ಕರ್ನಲ್ ಮಗಳು ಸ್ಯಾಂಡಲ್‌ವುಡ್‌ಗೆ ಎಂಟ್ರಿ!

By Kannadaprabha NewsFirst Published Jan 16, 2019, 10:36 AM IST
Highlights

ಶ್ರೀನಿ ಮೂರು ಭಾಗಗಳಲ್ಲಿ ಹೇಳುವುದಕ್ಕೆ ಹೊರಟಿರುವ ‘ಬೀರ್‌ಬಲ್‌’ ಸಿನಿಮಾ ಇದೇ ಶುಕ್ರವಾರ ತೆರೆ ಮೇಲೆ ಮೂಡುತ್ತಿದೆ. ಮೊದಲ ಭಾಗವಾದ ‘ಫೈಂಡಿಂಗ್‌ ವಜ್ರಮುನಿ’ಯಲ್ಲಿ ಲಾಯರ್‌ ಆಗಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ್‌ ಜತೆ ಮಾತುಕತೆ.

ಆರ್‌ ಕೇಶವಮೂರ್ತಿ

ನಿಮ್ಮ ಹಿನ್ನೆಲೆ ಏನು?

ನಮ್ಮ ತಂದೆ ಕರ್ನಲ… ವಸಂತ್‌ ವೇಣುಗೋಪಾಲ್‌. ತಾಯಿ ಸುಭಾಷಿಣಿ ವಸಂತ್‌. ಪ್ರಸಿದ್ಧ ಭರತನಾಟ್ಯ ಕಲಾವಿದೆ. ಅವರ ಕಲೆಯ ಹಾದಿಯಲ್ಲಿ ನಾನೂ ಹೆಜ್ಜೆ ಹಾಕಿದವಳು. ನಾನು ಮೂಲತಃ ರಂಗಭೂಮಿ ಕಲಾವಿದೆ. ಹತ್ತು ವರ್ಷದವಳಿದ್ದಾಗಲೇ ‘ಅಭಿನವ ಪಂಪ’ ಎಂಬ ನಾಟಕದಲ್ಲಿ ಅಭಿನಯಿಸಿದ್ದೆ. ಅದು ನನ್ನ ಮೊದಲ ನಾಟಕ. ಆ ನಂತರ ನಾನು ಹಲವು ಕನ್ನಡ ಹಾಗೂ ಇಂಗ್ಲಿಷ್‌ ನಾಟಕಗಳಲ್ಲಿ ಅಭಿನಯಿಸಿದೆ. ಜತೆಗೆ ಲಂಡನ್‌ನ ರಾಯಲ… ಅಕಾಡೆಮಿ ಅಫ್‌ ಡ್ರಾಮಾಟಿಕ್‌ ಆರ್ಟ್‌ನಲ್ಲಿ ಒಂದು ವರ್ಷದ ಕೋರ್ಸ್‌ ಮುಗಿಸಿ ನಾಟಕಗಳತ್ತ ಮುಖ ಮಾಡಿದ್ದೆ.

ಈ ಚಿತ್ರಕ್ಕೆ ನೀವು ಆಯ್ಕೆ ಆಗಿದ್ದು ಹೇಗೆ? ನಿಮ್ಮ ಪಾತ್ರ ಏನು?

ನಿರ್ದೇಶಕ ಶ್ರೀನಿ ಅವರು ಆರ್‌ಜೆ ಆಗಿ ನನಗೆ ಗೊತ್ತಿದ್ದರು. ಆದರೆ, ನಾನು ಗೊತ್ತಿರಲಿಲ್ಲ. ಮುಂದೆ ಅವರು ‘ಬೀರ್‌ಬಲ್‌’ ಚಿತ್ರ ಮಾಡುವಾಗ ನಾಯಕಿ ಪಾತ್ರಕ್ಕೆ ಆನ್‌ಲೈನ್‌ನಲ್ಲಿ ಆಡಿಷನ್‌ ಕರೆದಿದ್ದರು. ನಾನು ಅವರಿಗೆ ಇ-ಮೇಲ್‌ ಮೂಲಕ ಫೋಟೋ ಕಳುಹಿಸುವ ಮೂಲಕ ಪರಿಚಯಿಸಿಕೊಂಡೆ. ಚಿತ್ರದ ಎರಡು ಸನ್ನಿವೇಶಗಳನ್ನು ಕೊಟ್ಟರು. ಅವರ ಕಲ್ಪನೆಗೆ ತಕ್ಕಂತೆ ನಟಿಸಿ ತೋರಿಸಿದೆ. ನಾಯಕಿಯಾಗಿ ಆಯ್ಕೆಯಾದೆ. ಇಲ್ಲಿ ನಾನು ಲಾಯರ್‌ ಪಾತ್ರ ಮಾಡುತ್ತಿದ್ದೇನೆ.

ಆಡಿಷನ್‌ನಲ್ಲಿ ನಿಮ್ಮ ಆಯ್ಕೆಗೆ ನೆರವಾಗಿದ್ದೇನು?

ರಂಗಭೂಮಿಯ ಹಿನ್ನೆಲೆ. ಜತೆಗೆ ನನ್ನ ಅಮ್ಮನಿಂದ ನಾನು ಕಲಿತ ಭರತನಾಟ್ಯ ಕಲೆ. ‘ಅಭಿನವ ಪಂಪ’ ನಾಟಕ ನನಗೆ ಕಲಿಸಿಕೊಟ್ಟನಟನೆಯನ್ನು ಮೊದಲ ಚಿತ್ರದ ಆಡಿಷನ್‌ನಲ್ಲಿ ಪ್ರದರ್ಶಿಸಿದೆ. ನಿರ್ದೇಶಕರಿಗೆ ನನ್ನ ಅಭಿನಯ ಇಷ್ಟವಾಯಿತು. ಕ್ಲಾಸಿಕಲ್‌ ನೃತ್ಯದ ಜತೆಗೆ ಹಾಡುವುದನ್ನೂ ಕಲಿತ ನನಗೆ ನಟಿಯಾಗಬೇಕೆಂಬುದು ಬಹು ದೊಡ್ಡ ಆಸೆ. ಈ ಕಾರಣಕ್ಕೆ ರಂಗಭೂಮಿಗೆ ಹೋದೆ. ಅಲ್ಲಿಂದ ಚಿತ್ರರಂಗಕ್ಕೆ ಬಂದೆ.

ಚಿತ್ರದ ಕುರಿತು ಹೇಳುವುದಾದರೆ?

ಇದೊಂದು ಕ್ರೈಮ್‌ ಥ್ರಿಲ್ಲರ್‌. ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ನಿರ್ದೇಶನದ ಜತೆಗೆ ನಾಯಕರಾಗಿ ನಟಿಸಿದ್ದಾರೆ ಶ್ರೀನಿ. ಟಿ.ಆರ್‌.ಚಂದ್ರಶೇಖರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಕನ್ನಡಕ್ಕೆ ಹೊಸ ರೀತಿಯ ಸಿನಿಮಾ ಅನ್ನಬಹುದು.

ಬೀರ್‌ಬಲ್ ಟ್ರೈಲರ್ ರಿಲೀಸ್ ಮಾಡಿದ ಉಪೇಂದ್ರ

ಯಾವ ರೀತಿಯ ತಾಂತ್ರಿಕತೆ ಇಲ್ಲಿದೆ?

ಚಿತ್ರದ ಟೈಟಲ್‌ ಹಾಡನ್ನು 8ಡಿ ಎಫೆಕ್ಟ್ನಲ್ಲಿ ಶೂಟಿಂಗ್‌ ಮಾಡಲಾಗಿದೆ. ಶ್ರೀಮುರಳಿ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಾಡಿನ ವಿಶೇಷವೆಂದರೆ 8ಡಿ ಸೌಂಡ್‌ ಡಿಸೈನ್‌ನಲ್ಲಿ ಸಿದ್ದವಾಗಿರುವುದು. ಅಂದರೆ ಹಾಡು ಕೇಳುವಾಗ ಅದರ ಸೌಂಡಿಂಗ್‌ ನಾಲ್ಕು ದಿಕ್ಕುಗಳಿಂದಲೂ ಕೇಳಿಸುತ್ತದೆ. ರಜನಿಕಾಂತ್‌ ಅವರ ‘2.0’ಗೆ ಇದೇ ರೀತಿಯ ತಂತ್ರಜ್ಞಾನ ಅಳವಡಿಸಲಾಗಿತ್ತು. ಇದು ಕನ್ನಡಕ್ಕೆ ಹೊಸದು.

ನಿಮ್ಮ ಮೊದಲ ಸಿನಿಮಾ ಬಿಡುಗಡೆಯಾಗುತ್ತಿರುವ ಸಂಭ್ರಮ ಹೇಗಿದೆ?

ನಾನು ಮೊದಲ ದಿನವೇ ನನ್ನ ಫ್ರೆಂಡ್ಸ್‌ ಜತೆ ಹೋಗಿ ಸಿನಿಮಾ ನೋಡುವುದಕ್ಕೆ ಒಬ್ಬ ಪ್ರೇಕ್ಷಕನಂತೆ ಕಾಯುತ್ತಿದ್ದೇನೆ. ನಾನೇ ಟಿಕೆಟ್‌ ಬುಕ್‌ ಮಾಡಿಕೊಂಡು ಈ ಸಿನಿಮಾ ನೋಡಲಿದ್ದೇನೆ. ಜ.18ರಂದು ನನ್ನ ಮೊದಲ ಚಿತ್ರದ ಭವಿಷ್ಯ ಗೊತ್ತಾಗಲಿದೆ ಎನ್ನುವುದನ್ನು ನೆನಪಿಸಿಕೊಂಡರೆ ಭಯ ಮತ್ತು ಖುಷಿ ಎರಡೂ ಆಗುತ್ತದೆ. ಆದರೆ, ಚಿತ್ರದ ಟ್ರೇಲರ್‌ ಹಾಗೂ ಹಾಡುಗಳು ಭರವಸೆ ಮೂಡಿಸಿದೆ.

click me!