‘ಯಜಮಾನ’ ಗುಟ್ಟು ಬಿಚ್ಚಿಟ್ಟ ನಿರ್ಮಾಪಕಿ!

By Kannadaprabha News  |  First Published Jan 18, 2019, 9:06 AM IST

ಕನ್ನಡ ಚಿತ್ರರಂಗದಲ್ಲಿ ಸದ್ಯ‘ಯಜಮಾನ’ನದ್ದೇ ಹವಾ. ಪೋಸ್ಟರ್‌, ಟೀಸರ್‌, ಈಗ ಹಾಡಿನ ಮೂಲಕ ‘ಶಿವನಂದಿ’ಯ ಸದ್ದು ರಥಬೀದಿಯಲ್ಲಿ ತೇರಿನಂತೆ ಸಂಭ್ರಮಿಸುತ್ತಿರುವಾಗ ಈ ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್‌ ಮಾತಿಗೆ ಸಿಕ್ಕರು. ಈ ಚಿತ್ರೀಕರಣದ ಅನುಭವದ ಜತೆಗೆ ಯಾರಿಗೂ ಗೊತ್ತಿಲ್ಲದ ಯಜಮಾನನ ಬದಲಾವಣೆಗಳ ಗುಟ್ಟು ರಟ್ಟು ಮಾಡಿದ್ದಾರೆ.


ಆರ್‌ ಕೇಶವಮೂರ್ತಿ

ನಿರ್ಮಾಣದ ಹಂತದಲ್ಲಿ ಈ ಚಿತ್ರತಂಡವನ್ನು ನಿಭಾಯಿಸುವುದರಲ್ಲಿ ಮೊದಲು ನಿಮ್ಮ ಬೆನ್ನುಲುಬಿಗೆ ನಿಂತಿದ್ದು ಯಾರು?

Tap to resize

Latest Videos

undefined

ನನ್ನ ಹಿಂದೆ ತುಂಬಾ ದೊಡ್ಡ ತಂಡವೇ ಇತ್ತು. ಆದರೆ, ಮೂವರು ಇಲ್ಲಿ ಮುಖ್ಯ ಪಿಲ್ಲರ್‌ಗಳಾಗಿ ನಿಂತಿದ್ದಕ್ಕೆ ಈ ಸಿನಿಮಾ ಆಗಿದೆ. ಇದರಲ್ಲಿ ಮೊದಲಿಗೆ ನೆನಪಿಸಿಕೊಳ್ಳಬೇಕಾದ ಹೆಸರು ದರ್ಶನ್‌ ಅವರದ್ದೇ. ಯಾವಾಗ ಅವರು ಕತೆ ಓಕೆ ಮಾಡಿದರೋ ಅಲ್ಲಿಂದಲೇ ನನ್ನ ಜತೆ ನಿಂತರು. ತೆರೆ ಮೇಲೆ ಮಾತ್ರವಲ್ಲ, ತೆರೆ ಆಚೆಗೂ ಅವರು ನಿಜಕ್ಕೂ ನಾಯಕ ಎನ್ನುವ ಭಾವನೆ ಮೂಡಿತು. ಇನ್ನೂ ಬಿ ಸುರೇಶ್‌ ಹಾಗೂ ವಿ ಹರಿಕೃಷ್ಣ ಅವರು ನನ್ನ ಪ್ರತಿ ಹೆಜ್ಜೆಯಲ್ಲೂ ಜತೆಯಾಗಿ ನಿಂತರು. ಈ ಮೂವರು ಕೊಟ್ಟಧೈರ್ಯ, ನೆರವು, ಸಹಕಾರ ‘ಯಜಮಾನ’ ಸಿನಿಮಾ ಅದ್ದೂರಿಯಾಗಿ ರೂಪಗೊಳ್ಳುವುದಕ್ಕೆ ಸಾಧ್ಯವಾಯಿತು.

ಸುದೀರ್ಘ ಚಿತ್ರೀಕರಣದ ಅನುಭವ ಹೇಗಿತ್ತು?

ಮುಂದೆ ಎಂಥದ್ದೇ ದೊಡ್ಡ ಮಕರ್ಷಿಯಲ್‌ ಸಿನಿಮಾ ಆದರೂ ಸರಿ, ಯಾರೇ ಹೀರೋ ಆದರೂ ಸರಿ, ಮಲ್ಟಿಸ್ಟಾರ್‌ಗಳಿದ್ದರೂ ಸರಿ ಅಂಥ ಸಿನಿಮಾ ನಾನು ನಿರ್ಮಿಸಲಬಲ್ಲೆ ಎನ್ನುವ ವಿಶ್ವಾಸ ಮೂಡಿಸುವ ಅನುಭವ ಈ ಚಿತ್ರದಿಂದ ನನಗೆ ಸಿಕ್ಕಿದೆ. ಎಲ್ಲೂ ಕೂಡ ಯಾವುದೇ ರೀತಿಯಲ್ಲೂ ತೊಂದರೆ ಆಗಲಿಲ್ಲ. ಮೊದಲು ಚಿತ್ರಕತೆಯನ್ನು ಪೂರ್ತಿ ಮಾಡಿಕೊಂಡು ಅದನ್ನು ದರ್ಶನ್‌ ಅವರಿಗೆ ಹೇಳಿಯಾದ ಮೇಲೆ ಪಕ್ಕಾ ಪ್ಲಾನ್‌ ಮಾಡಿಕೊಂಡು ಶೂಟಿಂಗ್‌ ಹೋಗಿದ್ದು. ಪೇಪರ್‌ ವರ್ಕ್, ಪೂರ್ವ ತಯಾರಿ ಮಾಡಿಕೊಂಡಿದ್ದರಿಂದ ‘ಯಜಮಾನ’ನಂತಹ ಇನ್ನೊಂದು ಹತ್ತು ಸಿನಿಮಾ ಮಾಡಬಲ್ಲೆ ಎನಿಸಿತು.

ನಿಮ್ಮ ಪ್ರಕಾರ ದರ್ಶನ್‌ ಅವರು ಈ ಕತೆ ಒಪ್ಪಿಕೊಳ್ಳುವುದಕ್ಕೆ ಬಹು ಮುಖ್ಯ ಕಾರಣಗಳೇನು?

ನಮಗೆ ಒಪ್ಪಿಸುವ ಪ್ರಮೇಯ ಬರಲಿಲ್ಲ. ಯಾಕೆಂದರೆ ನಾವು ದರ್ಶನ್‌ ಅವರ ಬಳಿ ಹೋಗಬೇಕಾದರೇನೆ ಎರಡು ರೀತಿಯ ಕತೆಗಳನ್ನು ಮಾಡಿಕೊಂಡು ಹೋಗಿದ್ವಿ. ಜತೆಗೆ ಈ ಎರಡೂ ಕತೆಗಳು ದರ್ಶನ್‌ ಅವರನ್ನೇ ಗಮನದಲ್ಲಿಟ್ಟುಕೊಂಡು ಮಾಡಿಕೊಂಡ ಕತೆ. ಎರಡೂ ಕತೆ ಕೇಳಿ ದರ್ಶನ್‌ ಅವರೇ ಒಂದನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ನಾವು ಅವರನ್ನು ಒಪ್ಪಿಸಿ ಕಾಲ್‌ಶೀಟ್‌ ತೆಗೆದುಕೊಂಡ್ವಿ ಎನ್ನುವುದಕ್ಕಿಂತ ಅವರೇ ಮೆಚ್ಚಿ ನಟಿಸುತ್ತಿರುವ ಸಿನಿಮಾ ಇದು. ಈ ಚಿತ್ರದ ಕತೆ ಹಾಗೂ ಟೈಟಲ್‌ ದರ್ಶನ್‌ ಅವರಿಗೆ ಬಿಟ್ಟರೆ ಬೇರೊಬ್ಬರಿಗೆ ಆಗಲ್ಲ.

ಬಿ. ಸುರೇಶ್‌ ಎಂದರೆ ಆರ್ಟ್‌ ಸಿನಿಮಾಗಳು ಎಂದುಕೊಳ್ಳುವವರಿಗೆ ‘ಯಜಮಾನ’ ಉತ್ತರವೇ?

ನನಗೆ ಸಿನಿಮಾ ಮಾತ್ರ ಗೊತ್ತು. ಅದರಲ್ಲಿ ಆರ್ಟು, ಕಮರ್ಷಿಯಲ್‌ ಅನ್ನೋ ಡಿವೈಡಿಂಗ್‌ ಗೊತ್ತಿಲ್ಲ. ಆದರೆ, ಯಾವ ಕತೆಯನ್ನು ಯಾವ ಪ್ರೇಕ್ಷಕರಿಗೆ ಹೇಳಕ್ಕೆ ಹೊರಟಿದ್ದೇವೆ, ಜತೆಗೆ ಯಾವ ಕತೆ ಯಾರು ಹೀರೋ ಆಗುತ್ತಿದ್ದಾರೆ ಎಂಬುದರಲ್ಲಿ ಮೇಲೆ ಒಂದು ಸಿನಿಮಾದ ಪ್ರಭಾವಳಿ, ವಾಣಿಜ್ಯ ಹಾಗೂ ವಾಣಿಜ್ಯೇತರ ಅಂಶಗಳು ನಿಂತಿರುತ್ತವೆ. ಈಗ ದರ್ಶನ್‌ ಅವರನ್ನು ಇಟ್ಟುಕೊಂಡು ನಾವು ಒಂದು ಸಣ್ಣ ಕತೆಯನ್ನು ಸಿನಿಮಾ ಮಾಡಕ್ಕೆ ಆಗಲ್ಲ. ಇನ್ನು ನಮ್ಮ ಸಂಸ್ಥೆಯಿಂದ ಎಲ್ಲ ರೀತಿಯ ಸಿನಿಮಾಗಳನ್ನೂ ಮಾಡುತ್ತೇವೆ. ಕತೆ, ಪ್ರೇಕ್ಷಕರು ಮತ್ತು ಕಲಾವಿದರು ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ಕತೆ, ಯಾರ ಮೂಲಕ, ಯಾವ ರೀತಿಯ ಸಿನಿಮಾ ಮಾಡಲು ಸಾಧ್ಯ ಎಂದುಕೊಂಡು ಸಿನಿಮಾಗಳನ್ನು ನಿರ್ಮಿಸುತ್ತೇವೆ. ಅಫ್‌ಕೋರ್ಸ್‌ ‘ಯಜಮಾನ’ ನಮ್ಮ ಸಂಸ್ಥೆಯ ಮತ್ತೊಂದು ದೊಡ್ಡ ಹೆಜ್ಜೆ.

ಫಸ್ಟ್‌ ಲುಕ್‌, ಟೀಸರ್‌, ಹಾಡು ಬಿಡುಗಡೆಯ ಹಂತದಲ್ಲಿ ನಿಮಗೆ ಬಂದ ಬೆಸ್ಟ್‌ ಹೊಗಳಿಕೆಗಳೇನು? ವಿಶೇಷವಾಗಿ ದರ್ಶನ್‌ ಪ್ರತಿಕ್ರಿಯೆ ಏನು?

ಪ್ರತಿ ಸಲವೂ ನಾನು ಸಂಭ್ರಮಿಸುವಂತಹ ಅಭಿಪ್ರಾಯಗಳೇ ಬಂದಿವೆ. ಇಡೀ ನನ್ನ ತಂಡದ ಖುಷಿ ಮತ್ತು ಉತ್ಸಾಹವನ್ನು ಹೆಚ್ಚಿಸುವಂಥ ಹೊಗಳಿಕೆಗಳನ್ನೇ ಕೇಳಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ದರ್ಶನ್‌ ಅವರ ಅಭಿಮಾನಿಗಳು ನಮ್ಮ ಚಿತ್ರದ ಪೋಸ್ಟರ್‌, ಹಾಡು, ಟೀಸರ್‌ ಅನ್ನು ಕೊಂಡಿದ್ದು ನೋಡಿದ್ದೀರಿ. ಈ ಯಶಸ್ಸಿನಲ್ಲಿ ಅವರ ಪಾಲು ದೊಡ್ಡದು. ಇಷ್ಟುದೊಡ್ಡ ಸಂಖ್ಯೆ ದರ್ಶನ್‌ ಅವರಿಗೆ ಸಿಕ್ಕಿರುವುದು ಅವರಿಗೆ ಕರ್ನಾಟಕ ಕೊಟ್ಟಿರೋ ವರ ಅಂತಲೇ ಹೇಳಬೇಕು. ನಾನು ದರ್ಶನ್‌ ಅವರನ್ನು ‘ಕರ್ನಾಟಕದ ಸಲ್ಮಾನ್‌ ಖಾನ್‌’ ಅಂತಲೇ ಹೇಳುತ್ತೇನೆ. ಬಾಲಿವುಡ್‌ಗೆ ಒಬ್ಬರೇ ಸಲ್ಮಾನ್‌, ಹಾಗೆ ಕನ್ನಡಕ್ಕೆ ದರ್ಶನ್‌ ಒಬ್ಬರೇ ಸಲ್ಮಾನ್‌ ಖಾನ್‌. ಇನ್ನೂ ಚಿತ್ರದ ಮೊದಲ ಹಾಡು 3 ಮಿಲಿಯನ್‌ ದಾಟಿದೆ ಎಂದು ಗೊತ್ತಾದಾಗ ಪದೇ ಪದೇ ಫೋನ್‌ ಮಾಡಿ ‘ನಮ್ಮ ಚಿತ್ರದ ಹಾಡು ಹೀಗೆ ಹಿಟ್‌ ಆಗಿದೆಯೇ’ ಎಂದು ಮಗು ರೀತಿ ಸಂಭ್ರಮಿಸಿದ್ದಾರೆ. ‘ಇದು ನನ್ನ ಚಿತ್ರವಲ್ಲ, ನಮ್ಮ ಸಿನಿಮಾ’ ಎಂದು ಮೆಚ್ಚಿಗೆ ಸೂಚಿಸಿದ್ದಾರೆ.

ಯಜಮಾನ ಚಿತ್ರದ ಕತೆ ಮತ್ತು ದರ್ಶನ್‌ ಅವರ ಪಾತ್ರದ ಕುರಿತು ಹೇಳಬಹುದೇ?

ಚಿತ್ರದ ಕತೆ ಏನು ಅವರ ಪಾತ್ರ ಏನು ಎಂಬುದನ್ನು ತೆರೆ ಮೇಲೆಯೇ ನೋಡಿ ತಿಳಿಯಬೇಕು. ಅಲ್ಲಿವರೆಗೂ ಈ ಕುತೂಹಲ ಹಾಗೆ ಇರಲಿ. ಒಂದು ಮಾಫಿಯಾ, ಇದರಿಂದ ಹುಟ್ಟಿಕೊಳ್ಳುವ ಆ್ಯಕ್ಷನ್‌, ಇದರ ಜತೆಗೆ ಒಂದು ಫ್ಯಾಮಿಲಿ ಕತೆ ಚಿತ್ರದಲ್ಲಿದೆ. ಖಂಡಿತ ಅಭಿಮಾನಿಗಳನ್ನೂ ಒಳಗೊಂಡಂತೆ ಎಲ್ಲರಿಗೂ ಇಷ್ಟವಾಗುವಂಥ ಪಾತ್ರವನ್ನೇ ದರ್ಶನ್‌ ಮಾಡಿದ್ದಾರೆ. ಅವರಿಗೆ ‘ಯಜಮಾನ’ ಎಷ್ಟುಖುಷಿ ಕೊಟ್ಟಿದೆ ಎಂದರೆ, ಸ್ವತಃ ದರ್ಶನ್‌ ಅವರೇ ಮತ್ತೊಂದು ಕಾಲ್‌ಶೀಟ್‌ ಕೊಟ್ಟಿದ್ದಾರೆ. ಮೀಡಿಯಾ ಹೌಸ್‌ ಮೂಲಕ ದರ್ಶನ್‌ ಅವರೊಂದಿಗೆ ನಾವು ಮತ್ತೊಂದು ಚಿತ್ರವನ್ನು ನಿರ್ಮಿಲಿಸಿದ್ದೇವೆ.

ಚಿತ್ರದ ಉಳಿದ ಕಲಾವಿದರ ಗೆಟಪ್‌ಗಳ ದರ್ಶನ ಯಾವಾಗ? ಇಲ್ಲೂ ಬಿ ಸುರೇಶ್‌ ನಟಿಸಿದ್ದಾರೆಯೇ?

ರಶ್ಮಿಕಾ ಮಂದಣ್ಣ, ತಾನ್ಯ ಹೋಪ್‌, ಅನೂಪ್‌ ಸಿಂಗ್‌ ಠಾಕೂರ್‌, ರವಿಶಂಕರ್‌, ಧನಂಜಯ., ಸಾಧು, ಮಂಡ್ಯ ರಮೇಶ್‌ ಹೀಗೆ ದೊಡ್ಡ ತಾರಗಣ ಇದೆ. ಚಿತ್ರದ ಇಬ್ಬರ ನಾಯಕಿಯರ ಲುಕ್‌ ಹಾಡಿನಲ್ಲಿ ಬರಲಿದೆ. ಉಳಿದವರ ಕ್ಯಾರೆಕ್ಟರ್‌ಗಳು ಟ್ರೇಲರ್‌ನಲ್ಲಿ ಕಾಣಿಸಿಕೊಳ್ಳಲಿದೆ. ಬಿ ಸುರೇಶ್‌ ಅವರು ನಿರ್ಮಾಪಕ ಎನ್ನುವ ದೊಡ್ಡ ಪಾತ್ರ ಮಾಡಿದ್ದರಿಂದ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಸಮಯ ಸಿಕ್ಕಿಲ್ಲ.

ಸರಿ, ನಿರ್ದೇಶಕ ಸ್ಥಾನಕ್ಕೆ ಪಿ ಕುಮಾರ್‌ ಅವರನ್ನು ಕರೆತಂದಿದ್ದು ಯಾರು? ಮುಂದೆ ಇದ್ದಕ್ಕಿದ್ದಂತೆ ನಿರ್ದೇಶಕರು ಬದಲಾಗಿದ್ದು ಯಾಕೆ?

ಹೌದು, ಈ ಬಗ್ಗೆ ಸಾಕಷ್ಟುಸುದ್ದಿಗಳು, ಅನುಮಾನಗಳು ಇವೆ. ಆದರೆ, ಸಿನಿಮಾ ಬಿಡುಗಡೆಯ ಹೊತ್ತಿಲ್ಲ ನಾನು ಏನೂ ಮಾತನಾಡಲ್ಲ. ಸಿನಿಮಾ ಬಂದ ಮೇಲೆ ಮಾತನಾಡುವೆ.

ಇಡೀ ಕತೆ ರೂಪಿಸಿದ್ದು ಪಿ. ಕುಮಾರ್‌ ಅಥವಾ ವಿ. ಹರಿಕೃಷ್ಣ ಅವರಾ?

ಇದು ಒಬ್ಬರು ಕೂತು ಮಾಡಿದ ಕತೆಯಲ್ಲ. ಚೆನ್ನೈನಲ್ಲಿ ವಿ ಹರಿಕೃಷ್ಣ ಅವರ ಕಚೇರಿಯಲ್ಲಿ ಕೂತು ಸಿದ್ಧಪಡಿಸಿದ ಕತೆ. ಈ ಕಾರಣಕ್ಕೆ ಕತೆಗೆ ವಿ ಹರಿಕೃಷ್ಣ ಹಾಗೂ ಪಿ ಕುಮಾರ್‌ ಅವರ ಹೆಸರನ್ನು ಹಾಕಿದ್ದೇವೆ. ನಿರ್ದೇಶನದಲ್ಲೂ ಇಬ್ಬರ ಹೆಸರು ಇದೆ.

ಯಾವಾಗ ಸಿನಿಮಾ ಬಿಡುಗಡೆ ಎನ್ನುವ ಚರ್ಚೆ ಈಗಲೂ ಇದೆ. ಮೊದಲು ಯಾರು? ಕುರುಕ್ಷೇತ್ರವೋ, ಯಜಮಾನನೋ?

ಬೇರೊಂದು ಚಿತ್ರದ ಬಗ್ಗೆ ನನಗೇನು ಗೊತ್ತಿಲ್ಲ. ನಾವು ಯಾವಾಗ ಬರಬೇಕು ಅಂದುಕೊಂಡಿದ್ದೇವೋ ಆಗ ಬರುತ್ತೇವೆ. ಫೆಬ್ರವರಿ ತಿಂಗಳಲ್ಲಿ ಒಳ್ಳೆಯ ದಿನಾಂಕ ನೋಡಿ ಪ್ರೇಕ್ಷಕರ ಮುಂದೆ ಬರಲಿದ್ದೇವೆ.

click me!