ಸಂದರ್ಶನ: 'ಸೀತಾರಾಮ ಕಲ್ಯಾಣ' ಚಿತ್ರದ ಬಗ್ಗೆ ಗುಟ್ಟು ಬಿಚ್ಚಿಟ್ಟ ನಿಖಿಲ್!

By Web Desk  |  First Published Jan 25, 2019, 10:08 AM IST

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಸೀತಾರಾಮ ಕಲ್ಯಾಣ’ ಇದೇ ವಾರ ತೆರೆಗೆ ಕಂಡಿದೆ. ‘ಜಾಗ್ವಾರ್‌’ ಮೂಲಕ ಪಕ್ಕಾ ಆ್ಯಕ್ಷನ್‌ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟವರು ನಿಖಿಲ್‌. ಆದ್ರೆ ಈ ಬಾರಿ ಶುದ್ಧ ಕೌಟುಂಬಿಕ ಚಿತ್ರದೊಂದಿಗೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ, ಹಲವು ಕಾರಣಕ್ಕೆ ಈ ಚಿತ್ರ ಸಾಕಷ್ಟುನಿರೀಕ್ಷೆ ಮೂಡಿಸಿದೆ. ನಿಖಿಲ್‌ ಅವರಿಗೆ ಇದು ಎರಡನೇ ಚಿತ್ರ. ಚಿತ್ರದ ಕುರಿತು ಅವರೊಂದಿಗೆ ಮಾತುಕತೆ.


ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾವಿದು, ಬಿಡುಗಡೆ ಆದಾಗ ಟೆನ್ಸನ್‌ ಸಹಜವಾಗಿಯೇ ಜಾಸ್ತಿಯೇ ಇರಬೇಕಲ್ಲವೇ?

ಹೌದು, ಎಕ್ಸಾಂ ಟೈಮ್‌ನಲ್ಲೂ ಇಂತಹ ಟೆನ್ಸನ್‌ ಕಂಡವನಲ್ಲ ನಾನು. ಜನರಿಗೆ ಒಂದೊಳ್ಳೆ ಸಿನಿಮಾ ಕೊಡಬೇಕು, ಮೊದಲ ಸಿನಿಮಾಕ್ಕಿಂತ ಉತ್ತಮ ಕತೆ ಇರಬೇಕು, ಸಿನಿಮಾ ನೋಡಿದ ಜನರಿಗೆ ಆ ಕತೆ ಒಂದಷ್ಟುಸಮಯವಾದರೂ ಕಾಡಿಸುವಂತಿರಬೇಕು ಅಂತೆಲ್ಲ ಯೋಚಿಸಿ, ಈ ಸಿನಿಮಾ ಮಾಡಿದ್ದೇವೆ. ನಿರೀಕ್ಷೆಯಂತೆ ಅದು ಜನರಿಗೆ ತಲುಪಬೇಕು ಅನ್ನೋದು ನಮ್ಮ ಆಸೆ. ಅದು ರಿಚ್‌ ಆಗ್ಬೇಕಲ್ವಾ, ಅದಕ್ಕಾಗಿಯೇ ಟೆನ್ಸನ್‌. ಆದರೂ ಸಿನಿಮಾ ಚೆನ್ನಾಗಿ ಬಂದಿದೆ ಎನ್ನುವ ನಂಬಿಕೆಯಿದೆ. ಅದು ಜನರಿಗೂ ಇಷ್ಟವಾಗುತ್ತೆ ಎನ್ನುವ ವಿಶ್ವಾಸವೂ ಇದೆ.

Tap to resize

Latest Videos

ಅಷ್ಟೇಲ್ಲ ಕಾನ್ಪಿಡೆನ್ಸ್‌ ಇದೆ ಅಂದ್ರೆ ಸಿನಿಮಾದಲ್ಲಿ ಹಲವು ವಿಶೇಷತೆಗಳಿರಬೇಕು ಅಲ್ವಾ?

ಖಂಡಿತಾವಾಗಿಯೂ ಹೌದು. ಒಬ್ಬ ಸಾಮಾನ್ಯ ಪ್ರೇಕ್ಷಕ ಬಯಸುವ ಮನರಂಜನೆಯ ಹಲವು ಎಲಿಮೆಂಟ್ಸ್‌ ಇಲ್ಲಿವೆ. ಮೊದಲಿಗೆ ಹೇಳೋದಾದ್ರೆ ಇದೊಂದು ಪಕ್ಕಾ ಕೌಟುಂಬಿಕ ಚಿತ್ರ. ಹಾಗಂತ ಬರೀ ಫ್ಯಾಮಿಲಿ ಕತೆ ಹೇಳ್ತೀವಿ ಅಂತಲ್ಲ. ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ತರಹದ ಎಲ್ಲಾ ಅಂಶಗಳು ಇಲ್ಲಿವೆ. ಅದರ ಜತೆಗೆ ಸಾಮಾಜಿಕ ಕಾಳಜಿಯ ಅಂಶಗಳು ಜಾಸ್ತಿ ಇವೆ. ಒಬ್ಬ ವ್ಯಕ್ತಿ ತನ್ನ ಕುಟುಂಬದ ನೆಚ್ಚಿನ ಮನುಷ್ಯನಾಗಿ ಸಮಾಜಕ್ಕೂ ಹೇಗೆ ಜನನಾಯಕ ಆಗುತ್ತಾನೆನ್ನುವುದನ್ನು ಈ ಸಿನಿಮಾ ಹೇಳುತ್ತೆ.

ಮೊದಲ ಸಿನಿಮಾದಲ್ಲಿ ಪಕ್ಕಾ ಆ್ಯಕ್ಷನ್‌ ಹೀರೋ ಆಗಿದ್ದ ನೀವು, ದಿಢೀರ್‌ ಈ ಬಗೆಯ ಕತೆ ಆಯ್ಕೆ ಮಾಡಿಕೊಂಡಿದ್ದು ಯಾಕೆ?

ಅದು ನಮ್‌ ಹೋಮ್‌ ಬ್ಯಾನರ್‌ ಸ್ಟೈಲ್‌. ಅಪ್ಪ ಒಬ್ಬ ನಿರ್ಮಾಪಕರಾಗಿ ಕನ್ನಡದ ಪ್ರೇಕ್ಷಕರಿಗೆ ಎಂಥ ಸಿನಿಮಾ ಕೊಟ್ಟರು ಎನ್ನುವುದು ಗೊತ್ತೆ ಇದೆ. ಚಂದ್ರ ಚಕೋರಿ, ಸೂರ್ಯವಂಶ ಸಿನಿಮಾಗಳೇ ಅದಕ್ಕೆ ಸಾಕ್ಷಿ. ಅಂತಹ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ಕೊಡಬೇಕು, ಹೋಮ್‌ ಬ್ಯಾನರ್‌ಗೂ ಒಂದು ಹೆಸರು ತರಬೇಕು ಅನ್ನೋದು ನನ್ನಾಸೆ. ಆಗ ನಾನು ಯೋಚಿಸುತ್ತಿದ್ದಾಗ ಸಿಕ್ಕ ಕತೆಯಿದು. ಈ ಕತೆಗೆ ಒಂದು ಶೇಪ್‌ ಕೊಡಲು ಸಾಕಷ್ಟುಬಾರಿ ಚರ್ಚೆ ನಡೆಸಿದ್ದೇವೆ. ತಂದೆ ಕೂಡ ಇನ್ವಾಲ್‌ ಆಗಿದ್ದರು. ನಿರ್ದೇಶಕರು ಮತ್ತು ನಾವು ಹಲವು ಬಾರಿ ಒಂದೆಡೆ ಕುಳಿತು ಚರ್ಚಿಸಿ, ಯೋಚಿಸಿದ ನಂತರ ಕತೆಗೆ ಒಂದು ಶೇಪ್‌ ಬಂತು. ಅದು ನಮಗೂ ಹಿಡಿಸಿತು.

ಮೇಕಿಂಗ್‌ನಲ್ಲಿ ಜಾಗ್ವಾರ್‌ನಷ್ಟೇ ಅದ್ಧೂರಿಯಾಗಿ ಬಂದಿದೆ ಎನ್ನುವ ಮಾತುಗಳಿವೆ...

ಅದ್ಧೂರಿ ತನ ಅಂದ್ರೆ ಬರೀ ಹಣ ಖರ್ಚು ಮಾಡುವುದಲ್ಲ. ಮೊದಲ ಸಿನಿಮಾಕ್ಕೆ ನಾವು ಒಂದಷ್ಟುಜಾಸ್ತಿಯೇ ಖರ್ಚು ಮಾಡಿದ್ದು ನಿಜ.ಅದು ಆ ಕತೆಯ ಡಿಮ್ಯಾಂಡ್‌. ಆದ್ರೆ ನಮ್ಗೆ ಈ ಕತೆ ಅಷ್ಟೇನು ಬಂಡವಾಳ ಬೇಕು ಅಂತ ಡಿಮ್ಯಾಂಡ್‌ ಮಾಡಿಲ್ಲ. ಕತೆಗೆ ಏನು ಬೇಕಿತ್ತೋ ಅಷ್ಟನ್ನು ಅದ್ಧೂರಿಯಾಯೇ ತಂದಿದ್ದೇವೆ. ತಾರಾಗಣ ಇಲ್ಲಿ ಅದ್ಧೂರಿ ಅನ್ನಿ. 130ಕ್ಕೂ ಹೆಚ್ಚು ಕಲಾವಿದರು ಅಂದ್ರೆ ಅದು ಹೇಗಿರಬೇಕು ಅಂತ ನೀವೆ ಉಹಿಸಿಕೊಳ್ಳಿ.

'ಸೀತಾರಾಮನ' ನೋಡಲು ಒಂದಾದ ಎಚ್‌ಡಿಕೆ-ಈಶ್ವರಪ್ಪ..ನೋ ಪಾಲಿಟಿಕ್ಸ್

ನಟನೆಯ ಜತೆಗೆ ಈ ಸಿನಿಮಾದ ನಿರ್ಮಾಣದಲ್ಲೂ ನಿಖಲ್‌ ಅವರದ್ದೇ ಜವಾಬ್ದಾರಿ ಇತ್ತು ಅಲ್ನಾ?

ಹೌದು, ಅಪ್ಪ ರಾಜಕೀಯದಲ್ಲಿ ಬ್ಯುಸಿ ಆದ್ರು. ಅವರಿಗೆ ಕೆಲಸದ ಒತ್ತಡ. ಪ್ರೊಡಕ್ಷನ್‌ ಜವಾಬ್ದಾರಿಯೂ ನನ್ನ ಮೇಲಿತ್ತು. ಹಾಗಂತ ಅದನ್ನೆಲ್ಲ ನಾನೇ ನಿಭಾಯಿಸಿದೆ ಅಂತಲ್ಲ. ಜತೆಗೆ ತಂಡವಿತ್ತು. ನಿರ್ವಹಣೆ ಮಾತ್ರ ನಂದು. ಅದರಾಚೆ ನಾನು ಹೆಚ್ಚು ಗಮನ ಹರಿಸಿದ್ದು ಚಿತ್ರದ ಮೇಕಿಂಗ್‌ ಕಡೆಗೆ. ಯಾಕಂದ್ರೆ, ಹೋಮ್‌ ಬ್ಯಾನರ್‌ಗೆ ಬ್ಯಾಡ್‌ ನೇಮ್‌ ತರವುದಕ್ಕೆ ನಂಗಿಷ್ಟಇಲ್ಲ. ಕತೆಗೆ ತಕ್ಕಂತೆ ಬಂಡವಾಳ ಎಷ್ಟೇ ಖರ್ಚಾದ್ರು ಪರವಾಗಿಲ್ಲ, ಸಿನಿಮಾ ಚೆನ್ನಾಗಿ ಬರಬೇಕೆನ್ನುವುದ ಆದ್ಯತೆ ಆಗಿತ್ತು. ಅದಕ್ಕೆ ತಕ್ಕಂತೆಯೇ ಸಿನಿಮಾ ನಿರ್ಮಾಣ ಮಾಡುತ್ತಾ ಹೋದೆವು. ಇಡೀ ತಂಡವೂ ಅದಕ್ಕೆ ಸಾಥ್‌ ನೀಡಿತು.

ಚಿತ್ರದಲ್ಲಿನ ನಿಮ್ಮ ಕಾರೆಕ್ಟರ್‌ ಬಗ್ಗೆ ಹೇಳಿ...

ಪಾತ್ರದ ಬಗ್ಗೆ ಹೆಚ್ಚು ಹೇಳುತ್ತಾ ಹೋದರೆ ಕತೆಯೇ ರಿವೀಲ್‌ ಆಗುತ್ತೆ. ಕತೆಗೆ ಆ ಪಾತ್ರ ಅಷ್ಟುಲಿಂಕ್‌ಯಿದೆ. ದೊಡ್ಡ ಫ್ಯಾಮಿಲಿ. ಅಲ್ಲಿ ಒಬ್ಬ ಜವಾಬ್ದಾರಿಯುತ ಹುಡುಗ. ಆತ ಹೇಗೆ ನನ್ನ ಜವಾಬ್ದಾರಿಯ ಜತೆಗೆ ಸಮಾಜಕ್ಕೂ ಒಳ್ಳೆಯದನ್ನು ಮಾಡುತ್ತಾ ಹೋಗುತ್ತಾನೆ ಎನ್ನುವುದು ನನ್ನ ಪಾತ್ರ.

ನಿಖಿಲ್ ಕುಮಾರಸ್ವಾಮಿಯನ್ನು ರಚಿತಾ ರಾಮ್ ಈ ಪರಿ ಹೊಗಳಿದ್ಯಾಕೆ?

ಸೀತಾರಾಮ ಕಲ್ಯಾಣದ ಕತೆಗೂ ನಿಖಲ್‌ ರಾಜಕೀಯ ಎಂಟ್ರಿಗೂ ಕನೆಕ್ಷನ್‌ ಇದೆ ಅನ್ನೋದು ಮಾತಿದೆ..

ಖಂಡಿತಾ ಅದು ತಪ್ಪು. ಸಿನಿಮಾಕ್ಕೂ ನನ್ನ ರಾಜಕೀಯ ಎಂಟ್ರಿಯ ವದಂತಿಗೂ ಯಾವುದೇ ಕನೆಕ್ಷನ್‌ ಇಲ್ಲ. ದಯವಿಟ್ಟು ರಾಜಕೀಯಕ್ಕೆ ಸಿನಿಮಾವನ್ನು ಎಳೆದು ತರಬೇಡಿ. ನನಗೆ ರಾಜಕೀಯ ಹಿನ್ನೆಲೆಯಿದೆ ಎನ್ನುವ ಕಾರಣಕ್ಕೆ ಇಂತಹ ಪ್ರಶ್ನೆಗಳು ಬರುತ್ತವೆಯೋ ಹೊರತು, ಆ ಕತೆ ಹಾಗಿದೆ ಅಂತಲ್ಲ. ಪ್ರತಿ ಸಿನಿಮಾದಲ್ಲೂ ಹೀರೋ ಸಮಾಜಕ್ಕೆ ಒಳ್ಳೆಯದನ್ನೇ ಮಾಡಲು ಬಯಸುತ್ತಾನೆ. ಹಾಗೆಯೇ ಇಲ್ಲಿ ನಾಯಕ ರೈತರ ಬಗ್ಗೆ ಮಾತನಾಡುತ್ತಾನೆ, ಸಮಾಜ ಪರವಾಗಿ ಹೋರಾಡುತ್ತಾನೆ. ಹಾಗೆಂದ ಮಾತ್ರಕ್ಕೆ ನಾನು ರಾಜಕೀಯಕ್ಕೆ ಬರಲು ಈ ಸಿನಿಮಾ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು.

ಹಾಗಾದ್ರೆ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಿಖಲ್‌ ಬರುತ್ತಾರೆನ್ನುವುದು ಸುಳ್ಳಾ?

ನನಗೆ ರಾಜಕೀಯ ಹಿನ್ನೆಲೆಯಿದೆ, ಮೇಲಾಗಿ ಮುಖ್ಯಮಂತ್ರಿ ಪುತ್ರ ಎನ್ನುವ ಕಾರಣಕ್ಕೆ ಜನರು ರಾಜಕೀಯಕ್ಕೆ ಬರಲಿ ಎಂದು ಬಯಸುವುದು ಸಹಜ. ಹಾಗೆಯೇ ಮಂಡ್ಯದಲ್ಲಿನ ಪಕ್ಷದ ಕಾರ್ಯಕರ್ತರು, ನಗರಸಭೆ ಸದಸ್ಯರು, ಪುರಸಭೆ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ನಾನು ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಹಾಗಂತ ರಾಜಕೀಯಕ್ಕೆ ಹೋಗುತ್ತಿದ್ದೇನೆ ಎನ್ನುವುದು ಸರಿಯಾದದ್ದಲ್ಲ. ನಂದು ಸಿನಿಮಾ ಕ್ಷೇತ್ರ.

ಆದರೆ, ಮಂಡ್ಯದಲ್ಲಿ ಅಂಬರೀಷ್‌ ಪುತ್ರ ಅಭಿಷೇಕ್‌ ಎದುರೇ ನಿಖಿಲ್‌ ಕುಮಾರ್‌ ಎನ್ನುವ ಸುದ್ದಿಯೂ ಇದೆ...

ಏನೇನೋ ಸುಳ್ಳು ಸುದ್ದಿ ಹಬ್ಬಿಸುವವರಿಗೆಲ್ಲ ನಾವು ಉತ್ತರ ನೀಡಬೇಕಿಲ್ಲ. ಅಭಿಷೇಕ್‌ ಮತ್ತು ನಾನು ಒಳ್ಳೆಯ ಸ್ನೇಹಿತರು. ರಾಜಕೀಯದಲ್ಲಿ ನಾವಿಬ್ಬರು ಮುಖಾ ಮುಖಿ ಆಗುತ್ತಿದ್ದೇವೆ ಎನ್ನುವುದು ನಮಗೆ ಗೊತ್ತಿಲ್ಲ. ಅದು ಹೇಗೆ ಸುದ್ದಿ ಆಗುತ್ತೋ ನಂಗೊತ್ತಿಲ್ಲ. ಅದೇನೆ ಇದ್ದರೂ ನಮ್ಮಿಬ್ಬರ ಸ್ನೇಹ ಅದನ್ನು ಮೀರಿದ್ದು ಎನ್ನುವುದನ್ನು ಹೇಳಲು ಬಯಸುತ್ತೇನೆ.ಕಕ

click me!