
ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸಲ್ಮಾನ್ ಖಾನ್ ಭಾಗವಹಿಸಿದ್ದಾರೆ. ಈ ಹಿಂದೆ ಎರಡು ಬಾರಿ ಈ ಶೋಗೆ ಬಂದಾಗಲೂ ‘ತಾನಿನ್ನೂ ವರ್ಜಿನ್’ ಎಂದು ಹೇಳಿ ವೈರಲ್ ಆಗಿದ್ದ ಸಲ್ಮಾನ್, ಈ ಬಾರಿ ಸಂಪೂರ್ಣವಾಗಿ ಭಿನ್ನವಾದ, ಪ್ರಬುದ್ಧ ಉತ್ತರ ನೀಡಿದ್ದಾರೆ.
ನೀವಿನ್ನೂ ವರ್ಜಿನ್ನಾ?
ಕರಣ್ ಈ ಬಾರಿಯೂ ನೀವು ಇಂದಿಗೂ ವರ್ಜಿನ್ ಆಗಿದ್ದೀರಾ? ಎಂದು ಕೇಳಿದಾಗ ಸಲ್ಮಾನ್ ಉತ್ತರಿಸಲು ನಿರಾಕರಿಸಿದರು. ಆ ವಿಷಯ ಈಗ ತಮಗೆ ಮುಜುಗರ ತರಿಸುತ್ತದೆ ಎಂದ ಅವರು, ತಂದೆ ಸಲೀಂ ಖಾನ್ ಅವರ ಪಾಠವನ್ನು ಉಲ್ಲೇಖಿಸಿದರು.
‘ವೈಯಕ್ತಿಕ ಬದುಕು ಬೆಡ್ರೂಂ ಇದ್ದಂತೆ, ಲಿವಿಂಗ್ ರೂಂ ಇಡೀ ದೇಶವಿದ್ದಂತೆ. ಲಿವಿಂಗ್ ರೂಂನಲ್ಲಿ ಕುಳಿತು ಮುಕ್ತವಾಗಿ ಮಾತನಾಡಬಹುದಾದ ವಿಷಯವನ್ನು ಇಡೀ ದೇಶದ ಮುಂದೆಯೂ ಹೇಳಬಹುದು. ಆದರೆ ಬೆಡ್ರೂಂಗೆ ಸೀಮಿತವಾದ ಖಾಸಗಿ ವಿಚಾರಗಳು ಎಂದಿಗೂ ಲಿವಿಂಗ್ ರೂಂಗೆ ಬರಬಾರದು ಎಂದು ಅಪ್ಪ ಹೇಳಿದ್ದಾರೆ. ಅದನ್ನು ನಾನು ನಂಬುತ್ತೇನೆ’ ಎಂದರು.
ಜೊತೆಗೆ ತಮ್ಮ ಪ್ರೇಮ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರುವ ಬಗ್ಗೆ ಕಾರಣ ನೀಡುತ್ತಾ, ‘ಯಾರಾದರೂ ಇಡೀ ಜೀವನ ನಮ್ಮೊಂದಿಗೆ ಇರುತ್ತಾರೋ ಇಲ್ಲವೋ ಅಥವಾ ಅವರು ಮುಂದೆ ಹೋಗಿ ಮತ್ತೊಬ್ಬರನ್ನು ಮದುವೆಯಾಗುತ್ತಾರೋ ನಮಗೆ ಮೊದಲೇ ತಿಳಿಯುವುದಿಲ್ಲ. ಹೀಗಿರುವಾಗ ಅವರ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ’ ಎಂದರು.
ನನ್ನ ನಿರ್ಧಾರ ನನ್ನದು
ತಮ್ಮ ಹಳೆಯ ಸಂದರ್ಶನವೊಂದನ್ನು ನೆನಪಿಸಿದ ಕರಣ್, ‘ಅಮೀರ್ ಖಾನ್ ಅವರು ಸಲ್ಮಾನ್ ಕೈಕಾಲು ಕಟ್ಟಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಹೇಳಿದ್ದರು’ ಎಂದಾಗ, ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಲ್ಮಾನ್, ‘ನಾನು ಅವರ ಕೈಕಾಲು ಕಟ್ಟಿ ಇನ್ನೆಂದಿಗೂ ಮದುವೆಯಾಗದಂತೆ ಮಾಡುತ್ತೇನೆ ಎಂದು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದೆ’ ಎಂದು ತಮಾಷೆ ಮಾಡಿದರು. ಅಮೀರ್ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಷಯ ಪ್ರಸ್ತಾಪಿಸಿದ ಕರಣ್ಗೆ, ‘ಸ್ನೇಹಿತನ ಖುಷಿಯಲ್ಲಿ ನಾನೂ ಖುಷಿಯಾಗಿದ್ದೇನೆ, ನಾನಂತೂ ಆರಾಮವಾಗಿದ್ದೇನೆ’ ಎಂದರು.
ಜೀವನ ಸಂಗಾತಿ ಇಲ್ಲದಿರುವುದು ಒಂಟಿತನಕ್ಕೆ ಕಾರಣವಾಗುತ್ತದೆಯೇ ಎಂದು ಕರಣ್ ಕೇಳಿದಾಗ, ಸಲ್ಮಾನ್, ‘ನಿನಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಜೊತೆಗೆ ತಾಯಿಯ ವಾತ್ಸಲ್ಯವಿದೆ. ಇಷ್ಟೆಲ್ಲಾ ಇರುವಾಗ ನೀನು ಆ ರೀತಿ ಎಂದಿಗೂ ಭಾವಿಸಬಾರದು, ಕೃತಜ್ಞನಾಗಿರಬೇಕು. ನನ್ನ ಬದುಕಿನಲ್ಲೂ ಮುಂದೊಂದು ದಿನ ಮಕ್ಕಳು ಬರಬಹುದು’ ಎಂದರು.
ಮುಂದುವರಿದು ಮಾತನಾಡಿದ ಸಲ್ಮಾನ್, ‘ನಿನ್ನನ್ನು ಯಾರೂ ತಡೆಯಲಿಲ್ಲ, ನನ್ನನ್ನೂ ಯಾರೂ ತಡೆಯಲಿಲ್ಲ. ನೀನು ನಿನ್ನನ್ನು ತಡೆದುಕೊಂಡೆ, ನನ್ನನ್ನು ನಾನೇ ತಡೆದುಕೊಂಡೆ. ಆದ್ದರಿಂದ ಇಡೀ ಜಗತ್ತು ನನ್ನ ವಿರುದ್ಧ ತಿರುಗಿಬಿದ್ದಿದ್ದರಿಂದ ನಾನು ಒಂಟಿಯಾಗುಳಿಯಬೇಕಾಯಿತು ಎಂದು ದೂರುವುದು ಸರಿಯಲ್ಲ. ಮದುವೆಯಾಗದೆ ಒಂಟಿಯಾಗಿ ಉಳಿಯುವುದು ಸಂಪೂರ್ಣವಾಗಿ ನನ್ನದೇ ಸ್ವಯಂ ನಿರ್ಧಾರ. ಇದಕ್ಕೆ ನಾನು ಯಾರನ್ನೂ ದೂಷಿಸುವುದಿಲ್ಲ, ನನ್ನ ಈ ನಿರ್ಧಾರದಲ್ಲಿ ನಾನು ಪೂರ್ಣವಾಗಿ ಸಂತೋಷವಾಗಿದ್ದೇನೆ’ ಎಂದರು.
‘ನಿಮ್ಮ ಬಯೋಪಿಕ್ ಯಾರು ನಿರ್ದೇಶಿಸಬೇಕು?’ ಎಂದು ಕೇಳಿದಾಗ ಸಲ್ಮಾನ್, ‘ನನ್ನ ಬಯೋಪಿಕ್ ಎಂದಿಗೂ ತೆರೆಗೆ ಬರಲು ಸಾಧ್ಯವಿಲ್ಲ. ನನ್ನ ಜೀವನದ ಕತೆ ನನ್ನ ಸಮಾಧಿಯವರೆಗೂ ನನ್ನ ಜೊತೆಯೇ ಇರಲಿದೆ’ ಎಂದರು. ವ್ಯಕ್ತಿತ್ವಗಳು ಮಾಗುವುದನ್ನು ನೋಡುವುದು ಮತ್ತು ಅದರಿಂದ ಕಲಿಯುವುದು ಬಹಳ ಇರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.