
‘ದಿ ರಾಜಾ ಸಾಬ್’ ಸಿನಿಮಾದ ಹೊಸ ಸುದ್ದಿ!
ಟಾಲಿವುಡ್ ಸ್ಟಾರ್, ಪ್ಯಾನ್ ಇಂಡಿಯಾ ನಟ ಪ್ರಭಾಸ್ (Prabhas) ಭಾರತದ ಟಾಪ್ ಸಿನಿಮಾ ತಾರೆ. ಅಷ್ಟೇ ಅಲ್ಲ, ಅವರು ಭಾರೀ ಸಂಭಾವನೆ ಕೂಡ ಪಡೆಯುತ್ತಾರೆ. ಬಾಹುಬಲಿ ಸಿನಿಮಾದ ಬಳಿಕ ನಟ ಪ್ರಭಾಸ್ ಅವರ ಸಂಭಾವನೆ 100 ಕೋಟಿ ದಾಟಿದ್ದಷ್ಟೇ ಅಲ್ಲ, ಸಿನಿಮಾದಿಂದ ಸಿನಿಮಾಗೆ ಅವರು ತೆಗೆದುಕೊಳ್ಳುವ ಸಂಬಾವನೆ ಹೆಚ್ಚುತ್ತಲೇ ಇದೆ. ಕೆಲವು ಸಿನಿಮಾಗಳಿಗೆ 150 ಕೋಟಿ ರೂಪಾಯಿ ಸಂಭಾವನೆಯನ್ನೂ ಸಹ ಪ್ರಭಾಸ್ ಪಡೆಯುತ್ತಿದ್ದಾರೆ. ಅವರಿಗಿರುವ ಮಾರುಕಟ್ಟೆಗೆ ತಕ್ಕಂತೆ ಸಂಭಾವನೆ ನಿಗದಿ ಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈಗ ವಿಷಯ ಅದಲ್ಲ.. ನಟ ಪ್ರಭಾಸ್ ಅವರ ಸಿನಿಮಾ ಮಾಡುತ್ತಿರುವ ಕಾರಣಕ್ಕೆ, ಅವರ ಸಿನಿಮಾದ ನಿರ್ದೇಶಕರು ಹಾಗೂ ಹಲವು ತಂತ್ರಜ್ಞರ ಸಂಭಾವನೆಯೂ ಏರಿಕೆ ಆಗಿದೆಯಂತೆ. ನಟ ಪ್ರಭಾಸ್ ನಟನೆಯಲ್ಲಿ ಮೂಡಿಬರುತ್ತಿರುವ 'ದಿ ರಾಜಾ ಸಾಬ್' ಹೆಸರಿನ ಸಿನಿಮಾ ನಿರ್ದೇಶಕರಾದ ಮಾರುತಿ ಅವರ ಸಂಭಾವನೆ ಈಗ ಆಕಾಶಕ್ಕೆ ಏರಿದೆ. ಈ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ? ಪ್ರಭಾಸ್ ಸಿನಿಮಾದ ನಿರ್ದೇಶಕ ಮಾರುತಿ ಅವರ ಆ ಸಂಭಾವನೆಯಲ್ಲಿ ನಾಲ್ಕೈದು ಸಣ್ಣ ಬಜೆಟ್ ಸಿನಿಮಾವನ್ನೇ ಮಾಡಿಬಿಡಬಹುದು!
ಹೌದು, 'ದಿ ರಾಜಾ ಸಾಬ್' ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ಮಾರುತಿ ಈಗ ಎರಡಂಕಿ ಸಂಭಾವನೆ ಪಡೆದಿದ್ದಾರೆ. ಅವರು ಯಾವುದೇ ಭಾರಿ ದೊಡ್ಡ ಹಿಟ್ ಸಿನಿಮಾಗಳನ್ನು ಮಾಡಿಲ್ಲ, ತೀರಾ ಸಾಧಾರಣ ಎನ್ನಬಹುದಾದ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ ಅಷ್ಟೇ. ದೊಡ್ಡ ಸ್ಟಾರ್ ನಟರುಗಳೊಟ್ಟಿಗೆ ಕೆಲಸ ಮಾಡಿಲ್ಲ, ಬಿಗ್ ಬಜೆಟ್ ಸಿನಿಮಾವನ್ನಂತೂ ಮಾಡಿಯೇ ಇಲ್ಲ. ಆದರೂ ಕೂಡ, ಪ್ರಭಾಸ್ ಅವರು ಕೇವಲ ಮಾರುತಿ ಹೇಳಿದ ಕಥೆ ಇಷ್ಟವಾಗಿ ಅವರೊಟ್ಟಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಜೊತೆಗೆ, ಮಾರುತಿ ಅವರ 'ದಿ ರಾಜಾ ಸಾಬ್' ಸಿನಿಮಾಕ್ಕೆ ಎರಡು ವರ್ಷಕ್ಕೂ ಹೆಚ್ಚಿನ ಕಾಲ್‌ಶೀಟ್ ನೀಡಿದ್ದಾರೆ.
'ದಿ ರಾಜಾ ಸಾಬ್' ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರ ಕಾರ್ಯ ಶುರುವಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರುತಿ, ಈ ಸಿನಿಮಾಕ್ಕೆ ತಾವು ಪಡೆದ ಸಂಭಾವನೆ ಬಗ್ಗೆಯೂ ಹೇಳಿಕೊಂಡಿದ್ದಾರೆ. 'ದಿ ರಾಜಾ ಸಾಬ್' ಸಿನಿಮಾಕ್ಕೆ ಮಾರುತಿಗೆ ಬರೋಬ್ಬರಿ 18 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆಯಂತೆ. ಇದು ನಿಜವಾಗಿಯೂ ಹೊಸ ನಿರ್ದೇಶಕರೊಬ್ಬರಿಗೆ ಚಿಕ್ಕ ಮೊತ್ತವೇನೂ ಅಲ್ಲ.. ಬಹಳಷ್ಟು ಬಾರಿ ದೊಡ್ಡ ಹೆಸರು ಮಾಡದ ನಿರ್ದೇಶಕರಿಗೂ ಇಷ್ಟು ದೊಡ್ಡ ಸಂಭಾವನೆ ಸಿಗುವುದು ಅಪರೂಪ ಎನ್ನಲಾಗುತ್ತಿದೆ.
ಈ ಬಗ್ಗೆ ಮಾರುತಿ ಅವರು ಹೇಳಿಕೆ ಹೀಗಿದೆ.. 'ದಿ ರಾಜಾ ಸಾಬ್' ಸಿನಿಮಾಗೆ ನನ್ನ ಜೀವನದ ಮೂರು ವರ್ಷಗಳನ್ನು ವ್ಯಯಿಸಿದ್ದೇನೆ, ಹೀಗಾಗಿ ಈ ಮೂರು ವರ್ಷಗಳನ್ನು ಸೇರಿಸಿ 18 ಕೋಟಿ ಸಂಭಾವನೆ ನೀಡಿದ್ದಾರೆ. ಇದಕ್ಕೆ ಪರೋಕ್ಷ ಕಾರಣ ಪ್ರಭಾಸ್ ಅವರು' ಎಂದೂ ಸಹ ಮಾರುತಿ ಹೇಳಿಕೊಂಡಿದ್ದಾರೆ. ಅಂದಹಾಗೆ, ಬೇರೆ ಸಿನಿರಂಗಕ್ಕೆ ಹೋಲಿಸಿದರೆ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರುಗಳಿಗೆ ಭಾರಿ ದೊಡ್ಡ ಸಂಭಾವನೆ ನೀಡಲಾಗುತ್ತದೆ. ರಾಜಮೌಳಿ ಅವರಿಗೆ ಯಾವ ಸ್ಟಾರ್ ನಟರಿಗೂ ನೀಡದಷ್ಟು ಸಂಭಾವನೆ ನೀಡಲಾಗುತ್ತಿದೆ 'ವಾರಣಾಸಿ' ಸಿನಿಮಾಕ್ಕೆ ಬೋಯಪಾಟಿ ಸೀನು ಅವರಿಗೂ ಸಹ ಸುಮಾರು 10 ಕೋಟಿಗೂ ಹೆಚ್ಚು ಮೊತ್ತದ ಸಂಭಾವನೆ ನೀಡಲಾಗಿದೆಯಂತೆ.
ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಪ್ರಭಾಸ್ ಮೊದಲ ಬಾರಿಗೆ ಹಾರರ್ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ಅವರದ್ದು ದ್ವಿಪಾತ್ರ ಹಾಗೂ ಈ ಚಿತ್ರದಲ್ಲಿ ಸಂಜಯ್ ದತ್ ಸಹ ನಟಿಸಿದ್ದಾರೆ. 'ದಿ ರಾಜಾ ಸಾಬ್' ಸಿನಿಮಾದಲ್ಲಿ ಮಾಳವಿಕಾ ಮೋಹನನ್, ರಿಧಿ ಕುಮಾರ್, ನಿಧಿ ಅಗರ್ವಾಲ್ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಂಕ್ರಾಂತಿಗೆ ಸಿನಿಮಾವನ್ನು ತೆರೆಯಲ್ಲಿ ನೋಡಿ ಆನಂದಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.