
ನಾಳೆಯಿಂದಲೇ ಎರಡು ದಿವಸ ಟೂರ್ ಹೋಗುತ್ತಿದ್ದೇವೆ. ದೇವಾಲಯಗಳ ಸುತ್ತಾಟ, ಪೂಜೆ ಇತ್ಯಾದಿ.ಒಂದಷ್ಟು ದಿನಗಳ ಹಿಂದೆಯೇ ಹಾಗೆ ಯೋಜನೆ ಸಿದ್ಧವಾಗಿತ್ತು. ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ಹಬ್ಬದ ನೆಪ. ಟೂರ್ ಮುಗಿಸಿಕೊಂಡು ಬಂದ ಮೇಲೆ ಹಬ್ಬದ ಆಚರಣೆ.ಗಂಡನ ಮನೆಯಲ್ಲಿ ಹಬ್ಬದ ಆಚರಣೆ ಹೇಗಿರುತ್ತೆ ಅನ್ನೋದು ನನಗೂ ಕುತೂಹಲ ಇದೆ. ಜತೆಗೆ ಚಿರು ಇಷ್ಟು ದಿವಸ ಬ್ಯಾಚುಲರ್ ಆಗಿ ಹಬ್ಬ ಆಚರಿಸುತ್ತಿದ್ದರು. ಈ ಬಾರಿ ಮದುವೆ ಆಗಿ ನನ್ನೊಟ್ಟಿಗೆ ಹಬ್ಬ ಆಚರಿಸುತ್ತಿದ್ದಾರೆ.
ಉಡುಗೆ-ತೊಡುಗೆ ಜತೆಗೆ ಅಡುಗೆ ಹಬ್ಬಕ್ಕೆ ವಿಶೇಷ. ನಾನು ಸಣ್ಣವಳಿದ್ದಾಗಿನಿಂದಲೂ ಹಬ್ಬಕ್ಕೆ ಹೊಸ ಬಟ್ಟೆ ತೊಡುವುದು, ಶೃಂಗಾರ ಮಾಡಿಕೊಳ್ಳುವುದು ನನಗಿಷ್ಟ. ಅದು ಈಗಲೂ ಇದ್ದೇ ಇರುತ್ತದೆ. ಹಬ್ಬಕ್ಕೆ ಅಂತಲೇ ಇಬ್ಬರೂ ಹೊಸ ಬಟ್ಟೆ ಖರೀದಿಸಿದ್ದೇವೆ. ನಮಗೇನು ಇಷ್ಟವೋ ಆ ರೀತಿಯ ಬಟ್ಟೆಗಳನ್ನೇ ನಾವಿಬ್ಬರು ಸೆಲೆಕ್ಟ್ ಮಾಡಿಕೊಂಡಿದ್ದೇವೆ. ಆ ಬಟ್ಟೆಗಳೊಂದಿಗೆ ಹಬ್ಬದ ಸಂಭ್ರಮ.
ದೀಪಾವಳಿ ನನಗಿಷ್ಟವಾಗುವುದು ದೀಪ ಹಚ್ಚುವ ಕಾರಣಕ್ಕೆ. ಅಮ್ಮನ ಮನೆಯಲ್ಲಿದ್ದಾಗ ದೀಪಾವಳಿ ಬಂದ್ರೆ ಸಾಕು ಹಣತೆಗಳನ್ನು ಖರೀದಿಸಿ ತರುತ್ತಿದ್ದೆ. ಹಬ್ಬದ ಸಂಜೆ ಮನೆಯ ಟೆರೇಸ್ ಮೇಲೆ ನೂರಾರು ಹಣತೆಗಳನ್ನು ಹಚ್ಚಿ, ಆ ಬೆಳಕಲ್ಲಿ ಹಬ್ಬದ ಸಂಭ್ರಮ ಸವಿ ಅನುಭವಿಸುವುದೇ ಒಂದು ಅದ್ಭುತ ಅನುಭವದಂತಿರುತ್ತಿತ್ತು. ಅಮ್ಮ, ಅಪ್ಪ ಇಬ್ಬರು ನನಗೆ ಸಾಥ್ ನೀಡುತ್ತಿದ್ದರು. ಈ ಬಾರಿ ಗಂಡನ ಮನೆಯಲ್ಲಿ ಬೆಳಕಿನ ಹಬ್ಬದ ಆಚರಣೆ. ಅದಕ್ಕೂ ಸಿದ್ಧತೆ ಮಾಡಿಕೊಂಡಿದ್ದೇನೆ. ಹಬ್ಬಕ್ಕೆ ಅಡುಗೆಯೂ ಸ್ಪೆಷಲ್. ಹಬ್ಬಕ್ಕೆ ಅಮ್ಮ ಮಾಡುತ್ತಿದ್ದ ರುಚಿ ರುಚಿಯಾದ ಭೋಜನ ಸವಿಯುವುದು ನೆಮ್ಮದಿಯಾಗಿ ಓಡಾಡಿಕೊಂಡಿರುತ್ತಿದ್ದೆ. ಈಗ ನನ್ನಿಷ್ಟದ ಜತೆಗೆ ಚಿರುಗೆ ಏನಿಷ್ಟ ಅಂತಲೂ ಗಮನ ಕೊಡಬೇಕಿದೆ. ಸ್ವೀಟ್ ಅಂದ್ರೆ ಚಿರುಗೆ ತುಂಬಾ ಇಷ್ಟ. ಅದು ಕೂಡ ಈ ಹಬ್ಬದ ಸ್ಪೆಷಲ್.
ದೀಪಾವಳಿಗೆ ಪಟಾಕಿ ಹೊಡೆಯುವ ಅಭ್ಯಾಸ ನನಗಿಲ್ಲ. ಸಣ್ಣವಳಿದ್ದಾಗ ಪಟಾಕಿ ಹೊಡೆಯುವುತ್ತಿದ್ದೆ. ಆದರೆ ಅದರ ಪರಿಣಾಮಗಳು ಗೊತ್ತಾದ ನಂತರ ಪಟಾಕಿ ಸಿಡಿಸುವುದರಿಂದ ನಾನೀಗ ಬಹುದೂರ. ಶಾಸ್ತ್ರಕ್ಕೆ ಅಂತ ಸುರ್ ಸುರ್‌ಬತ್ತಿ ಸಿಡಿಸುವುದು ಬಿಟ್ಟರೆ, ಪಟಾಕಿ ಸಿಡಿಸಿ, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯ ಮಾಡುವುದು ನನ್ನಿಂದಾಗದು. ತುಂಬಾ ಎಕ್ಸೈಟ್ ಆಗಿದ್ದೇನೆ. ಹೇಗಿರುತ್ತೆ ಅಂತ ಕುತೂಹಲದಿಂದ ಇದ್ದೇನೆ. ಹಬ್ಬದ ಆಚರಣೆ ಮಾಮೂಲು ಎನ್ನುವುದು ನಿಜ, ಆದ್ರೆ ಮದುವೆ ನಂತರದ ಮೊದಲ ದೀಪಾವಳಿ ಎನ್ನುವುದು ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.