ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ ನಟಿ ನಗ್ಮಾ ಅವರು ತಕ್ಷಣವೇ ಕರೆ ಸ್ವೀಕರಿಸಿದರು. ತಾನು ಬ್ಯಾಂಕ್‌ನ ವ್ಯಕ್ತಿ ಎಂದು ಹೇಳಿಕೊಂಡು ವಿವರಗಳನ್ನು ಆತ ಸಂಗ್ರಹಿಸಿದ್ದಾನೆ.
ಮುಂಬೈ (ಮಾ.9): ಬಾಲಿವುಡ್ ನಟಿ ಹಾಗೂ ರಾಜಕಾರಣಿ, ಕನ್ನಡದಲ್ಲಿ ಕುರುಬನ ರಾಣಿ ಚಿತ್ರದಲ್ಲಿ ನಟಿಸಿದ್ದ ನಟಿ ನಗ್ಮಾ ಮೊರಾರ್ಜಿಗೆ ಸೈಬಲ್ ವಂಚನೆ ಆಗಿದೆ. ಕೆವೈಸಿ ವಂಚನೆಯಿಂದಾಗಿ ಅವರು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ತಮ್ಮ ಮೊಬೈಲ್‌ಗೆ ಬಂದ ಸ್ಪಾಮ್ ಲಿಂಕ್‌ನ ಮೇಲೆ ಕ್ಲಿಕ್ ಮಾಡಿದ್ದರಿಂದ 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ವರದಿಯ ಪ್ರಕಾರ, ಫೆಬ್ರವರಿ 28 ರಂದು ನಟಿ ನಗ್ಮಾ 99,998 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್‌ಗಳು ಕಳಿಸುವಂಥದ್ದೇ ನಂಬರ್‌ನಿಂದ ನಗ್ಮಾ ಅವರು ಸಂದೇಶವನ್ನು ಸ್ವೀಕರಿಸಿದ್ದರು. ಅದಲ್ಲದೆ, ಇದು ಯಾವುದೇ ಪ್ರೈವೇಟ್ ನಂಬರ್ ಕೂಡ ಆಗಿರಲಿಲ್ಲ ಎಂದು ನಗ್ಮಾ ಹೇಳಿದ್ದಾರೆ. ಬ್ಯಾಂಕ್ ಖಾತೆ ವಂಚನೆಯ ಮೂಲಕ ಕೆಲವೇ ದಿನಗಳಲ್ಲಿ ಹಲವಾರು ಲಕ್ಷ ರೂಪಾಯಿಗಳನ್ನು ವಂಚಿಸಿದ ಇತರ 80 ಸಂತ್ರಸ್ತರಲ್ಲಿ ನಗ್ಮಾ ಕೂಡ ಸೇರಿದ್ದಾರೆ. ಈ ಎಲ್ಲಾ ವ್ಯಕ್ತಿಗಳು ಒಂದೇ ಖಾಸಗಿ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವವರಾಗಿದ್ದಾರೆ. ಅಲ್ಲದೆ, ನಟಿ ನಗ್ಮಾ, ಸೈಬರ್ ಮೋಸದ ಮಾಹಿತಿಯನ್ನೂ ಕೂಡ ಹಂವಿಕೊಂಡಿದ್ದಾರೆ.
ನನ್ನ ಮೊಬೈಲ್‌ಗೆ ಬಂದ ಲಿಂಕ್‌ಅನ್ನು ನಾನು ಕ್ಲಿಕ್ ಮಾಡಿದ್ದಾಗಿ 48 ವರ್ಷದ ನಟಿ ಹೇಳಿಕೊಂಡಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ಬೆನ್ನಲ್ಲಿಯೇ ಅವರಿಗೆ ಬ್ಯಾಂಕ್‌ನಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಕೆವೈಸಿ ಅಪ್‌ಡೇಟ್ ಮಾಡಲು ಹಾಗೂ ಯಶಸ್ವಿಯಾಗಿ ಪೂರ್ತಿ ಮಾಡಲು ಮಾರ್ಗದರ್ಶನ ಮಾಡುವುದಾಗಿ ಆತ ಹೇಳಿದ್ದ. ನನ್ನ ಫೋನ್‌ನ ರಿಮೋಟ್ ಆಕ್ಸೆಸ್ ಕೂಡ ಆತ ತೆಗೆದುಕೊಂಡಿದ್ದ. ಆದರೂ, ಲಿಂಕ್‌ನಲ್ಲಿ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ ಎಂದು ನಗ್ಮಾ ಸ್ಪಷ್ಟಪಡಿಸಿದರು. "ವಂಚಕ ನನ್ನ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿದ ನಂತರ ಫಲಾನುಭವಿ ಖಾತೆಯನ್ನು ರಚಿಸದ್ದ. ಆ ಬಳಿಕ ರಾಷ್ಟ್ರೀಕೃತ ಬ್ಯಾಂಕ್‌ಗೆ ರೂ 1 ಲಕ್ಷವನ್ನು ವರ್ಗಾವಣೆ ಮಾಡಿದ್ದ. ನಾನು ಇದಕ್ಕಾಗಿ ಸಾಕಷ್ಟು ಒಟಿಪಿ ಕೂಡ ಸ್ವೀಕರಿಸಿದ್ದೇನೆ. ಆತ ಕನಿಷ್ಠ 20 ಪ್ರಯತ್ನಗಳನ್ನು ಮಾಡಿದ್ದಾನೆ ಎಂದು ತೋರಿಸಿದೆ. ಅದೃಷ್ಟವಶಾತ್, ನಾನು ದೊಡ್ಡ ಮೊತ್ತವನ್ನು ಕಳೆದುಕೊಳ್ಳಲಿಲ್ಲ," ಎಂದು ಅವರು ಹೇಳಿದ್ದಾರೆ.
ಎಚ್ಚರಿಕೆ ನೀಡಿದ ಮುಂಬೈ ಸೈಬರ್ ಪೊಲೀಸ್: ಇಂತಹ ಸಂದೇಶಗಳಿಗೆ ಬಲಿಯಾಗಬೇಡಿ ಎಂದು ಮುಂಬೈ ಸೈಬರ್ ಪೊಲೀಸರು ನಗರದ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಮುಂಬೈ ಪೊಲೀಸರ ಅಪರಾಧ ವಿಭಾಗದ ಸೈಬರ್ ಕ್ರೈಮ್ ಸೆಲ್ ಪ್ರಕಾರ, ಆನ್‌ಲೈನ್ ವಂಚನೆಗಳ ಸಾಮಾನ್ಯ ರೂಪವು ಬ್ಯಾಂಕ್‌ಗಳು, ಆನ್‌ಲೈನ್ ವಾಣಿಜ್ಯ ವೇದಿಕೆಗಳಿಗೆ ಸಂಬಂಧಿಸಿದೆ, ಅಲ್ಲಿ ವಂಚಕರು, ಬ್ಯಾಂಕ್/ಪ್ಲಾಟ್‌ಫಾರ್ಮ್ ಅಧಿಕಾರಿಗಳಂತೆ ನಟಿಸುತ್ತಾರೆ, ಒಟಿಪಿ, ಕೆವೈಸಿ ನವೀಕರಣಗಳನ್ನು ಹಂಚಿಕೊಳ್ಳಲು ವ್ಯಕ್ತಿಗೆ ಮನವರಿಕೆ ಮಾಡುತ್ತಾರೆ ಮತ್ತು ಕೆಲವೊಮ್ಮೆ ಲಿಂಕ್ ಕಳುಹಿಸುತ್ತಾರೆ. ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಲಿಂಕ್‌ಗಳನ್ನು ಕ್ಲಿಕ್ ಮಾಡಬೇಕು ಎನ್ನುತ್ತಾರೆ ಎಂದು ಹೇಳಿದ್ದಾರೆ.
ಅರಿವಿನ ಕೊರತೆಯಿಂದ ಸೈಬರ್ ಅಪರಾಧ ಹೆಚ್ಚಳ
"ಯಾವುದೇ ಬ್ಯಾಂಕ್ ಅಥವಾ ಸಂಸ್ಥೆಯು ಬ್ಯಾಂಕ್ ವಿವರಗಳು ಅಥವಾ ಪಿನ್ ಸಂಖ್ಯೆಗಳನ್ನು ಕೇಳುವ ಅಧಿಕಾರ ಹೊಂದಿಲ್ಲ ಅನ್ನೋದನ್ನು ಜನರು ತಿಳಿದುಕೊಂಡಿರಬೇಕು. ದುರದೃಷ್ಟವಶಾತ್, ವಿದ್ಯಾವಂತರು ಆನ್‌ಲೈನ್ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ ಮತ್ತು ಲಕ್ಷಗಟ್ಟಲೆ ರೂಪಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ" ಎಂದು ಡಿಸಿಪಿ ಸೈಬರ್ ಕ್ರೈಮ್, ಬಾಲ್ಸಿಂಗ್ ರಜಪೂತ್ ತಿಳಿಸಿದ್ದಾರೆ.
Cyber Fraud: ಸೈಬರ್ ವಂಚಕರಿಗೆ ಸಿಮ್ ಮಾರುತ್ತಿದ್ದವರ ಬಂಧನ
ನಗ್ಮಾ ಕುರಿತು: ನಗ್ಮಾ 1990 ರಲ್ಲಿ ಸಲ್ಮಾನ್ ಖಾನ್ ಅಭಿನಯದ ಆಕ್ಷನ್ ಚಿತ್ರ ಬಾಘಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಕಿಂಗ್ ಅಂಕಲ್, ಸುಹಾಗ್, ಯಲ್ಗಾರ್, ಲಾಲ್ ಬಾದ್‌ಶಾ, ಚಲ್ ಮೇರೆ ಭಾಯ್, ಕುನ್ವಾರಾ, ಅಬ್ ತುಮ್ಹಾರೆ ಹವಾಲೆ ವತನ್ ಸಾಥಿಯೋ ಮತ್ತು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಅಲ್ಲದೆ, ತೆಲುಗು, ತಮಿಳು, ಭೋಜ್‌ಪುರಿ, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2004ರಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಆಂಧ್ರಪ್ರದೇಶದಲ್ಲಿ ಪ್ರಚಾರ ಕಾರ್ಯ ಮಾಡಿದ್ದರು. ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಮೀರತ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರು 2015 ರಲ್ಲಿ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.