ರಣವೀರ್ ಅಲ್ಲಾಬಾದಿಯಾ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಕೈಲಾಶ್ ಖೇರ್, ತಮ್ಮ ಆರಂಭದ ದಿನಗಳ ಜೀವನದ ಬಗ್ಗೆ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾವು ಸುಮಾರು 12-13 ವರ್ಷಗಳ ಕಾಲ ಋಷಿಕೇಶದಲ್ಲಿ ವಾಸವಾಗಿದ್ದೆವು. ಆಗ ಸಾಕಷ್ಟು ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸುತ್ತಿದ್ದೆವು. ಅಲ್ಲಿನ ನೀಲಕಂಠ ಪ್ರದೇಶಕ್ಕೂ ಹೋಗುತ್ತಿದ್ದೆವು. ವೇದಪಾಠಿಗಳ ಒಂದು ಗುಂಪಿನೊಂದಿಗೆ ಬೆಟ್ಟಗಳನ್ನು ಹತ್ತುತ್ತಿದ್ದೆವು.
ಕಾಡುಗಳಲ್ಲಿ ದ್ರಾಕ್ಷಿಹಣ್ಣಿನ ಗಾತ್ರದ ಗುದಡಿಯಾ ನಿಂಬೆ ಎಂಬ ಹಣ್ಣುಗಳು ಸಿಗುತ್ತಿದ್ದವು. ಮರಗಳಿಂದ ಕೆಳಗೆ ಬಿದ್ದಿದ್ದ ಅವುಗಳನ್ನು ಹಸಿವಾದಾಗ ತಿನ್ನುತ್ತಿದ್ದೆವು. ಮಂಗಗಳಂತೆ ಪ್ರಕೃತಿಯ ನಡುವೆ ಬದುಕಿದ್ದೇವೆ. ಹಾಗಾಗಿ ಶಿವ ಮತ್ತು ಹನುಮಂತನ ಅನುಗ್ರಹ ನಮ್ಮ ಮೇಲಿದೆ ಎಂಬ ನಂಬಿಕೆ ನಮಗಿದೆ. ಯಾವುದೇ ಅಪಾಯಕ್ಕೂ ನಾವು ಹೆದರುತ್ತಿರಲಿಲ್ಲ. ಸಾವಿಗೂ ಭಯಪಡುತ್ತಿರಲಿಲ್ಲ. ನಮಗೆ ಹುಟ್ಟು ಮತ್ತು ಸಾವು ಎರಡೂ ಒಂದೇ ರೀತಿ ಕಾಣುತ್ತಿದ್ದವು ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮೂರು ತಿಂಗಳು ನಾಗರಹಾವನ್ನೇ ಸಾಕಿದ್ದರಂತೆ!
ತಮ್ಮ 20ನೇ ವಯಸ್ಸಿನಲ್ಲಿ ನಾಗರಹಾವನ್ನು ಸಾಕಿದ್ದ ಘಟನೆಯನ್ನು ನೆನಪಿಸಿಕೊಂಡ ಕೈಲಾಶ್ ಖೇರ್, "ಆಗ ನಮಗೆ ಅಷ್ಟೊಂದು ತಿಳಿವಳಿಕೆ ಇರಲಿಲ್ಲ. ಸುಮಾರು ಮೂರು ತಿಂಗಳ ಕಾಲ ಆ ನಾಗರಹಾವು ನಮ್ಮೊಂದಿಗೇ ಇತ್ತು. ಚಳಿಗಾಲದ ದಿನಗಳಾಗಿದ್ದವು. ಅದು ನಮ್ಮ ಹೊದಿಕೆಯಲ್ಲೇ ನಮ್ಮ ಜೊತೆ ಮಲಗುತ್ತಿತ್ತು. ನಾವು ಎಲ್ಲಿಗಾದರೂ ಹೋದರೆ ಅದನ್ನೂ ಬ್ಯಾಕ್ಪ್ಯಾಕ್ನಲ್ಲಿ ಇಟ್ಟುಕೊಂಡು ಹೋಗುತ್ತಿದ್ದೆವು" ಎಂದು ಹೇಳಿದ್ದಾರೆ.
ಆದರೆ ಹಾವನ್ನು ಸಾಕುವ ಸಂದರ್ಭದಲ್ಲಿ ಒಂದು ವಿಚಾರ ಅವರನ್ನು ಕಾಡತೊಡಗಿತ್ತಂತೆ. ಅದೇನೆಂದರೆ, ಅದಕ್ಕೆ ಆಹಾರವಾಗಿ ಇಲಿಗಳನ್ನು ಕೊಲ್ಲಬೇಕಾಗಿತ್ತು. ಈ ವಿಚಾರದಿಂದ ಬೇಸರಗೊಂಡ ಅವರು ಕೊನೆಗೆ ಹಾವನ್ನು ಕಾಡಿಗೆ ಬಿಡಲು ನಿರ್ಧರಿಸಿದರಂತೆ. "ಒಂದು ಜೀವಿಯನ್ನು ಸಾಕುವುದಕ್ಕಾಗಿ ಮತ್ತೊಂದು ಜೀವಿಯ ಪ್ರಾಣ ತೆಗೆಯಬೇಕಾಗುತ್ತದೆ ಎಂಬ ವಿಚಾರ ನಮ್ಮನ್ನು ಕಾಡಿತು. ಒಂದು ಜೀವಿಯನ್ನು ಉಳಿಸಲು ಮತ್ತೊಂದು ಜೀವಿಯನ್ನು ಕೊಲ್ಲುವಷ್ಟು ಕ್ರೂರಿಗಳಾಗಬಾರದು ಎಂದುಕೊಂಡೆವು. ಹೀಗಾಗಿ ಅದನ್ನು ಕಾಡಿಗೆ ಬಿಟ್ಟೆವು" ಎಂದು ಕೈಲಾಶ್ ಖೇರ್ ತಿಳಿಸಿದ್ದಾರೆ.
ನಾಗರಹಾವನ್ನು ಸಾಕುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನೂ ಕೈಲಾಶ್ ಖೇರ್ ವಿವರಿಸಿದ್ದಾರೆ. "ನಾಗರಹಾವಿನ ವಿಷದ ಹಲ್ಲುಗಳನ್ನು ತೆಗೆದಿದ್ದರೂ ಅದರ ಬುಸುಗುಡುವಾಗ ವಿಷದ ಹನಿಗಳು ಹೊರಬರುವ ಅಪಾಯ ಇರುತ್ತದೆ. ಹಾಗಾಗಿ ಯಾರಿಗೂ ಅದನ್ನು ಸಾಕಲು ಸಾಧ್ಯವಿಲ್ಲ. ಆದರೆ ಆಗ ನಮ್ಮ ಬುದ್ಧಿಯೇ ಬೇರೆ ರೀತಿ ಇತ್ತು. ಸಾಧು-ಸಂತರ ನಡುವೆ ಬೆಳೆದಿದ್ದೆವು. ಕಾಡು, ಬೆಟ್ಟಗಳಲ್ಲಿ ಸಾಕಷ್ಟು ಸಮಯ ಕಳೆದಿದ್ದೆವು. ಹೀಗಾಗಿ ಹಾವು, ಹುಳ-ಹುಪ್ಪಟೆಗಳನ್ನು ಕಂಡರೆ ಇದ್ದ ಭಯವೂ ದೂರವಾಗಿತ್ತು" ಎಂದು ಹೇಳಿದ್ದಾರೆ.
ಆ ಹಾವು ಕೆಲವೊಮ್ಮೆ ಆಹಾರ ಸಿಗದಿದ್ದಾಗ ಜೋರಾಗಿ ಬುಸುಗುಡುತ್ತಿತ್ತಂತೆ. ಆಗ ಕೈಲಾಶ್ ಖೇರ್ ಅದರ ಬಳಿ ಹೋಗಿ, "ತುಂಬಾ ಹಾಳಾಗುತ್ತಿದ್ದೀಯಾ!" ಎಂದು ಹೇಳುತ್ತಿದ್ದರಂತೆ. ಅದನ್ನು ಹಿಡಿದುಕೊಂಡು ಮಾತನಾಡಿಸುವಂತೆ ವರ್ತಿಸುತ್ತಿದ್ದರಂತೆ. ಬಳಿಕ ಅದನ್ನು ಮತ್ತೆ ಚೀಲದಲ್ಲಿ ಹಾಕಿಕೊಳ್ಳುತ್ತಿದ್ದರಂತೆ. "ನಾವು ಅದರೊಂದಿಗೆ ಮಾತನಾಡುತ್ತಿದ್ದೆವು. ಅದು ಕೂಡ ನಮ್ಮೊಂದಿಗೆ ಸಂವಹನ ನಡೆಸುತ್ತಿರುವಂತೆ ಅನಿಸುತ್ತಿತ್ತು. ಅದೊಂದು ವಿಭಿನ್ನವಾದ ಸಮಯ" ಎಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಶಿವಭಕ್ತ ಕೈಲಾಶ್ ಖೇರ್ ಅವರ ಈ ಅಪರೂಪದ ಅನುಭವ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾಡುಗಳ ಮೂಲಕ ಗುರುತಿಸಿಕೊಂಡಿರುವ ಗಾಯಕನ ಜೀವನದಲ್ಲಿ ಇಂತಹ ಸಾಹಸದ ಅಧ್ಯಾಯವೂ ಇತ್ತು ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.