ಯೋಗಿ ಬಾಬುಗೆ ಹೋಲಿಸಿ ದುನಿಯಾ ವಿಜಯ್ ಬಗ್ಗೆ ನಾಲಿಗೆ ಹರಿಬಿಟ್ಟ ತಮಿಳು ನಟ: ಕ್ಷಮೆಗೆ ಕನ್ನಡಿಗರ ಪಟ್ಟು

Published : Nov 11, 2026, 05:38 PM IST
Duniya Vijay

ಸಾರಾಂಶ

Duniya Vijay: ನಯನತಾರಾ ಅಭಿನಯದ 'ಮೂಕುತಿ ಅಮ್ಮನ್ 2' ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿರುವ ಕನ್ನಡದ ನಟ ದುನಿಯಾ ವಿಜಯ್ ವಿರುದ್ಧ ತಮಿಳು ನಟ ಬೈಲ್ವಾನ್ ರಂಗನಾಥನ್ ನಾಲಿಗೆ ಹರಿಬಿಟ್ಟಿದ್ದಾರೆ. ವಿಜಯ್ ಅವರ ದೇಹದ ಆಕಾರ ಹಾಗೂ ಲುಕ್ ಬಗ್ಗೆ ಅತ್ಯಂತ ಕೀಳಾಗಿ ಬಾಡಿ ಶೇಮಿಂಗ್ ಮಾಡಿರುವ ಆತನ ಹೇಳಿಕೆಗೆ ದುನಿಯಾ ವಿಜಯ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ, ಸ್ವಂತ ಪರಿಶ್ರಮದಿಂದಲೇ ಇಂಡಸ್ಟ್ರಿಯಲ್ಲಿ ಹಂತಹಂತವಾಗಿ ಮೇಲೆದ್ದು ಬಂದ ಸೆಲ್ಫ್ ಮೇಡ್ ಸ್ಟಾರ್ 'ದುನಿಯಾ' ವಿಜಯ್ ಅವರ ವಿರುದ್ಧ ತಮಿಳು ಚಿತ್ರರಂಗದ ಮಾಜಿ ನಟ ಹಾಗೂ ಸದಾ ಕೀಳು ವಿವಾದಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ನೀಡಿರುವ ಅತ್ಯಂತ ಅವಹೇಳನಕಾರಿ ಹೇಳಿಕೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಡಿ ಶೇಮಿಂಗ್ ಮಾಡಿದ ಬೈಲ್ವಾನ್ ರಂಗನಾಥನ್

ಲೇಡಿ ಸೂಪರ್‌ಸ್ಟಾರ್ ನಯನತಾರಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಮುಂಬರುವ ಬಹುನಿರೀಕ್ಷಿತ 'ಮೂಕುತಿ ಅಮ್ಮನ್ 2' ತಮಿಳು ಸಿನಿಮಾದಲ್ಲಿ ದುನಿಯಾ ವಿಜಯ್ ಪ್ರಮುಖ ಖಳನಾಯಕನ (ವಿಲನ್) ಶಕ್ತಿಶಾಲಿ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಚಿತ್ರದ ನಟ-ನಟಿಯರ ಪಾತ್ರವರ್ಗದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಮರ್ಶೆ ಮಾಡುವ ಭರದಲ್ಲಿ ಈ ಬೈಲ್ವಾನ್ ರಂಗನಾಥನ್, ದುನಿಯಾ ವಿಜಯ್ ಅವರ ದೇಹದ ಆಕಾರ, ಮೈಬಣ್ಣ, ಮುಖದ ಲಕ್ಷಣಗಳು ಮತ್ತು ದೈಹಿಕ ರಚನೆಯ ಬಗ್ಗೆ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ಅಸಹ್ಯವಾಗಿ ಬಾಡಿ ಶೇಮಿಂಗ್ ಮಾಡಿದ್ದಾರೆ. ವಿಜಯ್ ಅವರ ದೇಹದ ರಚನೆ ಹಂದಿ ಮರಿಯಂತಿದೆ ಎಂದಿರುವ ಆತ, ಖ್ಯಾತ ಕಾಮಿಡಿ ನಟ ಯೋಗಿ ಬಾಬು ಅವರೇ ಇವರಿಗಿಂತ ಎಷ್ಟೋ ವಾಸಿ, ಇಂತಹ ವ್ಯಕ್ತಿಯನ್ನು ವಿಲನ್ ಪಾತ್ರಕ್ಕೆ ಆಯ್ಕೆ ಮಾಡಲು ಚಿತ್ರತಂಡಕ್ಕೆ ಇಡೀ ತಮಿಳುನಾಡಿನಲ್ಲಿ ಬೇರೆ ಯಾವ ನಟನೂ ಸಿಗಲಿಲ್ಲವೇ ಎಂದು ಬೇಕಾಬಿಟ್ಟಿಯಾಗಿ ನಾಲಿಗೆ ಹರಿಬಿಟ್ಟು ಕೀಳಾಗಿ ಮಾತನಾಡಿದ್ದಾನೆ.

ಅತ್ಯಂತ ತೀವ್ರವಾಗಿ ಖಂಡಿಸಿದ ಕನ್ನಡಿಗರು

ಈ ವಿವಾದಾತ್ಮಕ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದ್ದಂತೆ ಇಡೀ ಕರುನಾಡು, ಕನ್ನಡ ಚಿತ್ರರಂಗದ ಪ್ರೇಕ್ಷಕರು ಮತ್ತು ದುನಿಯಾ ವಿಜಯ್ ಅವರ ಅಪಾರ ಅಭಿಮಾನಿಗಳು ರೊಚ್ಚಿಗೆದ್ದು ಕೆಂಡಾಮಂಡಲವಾಗಿ ಸಿಡಿದೆದ್ದಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ದೊಡ್ಡ ಗಾಡ್‌ಫಾದರ್ ಬೆಂಬಲ ಮತ್ತು ಹಿನ್ನೆಲೆಯಿಲ್ಲದೆ, ಜಿಮ್ ತರಬೇತುದಾರನಾಗಿ, ಸಣ್ಣಪುಟ್ಟ ಸಾಹಸ ಕಲಾವಿದನಾಗಿ ಹಂತಹಂತವಾಗಿ ಸ್ವಂತ ಕಠಿಣ ಪರಿಶ್ರಮದಿಂದ ಬೆಳೆದು ಇಂದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಸ್ಟಾರ್ ವಿಲನ್ ಆಗಿ ಅಬ್ಬರಿಸುತ್ತಿರುವ ಕನ್ನಡದ ಹೆಮ್ಮೆಯ ನಟನಿಗೆ ಈ ರೀತಿ ಬಹಿರಂಗವಾಗಿ ಅವಮಾನ ಮಾಡಿರುವುದನ್ನು ಕನ್ನಡಿಗರು ಅತ್ಯಂತ ತೀವ್ರವಾಗಿ ಖಂಡಿಸಿದ್ದಾರೆ.

ಪರಭಾಷೆಯ ಕಲಾವಿದರಿಗೆ ಕೊಡುವ ಗೌರವ ಇದೇನಾ?

ಒಬ್ಬ ನಟನ ಅಭಿನಯ ಅಥವಾ ಆತನ ಪಾತ್ರ ಸರಿಹೋಗದಿದ್ದರೆ ಅದನ್ನು ಕಲಾತ್ಮಕವಾಗಿ ವಿಮರ್ಶಿಸುವ ಹಕ್ಕು ಪ್ರತಿಯೊಬ್ಬ ಪ್ರೇಕ್ಷಕನಿಗೂ ಖಂಡಿತವಾಗಿಯೂ ಇರುತ್ತದೆ. ಆದರೆ, ಈ ರೀತಿ ಒಬ್ಬ ಸಾಧಕ ಕಲಾವಿದನ ರೂಪ, ಮೈಕಟ್ಟು ಮತ್ತು ನೈಸರ್ಗಿಕ ಸೌಂದರ್ಯವನ್ನು ಗುರಿಯಾಗಿಸಿಕೊಂಡು ಅತ್ಯಂತ ಕೀಳಾಗಿ ಜರೆದು ಅಮಾನವೀಯವಾಗಿ ಬಾಡಿ ಶೇಮಿಂಗ್ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾಷೆ, ಗಡಿ, ಚಿತ್ರರಂಗ ಬೇರೆಯಾಗಿದ್ದರೂ ಸಹ ಪರಭಾಷೆಯ ಕಲಾವಿದರಿಗೆ ಕೊಡುವ ಕನಿಷ್ಠ ಗೌರವ ಎಲ್ಲರಿಗೂ ಇರಬೇಕಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಬೇಷರತ್ ಕ್ಷಮೆಯಾಚಿಸಲಿ

ಕೇವಲ ತಮ್ಮ ಅಗ್ಗದ ಪ್ರಚಾರ ಮತ್ತು ಯೂಟ್ಯೂಬ್ ವೀವ್ಸ್‌ಗಾಗಿ ಕನ್ನಡದ ಖ್ಯಾತ ನಟನನ್ನು ಗುರಿಯಾಗಿಸಿಕೊಂಡಿರುವ ಈ ವಿವಾದಾತ್ಮಕ ಯೂಟ್ಯೂಬರ್ ಬೈಲ್ವಾನ್ ರಂಗನಾಥನ್ ತಕ್ಷಣವೇ ದುನಿಯಾ ವಿಜಯ್ ಮತ್ತು ಸಮಸ್ತ ಕನ್ನಡಿಗರ ಬೇಷರತ್ ಕ್ಷಮೆಯಾಚಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಒಕ್ಕೊರಲಿನಿಂದ ತೀವ್ರವಾಗಿ ಎಚ್ಚರಿಕೆ ನೀಡಿದ್ದಾರೆ. ಸ್ಯಾಂಡಲ್‌ವುಡ್‌ನ ಪ್ರಮುಖ ಗಣ್ಯರು ಸಹ ಈ ಕೀಳು ಹೇಳಿಕೆಗೆ ಭಾರೀ ಧಿಕ್ಕಾರ ಕೂಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅನಂತಪದ್ಮನಾಭ ರಹಸ್ಯ, ಮಾಟಮಂತ್ರದ ನಿಗೂಢತೆ.. ಕತ್ತಿ ಹಿಡಿದು ಅಬ್ಬರಿಸಿದ ಅರ್ಜುನ್ ಸರ್ಜಾ!
ಪ್ರಭಾಸ್ ಸಿನಿರಂಗಕ್ಕೆ ಬಂದು 24 ವರ್ಷ: ಈ ಪ್ಯಾನ್ ಇಂಡಿಯಾ ಸ್ಟಾರ್ ಹವಾ ಶುರುವಾಗಿದ್ದೇ ರೋಚಕ!