
‘ಬಿಗ್ ಬಾಸ್’ ಖ್ಯಾತಿಯ ನಟ ವಿನಯ್ ಗೌಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಲ್ಲಿದ್ದಾರೆ. ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದ ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಕೇಳಿದ ಪ್ರಶ್ನೆಯೊಂದಕ್ಕೆ ಅವರು ನೀಡಿದ್ದ ಉತ್ತರವೇ ಇದಕ್ಕೆ ಕಾರಣ. ‘ಸರ್ಕಲ್‌ಗೆ ಎಷ್ಟು ಸೈಡ್ಸ್ ಇವೆ?’ ಎಂಬ ಪ್ರಶ್ನೆಗೆ ವಿನಯ್ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ವಿನಯ್ ಗೌಡ ಅವರನ್ನು ಟ್ರೋಲ್ ಮಾಡುವುದಷ್ಟೇ ಅಲ್ಲದೆ, ಅವರ ಫೋಟೋಗಳನ್ನು ಐನ್‌ಸ್ಟೈನ್ ಸೇರಿದಂತೆ ವಿಜ್ಞಾನಿಗಳ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದೀಗ ಈ ಎಲ್ಲ ಟ್ರೋಲ್‌ಗಳಿಗೆ ವಿನಯ್ ಗೌಡ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಾನು ಕ್ಯಾರೇ ಎನ್ನಲ್ಲ’
ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ವಿನಯ್ ಗೌಡ, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ‘ಜೋರ್ಡನ್ ಕರ್ವ್ ಸಿದ್ಧಾಂತ’ವನ್ನು ಉಲ್ಲೇಖಿಸುವ ಮೂಲಕ ವೃತ್ತದ ಒಳಭಾಗ ಮತ್ತು ಹೊರಭಾಗದ ನಡುವಿನ ಗಡಿಯ ಬಗ್ಗೆ ತಮ್ಮ ವಾದವನ್ನು ವಿವರಿಸಿದ್ದಾರೆ. ವೃತ್ತದ ಗಡಿ ರೇಖೆಯನ್ನು ದಾಟದೆ ಒಳಭಾಗದಿಂದ ಹೊರಭಾಗಕ್ಕೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಆ ಗಡಿಗೆ ಎರಡು ಬದಿಗಳಿವೆ ಎಂಬ ರೀತಿಯಲ್ಲಿ ಅವರು ತಮ್ಮ ಉತ್ತರವನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಪರವಾಗಿ ಮಾತನಾಡಿದವರಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ.
ಪ್ರಶ್ನೆ ಯಾಕೆ ಕೇಳಿದ್ದೆ ಎಂದೂ ವಿವರಿಸಿದ ವಿನಯ್
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪ್ರಶ್ನೆ ಕೇಳಿದ್ದೇಕೆ ಎಂಬುದಕ್ಕೂ ವಿನಯ್ ಗೌಡ ಕಾರಣ ನೀಡಿದ್ದಾರೆ. ಕಂಪ್ಯೂಟರ್ ಸೈನ್ಸ್ ಓದುತ್ತಿರುವ ವಿದ್ಯಾರ್ಥಿಯೊಬ್ಬನಿಗೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಶ್ನೆ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಆ ಪ್ರಶ್ನೆಗೆ ವಿದ್ಯಾರ್ಥಿ ನೀಡಿದ ಉತ್ತರ ಸಮಂಜಸವಾಗಿರಲಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತನ್ನು ಹಿಡಿದುಕೊಂಡು ಟ್ರೋಲ್ ಮಾಡುವ ‘PR ಟ್ರೋಲ್’ಗಳಿಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿನಯ್ ಗೌಡ ಸ್ಪಷ್ಟವಾಗಿ ಹೇಳಿದ್ದಾರೆ.
ಅಸಲಿ ವಿವಾದ ಶುರುವಾಗಿದ್ದು ಹೇಗೆ?
‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಆಡಿಷನ್ ವೇಳೆ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬರಿಗೆ ವಿನಯ್ ಗೌಡ ಅವರು, “ಒಂದು ಸರ್ಕಲ್‌ಗೆ ಎಷ್ಟು ಸೈಡ್ಸ್ ಇರುತ್ತವೆ?” ಎಂದು ಪ್ರಶ್ನಿಸಿದ್ದರು. ಅದಕ್ಕೆ ವಿದ್ಯಾರ್ಥಿ, ವೃತ್ತಕ್ಕೆ ಯಾವುದೇ ಬಾಹುಗಳು ಅಥವಾ ಸೈಡ್ಸ್ ಇರುವುದಿಲ್ಲ ಎಂದು ಉತ್ತರಿಸಿದ್ದರು. ಆದರೆ ವಿನಯ್ ಗೌಡ ಅವರು ವೃತ್ತಕ್ಕೆ ಇನ್‌ಸೈಡ್ ಮತ್ತು ಔಟ್‌ಸೈಡ್ ಎಂಬ ಎರಡು ಸೈಡ್‌ಗಳಿವೆ ಎಂದು ಹೇಳಿದ್ದರು. ಈ ಉತ್ತರದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಯಿತು. ಕೆಲವರು ವಿನಯ್ ಗೌಡ ಅವರ ಉತ್ತರವನ್ನು ಟೀಕಿಸಿದರೆ, ಇನ್ನು ಕೆಲವರು ಇದು ಸಂದರ್ಭಕ್ಕೆ ಅನುಗುಣವಾಗಿ ನೀಡಿದ ಉತ್ತರ ಎಂದು ಸಮರ್ಥಿಸಿಕೊಂಡಿದ್ದಾರೆ.
ವಿನಯ್ ಗೌಡ ತಮ್ಮ ವಾದವನ್ನು ವಿವರಿಸುವ ರೀತಿಯಲ್ಲಿ ಸ್ಟೈಲಿಶ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪೋಸ್ಟ್‌ಗೆ ನೆಟ್ಟಿಗರಿಂದ ಮತ್ತೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಅವರ ವಿವರಣೆಯನ್ನು ಗಂಭೀರವಾಗಿ ಚರ್ಚಿಸಿದ್ದರೆ, ಮತ್ತಷ್ಟು ಮಂದಿ ತಮಾಷೆಯ ಕಾಮೆಂಟ್‌ಗಳ ಮೂಲಕ ಕಾಲೆಳೆದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ‘ಆನೆ’ ಎಂದೇ ಗುರುತಿಸಿಕೊಂಡಿದ್ದ ವಿನಯ್ ಗೌಡ, ಇದೀಗ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಅಭ್ಯರ್ಥಿಗಳ ಆಯ್ಕೆಗಾಗಿ ನಡೆಯುತ್ತಿರುವ ‘ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀಸನ್ 13 ಆರಂಭಕ್ಕೂ ಮುನ್ನವೇ ವಿನಯ್ ಗೌಡ ಅವರ ಈ ‘ಸರ್ಕಲ್’ ವಿವಾದ ಸಖತ್ ಸದ್ದು ಮಾಡುತ್ತಿದ್ದು, ಅವರು ನೀಡಿರುವ ಹೊಸ ಸ್ಪಷ್ಟನೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.