ಚಿಕ್ಕಮಗಳೂರು: 'ಕಾಂತಾರ' ಹೌಸ್‌ಫುಲ್‌, ಬ್ಲ್ಯಾಕ್‌ ಟಿಕೇಟ್ ಮಾರಾಟ ಹೆಚ್ಚಳ: ಕ್ರಮಕ್ಕೆ ಆಗ್ರಹ

By Suvarna News  |  First Published Oct 28, 2022, 12:38 PM IST

Chikkamagaluru News: ಬ್ಲಾಕ್ ಟಿಕೇಟ್ ಮಾರಾಟಗಾರರು ಟಿಕೇಟಿನ ಮೊತ್ತಕ್ಕಿಂತ ಎರಡುಪಟ್ಟು ಹಣವನ್ನು ಚಿತ್ರ ವೀಕ್ಷಣೆಗೆ ಆಗಮಿಸುವ ಜನರಿಂದ ಪಡೆಯುತ್ತಿದ್ದು ಸಿನಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. 


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಅ. 28) : ಚಿಕ್ಕಮಗಳೂರು ನಗರದ ಶ್ರೀಲೇಖಾ ಚಿತ್ರಮಂದಿರದಲ್ಲಿ ಕಾಂತರಾ ಸಿನಿಮಾ (Kantara Movie) ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಬ್ಲಾಕ್ ಟಿಕೇಟ್ ಮಾರಾಟಗಾರರು ಟಿಕೇಟಿನ ಮೊತ್ತಕ್ಕಿಂತ ಎರಡುಪಟ್ಟು ಹಣವನ್ನು  ಚಿತ್ರ ವೀಕ್ಷಣೆಗೆ ಆಗಮಿಸುವ ಜನರಿಂದ ಪಡೆಯುತ್ತಿದ್ದು ಸಿನಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಚಿಕ್ಕಮಗಳೂರು ನಗರದ ಚಿತ್ರಮಂದಿರದಲ್ಲಿ ಸುಮಾರು ಒಂದು ತಿಂಗಳಿನಿಂದ ಕಾಂತರಾ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಸಾರ್ವಜನಿಕರು ಸಹ ಟಿಕೇಟ್‌ಗಳನ್ನು ಆನ್ಲೈನ್‌ ಬುಕ್ ಮಾಡಿಕೊಂಡು ವೀಕ್ಷಣೆ ಮಾಡುತ್ತಿದ್ದಾರೆ. ಈ ಮಧ್ಯೆ ಕೆಲವು ಬ್ಲಾಕ್ ಟಿಕೇಟ್ ಮಾರಾಟಗಾರರು ಆನ್ಲೈನ್ ಹಾಗೂ ಸ್ಥಳದಲ್ಲೇ ಟಿಕೇಟ್ ಪಡೆದುಕೊಂಡು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.

Tap to resize

Latest Videos

ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯವು ಸಹ  ಚಿತ್ರ ಮಂದಿರ ತುಂಬಿಕೊಂಡ ಪರಿಣಾಮ ಟಿಕೇಟ್‌ಗೆ ಪರದಾಡುವಂತಾಗಿದೆ. ಈ ನಡುವೆ ಹೆಚ್ಚು ಮೊತ್ತವನ್ನು ಕೊಡಲಾಗದ ಕೆಲ ಸಿನಿಪ್ರೇಕ್ಷಕರು ಚಿತ್ರ ವೀಕ್ಷಿಸದೆ ತೆರಳುತ್ತಿದ್ದಾರೆ. ಬ್ಲಾಕ್ ಟಿಕೇಟ್ ಮಾರಾಟಗಾರರು ತಮ್ಮ ಸ್ನೇಹಿತರು , ಕೆಲ ಮಹಿಳೆಯರನ್ನು ಟಿಕೇಟ್ ನೀಡುವ ಸರದಿ ಸಾಲಿನಲ್ಲಿ ನಿಲ್ಲಿಸಿ ಕೊಂಡು ಟಿಕೇಟ್ ಪಡೆದುಕೊಳ್ಳುತ್ತಾರೆ. ಬಳಿಕ ಅವುಗಳನ್ನು ಮಾರಾಟ ಮಾಡುವ ಸಲುವಾಗಿ ಟಿಕೇಟಿನ ಮೊತ್ತಕ್ಕಿಂತ ಎರಡುಪಟ್ಟು ಹೆಚ್ಚು ಹಣ ಪಡೆದು ಮಾರಾಟ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

'ಭಾರತೀಯ ಸಿನಿಮಾದ ಮಾಸ್ಟರ್‌ ಪೀಸ್‌' ಕಾಂತಾರದ ಬಗ್ಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಮಾತು!

ನಿತ್ಯವೂ ಕಾಂತಾರ ಸಿನಿಮಾ ಹೌಸ್ ಫುಲ್:  ಕಾಂತಾರ ಸಿನಿಮಾ ಬಹುದಿನಗಳಿಂದ ಹೆಚ್ಚು ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಪೊಲೀಸ್ ಇಲಾಖೆಯವರು ಆಗಮಿಸಿ ಸೂಕ್ತಮಟ್ಟಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು. ನಂತರ ದಿನಗಳಲ್ಲಿ ಬ್ಲಾಕ್ ಟಿಕೇಟಟ್‌ ಮಾರಾಟಗಾರರು  ಮತ್ತೆ ಅದೇ ರೀತಿ ಮಾಡುತ್ತಿರುವುದು ಸಿನಿಪ್ರೇಕ್ಷಕರಲ್ಲಿ ಬೇಸರ ತಂದಿದೆ.  ಜಿಲ್ಲೆಯಲ್ಲಿ ಪ್ರಸ್ತುತ ಕೇವಲ ನಾಲ್ಕು ಚಿತ್ರಮಂದಿರಗಳಿವೆ. ಅವುಗಳಲ್ಲಿ ಉತ್ತಮ ನಟರ ಸಿನಿಮಾಗಳು ಬಂದರೆ  ಸಾರ್ವಜನಿಕರು ಟಿಕೇಟ್‌ಗಾಗಿ ಪರದಾಡುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಚಿತ್ರಮಂದಿರದ ಆಡಳಿತ ಮಂಡಳಿಯು ಸೂಕ್ತ ಭದ್ರತೆ ಒದಗಿಸಿದ್ದಲ್ಲಿ ಸಿನಿಮಾ ನಿರ್ಮಾಪಕರು ಹಾಗೂ ಸಾರ್ವಜನಿಕರಿಗೂ ಅನುಕೂಲ ವಾಗಲಿದೆ ಎಂದು ತಿಳಿಸಿದ್ದಾರೆ. 

ಈ ಬ್ಲಾಕ್ ಟಿಕೇಟ್ ಮಾರಾಟಗಾರರ ವಿರುದ್ಧ ಚಿತ್ರಮಂದಿರದ ಆಡಳಿತ ಮಂಡಳಿ ಸೂಕ್ತ ಕ್ರಮ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಉತ್ತಮ ಚಿತ್ರಗಳನ್ನು ಜಿಲ್ಲೆಗೆ ಬಂದರೆ ಅವುಗಳನ್ನೇ ಬಂಡವಾಳ ಮಾಡಿಕೊಂಡು ಅಕ್ರಮವಾಗಿ ಹಣ ಸಂಪಾದನೆಗೆ ಮುಂದಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಸಾರ್ವಜನಿಕರಿಗೆ ಚಿತ್ರಮಂದಿರದ ಟಿಕೇಟ್ ದರದಲ್ಲೇ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡಬೇಕು ಎಂದು ಸಿನಿ ಪ್ರೇಕ್ಷಕರು ಒತ್ತಾಯವಾಗಿದೆ.

click me!