'ಆತ ಸಿಂಹವಾದರೆ, ಅವನ ತಂದೆ ನಾನೂ ಸಿಂಹವೇ'.. ಮಗ ಅಭಿಷೇಕ್ ಬಚ್ಚನ್ ಬಗ್ಗೆ ಹೀಗ್ ಹೇಳಿದ್ಯಾಕೆ ಬಿಗ್ ಬಿ?!

Published : Aug 09, 2026, 07:03 PM IST
Amitabh Bachchan Abhishek Bachchan

ಸಾರಾಂಶ

ಕೇವಲ ಅಮಿತಾಭ್ ಮಾತ್ರವಲ್ಲ, ಅಂದಿನ ಕಾಲದ ಮತ್ತೊಬ್ಬ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಇಷ್ಟೇ ಸಾಹಸಿಯಾಗಿದ್ದರು. 'ಕರ್ತವ್ಯ' ಚಿತ್ರದ ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರು ನಿಜವಾದ ಚಿರತೆಯ ಜೊತೆ ಯಾವುದೇ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದರು ಎಂದು ಮೋಹನ್ ನೆನಪಿಸಿಕೊಂಡಿದ್ದಾರೆ.

Bollywood Big B Amitabh Bachchan Statement after Abhishek Bachchan Born: ಅಂದು ಅಭಿಷೇಕ್ ಬಚ್ಚನ್ ಜನಿಸಿದ ಸುದ್ದಿ ಕೇಳುತ್ತಿದ್ದಂತೆ 'ಸಿಂಹ'ದಂತೆ ಘರ್ಜಿಸಿದ್ದ ಬಿಗ್ ಬಿ! ಹಸಿದ ಹುಲಿಯ ಜೊತೆ ಅಮಿತಾಭ್ ಸೆಣಸಾಡಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕಥೆ!

ಬಾಲಿವುಡ್‌ನ ಅಪ್ರತಿಮ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಸಿನಿಮಾ ಜೀವನ ಎಂದರೆ ಅದು ಕೇವಲ ಬಣ್ಣದ ಲೋಕವಲ್ಲ, ಅದೊಂದು ಸಾಹಸಗಾಥೆ. ಇಂದಿನ ಕಾಲದ ನಟರಿಗೆ ಇರುವಂತೆ ಅಂದು ಸುಧಾರಿತ ತಂತ್ರಜ್ಞಾನ (CGI), ವಿಎಫ್‌ಎಕ್ಸ್ (VFX) ಅಥವಾ ಅತ್ಯಾಧುನಿಕ ಸುರಕ್ಷತಾ ಕ್ರಮಗಳು ಇರಲಿಲ್ಲ. ಪ್ರತಿಯೊಂದು ಸಾಹಸ ದೃಶ್ಯವೂ ಜೀವದ ಹಂಗು ತೊರೆದು ಮಾಡಬೇಕಾದ ಅನಿವಾರ್ಯತೆ ಇತ್ತು. ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ 1977ರಲ್ಲಿ ತೆರೆಕಂಡ 'ಖೂನ್ ಪಸೀನಾ' (Khoon Pasina) ಚಿತ್ರದ ಚಿತ್ರೀಕರಣದ ವೇಳೆ ನಡೆದಿತ್ತು.

ಖ್ಯಾತ ಸಾಹಸ ನಿರ್ದೇಶಕ ಮೋಹನ್ ಬಗ್ಗಾಡ್ ಅವರು ಇತ್ತೀಚೆಗೆ ಈ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಅಂದು ಅಮಿತಾಭ್ ಬಚ್ಚನ್ ಅವರು ನಿಜವಾದ ಹುಲಿಯ ಜೊತೆ ಸೆಣಸಾಡಲು ಹೇಗೆ ಸಿದ್ಧರಾದರು ಮತ್ತು ಅದಕ್ಕೆ ಅವರ ಮಗ ಅಭಿಷೇಕ್ ಬಚ್ಚನ್ ಜನನದ ಸುದ್ದಿ ಹೇಗೆ ಪ್ರೇರಣೆಯಾಯಿತು ಎಂಬುದು ನಿಜಕ್ಕೂ ಆಶ್ಚರ್ಯಕರವಾಗಿದೆ.

ಹುಲಿಯ ದೃಶ್ಯಕ್ಕೆ ಹೆದರಿದ್ದ ಸ್ಟಂಟ್ ಮಾಸ್ಟರ್:

ಮೊದಲು ಈ ದೃಶ್ಯವನ್ನು ಅಮಿತಾಭ್ ಅವರ ಬಾಡಿ ಡ್ಯೂಪ್ ಆಗಿ ಮೋಹನ್ ಬಗ್ಗಾಡ್ ಮಾಡಬೇಕಿತ್ತು. ಸಾಹಸ ನಿರ್ದೇಶಕ ವೀರೂ ದೇವಗನ್ ಅವರು ಮೋಹನ್ ಅವರನ್ನು ಕರೆದು, "ನೀನು ಹುಲಿಯ ಜೊತೆ ಫೈಟ್ ಮಾಡಬೇಕು" ಎಂದಾಗ ಮೋಹನ್ ಒಂದು ಕ್ಷಣ ದಬಬಾಯಿಸಿದ್ದರು. "ನಿಜವಾದ ಹುಲಿಯ ಎದುರು ನಿಲ್ಲುವುದು ಎಂದರೆ ಸಾಧಾರಣ ಮಾತಲ್ಲ. ಹುಲಿಯ ಬಾಯಿ ಹೊಲಿಯಲಾಗಿತ್ತು ನಿಜ, ಆದರೆ ಅದರ ಉಗುರುಗಳು ಮತ್ತು ದೈಹಿಕ ಬಲ ಭೀಕರವಾಗಿತ್ತು. ನಾನು ಎರಡು ಮೂರು ದಿನಗಳ ಕಾಲ ಆ ದೃಶ್ಯದ ಶೂಟಿಂಗ್ ಮಾಡಿದೆ. ನನ್ನನ್ನು ನೋಡುತ್ತಿದ್ದ ಅಮಿತಾಭ್ ಅವರಿಗೆ ತಾವೂ ಈ ದೃಶ್ಯವನ್ನು ಮಾಡಬೇಕು ಎಂಬ ಆಸೆ ಚಿಗುರಿತು," ಎಂದು ಮೋಹನ್ ವಿವರಿಸಿದ್ದಾರೆ.

ಮಗನ ಜನನ ಮತ್ತು ಬಿಗ್ ಬಿ ಘರ್ಜನೆ:

ಅಂದು ಫೆಬ್ರವರಿ 5, 1976. ಮುಂಬೈನ ಕಾಂದಿವಲಿಯಲ್ಲಿ ಈ ಅಪಾಯಕಾರಿ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅಷ್ಟರಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ಒಂದು ಫೋನ್ ಕರೆ ಬಂದಿತು. ಅದು ಅವರ ಪತ್ನಿ ಜಯಾ ಬಚ್ಚನ್ ಅವರಿಗೆ ಗಂಡು ಮಗು (ಅಭಿಷೇಕ್ ಬಚ್ಚನ್) ಜನಿಸಿದೆ ಎಂಬ ಶುಭ ವಾರ್ತೆ! ಈ ಸುದ್ದಿ ಕೇಳುತ್ತಿದ್ದಂತೆ ಅಮಿತಾಭ್ ಅವರ ಮುಖದಲ್ಲಿ ಹೊಸ ಕಳೆ ಬಂದಿತು. ಅತೀವ ಸಂತಸಗೊಂಡ ಬಿಗ್ ಬಿ ತಕ್ಷಣವೇ ಅಲ್ಲಿನ ಚಿತ್ರತಂಡಕ್ಕೆ ಹೇಳಿದ ಮಾತು ಇಂದಿಗೂ ಇತಿಹಾಸ.

ಅಮಿತಾಭ್ ಅವರು ಸಾಹಸ ನಿರ್ದೇಶಕರ ಬಳಿ ಹೋಗಿ, "ನನ್ನ ಮನೆಯಲ್ಲಿ ಇಂದು ಒಂದು ಸಿಂಹ ಜನಿಸಿದೆ. ಆತ ಸಿಂಹವಾದರೆ, ಅವನ ತಂದೆಯಾದ ನಾನು ಕೂಡ ಸಿಂಹವೇ! ಈ ಹುಲಿಯ ಎದುರು ಡ್ಯೂಪ್ ಇಲ್ಲದೆ ನಾನೇ ಫೈಟ್ ಮಾಡುತ್ತೇನೆ" ಎಂದು ಆತ್ಮವಿಶ್ವಾಸದಿಂದ ಘೋಷಿಸಿದರು. ಮಗನ ಜನನ ನೀಡಿದ ಆ ಸ್ಫೂರ್ತಿಯಿಂದ ಅಮಿತಾಭ್ ಅವರು ಯಾವುದೇ ಭಯವಿಲ್ಲದೆ ಹುಲಿಯ ಜೊತೆಗಿನ ದೃಶ್ಯದಲ್ಲಿ ಸ್ವತಃ ನಟಿಸಿ ಎಲ್ಲರನ್ನೂ ದಂಗಾಗಿಸಿದರು.

ಅಪಾಯಕಾರಿ ಚಿತ್ರೀಕರಣದ ಕರಾಳ ಮುಖ:

ಆ ಕಾಲದ ಚಿತ್ರೀಕರಣ ಎಷ್ಟು ಕಠಿಣವಾಗಿತ್ತು ಎಂದರೆ, ಈ ದೃಶ್ಯದ ವೇಳೆ ಹುಲಿಯ ಹೊಡೆತಕ್ಕೆ ಸಿಲುಕಿ ಮೋಹನ್ ಬಗ್ಗಾಡ್ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ. ಅಷ್ಟೇ ಅಲ್ಲ, ನಂತರ 'ಮಿಸ್ಟರ್ ನಟವರ್ಲಾಲ್' ಚಿತ್ರದ ಶೂಟಿಂಗ್ ವೇಳೆಯೂ ಹುಲಿಯ ಉಗುರು ತಗುಲಿ ಮೋಹನ್ ಅವರ ಮುಖದ ಮೇಲೆ ಗಾಯದ ಗುರುತು ಇಂದಿಗೂ ಹಾಗೆಯೇ ಇದೆ. ಅಂದು ಹುಲಿಗಳು ತರಬೇತಿ ಪಡೆದಿರುತ್ತಿರಲಿಲ್ಲ, ಹಾಗಾಗಿ ಅವುಗಳ ಪ್ರತಿ ನಡೆ ಕೂಡ ಅನಿರೀಕ್ಷಿತವಾಗಿರುತ್ತಿತ್ತು.

ಕೇವಲ ಅಮಿತಾಭ್ ಮಾತ್ರವಲ್ಲ, ಅಂದಿನ ಕಾಲದ ಮತ್ತೊಬ್ಬ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಇಷ್ಟೇ ಸಾಹಸಿಯಾಗಿದ್ದರು. 'ಕರ್ತವ್ಯ' ಚಿತ್ರದ ಚಿತ್ರೀಕರಣದ ವೇಳೆ ಧರ್ಮೇಂದ್ರ ಅವರು ನಿಜವಾದ ಚಿರತೆಯ ಜೊತೆ ಯಾವುದೇ ಡ್ಯೂಪ್ ಇಲ್ಲದೆ ಫೈಟ್ ಮಾಡಿದ್ದರು ಎಂದು ಮೋಹನ್ ನೆನಪಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ, ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ ಕೇವಲ ಮನೋಬಲ ಮತ್ತು ವೃತ್ತಿಪರತೆಯಿಂದ ಈ ನಟರು ನಿರ್ಮಿಸಿದ ದೃಶ್ಯಗಳು ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ. ಅಮಿತಾಭ್ ಅವರ ಈ 'ಸಿಂಹದಂತಹ' ಧೈರ್ಯವೇ ಅವರನ್ನು ಇಂದಿಗೂ ಚಿತ್ರರಂಗದ 'ಶಹನ್ ಶಾ' ಆಗಿ ಕಿರೀಟ ತೊರಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾರಿಗೂ ಗೊತ್ತಿರದ ಯಶ್ ‘ಟಾಕ್ಸಿಕ್’ ಡೀಲ್: ಸಂಭಾವನೆ ಬಗ್ಗೆ ಬಯಲಾಯ್ತು ಶಾಕಿಂಗ್ ಮಾಹಿತಿ!
‘ಟಾಕ್ಸಿಕ್’ಗಾಗಿ ರಾಧಿಕಾ ಪಂಡಿತ್ ಏನು ಮಾಡಿದ್ದಾರೆ? ಯಶ್ ಮಾತಿನಲ್ಲಿ ಬಯಲಾಯ್ತು ಅಸಲಿ ವಿಷಯ