
ಹೆಸರು ರಶ್ಮಿಕಾ ಮಂದಣ್ಣ. ಆದರೆ ಜನ ಗುರುತಿಸೋದು ಸಾನ್ವಿ ಅಂತಲೇ. ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾದ ನಂತರ ಈ ಚುರುಕು ಕಣ್ಣಿನ ಹುಡುಗಿ ಕರ್ನಾಟಕದಾದ್ಯಂತ ಜನಪ್ರಿಯಳಾದಳು. ಅದಕ್ಕೂ ಮೊದಲು ಈಕೆ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸ್ ಬ್ಯೂಟಿಫುಲ್ ಸ್ಮೈಲ್' ಕಿರೀಟ ತೊಟ್ಟು ಮಿಂಚಿದ್ದಳು. ಸ್ವತಃ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಅವಾರ್ಡ್ ಪಡೆದಿದ್ದಳು ಈ ಬೆಡಗಿ.
ಈಗ ಈಕೆ ಒಂದೇ ಒಂದ್ಸಲ ತಮ್ಮ ಕಡೆ ನೋಡಿ ನಗಲಿ ಅಂತ ಆಸೆ ಪಡುವ ಸಾವಿರಾರು ಹುಡುಗರಿದ್ದಾರೆ. ಸೋಷಿಯಲ್ ನೆಟ್‌ವರ್ಕ್ ಸೈಟ್‌ಗಳಲ್ಲಿ ನೂರಾರು ಫ್ಯಾನ್ ಕ್ಲಬ್‌ಗಳು ಹುಟ್ಟಿಕೊಂಡಿವೆ. ನೀವು ನೇರವಾಗಿ ನೋಡಿ ಅಥವಾ ಟ್ವಿಟ್ಟರಲ್ಲೇ ನೋಡಿ ಯಾವಾಗಲೂ ಈಕೆ ಮಂದಸ್ಮಿತೆ. ತುಟಿಯಲ್ಲಿ ಚೂರು ನಗುವಿಲ್ಲದ ಫೋಟೋ ಕಾಣುವುದು ಅಪರೂಪ. ರಶ್ಮಿಕಾ ಮಂದಣ್ಣರ ಈ ನಗುಮುಖದ ಗುಟ್ಟೇನು ಗೊತ್ತಾ? ರಶ್ಮಿಕಾರ ತಂಗಿ ಶಿಮನ್ ಮಂದಣ್ಣ.
ಮನೆಯಲ್ಲಿ ಪುಟ್ಟಡಾಲ್
ಈ ಚೆಂದದ ನಗುವಿನ ಉದ್ದ ಕೂದಲಿನ ಹುಡುಗಿ ಕೆಲಸ ಮುಗಿದ ತಕ್ಷಣ ಮನೆಗೆ ಓಡುತ್ತಾಳೆ ಅಂದರೆ ಅದಕ್ಕೆ ಕಾರಣ ಈ ಪುಟ್ಟತಂಗಿ ಶಿಮನ್. ಶಿಮನ್ ಮಂದಣ್ಣಗೆ ಈಗ ನಾಲ್ಕು ವರ್ಷ ವಯಸ್ಸು. ರಶ್ಮಿಕಾ ಮತ್ತು ಶಿಮನ್‌ಗೆ ಮಧ್ಯೆ ಹದಿನೆಂಟು ವರ್ಷ ವಯಸ್ಸಿನ ಅಂತರ. ಹಾಗಾಗಿ ರಶ್ಮಿಕಾ ಅವಳನ್ನು ಡಾಲ್ ಅಂತಲೇ ಕರೆಯುವುದು. ನಿಮಗೆ ಗೊತ್ತಿರಬಹುದು, ರಶ್ಮಿಕಾ ಊರು ವಿರಾಜಪೇಟೆ.. ರಶ್ಮಿಕಾ ಅಮ್ಮ ಸುಮನ್ ಮಂದಣ್ಣ ಅಲ್ಲಿ ವ್ಯವಹಾರ ನೋಡಿಕೊಳ್ಳುತ್ತಾರೆ. ರಶ್ಮಿಕಾ ಸಿನಿಮಾದ ಸ್ಕಿ್ರಪ್ಟ್‌ನಿಂದ ಹಿಡಿದು ಪಾತ್ರದವರೆಗೆ ಎಲ್ಲವನ್ನೂ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳೋದು ಅಮ್ಮನೇ. ಅವರ ತಂದೆ ಎಂಎಂ ಮಂದಣ್ಣ. ಅಪ್ಪಟ ಫ್ಯಾಮಿಲಿ ಮ್ಯಾನ್. ಮಕ್ಕಳು ಅಂದ್ರೆ ತುಂಬಾ ಇಷ್ಟಅವರಿಗೆ. ಇನ್ನು ರಶ್ಮಿಕಾ ಶೂಟಿಂಗ್ ನಿಮಿತ್ತ ಬೆಂಗಳೂರಲ್ಲೋ ಬೇರೆ ಊರಲ್ಲೋ ಇರುತ್ತಾರೆ. ಆಗೆಲ್ಲಾ ಅವರು ತುಂಬಾ ಮಿಸ್ ಮಾಡಿಕೊಳ್ಳುವುದು ಶಿಮನ್‌ಳನ್ನು. ಶೂಟಿಂಗ್ ನಡುವೆ ಸ್ವಲ್ಪ ಬಿಡುವು ಸಿಕ್ಕಿದರೂ ಸಾಕು ಕೂಡಲೇ ಊರಿಗೆ ಓಡುತ್ತಾರೆ.
ಅಕ್ಕ ತಂಗಿ ಅಮ್ಮನನ್ನು ಅಣಕಿಸುತ್ತಾರೆ
‘ನಂಗೆ ಅವಳೆಂದರೆ ಬಹಳ ಇಷ್ಟ. ಅವಳ ತೊದಲು ಮಾತು, ಆಟ, ಊಟ ಎಲ್ಲ ಚೆಂದ, ಎಷ್ಟುಕ್ಯೂಟ್ ಗೊತ್ತಾ, ನನ್ ಪುಟ್ಟತಂಗಿ' ಅಂತ ರಶ್ಮಿಕಾ ತಂಗಿ ಬಗ್ಗೆ ಮುದ್ದಾಗಿ ಹೇಳುತ್ತಾರೆ. ತಂಗಿ ಬಗ್ಗೆ ಕೇಳಿದರೆ ಸಾಕು ಅವರ ಮುಖದಲ್ಲಿ ಸಾವಿರ ವೋಲ್ಟ್ ಬಲ್ಬ್ ಬೆಳಗುತ್ತದೆ. ನೀವು ಅವರಿಬ್ಬರು ಆಟ ಆಡುವ ಫೋಟೋ ನೋಡಿದರೆ ಸಾಕು. ನಿಮಗೆ ಎಲ್ಲವೂ ಅಂದಾಜಾಗುತ್ತದೆ.
ತಂಗಿ ಬಗ್ಗೆ ಅವರಿಗೆ ತುಂಬಾ ಹೆಮ್ಮೆ. ಅವಳನ್ನು ಅಮ್ಮ ಸುಮನ್ ಬಹಳ ಶಿಸ್ತಿನಿಂದ ಅಷ್ಟೇ ಪ್ರೀತಿಯಿಂದ ಬೆಳೆಸುತ್ತಿದ್ದಾರೆ ಅನ್ನುತ್ತಾರೆ. ಇನ್ನೂ ನಾಲ್ಕರ ಹರೆಯದ ಈ ಪುಟಾಣಿಗೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವಷ್ಟುಜಾಣ್ಮೆ ಇದೆಯಂತೆ. ಊಟ, ತಿಂಡಿ ತಟ್ಟೆಗೆ ಹಾಕಿಕೊಟ್ಟರೆ ತಾನೇ ತಿನ್ನುತ್ತದಂತೆ ಈ ಮುದ್ದುಮರಿ.
‘ನಮ್ಮಿಬ್ಬರ ನಡುವೆ ಇಷ್ಟೊಂದು ಅಂತರವಿದೆ. ಅದು ನನಗಂತೂ ಬೇಸರ ತಂದಿಲ್ಲ, ಬದಲಾಗಿ ಅವಳು ಕೊಡುವಷ್ಟುಮನರಂಜನೆ ಇನ್ನೆಲ್ಲೂ ಸಿಗಲ್ಲ. ಅದಕ್ಕೇ ಮನೆಗೆ ಹೋದರೆ ಇಡೀ ದಿನ ಅವಳ ಜೊತೆಗೇ. ನನ್ನ ಸಿನಿಮಾಕ್ಕೆ ಸಂಬಂಧಪಟ್ಟವ್ಯವಹಾರಗಳನ್ನೆಲ್ಲ ಅಮ್ಮನ ತಲೆಗೆ ಹಾಕಿ ನಾನಿಲ್ಲಿ ಮುದ್ದು ತಂಗಿಯ ಜೊತೆಗೆ ಬಿಂದಾಸ್ ಆಗಿರ್ತೀನಿ' ಅಂತಾರೆ ರಶ್ಮಿಕಾ. ಸಿನಿಮಾಕ್ಕೆ ಬಂದಮೇಲೆ ರಶ್ಮಿಕಾ ಅಮ್ಮಂಗೆ ಒಂದು ಗಳಿಗೆ ಪುರುಸೊತ್ತು ಇಲ್ಲವಂತೆ. ಎರಡೂ ಕಿವಿಗೂ ಫೋನ್ ಹಿಡ್ಕೊಂಡೇ ಓಡಾಡುವ ಅಮ್ಮನನ್ನು ಶಿಮನ್ ಕೂಡ ಅಣಕಿಸಿ ನಗ್ತಾಳಂತೆ!
ವರದಿ: ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.