
ಕನ್ನಡ ಚಿತ್ರರಂಗದಲ್ಲಿ ವರನಟ ಡಾ. ರಾಜ್ಕುಮಾರ್ ಅವರು ನಟನೆ ಮಾತ್ರವಲ್ಲ, ಗಾಯನದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು. ಭಕ್ತಿಗೀತೆ, ಭಾವಗೀತೆ, ದೇಶಪ್ರೇಮದ ಹಾಡು, ರೊಮ್ಯಾಂಟಿಕ್ ಗೀತೆ ಹೀಗೆ ಹಲವು ಪ್ರಕಾರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆದರೆ, ಅವರು ಹಾಡಿರುವ ಕೆಲವು ಹಾಡುಗಳು ಇಂದಿಗೂ ಅನೇಕರಿಗೆ ಗೊತ್ತಿಲ್ಲ. ಅಂತಹ ಅಪರೂಪದ ಹಾಡುಗಳಲ್ಲಿ 1996ರಲ್ಲಿ ತೆರೆಕಂಡ 'ಗೆಲುವಿನ ಸರದಾರ' ಚಿತ್ರದ 'ಟೋಪಿ ಟೋಪಿ' ಹಾಡು ಕೂಡ ಒಂದು.
ಈ ಹಾಡಿನ ವಿಶೇಷತೆ ಏನೆಂದರೆ, ಇದು ಸಾಮಾನ್ಯ ಫಾಸ್ಟ್ಬೀಟ್ ಹಾಡಲ್ಲ. ವೇಗದ ಸಂಗೀತದ ನಡುವೆಯೇ ಜೀವನದ ಫಿಲಾಸಫಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ಗೀತೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೇವಲ 10 ನಿಮಿಷಗಳಲ್ಲಿ ಈ ಹಾಡಿಗೆ ಟ್ಯೂನ್ ಸಂಯೋಜಿಸಿ, ಮುಕ್ಕಾಲು ಗಂಟೆಯೊಳಗೆ ಸಾಹಿತ್ಯವನ್ನೂ ಬರೆದಿದ್ದರಂತೆ.
1996ರಲ್ಲಿ ತೆರೆಕಂಡ 'ಗೆಲುವಿನ ಸರದಾರ' ಚಿತ್ರವನ್ನು ರೇಲಂಗಿ ನರಸಿಂಹರಾವ್ ನಿರ್ದೇಶಿಸಿದ್ದರು. ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್ ಹಾಗೂ ಶ್ರುತಿ ನಟಿಸಿದ್ದರು. ಸಿನಿಮಾದ ಹಾಡುಗಳಿಗೆ ಹಂಸಲೇಖ ಸಂಗೀತ ಸಂಯೋಜಿಸಿದ್ದರು. ಚಿತ್ರದ ಎಲ್ಲಾ ಹಾಡುಗಳೂ ವಿಭಿನ್ನವಾಗಿದ್ದು, ವಿಶೇಷವಾಗಿ 'ಟೋಪಿ ಟೋಪಿ' ಹಾಡು ಗಮನ ಸೆಳೆಯುತ್ತದೆ. ಈ ಹಾಡನ್ನು ಡಾ. ರಾಜ್ಕುಮಾರ್ ಅವರಿಗೆ ನೀಡಿದಾಗ ಅವರು ಅದರ ಸಾಹಿತ್ಯವನ್ನು ಕೇಳಿ ಬಹಳ ಖುಷಿಪಟ್ಟಿದ್ದರಂತೆ. ಫಾಸ್ಟ್ಬೀಟ್ ಹಾಡಿನಲ್ಲೂ ಇಷ್ಟೊಂದು ಅದ್ಭುತವಾದ ಫಿಲಾಸಫಿಯನ್ನು ಹೇಳಿದ್ದೀರಲ್ಲ ಎಂದು ಹಂಸಲೇಖ ಅವರನ್ನು ಮೆಚ್ಚಿಕೊಂಡಿದ್ದರು. ಹಾಡನ್ನು ರೆಕಾರ್ಡ್ ಮಾಡಿದ ಬಳಿಕ ಎರಡು ಬಾರಿ ಮತ್ತೆ ಪ್ಲೇ ಮಾಡಿ ಕೇಳಿದ್ದರಂತೆ.
'ಟೋಪಿ ಟೋಪಿ ಲವ್ ಮಾಡೋಕೆ ಹಾಕು ಟೋಪಿ, ಸುಳ್ಳು ಸುಳ್ಳು ಲವ್ ಮಾಡೋಕೆ ಹೇಳು ಸುಳ್ಳು' ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡು ಕೇಳಲು ಮಜಾ ನೀಡುತ್ತದೆ. ಆದರೆ, ಅದರ ಚರಣಗಳಲ್ಲಿ ಜೀವನದ ಬಗ್ಗೆ ಆಳವಾದ ಅರ್ಥವಿದೆ. 'ಬಾಳು ಒಂದು ನಾಟಕ, ಕಾಲ ಇಲ್ಲಿ ವೀಕ್ಷಕ, ಪ್ರೀತಿ ಪಾತ್ರ ನಲಿವುದು, ಮಿಕ್ಕ ಪಾತ್ರ ಅಲೆಯುವುದು' ಎಂಬ ಸಾಲುಗಳ ಮೂಲಕ ಬದುಕನ್ನು ನಾಟಕಕ್ಕೆ ಹೋಲಿಸಿದ್ದಾರೆ ಹಂಸಲೇಖ. ಪ್ರೀತಿಯ ಸ್ಪರ್ಶವನ್ನು ಎಲ್ಲರಿಗೂ ತಲುಪಿಸಬೇಕು, ಜೀವನವನ್ನು ಸುಲಭವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನೂ ನೀಡಿದ್ದಾರೆ.
'ಟೇಕ್ ಇಟ್ ಈಸಿ ಪಾಲಿಸಿ, ಎಲ್ಲರೂ ಇಲ್ಲಿ ಪಾಲಿಸಿ' ಎಂಬ ಸಾಲುಗಳು ಇಂದಿಗೂ ಅರ್ಥಪೂರ್ಣವಾಗಿವೆ. ಅಷ್ಟೇ ಅಲ್ಲ, 'ತ್ರಿಲ್ ಇಲ್ಲದೆ ಲವ್ ಇಲ್ಲ, ಲವ್ ಇಲ್ಲದೆ ಲೈಫ್ ಇಲ್ಲ' ಎಂಬ ಸಾಲು ಹಾಡಿಗೆ ಮತ್ತಷ್ಟು ಕಿಕ್ ನೀಡುತ್ತದೆ. ಎರಡನೇ ಚರಣದಲ್ಲಿಯೂ ಪ್ರೀತಿ, ಸುಳ್ಳು, ದಾಂಪತ್ಯ ಹಾಗೂ ಮಾನವ ಸಂಬಂಧಗಳ ಬಗ್ಗೆ ಹಾಸ್ಯದ ಮಿಶ್ರಣದೊಂದಿಗೆ ಫಿಲಾಸಫಿ ಹೇಳಿದ್ದಾರೆ. 'ಸಿಹಿಯ ಸುಳ್ಳು ಕೇಳಿ ಲೋಕ ಸವಿಯುವುದು' ಎಂಬ ಸಾಲು ವಿಶೇಷವಾಗಿ ಗಮನ ಸೆಳೆಯುತ್ತದೆ.
'ಗೆಲುವಿನ ಸರದಾರ' ಚಿತ್ರದಲ್ಲಿ 'ಟೋಪಿ ಟೋಪಿ' ಹಾಡಿನ ಜೊತೆಗೆ ಇನ್ನೂ ಹಲವು ವಿಭಿನ್ನ ಹಾಡುಗಳಿದ್ದವು. ಮನೋ ಹಾಗೂ ಮಂಜುಳಾ ಗುರುರಾಜ್ ಹಾಡಿರುವ 'ಐ ಆ್ಯಮ್ ಇನ್ ಲವ್ ಮೈ ಡಿಯರ್' ಹಾಡು ಕೂಡ ಫಾಸ್ಟ್ಬೀಟ್ನಲ್ಲಿ ಮೂಡಿಬಂದಿತ್ತು.
'ಹರೆಯವನ್ನು ತುಂಬಿದೆ, ಹೃದಯವನ್ನು ತುಂಬಿದೆ, ತನುವು ತುಳುಕುತ್ತಿದೆ, ಬಯಕೆ ಬಳುಕುತ್ತಿದೆ' ಎಂಬ ಸಾಲುಗಳ ಮೂಲಕ ಪ್ರೀತಿಯ ಭಾವನೆಗಳನ್ನು ಸುಂದರವಾಗಿ ಕಟ್ಟಿಕೊಡಲಾಗಿದೆ. ಕಣ್ಣಿಂದ ಕಣ್ಣಿಗೆ ಕಾರಂಜಿ ಚಲಾಯಿಸಿ, ಮನಸಿಂದ ಮನಸಿಗೆ ಕನಸನ್ನು ರವಾನಿಸಿ ಎಂಬ ಪದಪ್ರಯೋಗಗಳು ಹಂಸಲೇಖ ಅವರ ಸಾಹಿತ್ಯದ ವೈಶಿಷ್ಟ್ಯವನ್ನು ತೋರಿಸುತ್ತವೆ. ಇನ್ನು 'ಟೊಮೆಟೊ' ಎಂಬ ಹಾಡಿನಲ್ಲೂ ಹಂಸಲೇಖ ತಮ್ಮದೇ ಶೈಲಿಯಲ್ಲಿ ಪದಗಳ ಆಟವಾಡಿದ್ದಾರೆ. ಹೆಣ್ಣಿನ ಸೌಂದರ್ಯವನ್ನು ತರಕಾರಿ ಹಾಗೂ ಹಣ್ಣುಗಳ ರೂಪಕಗಳ ಮೂಲಕ ವರ್ಣಿಸಿರುವ ಈ ಹಾಡನ್ನು ಡಾ. ರಾಜ್ಕುಮಾರ್ ಹಾಗೂ ಮಂಜುಳಾ ಗುರುರಾಜ್ ಹಾಡಿದ್ದಾರೆ.
ಚಿತ್ರದ ಮತ್ತೊಂದು ವಿಶೇಷ ಹಾಡು 'ಇನ್ನು ಯಾಕ ಬರಲಿಲ್ಲ ಅವ'. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಬಳಸಿಕೊಂಡು ಹಂಸಲೇಖ ಈ ಹಾಡನ್ನು ವಿಭಿನ್ನವಾಗಿ ರೂಪಿಸಿದ್ದಾರೆ. 'ಇನ್ನು ಯಾಕ ಬರಲಿಲ್ಲ ಹುಬ್ಬಳ್ಳಿ ಹೆಣ್ಣೆ' ಎಂಬ ಸಾಲುಗಳೇ ಹಾಡಿನ ವಿಶೇಷತೆಯನ್ನು ಸಾರುತ್ತವೆ. 'ಹೂಳಿಗೆ ಹೋಲಿಯಾವ ಸಖಿ ನಿನ್ನ ಪಾದಗಳು' ಸೇರಿದಂತೆ ಹಲವು ಸಾಲುಗಳಲ್ಲಿ ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು ಎದ್ದು ಕಾಣುತ್ತದೆ.
ಇಳಕಲ್ ಸೀರೆ, ತಾಳಿ, ಕರಿಮಣಿ ಸೇರಿದಂತೆ ಉತ್ತರ ಕರ್ನಾಟಕದ ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಪ್ರತಿಬಿಂಬಿಸುವ ಪದಗಳನ್ನು ಬಳಸಿರುವುದು ಹಾಡಿನ ಸೊಬಗನ್ನು ಹೆಚ್ಚಿಸಿದೆ. ಡಾ. ರಾಜ್ಕುಮಾರ್ ಹಾಗೂ ಮಂಜುಳಾ ಗುರುರಾಜ್ ಅವರ ಗಾಯನ ಈ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ.
ಇದೇ ಸಿನಿಮಾದಲ್ಲಿ ಮನೋಹರ್ ಹಾಗೂ ಮಂಜುಳಾ ಗುರುರಾಜ್ ಹಾಡಿರುವ 'ಲವ್ ಲಾಕಪ್' ಹಾಡು ಕೂಡ ಗಮನ ಸೆಳೆಯುತ್ತದೆ. 'ಉಪಕಾರ ಮಾಡಿದೆ ಸರ್ಕಾರ, ಪ್ರೀತಿಗೆ ನೀಡಿದೆ ಸಹಕಾರ, ಕೈದಿಗೆ ಹಾಕುತ್ತಾರೆ ಪಾರು, ಪ್ರೇಮಿಗೆ ಹಾಕುತ್ತಾರೆ ಹಾರು' ಎಂಬ ಅರ್ಥಪೂರ್ಣ ಹಾಗೂ ಹಾಸ್ಯಮಯ ಸಾಲುಗಳ ಮೂಲಕ ಪ್ರೀತಿ ಮತ್ತು ಬಂಧನದ ನಡುವಿನ ಸಂಬಂಧವನ್ನು ಚಂದವಾಗಿ ವಿವರಿಸಿದ್ದಾರೆ ಹಂಸಲೇಖ.
1995ರಲ್ಲಿ ಬಿಡುಗಡೆಯಾದ 'ಓಂ' ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿದ್ದ ಸಮಯದಲ್ಲಿ, 1996ರಲ್ಲಿ ಬಂದ 'ಗೆಲುವು ಸರದಾರ' ಚಿತ್ರದಲ್ಲೂ ಹಂಸಲೇಖ ಉತ್ತಮ ಹಾಡುಗಳನ್ನು ನೀಡಿದ್ದರು. ಆದರೆ, ಚಿತ್ರದ 'ಟೋಪಿ ಟೋಪಿ' ಹಾಡು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಜನಪ್ರಿಯತೆ ಗಳಿಸಲಿಲ್ಲ.
ಡಾ. ರಾಜ್ಕುಮಾರ್ ಅವರ ಅಭಿಮಾನಿಗಳಲ್ಲೂ ಹಲವರಿಗೆ ಅವರು ಇಂತಹ ಫಾಸ್ಟ್ಬೀಟ್ ಫಿಲಾಸಫಿಕಲ್ ಹಾಡೊಂದನ್ನು ಹಾಡಿದ್ದಾರೆ ಎಂಬುದು ತಿಳಿದಿಲ್ಲ. ಹಂಸಲೇಖ ಅವರ ಅದ್ಭುತ ಸಾಹಿತ್ಯ, ವೇಗದ ಸಂಗೀತ ಹಾಗೂ ಅಣ್ಣಾವ್ರ ವಿಶಿಷ್ಟ ಗಾಯನದಿಂದ ಕೂಡಿರುವ ಈ ಹಾಡು ಈಗ ಮತ್ತೆ ಸಂಗೀತಾಸಕ್ತರ ಗಮನ ಸೆಳೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.