
ಬೆಂಗಳೂರು: ಅತ್ಯಂತ ಕಡಿಮೆ ಬಜೆಟ್ನಲ್ಲಿ, ಯಾವುದೇ ಧೂಮ್ ಧಾಮ್ ಇಲ್ಲದೇ, ಯಾವುದೇ ಸ್ಟಾರ್ ನಟ-ನಟಿಯರನ್ನು ಹಾಕಿಕೊಳ್ಳದೇ, ಪ್ರಚಾರಕ್ಕೆಂದೇ ಕೋಟಿ ಕೋಟಿ ಹಣ ಸುರಿಯದೇ, ಲಾಂಗು, ಮಚ್ಚು, ರಕ್ತಪಾತ, ಅತಿಯಾದ ಅಶ್ಲೀಲತೆ ಯಾವುದೂ ಇಲ್ಲದೇ ಚಿತ್ರವೊಂದು ಗೆಲ್ಲಬಹುದು ಎಂದು ತೋರಿಸಿಕೊಟ್ಟಿರುವ ಸ್ಯಾಂಡಲ್‌ವುಡ್‌ನ ಬೆರಳೆಣಿಕೆ ಚಿತ್ರಗಳಲ್ಲಿ ಒಂದು ರಾಜ್ ಬಿ.ಶೆಟ್ಟಿ ನಿರ್ದೇಶನದ ಹಾಗೂ ಅವರೇ ನಟಿಸಿದ್ದ ಸು ಫ್ರಮ್ ಸೋ (Su From So). ಈ ಸಿನಿಮಾದ ಮೂಲಕ ನಟನ ಲಕ್ ಖುಲಾಯಿಸಿದೆ. ಸು ಫ್ರಮ್ ಸೋ ಸಿನಿಮಾ ನೂರು ಕೋಟಿ ಕ್ಲಬ್ ಸೇರ್ತಿದಂತೆ , ರಿಲೀಸ್ ರೆಡಿ ಇರುವ ರಾಜ್ ಬಿ. ಶೆಟ್ಟಿ ಅಭಿನಯದ ಚಿತ್ರಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ಈಗ ಇತಿಹಾಸ. ಭರ್ಜರಿ ಮೊತ್ತಕ್ಕೆ ರಾಜ್ ಬಿ ಶೆಟ್ಟಿಯ ರಕ್ಕಸ ಪುರದೋಳ್ (rakkasa puradol )ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿರುವುದೂ ಕೂಡ ದಾಖಲೆ ಪುಟ ಸೇರಿದೆ. ಇದರ ನಡುವೆಯೇ, ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಜೊತೆ ರಾಜ್ ಬಿ ಶೆಟ್ಟಿ ಅಭಿನಯದ ಪಾಕೆಟ್ ನಾವೆಲ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ನಿರ್ದೇಶಕ ತ್ಯಾಗರಾಜನ್ ಕುಮಾರರಾಜಾ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಜನವರಿ 14ರಂದು ತೆರೆಗೆ ಅಪ್ಪಳಿಸಲಿದೆ. ರಾಜ್ ಬಿ ಶೆಟ್ಟಿ ಬಹುಭಾಷ ನಟನಾಗಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದ್ದಾರೆ.
ಹೀಗೆ ಸೀದಾ ಸಾದಾ ಕಥೆ ಇಟ್ಟುಕೊಂಡು ಕಡಿಮೆ ಬಜೆಟ್ ಚಿತ್ರಗಳ ಮೂಲಕ ಫೇಮಸ್ ಆಗ್ತಿರೋ ರಾಜ್ ಬಿ. ಶೆಟ್ಟಿ ಅವರಿಗೆ ಈಗ ಕೆಲವು ಮಕ್ಕಳು ಹೊಸ ಹೆಸರನ್ನು ಇಟ್ಟಿದ್ದಾರೆ. ಇದನ್ನು ರಾಜ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನನ್ನ ಹೆಸರು ಏನು ಎಂದು ರಾಜ್ ಅವರು, ಮಕ್ಕಳಿಗೆ ತೆಲುಗುವಿನಲ್ಲಿ ಕೇಳಿದ್ದಾರೆ. ಶೆಟ್ಟಿ ಎನ್ನಲು ಬರದ ಆ ಮಕ್ಕಳು ರಾಜ್ ಬಿ.ಶಕ್ತಿ ಎಂದು ಹೇಳಿದ್ದಾರೆ. ಹಲವಾರು ಬಾರಿ ನಗುತ್ತ, ಇದನ್ನೇ ಹೇಳಿದ್ದು ಅದನ್ನು ರಾಜ್ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರ ಅಭಿಮಾನಿಗಳು ಕಮೆಂಟ್ ಬಾಕ್ಸ್ನಲ್ಲಿ ನಿಜಕ್ಕೂ ನೀವು ಸ್ಯಾಂಡಲ್ವುಡ್ಗೆ ಶಕ್ತಿಯೇ ಬಿಡಿ. ಮಕ್ಕಳು ಸರಿಯಾಗಿ ಹೇಳಿದ್ದಾರೆ ಎನ್ನುತ್ತಿದ್ದಾರೆ.
2017ರಲ್ಲಿ ಬಿಡುಗಡೆಗೊಂಡಿದ್ದ 'ಒಂದು ಮೊಟ್ಟೆಯ ಕಥೆ' ಯಾಗಲೀ, 2021ರ 'ಗರುಡ ಗಮನ ವೃಷಭ ವಾಹನ' ಸಿನಿಮಾ ಆಗಲೀ, 2023ರಲ್ಲಿ ಬಿಡುಗಡೆಗೊಂಡ 'ಟೋಬಿ' ಆಗಲಿ ಅಥವಾ ಅದೇ ಸಾಲಿನಲ್ಲಿ ಬಿಡುಗಡೆಯಾದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಆಗಲೀ ಎಲ್ಲವೂ ನಟನ ಪ್ರತಿಭೆಗೆ ಕನ್ನಡಿ ಹಿಡಿದಿದೆ. ಇದರ ನಡುವೆಯೇ, ಇಂಥದ್ದೇ ಸಿಂಪಲ್, ಸದಾ ಸೀದಾ ಚಿತ್ರವೊಂದು ದಾಖಲೆ ಬರೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿರುವ ಪ್ರೇಮದ ಊರಲಿ ಸಿನಿಮಾ. ಇದರ ಬೆನ್ನಲ್ಲೇ, ಇದೀಗ ರಾಜ್ ಬಿ.ಶೆಟ್ಟಿ ಅವರು ಇಂಥದ್ದೇ ಇನ್ನೊಂದು ಸಿನಿಮಾ ಮಾಡಲು ಸಜ್ಜಾಗಿ ನಿಂತಿದ್ದಾರೆ. ಸದ್ದಿಲ್ಲದೆಯೇ ತಮ್ಮ ಮುಂದಿನ ಚಿತ್ರದ ನಿರ್ದೇಶನದ ಕೆಲಸವನ್ನು ಆರಂಭಿಸಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ, ಚಿತ್ರತಂಡವು ಮಂಗಳೂರಿನಲ್ಲಿ ಇನ್ನೂ ಹೆಸರು ಇಡದ ಈ ಚಿತ್ರದ ಚಿತ್ರೀಕರಣ ನಡೆಸಿದೆ. ಈಗಾಗಲೇ 30 ದಿನಗಳಿಗೂ ಹೆಚ್ಚು ಕಾಲ ಚಿತ್ರೀಕರಣ ಪೂರ್ಣಗೊಂಡಿದೆ ಎನ್ನಲಾಗಿದೆ.
ನಟನೆಯ ನಡುವೆಯೂ, ಹೊಸ ಕಥೆ ಬರೆಯುವುದರತ್ತ ಸಂಪೂರ್ಣ ಗಮನಹರಿಸಲು ಸಮಯ ಮೀಸಲಿಡುತ್ತಿರುವುದಾಗಿ ರಾಜ್ ಈ ಹಿಂದೆ 'ಸಿನಿಮಾ ಎಕ್ಸ್‌ಪ್ರೆಸ್' ಜೊತೆಗಿನ ಸಂಭಾಷಣೆಯಲ್ಲಿ ಆಗಾಗ್ಗೆ ಹೇಳುತ್ತಿದ್ದರು. ಇದೀಗ ತಮ್ಮ ಮಾತಿನಂತೆಯೇ, ಅವರು ಚಿತ್ರಕಥೆಯನ್ನು ಪರಿಪೂರ್ಣಗೊಳಿಸಲು ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಇನ್ನೂ ಹೆಸರಿಡದ ಈ ಹೊಸ ಯೋಜನೆಯು ಕರಾವಳಿ ಕರ್ನಾಟಕದ ವಿಶಿಷ್ಟ ಹಿನ್ನೆಲೆಯಲ್ಲಿ ನಡೆಯುವ ಥ್ರಿಲ್ಲರ್ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ನಡುವೆಯು ರಾಜ್ ಬಿ ಶೆಟ್ಟಿ ಅವರು ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ವರದಿಗಳ ಪ್ರಕಾರ, ಈ ಚಿತ್ರದ ಚಿತ್ರೀಕರಣವು ವೇಗವಾಗಿ ಸಾಗುತ್ತಿದೆ. ಮುಖ್ಯ ಚಿತ್ರೀಕರಣ ಪೂರ್ಣಗೊಂಡ ನಂತರ, ಚಿತ್ರದ ಶೀರ್ಷಿಕೆ, ನಿರ್ಮಾಣದ ವಿವರಗಳು ಹಾಗೂ ಸಂಪೂರ್ಣ ತಾರಾಗಣ ಮತ್ತು ತಾಂತ್ರಿಕ ತಂಡದ ಕುರಿತು ಅಧಿಕೃತ ಘೋಷಣೆಯನ್ನು ಹೊರಡಿಸಲು ಚಿತ್ರತಂಡ ಯೋಜಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.