
ಕನ್ನಡ ಚಿತ್ರರಂಗದ ವರನಟ ಡಾ. ರಾಜ್‌ಕುಮಾರ್ ಅವರಿಗೆ ಅಭಿಮಾನಿಗಳೆಂದರೆ ಎಲ್ಲಿಲ್ಲದ ಪ್ರೀತಿ. ತಮ್ಮ ಅಭಿನಯ ಮತ್ತು ಗಾಯನದ ಮೂಲಕ ಕೋಟ್ಯಂತರ ಜನರ ಮನಗೆದ್ದಿದ್ದ ಅಣ್ಣಾವ್ರು, ಅಭಿಮಾನಿಗಳ ಪ್ರೀತಿಗೂ ಅಷ್ಟೇ ಗೌರವ ನೀಡುತ್ತಿದ್ದರು. ಅಭಿಮಾನಿಗಳು ಕಳುಹಿಸುತ್ತಿದ್ದ ಪತ್ರಗಳಿಗೆ ಆತ್ಮೀಯವಾಗಿ ಪ್ರತಿಕ್ರಿಯಿಸುತ್ತಿದ್ದರು. ಇದೀಗ ಡಾ. ರಾಜ್‌ಕುಮಾರ್ ಅವರು ಅಭಿಮಾನಿಯೊಬ್ಬರಿಗೆ ಸ್ವತಃ ಕೈಬರಹದಲ್ಲಿ ಬರೆದಿರುವ ಪತ್ರವೊಂದು ಗಮನ ಸೆಳೆಯುತ್ತಿದೆ.
ಡಾ. ರಾಜ್‌ಕುಮಾರ್ ಅವರ ಹೆಸರಿರುವ ಲೆಟರ್‌ಹೆಡ್‌ನಲ್ಲಿ ಕನ್ನಡದಲ್ಲಿ ಬರೆದಿರುವ ಈ ಪತ್ರದ ಪ್ರತಿ ಸಾಲಿನಲ್ಲೂ ಆತ್ಮೀಯತೆ ಎದ್ದು ಕಾಣುತ್ತದೆ. ಅಭಿಮಾನಿಯೊಬ್ಬರು ತಮ್ಮ ಚಿತ್ರಗಳು, ಚಿತ್ರಗೀತೆಗಳು ಹಾಗೂ ಭಕ್ತಿಗೀತೆಗಳನ್ನು ಮೆಚ್ಚಿ ಪತ್ರ ಬರೆದಿದ್ದರು. ಅದಕ್ಕೆ ಅಣ್ಣಾವ್ರು ಪ್ರೀತಿಯಿಂದ ಉತ್ತರಿಸಿದ್ದಾರೆ.
ಪತ್ರದ ಆರಂಭದಲ್ಲೇ, 'ನಮಸ್ಕಾರ, ತುಂಬು ಅಭಿಮಾನದಿಂದ ತಾವು ನನಗೆ ಬರೆದ ಪತ್ರ ತಲುಪಿದೆ' ಎಂದು ಬರೆದಿದ್ದಾರೆ. ತಮ್ಮ ಹಲವಾರು ಚಿತ್ರಗಳನ್ನು ನೋಡಿ, ಚಿತ್ರಗೀತೆ ಹಾಗೂ ಭಕ್ತಿಗೀತೆಗಳನ್ನು ಆಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಈ ಪತ್ರದಲ್ಲಿರುವ ಅತ್ಯಂತ ಸುಂದರವಾದ ಅಂಶವೆಂದರೆ ಅಭಿಮಾನಿಗೆ ಅಣ್ಣಾವ್ರು ನೀಡಿರುವ ಹಾರೈಕೆ. 'ತಮ್ಮಂಥ ಸೋದರಿಯರ ಹಾರೈಕೆ, ಹಿರಿಯರ ಆಶೀರ್ವಾದ, ಶ್ರೀ ಗುರು ರಾಘವೇಂದ್ರ ಕೃಪೆ ನನ್ನ ಏಳಿಗೆಗೆ ದಾರಿದೀಪ' ಎಂದು ತಮ್ಮ ಬದುಕಿನಲ್ಲಿ ಅಭಿಮಾನಿಗಳ ಹಾರೈಕೆ ಹಾಗೂ ಹಿರಿಯರ ಆಶೀರ್ವಾದದ ಮಹತ್ವವನ್ನು ತಿಳಿಸಿದ್ದಾರೆ. ಮುಂದುವರಿದು, 'ತಾವು ಸದಾ ಸರ್ವಮಂಗಳೆಯಾಗಿ, ಸದ್ಗುಣ ಸಂಪನ್ನೆಯಾಗಿ, ಕೊಟ್ಟ ಮನೆಗೂ ಹುಟ್ಟಿದ ಮನೆಗೂ ಕೀರ್ತಿಯ ಕಳಶವಾಗಿರಿ' ಎಂದು ಹಾರೈಸಿದ್ದಾರೆ.
ಅಭಿಮಾನಿಯೊಬ್ಬರಿಗೆ ಪತ್ರ ಬರೆಯುವಾಗಲೂ ಅವರ ಜೀವನದ ಒಳಿತನ್ನು ಬಯಸಿರುವ ಅಣ್ಣಾವ್ರ ಈ ಮಾತುಗಳು ವಿಶೇಷ ಗಮನ ಸೆಳೆಯುತ್ತವೆ.
ಈ ಪತ್ರದ ಕೊನೆಯಲ್ಲಿ ಮತ್ತೊಂದು ವಿಶೇಷ ಸಂಗತಿಯಿದೆ. 'ಈ ಪತ್ರದೊಂದಿಗೆ ತಮ್ಮ ಅಭಿಲಾಷೆಯಂತೆ ಫೋಟೋ ಕಳಿಸಿರುವೆ' ಎಂದು ಡಾ. ರಾಜ್‌ಕುಮಾರ್ ಬರೆದಿದ್ದಾರೆ. ಅಂದರೆ, ಅಭಿಮಾನಿ ಪತ್ರದ ಮೂಲಕ ತಮ್ಮ ಫೋಟೋ ಕಳುಹಿಸುವಂತೆ ಮನವಿ ಮಾಡಿದ್ದರು. ಅದನ್ನು ಮರೆತಿಲ್ಲದ ಅಣ್ಣಾವ್ರು, ತಮ್ಮ ಕೈಬರಹದ ಪತ್ರದ ಜೊತೆಗೆ ಫೋಟೋವನ್ನೂ ಕಳುಹಿಸಿದ್ದರು. ಇಂದಿನ ಕಾಲದಲ್ಲಿ ನೆಚ್ಚಿನ ನಟನಿಂದ ಒಂದು ಫೋಟೋ ಅಥವಾ ಆಟೋಗ್ರಾಫ್ ಪಡೆಯುವುದೇ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ. ಅಂಥದ್ದರಲ್ಲಿ ಅಣ್ಣಾವ್ರೇ ಪತ್ರ ಬರೆದು, ಫೋಟೋ ಕಳುಹಿಸಿ, ಹಾರೈಸಿರುವುದು
ದಶಕಗಳು ಕಳೆದರೂ ಡಾ. ರಾಜ್‌ಕುಮಾರ್ ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಅವರ ಸಿನಿಮಾಗಳು, ಹಾಡುಗಳು ಮಾತ್ರವಲ್ಲದೆ ಇಂತಹ ಅಪರೂಪದ ಪತ್ರಗಳು ಕೂಡ ಅಣ್ಣಾವ್ರ ಸರಳತೆ, ಆತ್ಮೀಯತೆ ಮತ್ತು ಅಭಿಮಾನಿಗಳೊಂದಿಗಿನ ನಂಟನ್ನು ನೆನಪಿಸುತ್ತವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.