
ಬಾಂಧವ್ಯಕ್ಕಿಂತ ಮಾನವೀಯತೆಗಾಗಿ ಅವರ ಹೋರಾಟ. ಕೆಟ್ಟ ರಾಜಕಾರಣಿಗಳ ದೌರ್ಜನ್ಯ-ದಬ್ಬಾಳಿಕೆಯ ವಿರುದ್ಧ ಅವರ ಯುದ್ಧ. ಕಾನೂನು ಪಾಲಿಸುವ ಅಮ್ಮ, ಅಮ್ಮನನ್ನು ಪಾಲಿಸುವ ಮಗ. ಹಾಗೊಂದು ಬದ್ಧತೆಯಲ್ಲಿ ಅವರು ದುಷ್ಟರ ವಿರುದ್ಧ ಹೇಗೆ ಯುದ್ಧ ಸಾರಿ, ಗೆಲ್ಲುತ್ತಾರೆನ್ನುವುದೇ ಈ ಚಿತ್ರದ ಒಂದು ಎಳೆ. ಸಾಮಾನ್ಯವಾಗಿ ಶ್ರೀಮಂತರ ಅಟ್ಟಹಾಸಗಳಲ್ಲಿ ನೊಂದು, ಬೆಂದವರಿಗೆ ಪೊಲೀಸು ಮತ್ತು ಕೋರ್ಟ್‌ಗಳೇ ಭರವಸೆಯ ಬೆಳಕು.
ಅವುಗಳ ಮೇಲೂ ಭರವಸೆಗಳು ಕಳೆದು ಹೋದಾಗ ಪ್ರತಿಯೊಬ್ಬ ಪ್ರಜೆಯೂ ಪೊಲೀಸು, ನ್ಯಾಯ ತೀರ್ಮಾನಿಸುವ ಪ್ರಜೆ ಎನ್ನುವುದನ್ನೇ ಚಿತ್ರದ ಕಥಾ ನಾಯಕ ಮೋಹನ್ ದಾಸ್ ಮತ್ತು ಆತನ ತಾಯಿ ಪಾರ್ವತಿ ಪಾತ್ರಗಳ ಮೂಲಕ ಚಿತ್ರಿಸಿ, ಪ್ರಸ್ತುತ ಸಂದರ್ಭಕ್ಕೂ ಕತೆಯನ್ನು ಮುಖಾಮುಖಿ ಆಗಿಸಿದ್ದಾರೆ ನಿರ್ದೇಶಕ ಶಶಾಂಕ್.
ಕಥಾ ನಾಯಕ ಮೋಹನ್ ದಾಸ್(ಅಜಯ್‌ರಾವ್)ಒಬ್ಬ ಕರಾಟೆ ಮಾಸ್ಟರ್. ಅಸಹಾಯಕರ ಮೇಲೆ ದೌರ್ಜನ್ಯ ನಡೆದರೆ, ದಬ್ಬಾಳಿಕೆ ನಡೆದರೆ ಆತನಿಗೆ ಕೋಪ. ಆ ಕೋಪ ಸಮಾಜದ ಹಿತಕ್ಕಾಗಿ ಮಾತ್ರ. ಆ ಕಾರಣಕ್ಕೆ ಮಗನ ಹೋರಾಟಕ್ಕೆ ವಕೀಲೆಯೂ ಆದ ತಾಯಿ ಪಾರ್ವತಿ (ಸುಮಲತಾ ಅಂಬರೀಶ್) ಸಾಥ್ ನೀಡುತ್ತಾಳೆ. ಅನ್ಯಾಯದ ವಿರುದ್ಧ ಸಿಡಿದೇಳುವ ಮಗನ ಕೆಚ್ಚು, ರಚ್ಚು, ಆಕ್ರೋಶ, ಕೋಪಕ್ಕೆ ಹೆಮ್ಮೆ ಪಡುತ್ತಾಳೆ. ರಾಜಕಾರಣಿ ಕಾಳೆ (ಕೃಷ್ಣ ಹೆಬ್ಬಾಲೆ) ಮತ್ತು ಆತನ ಮಗ ಶರತ್ ಕಾಳೆ (ಭಜರಂಗಿ ಲೋಕಿ)ಗೆ ಅದು ಆಗದು.
ತಂದೆ-ಮಗನಅಟ್ಟಹಾಸಕ್ಕೆ ಬ್ರೇಕ್ ಹಾಕಲು ಹೋದಾಗ ಅಮ್ಮ-ಮಗ ಹೇಗೆಲ್ಲ ಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದು ಕತೆಯ ಒಟ್ಟು ತಿರುಳು. ಗಟ್ಟಿ ಕತೆಯೇ. ಆದರೂ ನಿರೂಪಣೆ ಕೊಂಚ ಕೈ ಕೊಟ್ಟಿದೆ. ಸೆಂಟಿಮೆಂಟ್, ಆ್ಯಕ್ಷನ್, ರೊಮ್ಯಾನ್ಸ್ ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳು ಇಲ್ಲಿವೆ. ಇನ್ನಷ್ಟು ಅವು ಹದವಾಗಿ ಮಿಶ್ರಣವಾಗಿದ್ದರೆ, ಚಿತ್ರದ ಖದರ್ ಬದಲಾಗುತ್ತಿತ್ತು. ಆ್ಯಕ್ಷನ್ ಪ್ರಿಯರಿಗೆ ತುಸು ಹೆಚ್ಚೇ ರಂಜನೆಯಿದೆ. ಅಜಯ್ ರಾವ್ ಆರಂಭದಿಂದ ಅಂತ್ಯದವರೆಗೂ ಕ್ರಾಂತಿಯ ಕಿಡಿಯಂತೆ ಅಬ್ಬರಿಸಿದ್ದಾರೆ. ೨೫ನೇ ಚಿತ್ರ ಎನ್ನುವುದಕ್ಕೂ ಎನೋ ತುಸು ಜಾಸ್ತಿಯೇ ರಿಸ್ಕ್ ತೆಗೆದುಕೊಂಡಿದ್ದು ತೆರೆ ಮೇಲೆ ಕಾಣುತ್ತಿದೆ.
ಸುಮಲತಾ ಕಣ್ಣಲ್ಲೇ ಆಕ್ರೋಶದ ಕಿಡಿ ಹಾರಿಸುತ್ತಾರೆ. ಮಗನಿಗಾಗಿ ಹಂಬಲಿಸುವ ಅಮ್ಮನಾಗುವ ಬದಲಿಗೆ ಸಮಾಜಕ್ಕಾಗಿ ಮಿಡಿಯುವ ತಾಯಿಯಾಗಿ ಮಿಂಚಿದ್ದಾರೆ. ಆಶಿಕಾ ಸಂಗೀತಗಾರ್ತಿಯಾಗಿದ್ದರೂ, ಅದಕ್ಕಿಲ್ಲಿ ಜಾಗವೇ ಸಿಕ್ಕಿಲ್ಲ. ಬದಲಿಗೆ ಪ್ರೀತಿ, ಪ್ರೇಮ ಎನ್ನು ತಲೆನೋವಿನ ಜತೆಗೆ ಗ್ಲಾಮರಸ್ ದೃಶ್ಯಗಳಲ್ಲಿ ಕಣ್ಣು ಕುಕ್ಕುವಂತೆ ಕಾಣಿಸಿಕೊಂಡಿದ್ದಾರೆ.ಅಚ್ಯುತ್ ಕುಮಾರ್ ನಟನೆಯಲ್ಲಿ ಸಹಜತೆ ಇದೆ. ಕೆಟ್ಟ ರಾಜಕಾರಣಿ ಪಾತ್ರಗಳಲ್ಲಿ ಕೃಷ್ಣ ಹೆಬ್ಬಾಲೆ, ಭಜರಂಗಿ ಲೋಕಿ ಅಬ್ಬರಿಸಿದ್ದಾರೆ. ಹಾಡುಗಳಿಗಿಂತ ಚಿತ್ರಕ್ಕೆ ಹಿನ್ನೆಲೆ ಸಂಗೀತವೇ ಪ್ಲಸ್ ಆಗಿದೆ.
ಚಿತ್ರ: ತಾಯಿಗೆ ತಕ್ಕ ಮಗ
ತಾರಾಗಣ: ಅಜಯ್ ರಾವ್, ಸುಮಲತಾ ಅಂಬರೀಶ್, ಆಶಿಕಾ ರಂಗನಾಥ್,
ಸಂಗೀತ: ಜೂಡಾ ಸ್ಯಾಂಡಿ
ಛಾಯಾಗ್ರಹಣ: ಶೇಖರ್ ಚಂದ್ರ
ರೇಟಿಂಗ್: ***
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.