ದಂಡುಪಾಳ್ಯ ಸಿನಿಮಾ ಗಾಂಧೀನಗರದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ. ಈ ಬಾರಿ ಪೂಜಾ ಗಾಂಧಿ ದಂಡುಪಾಳ್ಯ ಗ್ಯಾಂಗ್’ನ ನಾಯಕಿಯಲ್ಲ. ಹಳೇ ದಂಡುಪಾಳ್ಯ ಇಲ್ಲಿ ರಿಪೀಟಾಗಿಲ್ಲ. ಹೊಸ ಲುಕ್, ಹೊಸ ತಾರಾಗಣ, ಹೊಸ ನಿರ್ದೇಶಕರ ಅಡಿಯಲ್ಲಿ ಮೂಡಿ ಬರ್ತಾಯಿದೆ ದಂಡುಪಾಳ್ಯ.
ಬೆಂಗಳೂರು (ಜು. 20): ಮತ್ತೆ ಮತ್ತೆ ಸಿನಿಮಾ ಪರದೆ ಮೇಲೆ ದಂಡುಪಾಳ್ಯ ಎನ್ನುವ ಹೆಸರು ಸದ್ದು ಮಾಡುತ್ತಿದೆ. ಹೀಗಾಗಿ ಗಾಂಧಿನಗರದಿಂದ ದಂಡುಪಾಳ್ಯಕ್ಕೆ ಮುಕ್ತಿ ಸಿಕ್ಕಂತೆ ಕಾಣುತ್ತಿಲ್ಲ. ಯಾಕೆಂದರೆ ಮೂರು ಭಾಗಗಳಲ್ಲಿ ಸಿನಿಮಾ ಆದ ದಂಡುಪಾಳ್ಯದ ಕ್ರೈಂ ಕತೆ ನಾಲ್ಕನೇ ಭಾಗವೂ ಸಿನಿಮಾ ಆಗುತ್ತಿದೆ.
ಆದರೆ, ಈ ಬಾರಿ ಚಿತ್ರಕ್ಕೆ ‘ದಂಡುಪಾಳ್ಯಂ 4’ ಎಂದು ಹೆಸರಿಟ್ಟಿದ್ದಾರೆ. ಜತೆಗೆ ನಿರ್ದೇಶಕರೂ ಸಹ ಬದಲಾಗಿದ್ದಾರೆ. ಶ್ರೀನಿವಾಸ ರಾಜು ಬದಲು ಕೆ ಟಿ ನಾಯಕ್ ಇದ್ದಾರೆ. ಪಾತ್ರಧಾರಿಗಳಲ್ಲೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ ಈ ಹಿಂದಿನ ಮೂರು ಪಾರ್ಟುಗಳಿಗಿಂತ ಈ ನಾಲ್ಕೇ ಪಾರ್ಟು ಸಿಕ್ಕಾಪಟ್ಟೆ ಆಸಕ್ತಿಕರವಾಗಿರುತ್ತದೆ ಎಂಬುದು ಚಿತ್ರತಂಡದ ಬಹು ದೊಡ್ಡ ನಂಬಿಕೆ. ಆ ಅದೇ ಭರವಸೆಯಲ್ಲಿ ಇಡೀ ತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂತು.
ವೆಂಕಟ್ ಎಂಬುವವರು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಒಂದಿಷ್ಟು ತೆಲುಗು ಕಲಾವಿದರು ಕೂಡ ಸೇರಿಕೊಂಡಿದ್ದಾರೆ. ಆ ಪೈಕಿ ಮುಮೈತ್ ಖಾನ್, ಬ್ಯಾನರ್ಜಿ, ಸಂಜೀವ್, ಅರುಣ್, ಸೋಮು, ಜೀವ, ವಿಠಲ್, ರಿಚ್ ಶಾಸ್ತ್ರಿ, ಸ್ನೇಹ. ಇವರೊಂದಿಗೆ ಮುಖ್ಯ ಪಾತ್ರದಲ್ಲಿ ನಟಿ ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ.
ಈ ಬಾರಿ ಗ್ಯಾಂಗ್‌ನ ಲೀಡರ್ ಪೂಜಾ ಗಾಂಧಿ ಬದಲು ಸುಮನ್ ರಂಗನಾಥ್ ಮೈದಾನಕ್ಕಿಳಿದಿರುವುದು ವಿಶೇಷ. ಈ ಸರಣಿ ಚಿತ್ರಗಳಿಗೆ ಪದೇ ಪದೇ ಕೇಳಿ ಬರುವ ಪ್ರಶ್ನೆ ಈ ಬಾರಿಯೂ ಪತ್ರಕರ್ತರಿಂದ ಕೇಳಿಬಂತು. ‘ನಿಮ್ಮ ಚಿತ್ರಕ್ಕೆ ದಂಡುಪಾಳ್ಯ ಎನ್ನುವ ಹೆಸರಿಟ್ಟಿದ್ದೀರಲ್ಲ?’ ಎಂಬುದು. ಅದಕ್ಕೆ ನಿರ್ಮಾಪಕರು ಮೈಕ್ ಹಿಡಿದು ಕೊಂಚ ಏರು ದ್ವನಿಯಲ್ಲೇ ಮಾತಿಗೆ ನಿಂತರು. ‘ ಅಲ್ಲಾ ರೀ ಕೆಜಿಎಫ್, ಕೊಳ್ಳೇಗಾಲ ಅಂತೆಲ್ಲಾ ಹೆಸರಿಟ್ಟರೆ ಯಾರೂ ಅಕ್ಷೇಪ ಮಾಡುವುದಿಲ್ಲ. ಆದರೆ, ದಂಡುಪಾಳ್ಯ ಹೆಸರಿಗೆ ಯಾಕೆ ಎಲ್ಲರು ಅಕ್ಷೇಪ ಮಾಡುತ್ತಾರೆ? ಹೀಗಾಗಿ ಈ ಬಾರಿ ನಾನು ಚಿತ್ರದ ಹೆಸರು ಬದಲಾಯಿಸಲ್ಲ. ನೋಡೋಣ’ ಎಂದು ಕಡ್ಡಿ ತುಂಡಾದಂತೆ ಮಾತನಾಡಿದರು.
‘ದಂಡುಪಾಳ್ಯಂ 4 ಹಿಂದಿನ ಭಾಗಗಳಿಗೆ ಮುಂದುವರಿಕೆಯ ಕತೆಯಲ್ಲ. ಹಂತಕರು ನಡೆಸಿದ ಸರಣಿ ಕೊಲೆಗಳಲ್ಲಿ, ಆ ಕ್ರೈಂ ಇತಿಹಾಸದಲ್ಲಿ ನಾವೊಂದು ಭಾಗವನ್ನ ಎತ್ತಿಕೊಂಡು ಸಿನಿಮಾ ಮಾಡಿದ್ದೇವೆ’ ಎಂಬುದು ನಿರ್ದೇಶಕ ಕೆ ಟಿ ನಾಯಕ್ ಹೇಳುವ ವಿವರಣೆ. ನಿರ್ದೇಶಕರ ನಂತರ ಸುಮನ್ ರಂಗನಾಥ್ ಮಾತಿಗೆ ನಿಂತರು. ‘ನನಗೆ ಇದು ಹೊಸ ರೀತಿಯ ಪಾತ್ರ. ದಂಡುಪಾಳ್ಯದ ಯಾವ ಪಾರ್ಟು ನಾನು ನೋಡಿಲ್ಲ. ಆದರೆ, ಕ್ರೈಂ ಕತೆಯ ಸಿನಿಮಾ ಎಂಬುದು ಗೊತ್ತು. ಪಾರ್ಟ್ 4 ರಲ್ಲಿ ನಾವು ಎಂಟು ಜನರ ಗುಂಪು ಸೇರಿಕೊಂಡು ನಡೆಸುವ ರಕ್ತಸಿಕ್ತ ಕತೆಗಳನ್ನು ಇಲ್ಲಿ ಹೇಳಲಾಗಿದೆ. ಹೀಗಾಗಿ ಇದೂ ಕೂಡ ಪಕ್ಕಾ ಕ್ರೈಂ ಕತೆಯ ಸಿನಿಮಾ’ ಎಂದರು.
ಸುಮನ್ ರಂಗನಾಥ್. ಹೊಸ ತಾರಾಗಣ, ಹೊಸ ಕತೆ, ಹೊಸ ವಿಷಯಗಳೊಂದಿಗೆ ಸಿನಿಮಾ ಬರುತ್ತಿದೆ. ನೋಡಿ ಎಂಬುದು ನಿರ್ಮಾಪಕರ ಮನವಿ. ಅಂದಹಾಗೆ ತೆಲುಗಿನಿಂದ ಬಂದಿರುವ ಮುಮೈತ್ ಖಾನ್, ಇಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ.