
90ರ ದಶಕದಲ್ಲಿ ತಮ್ಮ ಸಹಜ ಸೌಂದರ್ಯ ಮತ್ತು ಅದ್ಭುತ ಅಭಿನಯದ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ನಟಿ ಸಿತಾರಾ. ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ನಾಯಕಿಯಾಗಿ ಮಿಂಚಿದ್ದ ಈ ನಟಿ, ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಂದು ನಾಯಕಿಯಾಗಿ ಪ್ರೇಕ್ಷಕರ ಮನಗೆದ್ದಿದ್ದ ಅವರು, ಇಂದು ಯುವ ಹೀರೋಗಳ ಸಿನಿಮಾಗಳಲ್ಲಿ ತಾಯಿ, ಅಕ್ಕ, ಅತ್ತಿಗೆ ಸೇರಿದಂತೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಶೇಷವೆಂದರೆ, 52 ವರ್ಷ ವಯಸ್ಸಿನಲ್ಲಿಯೂ ಅವರು ಮದುವೆಯಾಗದೆ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಹಾಗಾದರೆ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿತಾರಾ ಅವರ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಕಥೆ ಏನು? ತಿಳಿಯೋಣ.
ನಾಲ್ಕು ಭಾಷೆಗಳಲ್ಲಿ ಮಿಂಚಿದ 90ರ ದಶಕದ ಕನಸಿನ ರಾಣಿ!
1990ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಹಜ ಸೌಂದರ್ಯ ಹಾಗೂ ಮನೋಜ್ಞ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ನಟಿ ಸಿತಾರಾ. ಗ್ಲಾಮರ್ ಪಾತ್ರಗಳಿಗಿಂತ ಅಭಿನಯಕ್ಕೆ ಹೆಚ್ಚು ಅವಕಾಶವಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ ಅವರು, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ಸಂಪಾದಿಸಿದ್ದರು.
ಮಲಯಾಳಂ ಚಿತ್ರರಂಗದಲ್ಲಿ ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ ಸಿತಾರಾ, ಬಳಿಕ ದಕ್ಷಿಣ ಭಾರತದ ಹಲವು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು. 1986ರಲ್ಲಿ ಬಿಡುಗಡೆಯಾದ ಮಲಯಾಳಂನ 'ಕಾವೇರಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಆರಂಭದಲ್ಲೇ ಗಮನ ಸೆಳೆದರು. ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಅವರಂತಹ ಹಿರಿಯ ನಟರ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಪಡೆದುಕೊಂಡರು. ನಂತರ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶನದ ತಮಿಳು ಸಿನಿಮಾ 'ಪುದು ಪುದು ಅರ್ಥಂಗಳ್' ಮೂಲಕ ಕಾಲಿವುಡ್‌ಗೆ ಪ್ರವೇಶಿಸಿದರು. ಈ ಚಿತ್ರದ 'ಕೇಳಡಿ ಕಣ್ಮಣಿ' ಹಾಡು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.
ಬಳಿಕ ತೆಲುಗು ಚಿತ್ರರಂಗದಲ್ಲಿಯೂ ಪ್ರಮುಖ ನಟರ ಜೊತೆ ನಟಿಸಿ ಸಾಲು ಸಾಲು ಯಶಸ್ವಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಅಲ್ಲದೇ ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ಹಾಲುಂಡ ತವರು ಅಭಿನಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದೇನೋ. ಇದು ಅವರ ಕನ್ನಡದ ಚೊಚ್ಚಲ ಚಿತ್ರ ಈ ಚಿತ್ರದಲ್ಲಿನ ಜ್ಯೋತಿ ಪಾತ್ರದ ಮೂಲಕ ಮನೆಮಾತಾದರು. ಬಳಿಕ ಕರುಳಿನ ಕುಡಿ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಅನುರಾಗ ದೇವತೆ, ಹೆತ್ತವಳ ಕೂಗು ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ತಂದೆಯ ನಿಧನದ ಬಳಿಕ ಕುಟುಂಬದ ಜವಾಬ್ದಾರಿ ಹೊತ್ತ ನಟಿ!
ಸಿತಾರಾ ಅವರ ವೃತ್ತಿಜೀವನ ಯಶಸ್ಸಿನ ಉತ್ತುಂಗದಲ್ಲಿದ್ದ ಸಮಯದಲ್ಲೇ ವೈಯಕ್ತಿಕ ಬದುಕಿನಲ್ಲಿ ದೊಡ್ಡ ಆಘಾತ ಎದುರಾಯಿತು. ತಂದೆಯ ಅಕಾಲಿಕ ನಿಧನದಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿತು. ಮನೆಯ ಹಿರಿಯ ಮಗಳಾಗಿದ್ದ ಸಿತಾರಾ ಕುಟುಂಬದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕಾಯಿತು. ವಿಶೇಷವಾಗಿ, ತಮ್ಮನನ್ನು ಚೆನ್ನಾಗಿ ಓದಿಸಿ ವೈದ್ಯನನ್ನಾಗಿ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದನ್ನೇ ಸಿತಾರಾ ತಮ್ಮ ಮೊದಲ ಆದ್ಯತೆಯನ್ನಾಗಿ ಮಾಡಿಕೊಂಡರು.
ತಮ್ಮನ ವಿದ್ಯಾಭ್ಯಾಸ ಮತ್ತು ಕುಟುಂಬದ ಭವಿಷ್ಯಕ್ಕಾಗಿ ಶ್ರಮಿಸುವುದರಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡರು. ಈ ಕುಟುಂಬದ ಜವಾಬ್ದಾರಿಗಳ ನಡುವೆ ತಮ್ಮ ವೈಯಕ್ತಿಕ ಜೀವನ ಮತ್ತು ಮದುವೆಯ ವಿಚಾರವನ್ನು ಹಿಂದೆ ಸರಿಸಿದರು. ಹೀಗಾಗಿ ವೃತ್ತಿಜೀವನದ ಜೊತೆಗೆ ಕುಟುಂಬದ ಕರ್ತವ್ಯಗಳಿಗೂ ಹೆಚ್ಚಿನ ಮಹತ್ವ ನೀಡಿದ ಸಿತಾರಾ, ಮದುವೆಯಾಗದೆ ಉಳಿಯುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ಕಾಲಕ್ರಮೇಣ ನಾಯಕಿಯಾಗಿ ಸಿಗುತ್ತಿದ್ದ ಅವಕಾಶಗಳು ಕಡಿಮೆಯಾದರೂ ಸಿತಾರಾ ಚಿತ್ರರಂಗದಿಂದ ದೂರವಾಗಲಿಲ್ಲ. ಬದಲಿಗೆ ತಮ್ಮ ನಟನಾ ಸಾಮರ್ಥ್ಯಕ್ಕೆ ತಕ್ಕಂತೆ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಿದರು. ಇಂದು ಯುವ ಹೀರೋಗಳ ಸಿನಿಮಾಗಳಲ್ಲಿ ತಾಯಿ, ಅಕ್ಕ, ಅತ್ತಿಗೆ ಸೇರಿದಂತೆ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಿರಂತರವಾಗಿ ಅವಕಾಶಗಳನ್ನು ಪಡೆಯುತ್ತಿರುವ ಅವರು, ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದಾರೆ.
ಇನ್ನು ಒಂದು ಕಾಲದಲ್ಲಿ ನಾಯಕಿಯಾಗಿ ಸ್ಟಾರ್ ನಟರ ಜೊತೆ ಮಿಂಚಿದ್ದ ಸಿತಾರಾ, ಇಂದು ಪೋಷಕ ಪಾತ್ರಗಳ ಮೂಲಕವೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. 52ರ ಹರೆಯದಲ್ಲಿಯೂ ಮದುವೆಯಾಗದೆ ತಮ್ಮದೇ ಆದ ಜೀವನ ನಡೆಸುತ್ತಿರುವ ಅವರು, ಕುಟುಂಬದ ಜವಾಬ್ದಾರಿ ಮತ್ತು ವೃತ್ತಿಜೀವನ ಎರಡರಲ್ಲೂ ವಿಶೇಷ ಗುರುತು ಮೂಡಿಸಿದ್ದಾರೆ. ನಾಯಕಿಯಾಗಿ ಆರಂಭವಾದ ಅವರ ಸಿನಿಮಾ ಪಯಣ ಇಂದಿಗೂ ಯಶಸ್ವಿಯಾಗಿ ಮುಂದುವರಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.