ಚಿತ್ರ ಮಿಮರ್ಶೆ: 8ಎಂಎಂ

By Kannadaprabha NewsFirst Published Nov 17, 2018, 9:20 AM IST
Highlights

ತುಂಬಾ ವರ್ಷಗಳ ನಂತರ ಜಗ್ಗೇಶ್ ತೆರೆ ಮೇಲೆ ಬಂದಿದ್ದಾರೆ, ಅವರ  ‘8 ಎಂಎಂ’  ಚಿತ್ರದ ವಿಮರ್ಶೆ ಇಲ್ಲಿದೆ

ಸಮಸ್ಯೆ 1: ಆತ ಹೆಡ್ ಕಾನ್‌ಸ್ಟೇಬಲ್. ತನ್ನ ಮೇಲಾ ಧಿಕಾರಿ ಹೇಳಿದಂತೆ ಜೈಲಿನಲ್ಲಿರುವ ಅಪರಾಧಿಯನ್ನು ಹೊರಗೆ ಬಿಡುತ್ತಾನೆ. ಬಿಡುಗಡೆಯಾದವನು ದೊಡ್ಡ ಕ್ರಿಮಿನಲ್. ಹೀಗಾಗಿ ಕಾನೂನು ಬಾಹಿರವಾಗಿ ಆತನನ್ನು ಬಿಡುಗಡೆ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡದಾಗುತ್ತದೆ. ಹೆಡ್ ಕಾನ್‌ಸ್ಟೇಬರ್ ಕೆಲಸ ಹೋಗುತ್ತದೆ. ಈಗ ಕಾನ್‌ಸ್ಟೇಬಲ್ ತನ್ನ ತಪ್ಪಿಲ್ಲವೆಂದು ನಿರೂಪಿಸುವುದು ಹೇಗೆ?

ಸಮಸ್ಯೆ 2: ಕೆಲಸ ಕಳೆದುಕೊಂಡ ಅಪ್ಪನನ್ನು ಮನೆಯ ಮಕ್ಕಳು, ಅಳಿಯ ಹೀಗೆ ಯಾರೂ ನೋಡಿಕೊಳ್ಳುವುದಿಲ್ಲ. ಎಲ್ಲರೂ ಕಾಲಕಸವಾಗಿ ಕಾಣುತ್ತಾರೆ. ಮಕ್ಕಳ ಪ್ರೀತಿ ಗಳಿಸಿ ನೆಮ್ಮದಿಯಾಗಿ ಜೀವನ ಮಾಡುವುದು ಹೇಗೆ?

ಸಮಸ್ಯೆ 3: ಮನಸಾರೆ ಇಷ್ಟಪಟ್ಟು ಪ್ರೀತಿಸಿ ಮದುವೆಯಾದ ಹೆಂಡತಿ ಕಾಯಿಲೆಗೆ ತುತ್ತಾಗಿದ್ದಾಳೆ. ಆಕೆಯ ಚಿಕಿತ್ಸೆಗೆ ಹಣ ಹೊಂದಿಸಿ ಆಕೆಯನ್ನು ಬದುಕಿಸಿಕೊಳ್ಳಬೇಕು. ಕೆಲಸ ಕಳೆದುಕೊಂಡವ ಹಣ ಎಲ್ಲಿಂದ ತರುತ್ತಾನೆ? ಹೆಂಡತಿಯನ್ನು ಉಳಿಸಿಕೊಳ್ಳುತ್ತಾನೆಯೇ?

ಸಮಸ್ಯೆ 4: ಆತ ಆರೋಗ್ಯ ವಿಮೆ ಮಾಡಿಸಿದ್ದಾನೆ. ಆ ವಿಮೆ ಪತ್ರಗಳನ್ನು ಅಡವಿಟ್ಟು ಬ್ಯಾಂಕ್‌ನಲ್ಲಿ ಲೋನ್ ಪಡೆಯುವುದಕ್ಕೆ ಪ್ರಯತ್ನಿಸುತ್ತಾನೆ. ಆದರೆ, ವಿಮೆ ಮಾಡಿಸುವಾಗ ಹೇಳಿದಂತೆ ಬ್ಯಾಂಕ್‌ನಲ್ಲಿ ಲೋನ್ ಸಿಗಲ್ಲ. ಕೇಳಿದರೆ ‘ಷರತ್ತುಗಳು ಅನ್ವಯ’ ಎನ್ನುವ ಸಾಲನ್ನು ಓದಲಿಲ್ಲವೇ ಎನ್ನುತ್ತಾರೆ ಬ್ಯಾಂಕ್‌ನವರು. ಹಾಗಾದರೆ ಲೋನ್ ಪಡೆದುಕೊಳ್ಳುವುದು ಹೇಗೆ?

ಸಮಸ್ಯೆ 5: ಅವನಿಗೆ ಪಿಎಫ್ ಹಣ ಬರಬೇಕಿದೆ. ಆ ಹಣವನ್ನು ಪಡೆದುಕೊಳ್ಳುವುದಕ್ಕೆ ಮೂರು ಜನ್ಮಕ್ಕಾಗುವಷ್ಟು ಚಪ್ಪಲಿ ಸವೆದುಕೊಂಡಿದ್ದಾನೆ. ಆದರೂ ಪಿಎಫ್ ಸಿಗುತ್ತಿಲ್ಲ. ಪಿಎಫ್ ಹಣ ಬಿಡುಗಡೆ ಮಾಡುವವನು ಲಂಚ ನಿರೀಕ್ಷೆ ಮಾಡುತ್ತಾನೆ. ಬ್ಲಾಕ್ ಟೀಗೂ ಕಾಸಿನಲ್ಲದವನು ಲಂಚ ಕೊಡಲು ಸಾಧ್ಯವೇ?

 - ತಮಿಳಿನ ‘8 ತೋಟಕ್ಕಲ್’ ಸಿನಿಮಾ ಕನ್ನಡಕ್ಕೆ ರೀಮೇಕ್ ಆಗುವ ಹೊತ್ತಿಗೆ ಹೀಗೆ ಸಮಸ್ಯೆಗಳ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಈ ಎಲ್ಲ ಸಮಸ್ಯೆಗಳ ಕೇಂದ್ರ ಒಬ್ಬನೇ. ಅವನ ಸುತ್ತ ಉಳಿದವರು ಸೇರಿಕೊಂಡು ಆತ ಮತ್ತಷ್ಟು ಸಮಸ್ಯೆಗಳು ಮೈ ಮೇಲೆ ಎಳೆದುಕೊಳ್ಳುತ್ತಾನೆ. ಕೊನೆಗೆ ಈ ಸಮಸ್ಯೆಗಳೇ ಐವತ್ತರ ವಯಸ್ಸಿನ ವ್ಯಕ್ತಿ ಯೊಬ್ಬನನ್ನು ಸರಣಿ ಕೊಲೆಗಾರನನ್ನಾಗಿ ಮಾಡುತ್ತದೆ. ಕೊಲೆ ಮತ್ತು ಸಮಸ್ಯೆಗಳು ಒಂದಕ್ಕೊಂದು ಮುಖಾ ಮುಖಿಯಾಗಿಸುವ ಈ ಚಿತ್ರದ ಹೆಸರು ‘8ಎಂಎಂ’.

ನಿರ್ದೇಶಕ ಹರಿಕೃಷ್ಣ ಸಮಸ್ಯೆಗಳ ಸರಣಿಯನ್ನೇ ನಂಬಿಕೊಂಡು ಆ ಸಮಸ್ಯೆಗಳಿಗೆ ಹಣವೇ ಪರಿಹಾರ ಎನ್ನುವ ಉತ್ತರ ಕಂಡುಕೊಳ್ಳುವುದಕ್ಕೆ ಜಗ್ಗೇಶ್ ಕೈಯಲ್ಲಿ ಗನ್ನಿಡುತ್ತಾರೆ. ಎಂಟು ಜನರ ಸಂಹಾರ ಮಾಡಿಸುತ್ತಾರೆ.ಗನ್ನು ಕದ್ದವನು, ಸರಣಿ ಕೊಲೆಗಾರ, ಪೊಲೀಸ್ ಅಧಿಕಾರಿ, ಒಬ್ಬ ಪತ್ರಕರ್ತೆ ಇವರ ಸುತ್ತ ಕತೆ ಸಾಗುತ್ತದೆ. ಕಂಚಿನ ಕಂಠದ ವಸಿಷ್ಠ ಸಿಂಹನ ಸಹಜ ನಟನೆ ಇದೆ. ಮುದ್ದು ಮುದ್ದಾಗಿ ಕಾಣುವ ಮಯೂರಿ ಇದ್ದಾರೆ. ಪೊಲೀಸ್ ಪಾತ್ರದಲ್ಲಿ ಖಡಕ್ ಆಗಿ ಎಂಟ್ರಿ ಕೊಡುವ ರಾಕ್‌ಲೈನ್ ವೆಂಕಟೇಶ್, ಹಿನ್ನೆಲೆ ಸಂಗೀತ, ಜಗ್ಗೇಶ್ ಅವರ ಹೊಸ ರೀತಿಯ ಪಾತ್ರ ಹೀಗೆ ಎಲ್ಲವೂ ಸೇರಿಕೊಂಡು ‘8ಎಂಎಂ’ ಚಿತ್ರವನ್ನು ಲಿಫ್ಟ್ ಮಾಡುವ ಪ್ರಯತ್ನ ಮಾಡಿವೆ.

ಹೀಗಾಗಿ ಕ್ರೈಮ್ ಕತೆಯಲ್ಲಿ ಬದಲಾದ ಜಗ್ಗೇಶ್‌ರನ್ನು ನೋಡಲು ‘೮ಎಂಎಂ’ ಬುಲೆಟ್‌ನತ್ತ ಮುಖ ಮಾಡಬಹುದು.

ಚಿತ್ರ: 8ಎಂಎಂ

ತಾರಾಗಣ: ಜಗ್ಗೇಶ್, ವಸಿಷ್ಠ ಎನ್ ಸಿಂಹ, ಮಯೂರಿ, ಶೋಭರಾಜ್, ಆದಿ ಲೋಕೇಶ್,

ನಿರ್ದೇಶನ: ಹರಿಕೃಷ್ಣ

ನಿರ್ಮಾಣ: ನಾರಾಯಣ ಸ್ವಾಮಿ,

ಸಂಗೀತ: ಜ್ಯೂಡಾ ಸ್ಯಾಂಡಿ

ಛಾಯಾಗ್ರಹಣ: ಎ ಆ ವಿನ್ಸೆಂಟ್

ರೇಟಿಂಗ್: ***

 

click me!