ಚಿತ್ರ ಮಿಮರ್ಶೆ:ಪುಟ 109

By Kannadaprabha NewsFirst Published Nov 17, 2018, 9:31 AM IST
Highlights

ಚಿತ್ರ ಆರಂಭಕ್ಕೂ ಮೊದಲು ನಿರ್ದೇಶಕ ದಯಾಳ್ ಪದ್ಮನಾಭನ್ ‘ಈ ಚಿತ್ರ ಪ್ರಾರಂಭದಲ್ಲಿ ನಿಮಗೆ ಸ್ವಲ್ಪ ಅರ್ಥವಾಗದೇ ಮುಂದೆ ಸಾಗಬಹುದು

ಆದರೆ ಕಡೆಯ ಮೂವತ್ತು ನಿಮಿಷಗಳಲ್ಲಿ ಎಲ್ಲವೂ ತೆರೆದುಕೊಂಡು ಪೂರ್ಣವಾಗಿ ಚಿತ್ರವನ್ನು ನೋಡಿಯಾದ ಮೇಲೆ ನಿಮಗೆ ಖಂಡಿತವಾಗಿಯೂ ಖುಷಿಯಾಗುತ್ತದೆ’ ಎಂದು ಹೇಳಿಕೊಂಡರು. ಚಿತ್ರ ನೋಡಿ ಎದ್ದ ಮೇಲೆ ಈ ಮಾತು ತುಸು ಸತ್ಯ ಅನ್ನಿಸುತ್ತದೆ. ಜೆಕೆ ಮತ್ತು ನವೀನ್ ಕೃಷ್ಣ ಇಬ್ಬರೇ ಇಡೀ ಮೊದಲಾರ್ಧವನ್ನು ಆವರಿಸಿಕೊಳ್ಳುವಾಗ, ಸಂಭಾಷಣೆಯ ಬಂಡಿಯ ಮೇಲೆ ಆಮೆಗತಿಯಲ್ಲಿ ಚಿತ್ರ ಸಾಗುವಾಗ ಆಕಳಿಕೆ ಬರುತ್ತದೆ.

ಆದರೆ ದ್ವಿತೀಯಾರ್ಧಕ್ಕೆ ನೆಗೆಯುತ್ತಿದ್ದಂತೆಯೇ ಚಿತ್ರ ಮಗ್ಗಲು ಬದಲಿಸುತ್ತದೆ. ಮೊದಲಾರ್ಧದಲ್ಲಿ ಹುಟ್ಟಿಕೊಂಡ ಪ್ರಶ್ನೆಗಳಿಗೆಲ್ಲಾ ಉತ್ತರ ದೊರೆಯುತ್ತಾ ಹೋಗುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕ ದಯಾಳ್ ಪ್ರಯತ್ನ ಸಾರ್ಥಕ. ಅದಕ್ಕಿಂತಲೂ ತುಸು ಹೆಚ್ಚಾಗಿ ಸಂಭಾಷಣೆಕಾರ ನವೀನ್ ಕೃಷ್ಣ ಶ್ರಮ ಎದ್ದು ಕಾಣುತ್ತದೆ.

ಒಂದು ಕೊಲೆಯ ಸುತ್ತಲೂ ಸುತ್ತುವ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಡಗಿದೆ. ಪೊಲೀಸ್ ಆಫೀಸರ್ ಜೆಕೆ ನವೀನ್ ಕೃಷ್ಣರನ್ನು ವಿಚಾರಣೆ ಮಾಡುವುದು, ಕಡೆಗೆ ಕೊಲೆಗಾರ ಯಾರು ಎನ್ನುವ ಸತ್ಯವನ್ನು ಪತ್ತೆ ಮಾಡುವುದು ಚಿತ್ರದ ಕತೆ. ಇನ್ನು ಪುಟ 109 ಎಂದು ಯಾಕೆ ಟೈಟಲ್ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರೆ ಇಡೀ ಕತೆಗೆ ಟ್ವಿಸ್ಟ್ ದೊರೆಯುವುದು ಈ ಪುಟ 109ರಿಂದಲೇ. ವೈಷ್ಣವಿ ಚಂದ್ರನ್ ತೆರೆಯ ಮೇಲೆ ಬಂದು ಹೋಗುವ ಸಮಯ ತುಂಬಾ ಕಡಿಮೆ.

ಇದ್ದಷ್ಟು ಹೊತ್ತು ಮುಖ್ಯ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅನುಪಮಾ ಗೌಡ ಎರಡು ಸೀನ್ಗಳಲ್ಲಿ ಬಂದು ಹೋಗುವ ಅತಿಥಿ. ಜೆಕೆ ಪೊಲೀಸ್ ಅಧಿಕಾರಿಯಾಗಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ, ಕಣ್ಣಿನಲ್ಲೇ ಮಾತನಾಡುತ್ತಾ ಇಷ್ಟವಾಗುತ್ತಾ ಹೋಗುತ್ತಾರೆ. ನವೀನ್ ಕೃಷ್ಣ ಒಬ್ಬ ಸಾಹಿತಿ. ತನ್ನ ಹೆಂಡತಿ ಕೊಲೆಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾಗುವ ವ್ಯಕ್ತಿ. ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಜೆಕೆ ಪ್ರಶ್ನೆಗೆ ಕೊಡುವ ಉತ್ತರಗಳು ನೋಡುಗನಲ್ಲಿ ಕುತೂಹಲವನ್ನು ಹೆಚ್ಚಿಸುತ್ತಾ ಹೋಗುತ್ತವೆ.

ನೋಡುಗನನ್ನು ತನ್ನತ್ತ ಸೆಳೆದುಕೊಳ್ಳುವಂತಹ  ಕೆಲವೊಂದಷ್ಟು ಗುಣಗಳನ್ನು ಚಿತ್ರ ಹೊಂದಿರುವಂತೆಯೇ  ಅಲ್ಲಲ್ಲಿ ನಿಂತು, ಅದದೇ ಡೈಲಾಗ್‌ಗಳನ್ನು ರಿಪೀಟ್ ಮಾಡುತ್ತಾ, ಮಾತಿನಲ್ಲೇ ಚಿತ್ರ ಕಟ್ಟುವ ರೀತಿ ಕೊಂಚಕ್ಕೂ ಹೆಚ್ಚು ಬೇಸರವನ್ನು ತರಿಸಬಹುದು. ಆದರೆ  ನಡೆದ ಕೊಲೆ, ಅದನ್ನು ನಿರ್ವಹಿಸಿದ ರೀತಿ, ಅದಕ್ಕೆ ಸಂಬಂಧಿಸಿದ ವಿಚಾರಣೆಗಳೆಲ್ಲವೂ ಸಸ್ಪೆನ್ಸ್‌ನಲ್ಲಿಯೇ ಸಾಗಿ ಮನಸ್ಸಿನಲ್ಲಿ ಉಳಿಯುತ್ತವೆ. ಛಾಯಾಗ್ರಾಹಕ, ಸಂಗೀತಗಾರರಿಗೆ ಇಲ್ಲಿ ಕೆಲಸ ಕಡಿಮೆ.

ಸಂಕಲನಕಾರ  ಒಂದಷ್ಟು ನಾಜೂಕಿನ ಕೆಲಸ ಮಾಡಿದ್ದಾನೆ. ನಿರ್ದೇಶಕ ದಯಾಳ್ ಪದ್ಮನಾಭನ್ ಚಿತ್ರಕತೆಯನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಕಡೆಗೆ ಇಲ್ಲಿ ನಾಯಕರಾಗಿ ಜೆಕೆ ಮತ್ತು ನವೀನ್ ಕೃಷ್ಣ ಕಾಣಿಸಿಕೊಂಡರೂ ಕತೆ ಮತ್ತು, ಸಂಭಾಷಣೆಯೇ ಮುಖ್ಯ ಪಾತ್ರ ನಿರ್ವಹಿಸಿವೆ ಎಂದು ಅನ್ನಿಸಿಬಿಡುತ್ತದೆ. ನವೀನ್‌ಕೃಷ್ಣ ಸಂಭಾಷಣೆ ಬರೆಯುವಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದಾರೆ ಎನ್ನುವುದೂ ಎದ್ದು ಕಾಣುತ್ತದೆ.

ಚಿತ್ರ: ಪುಟ 109

ತಾರಾಗಣ: ಜೆಕೆ (ಜಯರಾಂ ಕಾರ್ತಿಕ್), ನವೀನ್ ಕೃಷ್ಣ, ವೈಷ್ಣವಿ ಚಂದ್ರನ್, ಅನುಪಮಾ ಗೌಡ

ನಿರ್ದೇಶನ, ನಿರ್ಮಾಣ: ದಯಾಳ್ ಪದ್ಮನಾಭನ್

ಸಂಗೀತ: ಗಣೇಶ್ ನಾರಾಯಣ್

ಛಾಯಾಗ್ರಹಣ: ಪಿ.ಎಚ್.ಕೆ. ದಾಸ್

ರೇಟಿಂಗ್: ***

click me!