
ಸಿನಿಮಾ ಅಂದ್ರೆ ಎರಡೂವರೆ ಗಂಟೆಯೊಳಗೇ ಮುಗಿಯಬೇಕು ಅನ್ನೋ ಮಾತು ಈಗ ಹಳೆಯದಾಗುತ್ತಿದೆ. ಕಥೆ ಮತ್ತು ಕಂಟೆಂಟ್ ಗಟ್ಟಿಯಾಗಿದ್ದರೆ ಮೂರು ಗಂಟೆಯಲ್ಲ, ಮೂರೂವರೆ ಗಂಟೆಯ ಸಿನಿಮಾವನ್ನೂ ಪ್ರೇಕ್ಷಕರು ಕುತೂಹಲದಿಂದ ನೋಡುತ್ತಾರೆ ಎಂಬುದನ್ನು ಇತ್ತೀಚಿನ ಹಲವು ಸಿನಿಮಾಗಳು ಸಾಬೀತುಪಡಿಸಿವೆ. ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಈ ಟ್ರೆಂಡ್ ಈಗ ಸಕ್ಸಸ್ ಫಾರ್ಮುಲಾ ಆಗುತ್ತಿರುವಂತಿದೆ.
ಸಾಮಾನ್ಯವಾಗಿ ಸಿನಿಮಾಗಳಿಗೆ ಎರಡೂವರೆ ಗಂಟೆಯ ರನ್‌ಟೈಮ್ ಸೂಕ್ತ ಎನ್ನಲಾಗುತ್ತಿತ್ತು. ಆದರೆ ಈಗ ಮೇಕರ್ಸ್ ಆ ಲೆಕ್ಕಾಚಾರವನ್ನೇ ಬದಲಿಸುತ್ತಿದ್ದಾರೆ. 2 ಗಂಟೆ 30 ನಿಮಿಷವಲ್ಲ... 3 ಗಂಟೆ, 3.30 ಗಂಟೆಯಾದರೂ ಪರವಾಗಿಲ್ಲ, ಸಿನಿಮಾದಲ್ಲಿ ವಿಷಯವಿರಬೇಕು ಎನ್ನುವ ನಿಲುವಿಗೆ ಬಂದಿದ್ದಾರೆ. ಈಗಾಗಲೇ ‘ಪುಷ್ಪ 2’, ‘ಅನಿಮಲ್’, ‘ಆರ್‌ಆರ್‌ಆರ್’, ‘ಧುರಂಧರ್’ ಸೇರಿದಂತೆ ಹಲವು ಸಿನಿಮಾಗಳು ಮೂರು ಗಂಟೆಗೂ ಹೆಚ್ಚು ಅವಧಿಯಲ್ಲೇ ಬಂದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿವೆ.
‘ಪುಷ್ಪ 2’ಯಿಂದ ‘ಅನಿಮಲ್’ವರೆಗೆ…
ಸುಕುಮಾರ್ ನಿರ್ದೇಶನದ ‘ಪುಷ್ಪ 2’ ಸಿನಿಮಾದ ಥಿಯೇಟ್ರಿಕಲ್ ವರ್ಷನ್ ಕೂಡ ಸುಮಾರು 3 ಗಂಟೆ 20 ನಿಮಿಷಕ್ಕೂ ಹೆಚ್ಚು ಅವಧಿಯಲ್ಲಿತ್ತು. ನಂತರ ಬಂದ ರೀಲೋಡೆಡ್ ವರ್ಷನ್ ಬರೋಬ್ಬರಿ 3 ಗಂಟೆ 44 ನಿಮಿಷಗಳಷ್ಟು ಉದ್ದವಾಗಿತ್ತು. ಇನ್ನು ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಕೂಡ ಸುಮಾರು 3 ಗಂಟೆ 21 ನಿಮಿಷಗಳ ರನ್‌ಟೈಮ್‌ನೊಂದಿಗೆ ತೆರೆಕಂಡಿತ್ತು. ಇಷ್ಟೊಂದು ದೀರ್ಘ ಸಿನಿಮಾಗಳನ್ನು ಪ್ರೇಕ್ಷಕರು ಸ್ವೀಕರಿಸುತ್ತಾರಾ ಎಂಬ ಅನುಮಾನಗಳಿದ್ದರೂ, ಕಂಟೆಂಟ್ ಗಟ್ಟಿಯಾಗಿದ್ದರೆ ರನ್‌ಟೈಮ್ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಸಿನಿಮಾಗಳು ತೋರಿಸಿಕೊಟ್ಟವು. ಇದೇ ಸಾಲಿನಲ್ಲಿ ‘ಆರ್‌ಆರ್‌ಆರ್’ ಸೇರಿದಂತೆ ಮೂರು ಗಂಟೆಗೂ ಅಧಿಕ ಅವಧಿಯ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿವೆ.
‘ಧುರಂಧರ್’ ಗೆಲುವು ಬದಲಿಸಿದ ಲೆಕ್ಕಾಚಾರ!
ಇತ್ತೀಚಿನ ದಿನಗಳಲ್ಲಿ ಸಿನಿಮಾದ ರನ್‌ಟೈಮ್ ಬಗ್ಗೆ ಇದ್ದ ಎಲ್ಲಾ ಅನುಮಾನಗಳಿಗೆ ದೊಡ್ಡ ಉತ್ತರ ನೀಡಿದ ಸಿನಿಮಾ ಎಂದರೆ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’. ಮೊದಲ ಭಾಗ ಬರೋಬ್ಬರಿ 3 ಗಂಟೆ 32 ನಿಮಿಷಗಳ ಅವಧಿಯೊಂದಿಗೆ ತೆರೆಕಂಡು ಸುಮಾರು ₹1,400 ಕೋಟಿ ಗಳಿಕೆ ಮಾಡಿತು. ಅದರ ಮುಂದುವರಿದ ಭಾಗ 3 ಗಂಟೆ 49 ನಿಮಿಷಗಳ ರನ್‌ಟೈಮ್‌ನೊಂದಿಗೆ ಬಂದು ಸುಮಾರು ₹1,800 ಕೋಟಿ ಕಲೆಕ್ಷನ್ ಮಾಡಿತು. ಈ ರೀತಿಯ ಭರ್ಜರಿ ಯಶಸ್ಸುಗಳನ್ನು ನೋಡಿದ ಬಳಿಕ ಮೇಕರ್ಸ್‌ಗೂ ಒಂದು ವಿಚಾರ ಸ್ಪಷ್ಟವಾಗಿದೆ. ಸಿನಿಮಾದಲ್ಲಿ ಸರಿಯಾದ ಕಂಟೆಂಟ್ ಇದ್ದರೆ, ಅದರ ಉದ್ದವೇ ಪ್ರೇಕ್ಷಕರಿಗೆ ದೊಡ್ಡ ಸಮಸ್ಯೆಯಾಗುವುದಿಲ್ಲ.
ಈಗ ಇದೇ ವಿಚಾರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದತ್ತ ತಿರುಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ 3 ಗಂಟೆ 14 ನಿಮಿಷಕ್ಕೂ ಹೆಚ್ಚು ರನ್‌ಟೈಮ್ ಹೊಂದಿರಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಅದಕ್ಕೂ ಮಿಗಿಲಾಗಿ ಸಿನಿಮಾ A ಸರ್ಟಿಫಿಕೇಟ್ ಪಡೆದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಆಗಸ್ಟ್ 26ರಂದು ತೆರೆಗೆ ಬರಲಿರುವ ‘ಟಾಕ್ಸಿಕ್’ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ.
ಟ್ರೇಲರ್, ಭರ್ಜರಿ ವಿಷುವಲ್ಸ್, ಹಾಡುಗಳು ಹಾಗೂ ಯಶ್ ಅವರ ವಿಭಿನ್ನ ಲುಕ್ ಸಿನಿಮಾದ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿವೆ. ಹೀಗಾಗಿ ‘ಟಾಕ್ಸಿಕ್’ ವಿಚಾರದಲ್ಲೂ ಈಗ ಒಂದೇ ಪ್ರಶ್ನೆ-ಮೂರು ಗಂಟೆಗೂ ಮೀರಿದ ರನ್‌ಟೈಮ್ ಪ್ರೇಕ್ಷಕರಿಗೆ ಸಮಸ್ಯೆಯಾಗುತ್ತಾ? ಅಥವಾ ಸಿನಿಮಾದಲ್ಲಿರುವ ‘ಮ್ಯಾಟರ್’ ಎಲ್ಲವನ್ನೂ ಮರೆಸುತ್ತಾ? ಒಟ್ಟಿನಲ್ಲಿ ಇತ್ತೀಚಿನ ಬಾಕ್ಸ್ ಆಫೀಸ್ ಫಲಿತಾಂಶಗಳನ್ನು ನೋಡಿದರೆ ಒಂದು ಮಾತು ಮಾತ್ರ ಹೇಳಬಹುದು: ಸಿನಿಮಾದಲ್ಲಿ ಮ್ಯಾಟರ್ ಇದ್ದರೆ… ರನ್‌ಟೈಮ್ ನಿಜಕ್ಕೂ ಮ್ಯಾಟರೇ ಅಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.