ಅಮ್ಮಚ್ಚಿಯೆಂಬ ನೆನಪು : ಅಜ್ಜಿ ಪಾತ್ರಕ್ಕೆ ಭಾರೀ ಮೆಚ್ಚುಗೆ

By Kannadaprabha NewsFirst Published Nov 5, 2018, 10:28 AM IST
Highlights

‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ನೋಡಿದ್ದರೆ ಅದರಲ್ಲಿ ಬರುವ ಹಣ್ಣು ಹಣ್ಣು ಮುದುಕಿ, ಅಮ್ಮಚ್ಚಿಯನ್ನು ಸಾಕಿ ಬೆಳೆಸಿದ ವಿಧವೆ ಪುಟ್ಟಮ್ಮತ್ತೆಯ ಪಾತ್ರ ಗಮನಸೆಳೆಯದೇ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಕುಂದಾಪುರ ಸಮೀಪದ ಹಳ್ಳಿಯ
ಪರಿಚಯವಿದ್ದವರಿಗೆ ಪುಟ್ಟಮ್ಮತ್ತೆ ತಮ್ಮ ಬಾಲ್ಯದ ಅಜ್ಜಿ ಯರನ್ನು ನೆನಪಿಸುವುದು ನಿಶ್ಚಿತ.

ಆ ಪಾತ್ರ ಸಮರ್ಥವಾಗಿ ನಿರ್ವಹಿಸಿದವರು ಡಾ. ರಾಧಾಕೃಷ್ಣ ಉರಾಳ. ಅವರ ಪುಟ್ಟಮ್ಮತ್ತೆಯ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಉರಾಳರ ನಟನೆ ನೋಡಿ ಅದೆಷ್ಟೋ ಮಂದಿ ಕಣ್ಣೀರು ಹಾಕಿದ್ದಾರೆ.

ಇವರು ಮೂಲತಃ ಯಕ್ಷಗಾನ ಹಾಗೂ ರಂಗಭೂಮಿ ಪ್ರತಿಭೆ. ಯಕ್ಷಗಾನದಲ್ಲಿ ಗಂಡು ಸ್ತ್ರೀ ಪಾತ್ರ ನಿರ್ವಹಿಸುವುದು ಸಾಮಾನ್ಯ. ರಂಗಭೂಮಿಯಲ್ಲೂ ವಿರಳವಾಗಿ ಈ ಬಗೆಯ ಪ್ರಯೋಗ ನಡೆಯುತ್ತದೆ. ಆದರೆ ಸಿನಿಮಾದಲ್ಲಿ ಕಳೆದ ಕೆಲವು ದಶಕಗಳಿಂದ ಗಂಡೊಬ್ಬ ಹೆಣ್ಣು ಪಾತ್ರ ನಿರ್ವಹಿಸಿದ್ದನ್ನು ಕಂಡವರಿಲ್ಲ. ಆ ಪ್ರಯತ್ನವನ್ನು ಉರಾಳರು ಮಾಡಿದ್ದಾರೆ, ತಾನು ಗಂಡೆಂಬ ಹಿಂಟ್ ಅನ್ನು ಎಲ್ಲೂ ಕೊಡದ ಹಾಗೆ!

ಇದೆಲ್ಲ ಹೇಗಾಯ್ತು ಅಂತ ಪ್ರಶ್ನಿಸಿದರೆ ಉರಾಳ ಅವರು ಬೊಟ್ಟು ಮಾಡುವುದು ಸಿನಿಮಾ ನಿರ್ದೇಶಕಿ ಚಂಪಾ ಶೆಟ್ಟಿ ಅವರತ್ತ. ಚಂಪಾಶೆಟ್ಟಿ ಅಮ್ಮಚ್ಚಿ ಸಿನಿಮಾ ಮಾಡುವ ಮೊದಲು ಇದೇ ಕಥೆಯನ್ನಿಟ್ಟು ‘ಅಕ್ಕು’ ಎಂಬ ನಾಟಕ ಮಾಡಿದ್ದರು. ಅದರಲ್ಲೂ ‘ಪುಟ್ಟಮ್ಮತ್ತೆ’ ಪಾತ್ರ ನಿರ್ವಹಿಸಿದ್ದು ಉರಾಳರೇ. ಆದರೆ ಸಿನಿಮಾ ಮಾಧ್ಯಮಕ್ಕೆ ಇದು ಸರಿಹೊಂದುತ್ತಾ ಎಂಬ ಪ್ರಶ್ನೆ ಇವರಲ್ಲಿತ್ತು. ಆದರೆ ನಿರ್ದೇಶಕಿಗೆ ಇವರ ಪ್ರತಿಭೆಯ ಪರಿಚಯವಿದ್ದ ಕಾರಣ ಸಣ್ಣ ಹಿಂಜರಿಕೆಯೂ ಇರಲಿಲ್ಲ. ಹಾಗಾಗಿ ಉರಾಳರು ಪುಟ್ಟಮ್ಮತ್ತೆಯೊಳಗೆ ಪರಕಾಯ ಪ್ರವೇಶ ಮಾಡುವುದು ಸಾಧ್ಯವಾಯಿತು. 

‘ನಾನು ಕುಂದಾಪುರ ಪರಿಸರದವನು. ಪುಟ್ಟಮ್ಮತ್ತೆಯಂಥ, ಅಕ್ಕುವಿನಂಥ ಪಾತ್ರಗಳನ್ನು ನಿಜ ಜೀವನದಲ್ಲಿ ಕಂಡವನು. ಎಲ್ಲಕ್ಕಿಂತ ಮುಖ್ಯವಾಗಿ ನಾನು ಅಮ್ಮನಿಗಿಂತ ಹೆಚ್ಚಾಗಿ ಅಜ್ಜಿಯನ್ನು ಹಚ್ಚಿಕೊಂಡಿದ್ದೆ. ನನಗೆ ಪುಟ್ಟಮ್ಮತ್ತೆ ಪಾತ್ರ ಮಾಡುವಾಗ ಅವಳ ಪ್ರೀತಿ, ಮಮತೆಯೇ ಮನಸ್ಸಿನಲ್ಲಿತ್ತು. ಹಾಗಾಗಿ ಪುಟ್ಟಮ್ಮತ್ತೆ ಪಾತ್ರವನ್ನು ಆವಾಹಿಸಿಕೊಳ್ಳುವುದು ಕಷ್ಟವಾಗಲಿಲ್ಲ’ ಎನ್ನುತ್ತಾ ಪಾತ್ರದ ಬಗ್ಗೆ ವಿವರಿಸುತ್ತಾರೆ ಉರಾಳ. 

 

 

click me!