ಅಂದೇ ಪ್ಯಾನ್ ಇಂಡಿಯಾ ಕ್ರೇಜ್ ಸೃಷ್ಟಿಸಿದ್ದ ಡಾ. ರಾಜ್‌ಕುಮಾರ್: ಪರಭಾಷೆಗೆ ರಿಮೇಕ್ ಆದ ಪೌರಾಣಿಕ ಚಿತ್ರಗಳಿವು!

Published : Nov 21, 2026, 11:22 AM IST
Dr Rajkumar

ಸಾರಾಂಶ

50-60ರ ದಶಕದಲ್ಲೇ ಡಾ. ರಾಜ್‌ಕುಮಾರ್ ಅವರ ಪೌರಾಣಿಕ ಮತ್ತು ಭಕ್ತಿಪ್ರಧಾನ ಸಿನಿಮಾಗಳು ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗಿ ಇತಿಹಾಸ ಬರೆದಿದ್ದವು. ಕನ್ನಡದ ಕಥೆಗಳು ಗಡಿ ದಾಟಿ ಪರಭಾಷೆಯ ದಿಗ್ಗಜ ನಟರನ್ನು ಆಕರ್ಷಿಸಿದ್ದವು.

ಸಾಮಾನ್ಯವಾಗಿ ಪರಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ರಿಮೇಕ್ ಮಾಡುವ ಟ್ರೆಂಡ್ ನಡುವೆ, 50-60ರ ದಶಕದಲ್ಲೇ ಡಾ. ರಾಜ್‌ಕುಮಾರ್ ಅವರ ಪೌರಾಣಿಕ ಮತ್ತು ಭಕ್ತಿಪ್ರಧಾನ ಸಿನಿಮಾಗಳು ತೆಲುಗು, ತಮಿಳು ಹಾಗೂ ಹಿಂದಿಗೆ ರಿಮೇಕ್ ಆಗಿ ಹೊಸ ಇತಿಹಾಸ ಬರೆದಿದ್ದವು. ತಂತ್ರಜ್ಞಾನವಿಲ್ಲದ ಕಾಲದಲ್ಲೇ ಅಣ್ಣಾವ್ರ ಅಭಿನಯ ಮತ್ತು ಕನ್ನಡದ ಕಥೆಗಳು ಗಡಿ ದಾಟಿ ಪರಭಾಷೆಯ ದಿಗ್ಗಜ ನಟರನ್ನು ಆಕರ್ಷಿಸಿದ್ದವು.

ಕನ್ನಡದಿಂದ ಪರಭಾಷೆಗೆ ರಿಮೇಕ್ ಆದ ಪ್ರಮುಖ ಚಿತ್ರಗಳು!

1954ರಲ್ಲಿ ತೆರೆಕಡ ಬೇಡರ ಕಣ್ಣಪ್ಪ, ಅಣ್ಣಾವ್ರ ಮೊದಲ ಚಿತ್ರ ಕನ್ನಡದಲ್ಲಿ 365 ದಿನ ಪ್ರದರ್ಶನ ಕಂಡು ರಾಷ್ಟ್ರಪ್ರಶಸ್ತಿ ಪಡೆಯಿತು. ಅದೇ ವರ್ಷ ತೆಲುಗಿನಲ್ಲಿ ಕಾಳಹಸ್ತಿ ಮಹಾತ್ಯಂ ಹೆಸರಿನಲ್ಲಿ ರಿಮೇಕ್ ಆಯಿತು. ವಿಶೇಷವೆಂದರೆ ಇದರಲ್ಲಿ ಸ್ವತಃ ಅಣ್ಣಾವ್ರೇ ನಟಿಸಿದ್ದರು (ಇದು ಅವರ ವೃತ್ತಿಜೀವನದ ಏಕೈಕ ಪರಭಾಷಾ ಸಿನಿಮಾ). 1955ರಲ್ಲಿ ಹಿಂದಿಯಲ್ಲಿ 'ಶಿವ ಭಕ್ತ' ಆಗಿ, 1976ರಲ್ಲಿ ತೆಲುಗಿನಲ್ಲಿ ಕೃಷ್ಣಂರಾಜು ಅಭಿನಯದ 'ಭಕ್ತ ಕಣ್ಣಪ್ಪ' ಆಗಿ ಮರುನಿರ್ಮಾಣಗೊಂಡು ಸೂಪರ್ ಹಿಟ್ ಆಯಿತು.

ಶ್ರೀ ರಾಮಾಂಜನೇಯ ಯುದ್ಧ!

1963ರಲ್ಲಿ ತೆರೆಕಂಡ ಶ್ರೀ ರಾಮಾಂಜನೇಯ ಯುದ್ಧ ಎನ್.ಟಿ.ಆರ್ ಅವರನ್ನು ಆಕರ್ಷಿಸಿದ ಸಿನಿಮಾ ಇದು. ಅಣ್ಣಾವ್ರು ಶ್ರೀರಾಮನಾಗಿ ಮಿಂಚಿದ್ದ ಈ ಚಿತ್ರ ಕನ್ನಡದಲ್ಲಿ ಭರ್ಜರಿ ಯಶಸ್ಸು ಕಂಡಿತು. ಇದರ ಕಥೆ ಮತ್ತು ಜನಪ್ರಿಯತೆ ಕಂಡು ತೆಲುಗಿನ ದಿಗ್ಗಜ ಎನ್.ಟಿ. ರಾಮರಾವ್ (NTR) 1975ರಲ್ಲಿ 'ಶ್ರೀ ರಾಮಾಂಜನೇಯ ಯುದ್ಧಂ' ಹೆಸರಿನಲ್ಲಿ ರಿಮೇಕ್ ಮಾಡಿ ನಟಿಸಿದರು.

ರಾಜಕೀಯ ವಿಡಂಬನೆ ಕಥೆ!

1958ರಲ್ಲಿ ತೆರೆಕಂಡ ಶ್ರೀ ಕೃಷ್ಣ ಗಾರುಡಿ ರಾಜಕೀಯ ವಿಡಂಬನೆಯ ಪೌರಾಣಿಕ ಕಥೆಯಾಗಿದೆ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ, ಅಣ್ಣಾವ್ರು ಅರ್ಜುನನಾಗಿ ನಟಿಸಿದ ಈ ಹಾಸ್ಯಮಯ ಪೌರಾಣಿಕ ಸಿನಿಮಾ ಕನ್ನಡದಲ್ಲಿ ದೊಡ್ಡ ಹಿಟ್ ಆಯಿತು. ಅದೇ ವರ್ಷ ತೆಲುಗಿನಲ್ಲಿ ಜಗ್ಗಯ್ಯ ಅಭಿನಯದಲ್ಲಿ ಇದೇ ಹೆಸರಿನಲ್ಲಿ ರಿಮೇಕ್ ಆಗಿ ಯಶಸ್ಸು ಕಂಡಿತು.

ಡಬ್ ಆಗಿ ಪರಭಾಷೆಯಲ್ಲಿ ಸದ್ದು ಮಾಡಿದ ಬ್ಲಾಕ್‌ಬಸ್ಟರ್ ಚಿತ್ರಗಳು!

1977ರಲ್ಲಿ ತೆರೆಕಂಡ ಬಬ್ರುವಾಹನ, ಕನ್ನಡದಲ್ಲಿ 25 ವಾರಗಳ ದಾಖಲೆ ಬರೆದ ನಂತರ, ತೆಲುಗಿನಲ್ಲಿ 'ಅರ್ಜುನ ಗರ್ವಭಂಗಂ' ಮತ್ತು ಹಿಂದಿಯಲ್ಲಿ 'ವೀರ್ ಅರ್ಜುನ್' ಹೆಸರಿನಲ್ಲಿ ಡಬ್ ಆಗಿ ಅಲ್ಲಿಯೂ ಭರ್ಜರಿ ಪ್ರದರ್ಶನ ಕಂಡಿತು. 1958ರಲ್ಲಿ ಭೂಕೈಲಾಸ & 1965ರಲ್ಲಿ ಸತ್ಯ ಹರಿಶ್ಚಂದ್ರ, ರಾವಣ ಮತ್ತು ಹರಿಶ್ಚಂದ್ರನ ಪಾತ್ರದಲ್ಲಿ ಅಣ್ಣಾವ್ರ ನಟನೆ ಪರಭಾಷಾ ಚಿತ್ರರಂಗದಲ್ಲೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ಕನ್ನಡತನದ ಬದ್ಧತೆ!

'ಕಾಳಹಸ್ತಿ ಮಹಾತ್ಯಂ' ನಂತರ ತೆಲುಗು, ತಮಿಳು ನಿರ್ಮಾಪಕರು ದೊಡ್ಡ ಸಂಭಾವನೆ ನೀಡಲು ಮುಂದೆ ಬಂದರೂ, ಕನ್ನಡ ಚಿತ್ರರಂಗವನ್ನು ಬೆಳೆಸುವ ಉದ್ದೇಶದಿಂದ ಅಣ್ಣಾವ್ರು ಮತ್ತೆಂದೂ ಪರಭಾಷೆಗಳಲ್ಲಿ ನಟಿಸಲಿಲ್ಲ. 50-70ರ ದಶಕದಲ್ಲೇ ಕನ್ನಡದ ಪೌರಾಣಿಕ ಸಿನಿಮಾಗಳು ಇತರ ಭಾಷೆಗಳಿಗೆ ರಿಮೇಕ್ ಆಗುವ ಮೂಲಕ ಇಂದಿನ 'ಪ್ಯಾನ್ ಇಂಡಿಯಾ' ಯಶಸ್ಸಿಗೆ ಭದ್ರ ಬುನಾದಿ ಹಾಕಿದ್ದವು. ಡಾ. ರಾಜ್‌ಕುಮಾರ್ ಅವರ ಪೌರಾಣಿಕ ಸಿನಿಮಾಗಳು ಕೇವಲ ಮನರಂಜನೆ ನೀಡಲಿಲ್ಲ; ಬದಲಾಗಿ ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ ಹೆಮ್ಮೆಯ ಮೈಲಿಗಲ್ಲುಗಳಾಗಿ ಇಂದಿಗೂ ಜೀವಂತವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಗಣೇಶ್ ಸರ್ ಅಳೋದನ್ನ ನೋಡಿ ನಾನೂ ಅತ್ತು ಬಿಟ್ಟೆ' ಸಿನಿಮಾ ಸೆಟ್‌ನಲ್ಲಿ ಕಣ್ಣೀರಿಟ್ಟ ಪ್ರಸಂಗ ಹೇಳಿದ ಬೃಂದವಿಹಾರಿ ನಟಿ
ಶುಭಮನ್ ಗಿಲ್ ಬಳಿಕ ಸಾರಾ ತೆಂಡೂಲ್ಕರ್ ಜೀವನದಲ್ಲಿ ರಾಜ್‌ವೀರ್ ಡಿಯೋಲ್ ಎಂಟ್ರಿ? ಸಚಿನ್ ಪುತ್ರಿ ಮದುವೆ ಸುದ್ದಿ ವೈರಲ್