ಚಂಬಲ್ ನನಗೆ ಆಸ್ಟ್ರೇಲಿಯಾ ಪಿಚ್ ಇದ್ದಂತೆ: ನೀನಾಸಂ ಸತೀಶ್

By Kannadaprabha News  |  First Published Feb 18, 2019, 9:22 AM IST

ಜೇಕಬ್ ವರ್ಗೀಸ್ ಹಾಗೂ ನೀನಾಸಂ ಸತೀಶ್ ಕಾಂಬಿನೇಷನ್ ‘ಚಂಬಲ್’ ಸಿನಿಮಾ ಫೆ.22ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಅದರ ಕುರಿತು ಸತೀಶ್ ಮಾತಾಡಿದ್ದಾರೆ.


ನಿಜಕ್ಕೂ ‘ಚಂಬಲ್’ ಚಿತ್ರದ್ದು ಡಿ ಕೆ ರವಿ ಜೀವನದ ಕತೆನಾ?

ಸಿನಿಮಾ ಬಿಡುಗಡೆಯಾಗುವ ತನಕ ಈ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಪ್ರತಿಯೊಂದು ಸಿನಿಮಾ ಮಾಡುವಾಗಲೂ ಕೆಲವು ಘಟನೆ, ವ್ಯಕ್ತಿಗಳಿಂದ ಸ್ಫೂರ್ತಿ ಆಗಿರುತ್ತೇವೆ. ಅಯೋಗ್ಯ ಅನ್ನೋ ಚಿತ್ರ ಮಾಡುವಾಗ ಗ್ರಾಮಪಂಚಾಯಿತಿ ಸದಸ್ಯ ಸ್ಫೂರ್ತಿ ಆಗಿರಬಹುದು. ಆ ಸದಸ್ಯ ನಿಮಗೆ ಗೊತ್ತಿರಲ್ಲ. ಆದರೆ, ‘ಚಂಬಲ್’ ಸಿನಿಮಾ ಐಎಎಸ್ ಅಧಿಕಾರಿಯೊಬ್ಬರ ಸುತ್ತ ಸಾಗುವ ಕತೆ. ಇಲ್ಲಿ ಐಎಎಸ್ ಅಧಿಕಾರಿ ಎಂದಾಗ ಡಿ ಕೆ ರವಿ ಹೆಸರು ನೆನಪಾಗುತ್ತದೆ. ಯಾಕೆಂದರೆ ಆ ವ್ಯಕ್ತಿ ಎಲ್ಲರಿಗೂ ಗೊತ್ತು. ಈ ಸಿನಿಮಾ ನಮ್ಮ ಸುತ್ತಲಿನ ವ್ಯಕ್ತಿ, ಘಟನೆಗಳನ್ನು ಆಧರಿಸಿದೆ. ಹೀಗಾಗಿ ಡಿ ಕೆ ರವಿ ಅವರನ್ನೂ ಹೋಲಬಹುದು.

Tap to resize

Latest Videos

ಈ ಸಿನಿಮಾ ಡಿ ಕೆ ರವಿ ಅವರ ಸಾವಿನ ಬಗ್ಗೆ ಬೆಳಕು ಚೆಲ್ಲುತ್ತದೆಯೇ?

ಇಡೀ ಸಿನಿಮಾ ಡಿ ಕೆ ರವಿ ಅವರ ಕತೆ ಅಂತ ನಾನು ಹೇಳುತ್ತಿಲ್ಲ. ಅವರದ್ದೇ ಕತೆಯಾಗಿ ಕಂಡರೂ ನೀವು ಸಿನಿಮಾ ನೋಡಿ ಹೇಳಬೇಕು, ಇದು ಯಾವುದರ ಮೇಲೆ ಬೆಳಕು ಚೆಲ್ಲುತ್ತದೆ ಅಂತ. ಆದರೆ, ಈ ಚಿತ್ರದಿಂದ ಯಾರಿಗೂ ನೋವಾಗಲ್ಲ. ಕೆಎಎಸ್, ಐಎಎಸ್ ಅಧಿಕಾರಿಗಳ ಗೌರವ ಹೆಚ್ಚಿಸುತ್ತದೆ. ಯುವಕರನ್ನು ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಪ್ರಭಾವಿಸುತ್ತದೆ. ಹೆಮ್ಮಯಿಂದ ಯುವಕರು ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ಆಡಳಿತ ವ್ಯವಸ್ಥೆಯಲ್ಲಿರುವ ಪ್ರಾಮಾಣಿಕ ಅಧಿಕಾರಿಗಳು ನಮಗೆ ಹೀರೋಗಳಂತೆ ಕಾಣುತ್ತಾರೆ.

ಯಾಕೆ ಈ ಸಿನಿಮಾ ಮಾಡಬೇಕು ಅನಿಸಿತು?

ದುಡ್ಡು ಮಾಡುವುದಕ್ಕಂತೂ ಮಾಡಿದ ಸಿನಿಮಾ ಅಲ್ಲ. ಹಾಗೊಂದು ವೇಳೆ ದುಡ್ಡೇ ಮುಖ್ಯ ಆಗಿದ್ದರೆ ನೆಟ್‌ಪ್ಲಿಕ್ಸ್ ಕೊಟ್ಟ 10 ಕೋಟಿ ತೆಗೆದುಕೊಂಡು ಸುಮ್ಮನಾಗುತ್ತಿದ್ವಿ. ಆದರೆ, ಸಚಿವರ ನಂತರ ಪವರ್‌ಫುಲ್ಲಾಗಿರುವ, ಒಂದು ಜಿಲ್ಲೆಯನ್ನು ಹೇಗೆ ಬೇಕಾದರೂ ರೂಪಿಸುವ ಅಧಿಕಾರ ಇರುವ ಐಎಎಸ್ ಅಧಿಕಾರಿಗಳ ಜೀವನ ಹೀಗೂ ಇರುತ್ತದೆಯೇ? ಅವರ ಜೀವನ ಇಷ್ಟು ಕಷ್ಟದಿಂದ ಕೂಡಿರುತ್ತದೆಯೇ? ಅವರು ಸಮಾಜಕ್ಕೆ ಏನೆಲ್ಲ ಕೆಲಸಗಳನ್ನು ಮಾಡಲು ಸಾಧ್ಯ ಎಂಬುದನ್ನು ಹೇಳಬೇಕು ಅನಿಸಿ ಈ ಸಿನಿಮಾ ಮಾಡಿದ್ದೇವೆ.

ನೀವು ಈ ಚಿತ್ರ ಒಪ್ಪಿಕೊಳ್ಳುವುದಕ್ಕೆ ಮುಖ್ಯ ಕಾರಣ?

ನಿರ್ದೇಶಕ ಜೇಕಬ್ ವರ್ಗೀಸ್. ‘ಪೃಥ್ವಿ’ ಸಿನಿಮಾ ನೋಡಿ ಜೇಕಬ್ ಅವರಿಗೆ ಅಭಿಮಾನಿಯಾದೆ. ಪುನೀತ್ ರಾಜ್‌ಕುಮಾರ್ ಅವರನ್ನು ತುಂಬಾ ಕ್ಲಾಸಿಕ್ ಆಗಿ, ಅಫೀಸರ್ ರೀತಿ ತೆರೆ ಮೇಲೆ ತೋರಿಸಿದ ಸಿನಿಮಾ ಅದು. ಈ ಚಿತ್ರ ನೋಡಿದ ಮೇಲೆ ನನಗೂ ಇಂಥ ಪಾತ್ರ ಸಿಕ್ಕರೆ ಹೇಗೆ ಅಂತ ಅಂದುಕೊಂಡಿದ್ದೆ. ನನ್ನ ಈ ಯೋಚನೆಗೆ ತಕ್ಕಂತೆ ‘ಚಂಬಲ್’ ಮೂಲಕ ‘ಪೃಥ್ವಿ’ಯಲ್ಲಿ ಅಪ್ಪು ಮಾಡಿದ ಕ್ಲಾಸಿಕ್ ಪಾತ್ರವೇ ನನ್ನ ಹುಡುಕಿಕೊಂಡು ಬಂದಿದೆ ಅನಿಸಿತು. ಹಿಂದೆ ಮುಂದೆ ನೋಡದೆ ಒಪ್ಪಿಕೊಂಡೆ.

ನಿಮಗೆ ಈ ಚಿತ್ರದ ಪಾತ್ರ ಹೇಗನ್ನಿಸಿತು?

ಸವಾಲಾಗಿತ್ತು. ಡ್ರಾಮಾ, ಲವ್ ಇನ್ ಮಂಡ್ಯ, ಅಯೋಗ್ಯ ಮುಂತಾದ ಚಿತ್ರಗಳು ಹೋಮ್ ಪಿಚ್ ಇದ್ದಂತೆ. ಇಲ್ಲಿ ನನಗೆ ಯಾವುದೇ ರೀತಿಯ ಬೇಲಿ ಇರಲಿಲ್ಲ. ‘ಚಂಬಲ್’ ಮಾತ್ರ ನನಗೆ ಆಸ್ಟ್ರೇಲಿಯಾ ಪಿಚ್‌ನಂತೆ ಕಂಡಿತು. ಅದಕ್ಕೆ ಹೊಂದಿಕೊಳ್ಳುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡೆ. ತುಂಬಾ ಸೂಕ್ಷ್ಮವಾಗಿ ಆ್ಯಕ್ಟ್ ಮಾಡಕ್ಕೆ ಪ್ರಯತ್ನಿಸಿದ್ದೇನೆ. ಇಂಗ್ಲಿಷ್ ಪದಗಳ ಬಳಕೆ ಮಾಡುವ ವಿಧಾನ ಕೂಡ ಕಲಿಯಬೇಕಿತ್ತು. ನಿಜ ಜೀವನದಲ್ಲಿ ನಾನು ಓದಿದ್ದು ಎಸ್ ಎಸ್‌ಎಲ್‌ಸಿ. ಜಸ್ಟ್ ಪಾಸ್ ವಿದ್ಯಾರ್ಥಿ.

’ಚಂಬಲ್’ ಚಿತ್ರದ ಮೆಲೊಡಿಯಸ್ ಸಾಂಗ್ ರಿಲೀಸ್

ಚಂಬಲ್ ಚಿತ್ರದ ಶಕ್ತಿ ಏನು?

ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್. ಇಡೀ ಚಿತ್ರದ ಬುಡ ಇಲ್ಲಿರುತ್ತದೆ. ನೋಡಿರುವ ವಿಚಾರಗಳು ಕನೆಕ್ಟ್ ಆಗುತ್ತದೆ. ಗೊತ್ತಿಲ್ಲದ ಸಂಗತಿಗಳು ತೆರೆ ಮೇಲೆ ಬಂದು ಪ್ರೇಕ್ಷಕನಿಗೆ ಅಚ್ಚರಿ ಮೂಡಿಸುತ್ತದೆ. ಸಿನಿಮಾ ಈಗಾಗಲೇ ನ್ಯಾಷನಲ್ ಅವಾರ್ಡ್, ರಾಜ್ಯ ಪ್ರಶಸ್ತಿಯ ಅಂಗಳದಲ್ಲಿದೆ.

ಕೈಯಲ್ಲಿ ತುಂಬಾ ಅವಕಾಶಗಳು ಇದ್ದಾಗ ನಿರ್ದೇಶನಕ್ಕೆ ಹೋಗಿದ್ದು ಯಾಕೆ?

ಒಬ್ಬ ಕಲಾವಿದ ಅವನ ಜರ್ನಿಯನ್ನು ಅವನೇ ನಿರ್ಧರಿಸಬೇಕು. ಈ ಕಾರಣಕ್ಕೆ ‘ಮೈ ನೇಮ್ ಈಸ್ ಸಿದ್ದೇಗೌಡ’ ಚಿತ್ರವನ್ನು ನಾನೇ ನಿರ್ದೇಶನ ಮಾಡಕ್ಕೆ ಹೊರಟಿದ್ದೇನೆ. 

ಐಎಎಸ್ ಅಧಿಕಾರಿ ಪಾತ್ರ ನಿಮಗೆ ಸೂಟ್ ಆಗುತ್ತಾ?

ಸಿನಿಮಾ ಒಪ್ಪಿಕೊಳ್ಳುವಾಗ ನನಗೂ ಅದೇ ಅನುಮಾನ ಇತ್ತು. ಯಾಕೆಂದರೆ ಸೂಟು-ಬೂಟು ಹಾಕಿಕೊಂಡು, ನುಣ್ಣಗೆ ಶೇವ್ ಮಾಡಿಕೊಂಡು ದಪ್ಪ ಮೀಸೆ ಅಂಟಿಸಿಕೊಂಡು ನಾನು ಯಾವತ್ತೂ ತೆರೆ ಮೇಲೆ ಬಂದವನಲ್ಲ. ಇಲ್ಲಿವರೆಗೂ ನಾನು ಮಾಡಿದ ಪಾತ್ರಗಳೇ ಬೇರೆ. ‘ಚಂಬಲ್’ನಲ್ಲಿ ಸಿಕ್ಕ ಪಾತ್ರವೇ ಬೇರೆ. ಆದರೆ, ಮಂಡ್ಯ ಪ್ಲೇವರ್‌ನಿಂದ ನನ್ನ ನಾನು ಬ್ರೇಕ್ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಪಾತ್ರವನ್ನು ನನಗೆ ಒಗ್ಗಿಸಿಕೊಂಡು ಮಾಡಿದೆ.

ಡಿಕೆ ರವಿ ಸಾವಿನ ಕೇಸ್ ರೀ ಓಪನ್?

ಮುಂದಿನ ಚಿತ್ರಗಳು ಯಾವುವು?

ಗೋದ್ರಾ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಈಗ ಡಬ್ಬಿಂಗ್ ಹಂತದಲ್ಲಿದೆ. ಇದರ ನಂತರ ತಮಿಳು ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕಾಗಿ ನಾನು ತಮಿಳು ಭಾಷೆ ಕಲಿತಿದ್ದೇನೆ. ಇದರ ನಡುವೆ ಒಂದು ಒಳ್ಳೆಯ ಕತೆ ಬಂದಿದೆ. ಅದನ್ನು ಒಪ್ಪಿಕೊಂಡು ಮುಗಿಸಿದ ಮೇಲೆ ನನ್ನ ನಿರ್ದೇಶನದ ಸಿನಿಮಾ ಶುರುವಾಗಲಿದೆ.

 

click me!