ಮತ್ತೆ ನಿಮ್ಮೆದುರಿಗೆ ಹೊಸ ರೂಪದಲ್ಲಿ ’ನಾಗರಹಾವು’

Published : Jul 20, 2018, 12:13 PM IST
ಮತ್ತೆ ನಿಮ್ಮೆದುರಿಗೆ ಹೊಸ ರೂಪದಲ್ಲಿ  ’ನಾಗರಹಾವು’

ಸಾರಾಂಶ

ಪುಟ್ಟಣ್ಣ ಕಣಗಾಲ್, ತರಾಸು, ವಿಷ್ಣುವರ್ಧನ್, ಅಂಬರೀಷ್, ಆರತಿ, ಚಿಟ್ಟಿಬಾಬು, ವಿಜಯಭಾಸ್ಕರ್, ಜಯಂತಿ.. ಹೀಗೆ ಮಹಾನ್ ಪ್ರತಿಭೆಗಳೆಲ್ಲ ಒಂದಾಗಿರುವ ನಾಗರಹಾವು ಸಿನಿಮಾ ಆಸಕ್ತರಿಗೆ ಪಠ್ಯ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರ ಆ ಕಾಲದಲ್ಲಿ  ಭಾರೀ ಸದ್ದು ಮಾಡಿತ್ತು.  

ನಾಗರಹಾವು ಅನೇಕ ಕಾರಣಗಳಿಗೆ  ಬಹುಮುಖ್ಯವಾದ ಸಿನಿಮಾ. ಹೊಸ ತಲೆಮಾರಿನ ಪ್ರೇಕ್ಷಕರಿಗೆ ಈ ಸಿನಿಮಾ ಎಷ್ಟು ಆಪ್ತವೋ, ನಿರ್ದೇಶಕರಿಗೂ ಚಿತ್ರಕತೆಗಾರರಿಗೂ ಅಷ್ಟೇ ಉಪಯುಕ್ತವಾದ ಪಠ್ಯ ಕೂಡ.

ಇವತ್ತು ಕತೆ ಬರೆಯಲು ಹೆಣಗಾಡುವ ಚಿತ್ರಕತೆಗಾರರು, ಪುಟ್ಟಣ್ಣ  ಕಣಗಾಲ್ ಹೇಗೆ ಮೂರು ಕಾದಂಬರಿಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದರು ಅನ್ನುವುದನ್ನು ಅಧ್ಯಯನ ಮಾಡಬಹುದು. ಪುಟ್ಟಣ್ಣ ಕಣಗಾಲರು ಈ ಚಿತ್ರದ ಮೂಲಕ ಆ್ಯಂಗ್ರಿ ಯಂಗ್ ಮ್ಯಾನ್ ಪರಿಕಲ್ಪನೆಯನ್ನು ಪರಿಚಯಿಸುತ್ತಾರೆ.

ಸಲೀಮ್ ಜಾವೇದ್ ಜೋಡಿ ಜಂಜೀರ್ ಚಿತ್ರದಲ್ಲಿ ಅಮಿತಾಭ್‌ಗೆ ಮರುಹುಟ್ಟು ಕೊಟ್ಟು ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜನ್ನು ಕೊಡುವುದಕ್ಕೆ ಮೊದಲೇ ಪುಟ್ಟಣ್ಣ ಅಂಥದ್ದೊಂದು ರೂಪಕವನ್ನು ಕನ್ನಡದಲ್ಲಿ ಸೃಷ್ಟಿ
ಮಾಡಿದ್ದರು. ರಾಮಾಚಾರಿ ಆ ಕಾಲದ ಸಿಟ್ಟು, ಬಡತನ, ಗ್ರಾಮೀಣ ಪ್ರದೇಶದಲ್ಲಿ ಎದುರಿಸುವ ಅವಮಾನ, ವಿದ್ಯಾರ್ಥಿಯ ಕೀಳರಿಮೆ, ಶಿಕ್ಷಣದಾಚೆಗಿನ ಪ್ರತಿಭೆ, ಆಗ ತಾನೇ ಮೊಳೆಯುತ್ತಿದ್ದ ಪ್ರೇಮ- ಇವೆಲ್ಲಕ್ಕೂ ಸಂಕೇತವಾಗಿದ್ದ. ಒಂದು ಸಾತ್ವಿಕ ಸಿಟ್ಟನ್ನು, ಗೆದ್ದುಕೊಳ್ಳಲಾಗದ ಪ್ರೀತಿಯನ್ನು ಎದೆಯಲ್ಲಿ ಅವಿತಿಟ್ಟುಕೊಂಡ ಹುಡುಗನೊಬ್ಬನ ತಳಮಳ ಸಿನಿಮಾದಲ್ಲಿತ್ತು.

ಆ ಚಿತ್ರಕ್ಕೆ ಚಿತ್ರದುರ್ಗದ ಕೋಟೆಯ ಹಿನ್ನೆಲೆಯನ್ನು  ತ.ರಾ. ಸುಬ್ಬರಾಯರು ಕಟ್ಟಿಕೊಟ್ಟಿದ್ದರು. ಅದನ್ನು ಪುಟ್ಟಣ್ಣ ಕಣಗಾಲ್ ಮತ್ತಷ್ಟು ಉಜ್ವಲವಾಗಿಸಿದರು. ಅವರು ಚಿತ್ರೀಕರಣ ನಡೆಸಿದ ತಾಣಗಳು, ಅದರಲ್ಲಿ ಬಳಸಿಕೊಂಡ ಹಾಡು, ರಾಮಾಚಾರಿಯ ಸಿಟ್ಟಿಗೆ  ಪ್ರತಿರೂಪದಂತಿದ್ದ ಪರಿಸರ, ಆಕ್ರೋಶ ಮತ್ತು ಪ್ರೀತಿ ಬೆರೆತ ರಾಮಾಚಾರಿಯ ವ್ಯಕ್ತಿತ್ವ, ಅವನ ಮೊಂಡುತನ- ಹೀಗೆ ಆಗಷ್ಟೇ ಯೌವನಕ್ಕೆ ಕಾಲಿಟ್ಟ ತರುಣ ಮೊದಲ ಬಾರಿಗೆ ಚಿತ್ರವೊಂದರಲ್ಲಿ ಕಾಣಿಸಿಕೊಂಡ.

ಆ ಪಾತ್ರದಲ್ಲಿ ಕಿಂಚಿತ್ತೂ ಕಲ್ಪನೆಯಿಲ್ಲ, ರಾಮಾಚಾರಿಯೆಂಬ ಹುಡುಗ ನಿಜಕ್ಕೂ ಇದ್ದ ಎಂಬಷ್ಟು ಪ್ರಭಾವಶಾಲಿಯಾಗಿದ್ದ ಆ ಪಾತ್ರದಲ್ಲಿ ಅನೇಕರು ತಮ್ಮನ್ನು ತಾವು ಕಂಡುಕೊಂಡಿದ್ದರು. ಆಗಷ್ಟೇ ಜನಪ್ರಿಯವಾಗುತ್ತಿದ್ದ ಪ್ರೇಮ, ಅದಕ್ಕೆ ಅಡ್ಡಿಯಾಗುತ್ತಿದ್ದ ಜಾತೀಯತೆ, ಅದರಿಂದ ಕಂಗಾಲಾಗಿದ್ದ ಹುಡುಗ- ಹುಡುಗಿಯರ ಒಳಮನಸ್ಸಿಗೆ ನಾಗರಹಾವು ಸಾಕ್ಷಿಯಾದಂತಿತ್ತು. ಇಬ್ಬರು ನಾಯಕನಟರನ್ನು ಕನ್ನಡಕ್ಕೆ ಕೊಟ್ಟ ಚಿತ್ರ ಇದು. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮಹತ್ವದ ನಟನಾಗಿ ಬೆಳೆಯುವುದಕ್ಕೆ ಕಾರಣವಾದ ಚಿತ್ರವೂ ಇದೇ.

ಹಾಗೆಯೇ ಅಂಬರೀಷ್‌ರಂಥ ನಟ-ನಾಯಕನನ್ನು ಕೊಟ್ಟದ್ದೂ ಇದೇ ಸಿನಿಮಾ. ಚಿಟ್ಟಿಬಾಬು ಛಾಯಾಗ್ರಾಹಣದಲ್ಲಿ ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಸ್ಲೋ ಮೋಷನ್ ತಂತ್ರಜ್ಞಾನ ಬಳಸಿದ್ದು ಕೂಡ ಆ ಕಾಲಕ್ಕೆ ಗಮನಾರ್ಹ. ಇಷ್ಟಕ್ಕೆಲ್ಲ ಕಾರಣವಾದ ಈಶ್ವರಿ ಸಂಸ್ಥೆಯ ಸಾಹಸವೂ ಇದರಲ್ಲಿ ಬೆರೆತಿದೆ. ಒಂದು ದೊಡ್ಡ ಕನಸನ್ನು ನನಸಾಗಿಸಲು ಪುಟ್ಟಣ್ಣ, ವೀರಾಸ್ವಾಮಿ, ಚಿಟ್ಟಿಬಾಬು, ವಿಜಯಭಾಸ್ಕರ್, ವಿಜಯನಾರಸಿಂಹ, ಆರ್ ಎನ್ ಜಯಗೋಪಾಲ್- ತಮ್ಮ ಪ್ರತಿಭೆಯನ್ನೆಲ್ಲ ಧಾರೆ ಎರೆದಂತಿದ್ದ ಚಿತ್ರ ಇದು.

ಪುಟ್ಟಣ್ಣ ಕಣಗಾಲರಿಗೂ ಇದೊಂದು ರೀತಿಯಲ್ಲಿ ಸವಾಲಾಗಿತ್ತು. ಯಾಕೆಂದರೆ ಹೊಸಬರೇ ಇದ್ದ ಸಿನಿಮಾ ಅದು. ದೊಡ್ಡ ಬಂಡವಾಳದ ನಾಗರಹಾವು ಕೇವಲ ಪುಟ್ಟಣ್ಣ ಕಣಗಾಲರ ಹೆಸರಿನಿಂದಲೇ ಓಡಬೇಕಾದ
ಪರಿಸ್ಥಿತಿ ಇತ್ತು. ಅದಕ್ಕೂ ಮುಂಚೆ ಕಣಗಾಲರು ಗೆಜ್ಜೆಪೂಜೆ, ಶರಪಂಜರ, ಸಾಕ್ಷಾತ್ಕಾರ, ಕರುಳಿನ ಕರೆ, ಕಪ್ಪುಬಿಳುಪು, ಬೆಳ್ಳಿಮೋಡ, ಮಲ್ಲಮ್ಮನ ಪವಾಡದಂಥ ಜನಪ್ರಿಯ ಶೈಲಿಯ ಕತೆಗಳನ್ನು ಹೊಂದಿದ್ದ ಚಿತ್ರವನ್ನು ನಿರ್ದೇಶಿಸಿದ್ದರು. ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಸರಾಗಿದ್ದರು. ನಾಗರಹಾವು ಅವರ ಚಿತ್ರಜೀವನದಲ್ಲೂ ವಿಶಿಷ್ಟವಾದ ಸಿನಿಮಾ ಆಗಿತ್ತು.

ಚಿತ್ರದುರ್ಗದ ಖ್ಯಾತಿಯನ್ನು ಹೆಚ್ಚಿಸಿದ್ದು ಕೂಡ ಈ ಸಿನಿಮಾದ ಹೆಗ್ಗಳಿಕೆ. ಕನ್ನಡ ನಾಡಿನ ವೀರರಮಣಿಯ.. ಗೀತೆಯಲ್ಲಿ ಜಯಂತಿಯವರ ಅಭಿನಯ ಒನಕೆ ಓಬವ್ವನ ಕತೆಯನ್ನು ಇಡೀ ಕನ್ನಡ ನಾಡಿಗೆ ಹಬ್ಬಿಸಿತು.
ಯಾವ ಚರಿತ್ರೆಯ ಪಾಠವೂ ಹೇಳಲಾರದಷ್ಟು ಸಮರ್ಪಕವಾಗಿ ಮದಕರಿನಾಯಕನ ಕಾಲದ ಜಗತ್ತನ್ನು  ಕಣ್ಣ ಮುಂದೆ ತಂದಿಟ್ಟಿತು. ಇಂಥ ಸಿನಿಮಾ ಇದೀಗ ಹೊಸ ರೂಪದಲ್ಲಿ ಬರುತ್ತಿದೆ.

ಅರ್ಥಪೂರ್ಣವೂ ಚಿತ್ರಕ್ಕೆ ಪೂರಕವೂ ಆದ ಹಾಡುಗಳು, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಪಿಬಿ ಶ್ರೀನಿವಾಸ, ಪಿ ಸುಶೀಲ- ಗಾಯನ, ಚಿ ಉದಯಶಂಕರ್ ರಚಿಸಿದ ಎರಡು ಸೊಗಸಾದ ಹಾಡುಗಳ ಜೊತೆ, ಆರ್‌ಎನ್‌ಜೆ, ವಿಜಯನಾರಸಿಂಹ ಕವಿ ಪ್ರತಿಭೆ, ಕನ್ನಡದ ಪ್ರಮುಖ ನಟವರ್ಗ ಇರುವ ಈ ಸಿನಿಮಾವನ್ನು ಹತ್ತಾರು ಸಲ ನೋಡಿದ ಪ್ರೇಕ್ಷಕರಿದ್ದಾರೆ. ಈ ವಾರ ಮತ್ತೆ ನಾಗರಹಾವು ಹೊಸ ರೂಪದಲ್ಲಿ ನಿಮ್ಮೆದುರು ಬರುತ್ತಿದೆ.  

-ಜೋಗಿ 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

The Devil Movie Review: ದರ್ಶನ್‌ ದಿ ಡೆವಿಲ್‌ ಸಿನಿಮಾದ ಹೈಲೈಟ್ಸ್‌ ಏನು? ಡೆವಿಲ್‌ Part 2 ಬರುತ್ತಾ!
The Devil Movie: ಏನ್ರೀ ಹವಾ ಇದು... ಗಿಲ್ಲಿ ನಟ ಎಣ್ಣೆಯಲ್ಲಿ ಮುಖ ತೊಳ್ಕೊಂಡಿದ್ದಾರೆ ಎಂದ ವೀಕ್ಷಕರು