
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ 8 ಗಂಟೆಗಳ ಕೆಲಸದ ರೂಲ್ಸ್ನಿಂದಾಗಿ ಹಲವು ನಿರ್ಮಾಪಕರು ತಮ್ಮನ್ನು ಆಯ್ಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಟಾಮ್ ಕ್ರೂಸ್ ಮತ್ತು ಕ್ರಿಸ್ಟೋಫರ್ ನೋಲನ್ ಅವರ ಉದಾಹರಣೆ ನೀಡಿ ತಮ್ಮ ಕೆಲಸದ ಶೈಲಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ 8 ಗಂಟೆಗಳ ಕೆಲಸದ ರೂಲ್ಸ್ನಿಂದಾಗಿ ಹಲವು ಸಿನಿಮಾಗಳ ಆಫರ್ಗಳನ್ನು ಕಳೆದುಕೊಂಡಿರುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ನಿಗದಿತ ಕೆಲಸದ ಸಮಯದಿಂದಾಗಿ ಬಾಲಿವುಡ್ನ ಹಲವು ದೊಡ್ಡ ನಿರ್ಮಾಪಕರು ತಮ್ಮನ್ನು ಆಯ್ಕೆ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ. ತಮ್ಮ ಕೆಲಸದ ಶೈಲಿಯ ಬಗ್ಗೆ ಮಾತನಾಡಿದ ಅವರು, ಹಾಲಿವುಡ್ ನಟ ಟಾಮ್ ಕ್ರೂಸ್ ಮತ್ತು ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಜೊತೆ ತಮ್ಮ ಸಿನಿಮಾ ಶೆಡ್ಯೂಲ್ಗಳನ್ನು ಹೋಲಿಸಿದ್ದಾರೆ.
ಇತ್ತೀಚೆಗೆ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್ ಸೀಸನ್ 9’ ಶೋನಲ್ಲಿ ನಟ ರವಿ ಕಿಶನ್ ಜೊತೆ ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ವೇಳೆ, ಹೊಸ ನಿರ್ದೇಶಕರ ಜೊತೆ ಕೆಲಸ ಮಾಡುವುದು ಮತ್ತು ನಿರ್ಮಾಪಕರು ಹಾಗೂ ನಿರ್ದೇಶಕರ ಬಗ್ಗೆ ಕಾಳಜಿ ವಹಿಸುವುದಕ್ಕಾಗಿ ಕರಣ್ ಜೋಹರ್ ಅಕ್ಷಯ್ ಕುಮಾರ್ ಅವರನ್ನು ಹೊಗಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಷಯ್, ತಮ್ಮ 8 ಗಂಟೆಗಳ ಕೆಲಸದ ರೂಲ್ಸ್ನಿಂದಾಗಿ ಹಲವು ದೊಡ್ಡ ನಿರ್ಮಾಪಕರು ತಮ್ಮಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು. ಜೊತೆಗೆ ತಾವು ಯಾಕೆ ನಿಗದಿತ ಸಮಯವನ್ನು ಪಾಲಿಸಲು ಇಷ್ಟಪಡುತ್ತೇನೆ ಎಂಬುದನ್ನೂ ವಿವರಿಸಿದರು.
ಸಾಕಷ್ಟು ವದಂತಿಗಳಿವೆ
ಇಂಡಸ್ಟ್ರಿಯ ಹಲವು ದೊಡ್ಡ ನಿರ್ಮಾಪಕರು ನನ್ನನ್ನು ಆಯ್ಕೆ ಮಾಡಲು ಬಯಸುವುದಿಲ್ಲ. ನನ್ನ ಬಗ್ಗೆ ಸಾಕಷ್ಟು ವದಂತಿಗಳಿವೆ, ನಾನು ದಿನಕ್ಕೆ ಕೇವಲ 8 ಗಂಟೆ ಮಾತ್ರ ಕೆಲಸ ಮಾಡುತ್ತೇನೆ ಎಂಬ ಆರೋಪಗಳಿವೆ. ಆದರೆ ಆ 8 ಗಂಟೆಗಳಲ್ಲಿ ನಾನು ನನ್ನ ವ್ಯಾನಿಟಿ ವ್ಯಾನ್ ಕಡೆಗೂ ಹೋಗುವುದಿಲ್ಲ ಎಂಬುದನ್ನು ಜನ ಮರೆತುಬಿಡುತ್ತಾರೆ.
ನಮ್ಮ ಕೆಲಸ ಕ್ಯಾಮೆರಾ ಮುಂದೆ ಇರುವುದು. ಪ್ರೇಕ್ಷಕರು ನಮ್ಮನ್ನು ಫ್ರೆಶ್ ಆಗಿ ನೋಡಲು ಬಯಸುತ್ತಾರೆಯೇ ಹೊರತು ಸುಸ್ತಾಗಿರುವುದನ್ನಲ್ಲ. ಹೀಗಾಗಿ ನಾನು 8 ಗಂಟೆ ಕೆಲಸ ಮಾಡುವುದು, 8 ಗಂಟೆ ನಿದ್ದೆ ಮಾಡುವುದು, 2 ಗಂಟೆ ಫಿಟ್ನೆಸ್ಗಾಗಿ ಮೀಸಲಿಡುವುದು ಮತ್ತು ಉಳಿದ ಸಮಯವನ್ನು ನನ್ನ ಕುಟುಂಬದ ಜೊತೆ ಕಳೆಯಲು ನಿರ್ಧರಿಸಿದ್ದೇನೆ.
ಬಳಿಕ ಕಡಿಮೆ ಅವಧಿಯಲ್ಲಿ ಸಿನಿಮಾಗಳನ್ನು ಮುಗಿಸುವ ತಮ್ಮ ಸಾಮರ್ಥ್ಯದ ಬಗ್ಗೆ ಎದುರಾಗುವ ಪ್ರಶ್ನೆಗಳಿಗೆ ಅಕ್ಷಯ್ ಉತ್ತರಿಸಿದರು. ಹಾಲಿವುಡ್ ಸ್ಟಾರ್ಗಳ ಕೆಲಸದ ಶೈಲಿಯ ಜೊತೆ ತಮ್ಮ ಶೈಲಿಯನ್ನು ಹೋಲಿಸಿದ ಅವರು, ಇತ್ತೀಚೆಗೆ ನಾನು ಕ್ರಿಸ್ಟೋಫರ್ ನೋಲನ್ ಅವರ ಸಂದರ್ಶನವೊಂದನ್ನು ಓದಿದೆ. ಅದರಲ್ಲಿ ಅವರು ಒಂದು ಸಿನಿಮಾವನ್ನು ಮುಗಿಸಲು 90 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಇನ್ನು ಟಾಮ್ ಕ್ರೂಸ್, ಮಿಷನ್: ಇಂಪಾಸಿಬಲ್ ಸಿನಿಮಾವನ್ನು ಕೇವಲ 55 ದಿನಗಳಲ್ಲಿ ಮುಗಿಸಿದ್ದರು ಎಂದರು.
ಇನ್ನು ಚಿತ್ರರಂಗದಲ್ಲಿ 8 ಗಂಟೆಗಳ ಕೆಲಸದ ಪಾಳಿಯ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಅಕ್ಷಯ್ ಕುಮಾರ್ ಈ ಕಾಮೆಂಟ್ ಮಾಡಿದ್ದಾರೆ. 2025ರಲ್ಲಿ, ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಸಿನಿಮಾದಿಂದ 8 ಗಂಟೆಗಳ ಕೆಲಸದ ಪಾಳಿಗೆ ಬೇಡಿಕೆ ಇಟ್ಟಿದ್ದಕ್ಕಾಗಿ ದೀಪಿಕಾ ಪಡುಕೋಣೆ ಹೊರನಡೆದಿದ್ದಾರೆ ಎಂಬ ವರದಿಗಳು ಬಾಲಿವುಡ್ನಲ್ಲಿ ಕೆಲಸದ ಸಮಯದ ಬಗ್ಗೆ ಚರ್ಚೆಗೆ ನಾಂದಿ ಹಾಡಿದ್ದವು. ನಂತರ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ನಲ್ಲೂ ದೀಪಿಕಾ ಇರುವುದಿಲ್ಲ ಎಂದು ನಿರ್ಮಾಪಕರು ಘೋಷಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.