
ಆರ್ ಕೇಶವಮೂರ್ತಿ
ನೀವು ನಟನೆಯ ಕ್ಷೇತ್ರಕ್ಕೆ ಬಂದಿದ್ದು ಹೇಗೆ?
ನಾನು ಈಗ ಬೆಂಗಳೂರಿನ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದೇನೆ. ಎಸ್‌ಎಸ್‌ಎಲ್‌ಸಿ ಮುಗಿಸಿ ಪಿಯುಸಿ ಓದುವಾಗ ನನ್ನ ಪರಿಚಯಸ್ಥರ ಮೂಲಕ ರಂಗಭೂಮಿಗೆ ಬಂದೆ. ಇಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಿನಿಮಾಗಳಲ್ಲಿ ನಟಿಸುವ ಕನಸು ಕಾಣುತ್ತಿದ್ದೆ. ಆದರೆ, ರಂಗಭೂಮಿಯ ನಂತರ ಸಿಕ್ಕಿದ್ದು ಮಾತ್ರ ಕಿರುತೆರೆ.
ನೀವು ಬಣ್ಣ ಹಚ್ಚಿದ ಮೊದಲ ಧಾರಾವಾಹಿ ಯಾವುದು?
ನವೀನ್ ಕೃಷ್ಣ ನಿರ್ದೇಶನದ ‘ಪತ್ತೆದಾರಿ ಪ್ರತಿಭಾ’ ಧಾರಾವಾ ಹಿಯಲ್ಲಿ ಒಂದು ಪುಟ್ಟ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಕಿರುತೆರೆಗೆ ಬಂದ ಮೇಲೆ ಮತ್ತೆ ರಂಗಭೂಮಿ ಕಡೆ ನೋಡಲಿಲ್ಲ. ಇದರ ನಂತರ ಸಾಕಷ್ಟು ಕಿರುತೆರೆಯಲ್ಲೇ ಅವಕಾಶಗಳು ಬಂದರು ನಾನು ಸಿನಿಮಾಗಳತ್ತ ಮುಖ ಮಾಡಿದೆ.
ನಿಮ್ಮ ನಟನೆಯ ಸಿನಿಮಾಗಳು ಯಾವುವು?
ನಾನು ಮೊದಲು ನಾಯಕಿಯಾಗಿ ನಟಿಸಿದ್ದು ‘ಸ್ನೇಹರ್ಷಿ’. ನಾಗತಿಹಳ್ಳಿ ಚಂದ್ರಶೇಖರ್ ಅವರ ತಂಗಿ ಮಗ ಕಿರಣ್ ನಾಗತಿಹಳ್ಳಿ ಅವರೇ ನಾಯಕ. ಅವರಿಗೆ ಇದು ಮೊದಲ ಸಿನಿಮಾ. ನನಗೂ ಇದು ಮೊದಲ ಚಿತ್ರ. ಶೂಟಿಂಗ್ ಮುಗಿಸುವುದು ತಡವಾಯಿತು. ಹೀಗಾಗಿ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಆದರೆ, ‘ವೀಕೆಂಡ್ ಸಿನಿಮಾ’ ಬಿಡುಗಡೆಗೆ ಸಜ್ಜಾಗಿದೆ?
ಹೌದು. ಸುರೇಶ್ ಶೃಂಗೇರಿ ಅವರ ನಿರ್ದೇಶನದ ಸಿನಿಮಾ. ಮೊದಲ ಚಿತ್ರ ಶೂಟಿಂಗ್ ತಡವಾಗಿದ್ದರಿಂದ ಎರಡನೇ ಬಾರಿಗೆ ಒಪ್ಪಿಕೊಂಡ ಚಿತ್ರವೇ ಮೊದಲ ಚಿತ್ರವಾಗಿ ತೆರೆಗೆ ಬರುತ್ತಿದೆ. ಯಾವುದೇ ರೀತಿಯ ಪಾತ್ರ ಕೊಟ್ಟರೂ ಮಾಡಬಲ್ಲೆ ಎನ್ನುವಷ್ಟು ವಿಶ್ವಾಸ ಮೂಡಿಸಿರುವ ಸಿನಿಮಾ ಇದು.
ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಅನಂತ್‌ನಾಗ್ ಜತೆಗಿನ ನಟನೆಯ ಅನುಭವ ಹೇಗಿತ್ತು?
ನನ್ನದು ಈ ಚಿತ್ರದಲ್ಲಿ ಸಾಫ್ಟ್ ಹುಡುಗಿಯ ಪಾತ್ರ. ನಾಯಕನ ಬೆಂಬಲಕ್ಕೆ ನಿಲ್ಲುವ ತುಂಬಾ ಮುದ್ದಾದ ಪಾತ್ರ. ಇನ್ನೂ ಅನಂತ್‌ನಾಗ್ ಅವರು ನಾಯಕನ ತಾತನ ಪಾತ್ರ ಮಾಡಿದ್ದಾರೆ. ಅವರ ಜತೆಗೆ ನಾನೂ ತೆರೆ ಹಂಚಿಕೊಂಡಿರುವೆ. ಐಕಾನ್ ಜತೆ ನಟಿಸಿದ ಖುಷಿ ನನ್ನದು.
ಯಾವ ರೀತಿಯ ಕತೆ ‘ವೀಕೆಂಡ್ ಸಿನಿಮಾ’ ದಲ್ಲಿದೆ?
ಚಿತ್ರದ ಹೆಸರೇ ಹೇಳುವಂತೆ ಇದು ವಾರದ ಕೊನೆಯಲ್ಲಿ ಮೋಜು, ಮಸ್ತಿ ಅಂತ ಹೊಸ ಜೀವನ ಶೈಲಿ ರೂಪಿಸಿಕೊಂಡವರ ಕತೆ. ಅಂಥವರ ಜೀವನದ ಸುತ್ತ ನಿರ್ದೇಶಕ ಸುರೇಶ್ ಅವರು ಈ ಸಿನಿಮಾ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.