ಬಾಲಿವುಡ್‌ನಲ್ಲಿ ಕೋಮುತಾರತಮ್ಯ- 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ : ರೆಹಮಾನ್‌

Kannadaprabha News   | Kannada Prabha
Published : Jan 18, 2026, 05:31 AM IST
AR Rahman

ಸಾರಾಂಶ

‘ಬಾಲಿವುಡ್‌ನಲ್ಲಿ ಕಳೆದ 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಅಧಿಕಾರದ ಬದಲಾವಣೆ ಆಗಿದೆ. ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಇದು ಕೋಮು ಮನಃಸ್ಥಿತಿಯೂ ಆಗಿರಬಹುದು’ ಎಂದು ಎ.ಆರ್.ರೆಹಮಾನ್ ಹೇಳಿದ್ದಾರೆ.

ಮುಂಬೈ: ‘ಬಾಲಿವುಡ್‌ನಲ್ಲಿ ಕಳೆದ 8 ವರ್ಷಗಳಿಂದ ನನಗೆ ಅವಕಾಶ ಸಿಗುತ್ತಿಲ್ಲ. ಇತ್ತೀಚೆಗೆ ಬಾಲಿವುಡ್‌ನಲ್ಲಿ ಅಧಿಕಾರದ ಬದಲಾವಣೆ ಆಗಿದೆ. ಸೃಜನಶೀಲತೆ ಇಲ್ಲದವರು ಈಗ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಇದು ಕೋಮು ಮನಃಸ್ಥಿತಿಯೂ ಆಗಿರಬಹುದು’ ಎಂದು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಹೇಳಿದ್ದಾರೆ. ಅವರ ಈ ಹೇಳಿಕೆ ಬಾಲಿವುಡ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸುವ ಜೊತೆಗೆ ವಿವಾದಕ್ಕೂ ಕಾರಣವಾಗಿದೆ. ನಟಿ ಕಂಗನಾ ರಾಣಾವತ್, ಗೀತರಚನೆಕಾರ ಜಾವೇದ್‌ ಅಖ್ತರ್‌, ಹಿನ್ನೆಲೆ ಗಾಯಕ ಶಾನ್, ಲೇಖಕಿ ಶೋಭಾ ಡೇ ಸೇರಿದಂತೆ ಬಾಲಿವುಡ್‌ನ ಹಲವು ದಿಗ್ಗಜರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಬಿಸಿ ಏಷ್ಯಾ ನೆಟ್‌ವರ್ಕ್‌ಗೆ ಸಂದರ್ಶನ ನೀಡಿದ ರೆಹಮಾನ್, ‘1990ರ ದಶಕದ ಆರಂಭದಲ್ಲಿ ನಾನು ಬಾಲಿವುಡ್‌ಗೆ ಕಾಲಿಟ್ಟಾಗ ನನ್ನನ್ನು ಅಲ್ಲಿ ಮಹಾರಾಷ್ಟ್ರದ ಹೊರಗಿನ ವ್ಯಕ್ತಿ ಎಂಬ ಪೂರ್ವಾಗ್ರಹದಿಂದೇನೂ ನೋಡಿರಲಿಲ್ಲ. ಆದರೆ ಕಳೆದ 8 ವರ್ಷಗಳಲ್ಲಿ, ಬಾಲಿವುಡ್‌ನಲ್ಲಿ ಅಧಿಕಾರ ಬದಲಾವಣೆ ಸಂಭವಿಸಿದೆ. ಸೃಜನಶೀಲತೆಯಿಲ್ಲದ ಜನರು ಈಗ ಎಲ್ಲವನ್ನೂ ನಿರ್ಧರಿಸುವ ಶಕ್ತಿ ಹೊಂದಿದ್ದಾರೆ. ಇದು ಕೋಮುವಾದದ ವಿಷಯವೂ ಆಗಿರಬಹುದು. ಆದರೆ ನಾನು ಕೆಲಸ ಹುಡುಕುತ್ತಾ ಹೋಗುವುದಿಲ್ಲ. ಕೆಲಸ ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ’ ಎಂದಿದ್ದಾರೆ. ಈ ಮೂಲಕ ಧರ್ಮದ ಕಾರಣಕ್ಕೆ ತಮ್ಮನ್ನು ಬಾಲಿವುಡ್ ಚಿತ್ರರಂಗದಿಂದ ದೂರ ಇಡಲಾಗಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಛಾವಾ ವಿಭಜಕ ಚಿತ್ರ:

ಇದೇ ವೇಳೆ, ವಿಕ್ಕಿ ಕೌಶಲ್ ನಟನೆಯ ಜನಪ್ರಿಯ ಚಿತ್ರ ಛಾವಾ ಕುರಿತು ಪ್ರತಿಕ್ರಿಯಿಸಿದ ರೆಹಮಾನ್, ‘ಛಾವಾ ಒಂದು ವಿಭಜಕ ಚಿತ್ರ. ಇದು ಜನರಲ್ಲಿ ವಿಭಜನೆ ತಂದು ಲಾಭ ಪಡೆದುಕೊಂಡಿತು. ಆದರೆ ಇದರ ಮೂಲ ಉದ್ದೇಶ ಶೌರ್ಯವನ್ನು ತೋರಿಸುವುದಾಗಿರಬಹುದು. ಇದು 2025ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿತ್ತು. ಆದರೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೋಮು ಅಶಾಂತಿಗೂ ಕಾರಣವಾಯಿತು’ ಎಂದಿದ್ದಾರೆ.

ನಾನು ದಕ್ಷಿಣದ ಸಾಧಕರಲ್ಲಿ ಮೊದಲಿಗ:

‘ಮುಖ್ಯವಾಹಿನಿಯ ಹಿಂದಿ ಚಿತ್ರರಂಗದಲ್ಲಿ ಯಶಸ್ವಿಯಾಗಿ ನೆಲೆಗೊಂಡ ದಕ್ಷಿಣ ಭಾರತದ ಮೊದಲ ಸಂಗೀತ ಸಂಯೋಜಕರಲ್ಲಿ ನಾನೂ ಒಬ್ಬ. ಇದು ಸಂಪೂರ್ಣ ಹೊಸ ಸಂಸ್ಕೃತಿ. ಅಲ್ಲಿಯವರೆಗೆ ಬೇರೆ ಯಾವುದೇ ದಕ್ಷಿಣ ಭಾರತೀಯ ಸಂಗೀತ ಸಂಯೋಜಕರಿರಲಿಲ್ಲ. ಇಳಯರಾಜ ಈ ಹಿಂದೆ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದರು, ಆದರೆ ಆ ಯೋಜನೆಗಳು ಮುಖ್ಯವಾಹಿನಿಯ ಭಾಗವಾಗಿರಲಿಲ್ಲ’ ಎಂದಿದ್ದಾರೆ.

ಹೇಳಿಕೆಗೆ ವಿರೋಧ:

ರೆಹಮಾನ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ನಟಿ ಕಂಗನಾ ರಾಣಾವತ್‌, ‘ನಾನು ಕೇಸರಿ ಪಕ್ಷವನ್ನು ಬೆಂಬಲಿಸುವುದರಿಂದ ಚಿತ್ರರಂಗದಲ್ಲಿ ತುಂಬಾ ಪೂರ್ವಾಗ್ರಹ ಮತ್ತು ಪಕ್ಷಪಾತವನ್ನು ಎದುರಿಸುತ್ತಿದ್ದೇನೆ. ಆದರೂ ನಿಮ್ಮಷ್ಟು ಪೂರ್ವಾಗ್ರಹಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ’ ಎಂದಿದ್ದಾರೆ.

ಖ್ಯಾತ ಹಿನ್ನೆಲೆ ಗಾಯಕ ಶಾನ್‌, ‘ಸಂಗೀತ ಕ್ಷೇತ್ರದಲ್ಲಿ ಕೋಮು ದೃಷ್ಟಿಕೋನಗಳಿಲ್ಲ. ಹಾಗಿದ್ದಿದ್ದರೆ, ಕಳೆದ 30 ವರ್ಷಗಳಲ್ಲಿ ನಮ್ಮ ಮೂವರು ಸೂಪರ್‌ಸ್ಟಾರ್‌ಗಳು (ಶಾರುಖ್, ಸಲ್ಮಾನ್, ಅಮೀರ್‌ ಖಾನ್‌) ಬೆಳೆಯುತ್ತಲೇ ಇರುತ್ತಿರಲಿಲ್ಲ’ ಎಂದಿದ್ದಾರೆ.

ಸಾಹಿತಿ, ಅಂಕಣಕಾರ್ತಿ ಶೋಭಾ ಡೇ ಪ್ರತಿಕ್ರಿಯಿಸಿ, ‘ಇದು ತುಂಬಾ ಅಪಾಯಕಾರಿ ಹೇಳಿಕೆ. ಕೋಮುವಾದದಿಂದ ಮುಕ್ತವಾದ ಯಾವುದೇ ಸ್ಥಳವಿದ್ದರೆ ಅದು ಬಾಲಿವುಡ್‌. ನಿಮ್ಮಲ್ಲಿ ಪ್ರತಿಭೆಯಿದ್ದರೆ, ಇಲ್ಲಿ ಅವಕಾಶ ಸಿಗುತ್ತದೆ. ಪ್ರತಿಭೆ ಇಲ್ಲದಿದ್ದರೆ ಇಲ್ಲ’ ಎಂದಿದ್ದಾರೆ.

ರೆಹಮಾನ್‌ ವಿವಾದ

- ಕಳೆದ 8 ವರ್ಷಗಳಿಂದ ಬಾಲಿವುಡ್‌ನ ಅಧಿಕಾರದಲ್ಲಿ ಬದಲಾವಣೆಯಾಗಿದೆ

- ಸೃಜನಶೀಲತೆ ಇಲ್ಲದವರು ಎಲ್ಲವನ್ನೂ ನಿರ್ಣಯಿಸ್ತಾರೆ. ಅವಕಾಶ ಸಿಗುತ್ತಿಲ್ಲ

- ಇದಕ್ಕೆ ಕೋಮು ಮನಸ್ಥಿತಿಯೂ ಕಾರಣವಾಗಿರಬಹುದು: ಸಂಗೀತ ನಿರ್ದೇಶಕ

- ಆ ರೀತಿ ಇದ್ದರೆ ಶಾರುಖ್‌, ಸಲ್ಮಾನ್‌, ಅಮೀರ್‌ ಬೆಳೆಯುತ್ತಿರಲಿಲ್ಲ: ಗಾಯಕ ಶಾನ್‌

- ಇದು ತುಂಬಾ ಅಪಾಯಕಾರಿ ಹೇಳಿಕೆ, ಬಾಲಿವುಡ್‌ ಕೋಮುವಾದ ಮುಕ್ತ: ಶೋಭಾ ಡೇ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ನಿಮ್ಮಂತಹ ದ್ವೇಷಿಯನ್ನು ನಾನು ನೋಡಿಲ್ಲ': ಧಾರ್ಮಿಕ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದ ಎಆರ್ ರೆಹಮಾನ್ ವಿರುದ್ಧ ಕಂಗನಾ ಕಿಡಿ!
ಸೈಬರ್ ಕಿಡಿಗೇಡಿಗಳ ವಿರುದ್ಧ ನಟಿ ಅನಸೂಯಾ ಭಾರದ್ವಾಜ್ ಯುದ್ಧ: 42 ಜನರ ವಿರುದ್ಧ ಎಫ್‌ಐಆರ್ ದಾಖಲು!