ಬಣ್ಣದ ಲೋಕದಲ್ಲಿ ಪಯಾಣಿಸುತ್ತಿರುವ ಕನಸುಗಾರ 'ಅರ್ಜುನ್ ಲೂಯಿಸ್'

By Suvarna NewsFirst Published Jan 11, 2022, 1:11 PM IST
Highlights

ತಮ್ಮ ಸಣ್ಣ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಇಂಜಿನಿಯರಿಂಗ್ ಶಿಕ್ಷಣಕ್ಕೆ ಪೂರ್ಣ ವಿರಾಮ ಹಾಕಿ, ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ. ರಂಗ ಭೂಮಿಯಲ್ಲಿ ಸಾಹಿತ್ಯಗಾರನಾಗಿ, ನಿರ್ದೇಶಕರಾಗಿ ಯಶಸ್ವಿನ ಮೇಟಿಲೇರಿದ ವ್ಯಕ್ತಿಯೇ ಅರ್ಜುನ್ ಲೂಯಿಸ್.

ಸುಕನ್ಯಾ ಎನ್ .ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು , ಮೂಡುಬಿದಿರೆ

ಕಠಿಣ ಪರಿಶ್ರಮ ಮತ್ತು ಆತ್ಮ ವಿಶ್ವಾಸ ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ಸನ್ನು ಗಳಿಸಿಕೊಡುತ್ತದೆ. ಅಂತೆಯೇ ಪ್ರಯತ್ನಕ್ಕೆ ಪ್ರತಿಫಲ ದೊರೆಯಬೇಕಾದರೆ ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಮಾಡುವ ಪ್ರತಿಯೊಂದು ಕೆಲಸವೂ ನಮ್ಮನ್ನ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡುತ್ತದೆ, ಎಂಬ ನುಡಿಯನ್ನು ನಂಬಿ ರಂಗ ಭೂಮಿಯಲ್ಲಿ ಸಾಹಿತ್ಯಗಾರನಾಗಿ, ನಿರ್ದೇಶಕರಾಗಿ ಯಶಸ್ವಿನ ಮೇಟಿಲೇರಿದ ವ್ಯಕ್ತಿಯೇ ಅರ್ಜುನ್ ಲೂಯಿಸ್.

ಸಿನಿ ಕ್ಷೇತ್ರದಲ್ಲಿ ಬರಹಗಾರನಾಗಿ ಪದಗಳಿಗೆ ಜೀವ ತುಂಬುತ್ತ, ಕಲಾವಿದರಿಗೆ ಬೆನ್ನೆಲುಬಾಗಿ,  ಸಿನಿ ಪ್ರಿಯರಿಗೆ ತಮ್ಮ ಕಥೆ, ಸಾಹಿತ್ಯದ ಮೂಲಕ ರಂಜಿಸುತ್ತ ಬಂದಿರುವುದು ವಿಶೇಷಣೀಯ. ಇವರು ಮೂಲತಃ ಮಂಗಳೂರಿನ ಕೋಟೆಕಾರು ಪಟ್ಟಣದ ಮಾಡ್ಯಾರು ಪಲ್ಲದವರು.
ತಮ್ಮ ಪ್ರಾಥಮಿಕ , ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಮಂಗಳೂರಿನಲ್ಲಿ ಪೂರೈಸಿದ್ದು, ತಮ್ಮ ಸಣ್ಣ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಇಂಜಿನಿಯರಿಂಗ್ ಶಿಕ್ಷಣಕ್ಕೆ ಪೂರ್ಣ ವಿರಾಮ ಹಾಕಿ, ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡುತ್ತಾರೆ.

'ತಮ್ಮ ಬಾಲ್ಯಂದಿದಲೂ ತಂದೆಯವರು ಕಾದಂಬರಿ ವಾರ್ತಪತ್ರಿಕೆ ಓದುವುದನ್ನು ನಾನು ಪ್ರತಿದಿನ ಗಮನಿಸುತ್ತಿದ್ದೆ. ನಂತರದಲ್ಲಿ ಸ್ವತಃ ನಾನು ಈ ಹವ್ಯಾಸವನ್ನು ರೂಢಿಸಿಕೊಂಡೆ. ನಾನು ವೈದ್ಯನಾಗಬೇಕೆಂಬುವುದಾಗಿ ನನ್ನ ತಂದೆಯವರು ಬಹುವಾಗಿ ಇಚ್ಛಿಸುತ್ತಿದ್ದರು, 
ಆದರೆ, 'ವಿಧಿಯಾಟವ ಬಲ್ಲವರಿಲ್ಲ' ಎಂಬ ಮಾತಿನಂತೆ ತಂದೆಯ ಮರಣದ ನಂತರ  ಕುಟುಂಬದಲ್ಲಿ ಎದುರಾದ ತೊಂದರೆಗಳಿಂದಾಗಿ, ಮುಂದೆ ವ್ಯಾಸಂಗ ಮಾಡಬೇಕಾದ ಕನಸನ್ನು ಅರ್ಥದಲ್ಲೇ ಮೊಟಕುಗೊಳಿಸಿ, ನನ್ನ ಕೆಲ ಜವಾಬ್ದಾರಿ ನಿರ್ವಹಿಸಲು  ಕೆಲಸ ಮಾಡಲು ಆರಂಭಿಸಿದೆ' ಎನ್ನುತ್ತಾರೆ ಲೂವಿಸ್.

ಟಿವಿ ಜಗತ್ತಿನ ಜೊತೆಗಿನ ನಂಟು ಬಿಚ್ಚಿಟ್ಟ ನಿರೂಪಕಿ ಅಪರ್ಣಾ!

ನಂತರದಲ್ಲಿ ತನ್ನ ಕಾಲೇಜಿನ ಪ್ರಾಂಶುಪಾಲರು ಅರ್ಜುನ್ ಅವರು ಎಂಜಿನಿಯರ್ ಆಗುವಂತೆ ಹುರಿದುಂಬಿಸಿ, ಮತ್ತೆ ವಿದ್ಯಾಭ್ಯಾಸದತ್ತ 
ಆಸಕ್ತಿ ಮೂಡಿಸುವಂತೆ ಮನವನ್ನೊಲಿಸಿ, ಪುನಃ ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಕಾಲೇಜು ಹೋಗುವುದರ ಜೊತೆ ಜೊತೆಗೆ, ಸ್ವರಚಿತ  
ಕಥೆ ಬರೆಯಲು ಆರಂಭಿಸುತ್ತಾರೆ. ಸಿನಿಮಾಗಳನ್ನು ಹೆಚ್ಚಾಗಿ ನೋಡ ಬಯಸುತ್ತಾ ಸಾಹಿತ್ಯದ ಕಡೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ದೃಢ ನಿರ್ಧಾರ ಮಾಡಿಕೊಂಡು, ಸಾಹಿತ್ಯದಲ್ಲಿ ತೋರುತ್ತಿದಂತಹ ಒಲವನ್ನು ಕಂಡ ಗಣಿತ ಪ್ರಾಧ್ಯಾಪಕರಾದ ಮುರಳಿಯವರು ಅರ್ಜುನ್ ರವರ  ಪ್ರತಿಭೆಯನ್ನು ಕಂಡು  ಗುರುತಿಸಿ ಪ್ರೋತ್ಸಾಹಿಸುತ್ತಾರೆ. 

ಮುಂದೆ, ಸಿನಿಮಾ ಬರಹಗಾರರ ಮಾರ್ಗದರ್ಶನ ಪಡೆಯುತ್ತಾ, ಚಿತ್ರಕಥೆ ಬರೆಯುವುದನ್ನು ಅಭ್ಯಾಸ ಮಾಡುತ್ತಾರೆ. ಕನ್ನಡದ ಹಲವಾರು ಬರಹಗಾರರ ಕಥೆ, ಕವಿತೆ, ಕಾದಂಬರಿಗಳನೆಲ್ಲ  ಓದುವುದರ ಜೊತೆಗೆ ವಿಶ್ವ ವಿಖ್ಯಾತ ನಿರ್ದೇಶಕರ ಬರಹಗಾರರ ಸಂದರ್ಶನಗಳನ್ನು ನೋಡುತ್ತಾ, ತನ್ನದೇ ಶೈಲಿಯಲ್ಲಿ ಪದಗಳಿಗೆ ಜೀವ ತುಂಬಲು ಪ್ರಾರಂಭಿಸಿ ತಮ್ಮ ಪರಿಶ್ರಮದ ಹಾದಿಯನ್ನು ಹಿಡಿಯುತ್ತಾರೆ. ಸಿನಿಮಾ ಹಾಡುಗಳ ಟ್ಯೂನ್ ಗಳಿಗೆ ಸರಿಹೊಂದುವಂತೆ ಪದ ಜೋಡಣೆ ಮಾಡುವಂತಹ ವಿಚಾರಗಳಿಗೆ ಗುರುವಾಗಿ ವಿ. ಮನೋಹರ್ ಅವರ ಗರಡಿಯಲ್ಲೇ ಪಳಗಿದ ಅನುಭವವನ್ನು ಸಂತೋಷದಿಂದ  ವ್ಯಕ್ತಪಡಿಸುತ್ತಾರೆ ಲೂಯಿಸ್. ಸಾಮಾಜಿಕ ಜಾಲತಾಣದ ಮೂಲಕ ಅನೇಕ ಸಿನಿ ಕಲಾವಿದರು, ನಿರ್ದೇಶಕರು, ಸಾಹಿತ್ಯಗಾರರ ಸಂಪರ್ಕ ಮಾಡುತ್ತಾರೆ.

ಅವಕಾಶಗಳ ಸುರಿಮಳೆ

ನಂತರದಲ್ಲಿ ಸಿಂಪಲ್ ಸುನಿ ಅವರ ಮೂಲಕ ಮೊದಲ ಬಾರಿಗೆ ಚಮಕ್ ಚಿತ್ರಕ್ಕೆ ಗೀತಾ ಸಾಹಿತ್ಯವನ್ನು  ಬರೆಯಲು ಶುರುಮಾಡಿ ವೆನಿಲ್ಲಾ, ಸವರ್ಣದೀರ್ಘ ಸಂಧಿ, ಲುಂಗಿ, ಸಖತ್ ಹಾಗೂ ಬಿಡುಗಡೆಯಾಗಬೇಕಾದ ಒಂದಷ್ಟು ಸಿನೆಮಾಗಳು ಸೇರಿ ಒಟ್ಟು 48 ಹಾಡುಗಳನ್ನು ಬರೆದಿದ್ದಾರೆ.

ಅರ್ಜುನ್ ಅವರ ಸ್ನೇಹಿತರಾದ ಮೋಹನ್ ಮೂದ್ಯ ಮತ್ತು ರಿತೇಶ್ ಬಂಗೇರ ಅವರ ಜೊತೆಗೂಡಿ ಬ್ಯಾಡ್ ಕ್ರಿಯೇಚರ್ ಆಫ್ ಗಾಡ್ ಎಂಬ 
ಮೊದಲ  ಕಿರುಚಿತ್ರವನ್ನು ನಿರ್ದೇಶಿಸುವುದರೊಂದಿಗೆ, ಮಿ ಆ್ಯಂಡ್ ಮೈ ಶ್ಯಾಡೋ, ಡಾರ್ಕ್, ಹ್ಯಾಪಿ ಮ್ಯಾರೀಡ್ ಲೈಫ್ ಕಿರುಚಿತ್ರಗಳನ್ನು ಮಾಡಿದ ಹೆಮ್ಮೆ ಇವರದು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಇತರರಿಂದ ಪ್ರೇರಣೆ ಪಡೆಯುತ್ತಾರೆ. ಹಾಗೆಯೇ ಅರ್ಜುನ್ ರವರು ತನ್ನ ಆಸಕ್ತಿ ಕ್ಷೇತ್ರವಾದ ಸಿನಿಮಾ ನಿರ್ದೇಶನದ ಮೇಲೆ ಅಪಾರವಾದ ಗೌರವ ಇಟ್ಟುಕೊಂಡು ಸಾಧನೆಯ ಶಿಖರವನ್ನೇರಲು ಹೆಜ್ಜೆರನ್ನಿಡುತ್ತಿದ್ದಾರೆ.

RJ ಪ್ರಸನ್ನ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳಿವು

ಅಲೆಕ್ಸಾಂಡ್ರೋ ಗೊನ್ಸಾಲೆಸ್ ಇನರಿಟು, ಕ್ವಿನ್ಟಿನ್ ಟೆರೆಂಟಿನೋ, ಮಣಿರತ್ನಂ, ತಮಿಳಿನ ಶಂಕರ್, ಪುಟ್ಟಣ್ಣ ಕಣಗಾಲ್, ಉಪೇಂದ್ರ, ಹಾಗೂ ಯೋಗರಾಜ್ ಭಟ್ ಮುಂತಾದವರನ್ನು ಆದರ್ಶವಾಗಿಟ್ಟುಕೊಂಡು, ಮೊದಲಿಗೆ ಮೂರು ಕಿರು ಚಿತ್ರಗಳನ್ನು ನಿರ್ದೇಶಿಸಿ, ತಮಿಳಿನ ಕೆ. ಸೂರಜ್ ಶೆಟ್ಟಿ ಯವರು ಗೀತಾರಚನೆಕಾರನಾಗಿ  ಅರ್ಜುನ್ ಅವರನ್ನು ಪರಿಚಯಿಸಿದರು. ಮುಖೇಶ್ ಹೆಗ್ಡೆಯವರ ನಿರ್ಮಾಣದಲ್ಲಿ ಲುಂಗಿ ಸಿನಿಮಾದಲ್ಲಿ ಅವಕಾಶ ದೊರಕಿಸಿಕೊಂಡು ಅನೇಕ ಹಾಡುಗಳನ್ನು ಬರೆಯುತ್ತಾ ಕೇಳುಗರ ಕಿವಿ ಇಂಪಾಗಿಸುವಂತೆ ಮಾಡಿದ ಗರಿಮೆ ಅರ್ಜುನ್ ಅವರಿಗೆ ಸಲ್ಲುತ್ತದೆ. ಕೋರೋನ ಮಹಾಮಾರಿಯು ಚಿತ್ರರಂಗದ ಕಲಾವಿದ, ನಿರ್ಮಾಪಕ ಹಾಗೂ ನಿರ್ದೇಶಕರ ಬದುಕಿನಲ್ಲಿ ಕರಿ ನೆರಳಿನಂತೆ ಆವರಿಸಿತು. ಆದರೂ ದೈರ್ಯ ಕಳೆದುಕೊಳ್ಳದೆ ಲಾಕ್ ಡೌನ್ ಸಮಯದಲ್ಲಿ ಚಿತ್ರಕಥೆ ತಯಾರು ಮಾಡಿಕೊಳ್ಳುತ್ತಾ
ಸಿನಿಮಾಕ್ಕೆ ಸಂಬಂಧಪಟ್ಟ ಪುಸ್ತಕ ಓದಿಕೊಂಡು ಹೊಸ ಆಲೋಚನೆಯೊಂದಿಗೆ ಅನೇಕ ಕಥೆಗಳನ್ನು ತಯಾರು ಮಾಡಿಕೊಳ್ಳುತ್ತಾರೆ ಅರ್ಜುನ್.

ಅದೇ ಸಮಯದಲ್ಲಿ ಸಿಂಪಲ್ ಸುನಿ ಅವರ ಸಖತ್ ಸಿನಿಮಾಕ್ಕೆ ಹಾಡು ಬರೆಯುವಂತ ಅವಕಾಶ ಒದಗಿ, ಮುಂದೆ ಸ್ವತಃ ಅವರೇ ಒಂದು ತಂಡವನ್ನು ಕಟ್ಟಿಕೊಂಡು ಯಾವುದೇ ನಿರ್ಮಾಪಕರಿಲ್ಲದೆ ಸಣ್ಣ ಕ್ಯಾಮರಾ ಉಪಯೋಗಿಸಿ ಸಿನಿಮಾ ಮಾಡುವ ಯೋಜನೆ ಮಾಡಿ ಸತತ ಎಂಟು ತಿಂಗಳುಗಳ ಕಾಲ ಹನ್ನೆರಡು ಡ್ರಾಫ್ಟ್ ಸ್ಕ್ರಿಪ್ಟ್ ತಯಾರು ಮಾಡಿಕೊಂಡರು. ಇವರ ಬರವಣಿಗೆಯ ಶೈಲಿಯನ್ನು ಮೆಚ್ಚಿದ ರಾಜ್ ಬಿ. ಶೆಟ್ಟಿಯಾವರು ರಕ್ಷಿತ್ ಶೆಟ್ಟಿ ಯವರಿಗೆ ಅರ್ಜುನ್ ಅವರನ್ನ ಪರಿಚಯಿಸುತ್ತಾರೆ. ಸ್ಕ್ರಿಪ್ಟ್ ಕೇಳಿದ ರಕ್ಷಿತ್ ಸಿನಿಮಾ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ.

ಸ್ಟ್ರಾಬೆರಿ ಪರಮ್ವಾ ಸ್ಪಾಟ್ ಲೈಟ್ ಪ್ರೊಡಕ್ಷನ್ ನಲ್ಲಿ ರಕ್ಷಿತ್ ಶೆಟ್ಟಿಯವರು ನಿರ್ಮಾಣ ಮಾಡುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಶ್ರುತಿ ಹರಿಹರನ್, ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ವಿನೀತ್ ಕುಮಾರ್, ಚೈತ್ರಾ ಆಚಾರ್ಯ, ವಿಜಯ್ ಮಯ್ಯ, ಕ್ಲ್ಯಾನ್ವೀವ್ ಫೆರ್ನಾಂಡೀಸ್ ಇವರಂತಹ ಅನೇಕ  ತಾರಾ ಬಳಗವೇ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿಯ ಸಂಗತಿ. ಒಟ್ಟಿನಲ್ಲಿ ಶೀಘ್ರದಲ್ಲಿ ಈ ಚಿತ್ರವನ್ನು ನಿರೀಕ್ಷಿಸಬಹುದು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೆಂಗಳೂರು ಮತ್ತು ಮಂಗಳೂರು ಪರಿಸರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರಕಥೆಯಲ್ಲಿ ಇದೊಂದು ಹೊಸ ಪ್ರಯೋಗ. ನಾಯಕಿಯ ಪಾತ್ರ ನೇರವಾಗಿದ್ದರೆ, ನಾಯಕನ ಪಾತ್ರ ರಿವರ್ಸ್ ಪ್ಲೇ ಮಾಡುತ್ತದೆ. ಸ್ಟ್ರಾಬೆರಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹಾಗೂ ಒಂದು ಹಾಡಿನ‌ ಸಾಹಿತ್ಯ ನನ್ನದೇ. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯೊಂದನ್ನು ಹಾಡಿಗಾಗಿ ಬಳಸಿಕೊಂಡಿದ್ದೇವೆ. ಎಂದು ತನ್ನ ಕಾರ್ಯ ವೈಖರಿಯ ಬಗೆಗೆ ವಿವರಿಸುತ್ತ, ಒಂದಷ್ಟು ಕಿರುಚಿತ್ರಗಳನ್ನು, ಸಣ್ಣ ಬಜೆಟ್ಟಿನ ನಿರ್ಮಿಸುವ   ಉದ್ದೇಶದಿಂದ ಕಾರ್ನರ್ ಸೀಟ್ ಫಿಲಂಸ್ ಅನ್ನುವ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಸದ್ಯಕ್ಕೆ ಇದರ ನಿರ್ಮಾಣದಲ್ಲಿ ಕಿರುಚಿತ್ರಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದೇವೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುತ್ತಾರೆ ಅರ್ಜುನ್.

ದೊಡ್ಡವರು ಹೇಳಿದ ಮಾತಿನಂತೆ ಮನಸ್ಸಿಟ್ಟು ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ, ಮುಂದೊಂದು ದಿನ ಅದೇ ಪುಸ್ತಕ ನಮ್ಮನ್ನು ತಲೆ ಎತ್ತಿ ನಡೆಸುವಂತೆ ಮಾಡುತ್ತದೆ, ಎಂಬ ಮಾತಿಗೆ ಅರ್ಜುನ್ ಅವರು ಪ್ರಸ್ತುತ ಉದಾಹರಣೆ ಯಾಗಿದ್ದಾರೆ.

click me!