
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಈ ಸಿನಿಮಾ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ವಿಶೇಷ ಸ್ಥಾನ ಪಡೆದಿದೆ. ಅಪ್ಪು ಮತ್ತು ರಮ್ಯಾ ಜೋಡಿಯ ಮೋಡಿ, ಮಹೇಶ್ ಬಾಬು ನಿರ್ದೇಶನ ಹಾಗೂ ಚಿತ್ರದ ಸುಮಧುರ ಹಾಡುಗಳು ಸಿನಿಮಾದ ಯಶಸ್ಸಿಗೆ ದೊಡ್ಡ ಕೊಡುಗೆ ನೀಡಿದ್ದವು. ಅದರಲ್ಲೂ ಈ ಹಾಡು ಇಂದಿಗೂ ಸಂಗೀತಪ್ರಿಯರ ನೆಚ್ಚಿನ ಗೀತೆಗಳಲ್ಲಿ ಒಂದಾಗಿದೆ. ಪ್ರೇಮಿಗಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಗುನುಗುವ ಈ ಹಾಡಿನ ಹಿಂದೆ ಒಂದು ಸುಂದರವಾದ ಹಾಗೂ ಅಷ್ಟೇ ಕುತೂಹಲಕಾರಿ ಕಥೆಯಿದೆ. ಯಾವುದು ಆ ಹಾಡು? ಇಲ್ಲಿದೆ ನೋಡಿ.
ಈ ಹಾಡನ್ನು ಪ್ರೇಮಕವಿ ಕೆ. ಕಲ್ಯಾಣ್ ಅವರು ಹೇಗೆ ಬರೆದರು? ಹಾಡಿನ ಮೊದಲ ಸಾಲು ಅವರಿಗೆ ಹೇಗೆ ಹೊಳೆಯಿತು? ಅಣ್ಣಾವ್ರ ಮನೆಯ ಹೊರಗೆ ಕಾರಿನಲ್ಲಿ ಕುಳಿತು ಹಾಡು ರಚಿಸಿದ್ದೇಕೆ? ಈ ಎಲ್ಲ ಸ್ವಾರಸ್ಯಕರ ಸಂಗತಿಗಳನ್ನು ಕೆ. ಕಲ್ಯಾಣ್ ಅವರೊಂದಿಗಿನ ಅನುಭವವನ್ನು ಹಂಚಿಕೊಂಡ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಅಪ್ಪು, ಅಭಿ, ವೀರ ಕನ್ನಡಿಗ ಸೇರಿದಂತೆ ಹಲವು ಸಿನಿಮಾಗಳಿಗೆ ಕೆ. ಕಲ್ಯಾಣ್ ಅವರು ಹಾಡುಗಳನ್ನು ಬರೆದಿದ್ದರು. ಬಳಿಕ ‘ಆಕಾಶ್’ ಸಿನಿಮಾದ ಹಾಡುಗಳಿಗಾಗಿ ಪಾರ್ವತಮ್ಮ ರಾಜ್ಕುಮಾರ್ ಅವರು ಕಲ್ಯಾಣ್ ಅವರನ್ನು ಮನೆಗೆ ಕರೆಸಿಕೊಂಡಿದ್ದರು. ಆ ಸಮಯದಲ್ಲಿ ಪುನೀತ್ ಅವರ ಸಿನಿಮಾಗಳ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಮುತುವರ್ಜಿ ವಹಿಸುತ್ತಿದ್ದರು.
ಆರ್.ಪಿ. ಪಟ್ನಾಯಕ್ ಅವರು ಸಿನಿಮಾಕ್ಕಾಗಿ ಸಿದ್ಧಪಡಿಸಿದ್ದ ಟ್ಯೂನ್ಗಳನ್ನು ಕಲ್ಯಾಣ್ ಅವರು ವಾಕ್ಮ್ಯಾನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ರಾಘಣ್ಣ ಅವರೊಂದಿಗೆ ಚರ್ಚಿಸಿದಾಗ, ಹಾಡಿನ ಸಾಹಿತ್ಯ ಸರಳವಾಗಿರಬೇಕು ಎಂಬ ಸಲಹೆ ಸಿಕ್ಕಿತ್ತು. ಯಾವುದೇ ಕಠಿಣ ಪದಗಳು, ಅತಿಯಾದ ತಾತ್ವಿಕ ವಿಚಾರಗಳು ಬೇಡ. ಎಲ್ಲ ವಯೋಮಾನದವರಿಗೂ ಇಷ್ಟವಾಗುವಂತೆ ಪ್ರೀತಿಯನ್ನು ಸರಳವಾಗಿ ವ್ಯಕ್ತಪಡಿಸುವ ಹಾಡಾಗಿರಬೇಕು ಎಂದು ರಾಘಣ್ಣ ಹೇಳಿದ್ದರಂತೆ.
ಟ್ಯೂನ್ಗಳನ್ನು ಕೇಳಿಸಿಕೊಂಡಿದ್ದ ಕಲ್ಯಾಣ್ ಅವರು ಮರುದಿನ ಹಾಡು ಬರೆದುಕೊಂಡು ಬರುವುದಾಗಿ ಹೇಳಿದ್ದರು. ಆದರೆ ಅಣ್ಣಾವ್ರ ಮನೆಗೆ ತೆರಳುವವರೆಗೂ ಹಾಡಿನ ಒಂದೇ ಒಂದು ಪದವೂ ಅವರಿಗೆ ಹೊಳೆದಿರಲಿಲ್ಲ. ತಮ್ಮ ಆತ್ಮೀಯ ಸ್ನೇಹಿತ ಜಯಸಿಂಹ ಅವರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ಕಲ್ಯಾಣ್ ಅವರು, ಹಾಡಿನ ಸಾಹಿತ್ಯ ಹೇಗಿರಬೇಕು ಎಂಬ ಯೋಚನೆಯಲ್ಲೇ ಮುಳುಗಿದ್ದರು.
ಆದರೆ ಅಣ್ಣಾವ್ರ ಮನೆಯ ಗೇಟ್ನಿಂದ ಮನೆಯ ಬಾಗಿಲಿಗೆ ಹೋಗುವಷ್ಟರಲ್ಲಿ ಅವರಿಗೆ ಹಾಡಿನ ಮೊದಲ ಚರಣ ಹೊಳೆದಿತ್ತು. ಅದುವೇ ‘ಮಳೆಯಲ್ಲೂ, ಬಿಸಿಲಲ್ಲೂ, ಚಳಿಯಲ್ಲೂ ಜೊತೆ ನಡೆಯುವೆ. ನೋವಲ್ಲೂ, ಹಸಿವಲ್ಲೂ, ಸಾವಲ್ಲೂ ಜೊತೆ ನಿಲ್ಲುವೆ. ನಾನಾ ದೇಶ, ನಾನಾ ವೇಷ ಯಾವುದಾದರೇನು ಒಪ್ಪಿಕೊಂಡ ಈ ಮನಸುಗಳೆರಡು ಇಂದು ಆಲೂ ಜೇನು’ ಎಂಬ ಸುಂದರ ಸಾಲುಗಳು.
ಆ ಚರಣವನ್ನು ರಾಘಣ್ಣ ಅವರಿಗೆ ತೋರಿಸಿದಾಗ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಕ್ಕೆ ತಕ್ಷಣ ಪಲ್ಲವಿ ಸೇರಿಸಿ, ಮತ್ತೊಂದು ಚರಣವನ್ನೂ ಬರೆದು ಹಾಡನ್ನು ಪೂರ್ಣಗೊಳಿಸುವಂತೆ ಸಲಹೆ ನೀಡಿದ್ದರು.
ರಾಘಣ್ಣ ಅವರು ಮನೆಯಲ್ಲೇ ಕುಳಿತು ಹಾಡು ಪೂರ್ಣಗೊಳಿಸುವಂತೆ ಹೇಳಿದರೂ, ಕಲ್ಯಾಣ್ ಅವರು ತಮ್ಮ ಸ್ನೇಹಿತ ಕಾರಿನಲ್ಲಿ ಕಾಯುತ್ತಿರುವುದರಿಂದ ಹೊರಗೆ ಹೋಗಿ ಬರೆಯುವುದಾಗಿ ತಿಳಿಸಿದ್ದರು. ಅದಕ್ಕೆ ರಾಘಣ್ಣ ಕೂಡ ಒಪ್ಪಿಗೆ ನೀಡಿದ್ದರು. ಹೀಗೆ ಅಣ್ಣಾವ್ರ ಮನೆಯ ಹೊರಗೆ ಕಾರಿನಲ್ಲಿ ಕುಳಿತ ಕಲ್ಯಾಣ್ ಅವರು ಕಾಫಿ ತರಿಸಿಕೊಂಡು ಕುಡಿಯುತ್ತಾ ಮತ್ತೊಂದು ಚರಣವನ್ನು ಬರೆದರು. ಬಳಿಕ ಹಾಡಿಗೆ ಸೂಕ್ತವಾದ ಪಲ್ಲವಿ ಯಾವುದಿರಬೇಕು ಎಂದು ಯೋಚಿಸುತ್ತಿದ್ದಾಗ ಅವರಿಗೆ ಹೊಳೆದ ಸಾಲುಗಳೇ ‘ನೀನೇ ನೀನೇ ನನಗೆಲ್ಲ ನೀನೇ... ನನ್ನ ಎದೆಯ ತುಂಬಾ ನಿನ್ನ ಪ್ರೀತಿತಾನೆ’.
ತಕ್ಷಣ ರಾಘಣ್ಣ ಅವರಿಗೆ ಫೋನ್ ಮಾಡಿ ಪಲ್ಲವಿಯನ್ನು ಹಾಡಿ ಕೇಳಿಸಿದರು. ಸಾಲುಗಳನ್ನು ಕೇಳಿದ ರಾಘಣ್ಣ ಅವರು ತುಂಬಾ ಚೆನ್ನಾಗಿದೆ ಎಂದು ಮೆಚ್ಚಿಕೊಂಡರು. ಹೀಗೆ ಕಾರಿನಲ್ಲಿ ಕುಳಿತು ಕಾಫಿ ಕುಡಿಯುತ್ತಾ ಸೃಷ್ಟಿಯಾದ ಹಾಡು ‘ನೀನೇ ನೀನೇ’.
ಹಾಡು ಪೂರ್ಣಗೊಂಡ ಬಳಿಕ ಕಲ್ಯಾಣ್ ಅವರು ಅದನ್ನು ರಾಘಣ್ಣ ಅವರಿಗೆ ನೀಡಿದರು. ನಂತರ ಅಪ್ಪಾಜಿ ಡಾ. ರಾಜ್ಕುಮಾರ್ ಅವರಿಗೂ ಹಾಡನ್ನು ಕೇಳಿಸಲಾಯಿತು. ಹಾಡನ್ನು ಕೇಳಿದ ರಾಘಣ್ಣ ಅವರು, ವರದಪ್ಪ ಅವರಿಗೂ ಒಮ್ಮೆ ಕೇಳಿಸೋಣ ಎಂದು ಹೇಳಿದರಂತೆ. ಅದರಂತೆ ವರದಪ್ಪ ಅವರನ್ನು ಕರೆಸಲಾಯಿತು. ರಾಘಣ್ಣ ಅವರು ಮತ್ತೊಮ್ಮೆ ಹಾಡನ್ನು ಹಾಡಿ ಕೇಳಿಸಿದರು. ಹಾಡಿನ ಸಾಹಿತ್ಯವನ್ನು ಮೆಚ್ಚಿಕೊಂಡ ವರದಪ್ಪ ಅವರು, ಇದು ಅದ್ಭುತವಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವೆಂದರೆ, ಹಾಡಿನ ಒಂದೇ ಒಂದು ಪದವನ್ನೂ ಬದಲಿಸದೆ ಅಂತಿಮಗೊಳಿಸಲಾಯಿತು.
ಹಾಡು ಸಿದ್ಧವಾದ ಬಳಿಕ ಅದನ್ನು ಯಾರು ಹಾಡಬೇಕು ಎಂಬ ಚರ್ಚೆ ನಡೆಯಿತು. ಕೊನೆಗೆ ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವ ಮತ್ತು ಧ್ವನಿಗೆ ಕುನಾಲ್ ಗಾಂಜಾವಾಲ ಅವರ ಗಾಯನ ಸೂಕ್ತವಾಗುತ್ತದೆ ಎಂಬ ನಿರ್ಧಾರಕ್ಕೆ ಬರಲಾಯಿತು. ಬಳಿಕ ಅವರನ್ನು ಸಂಪರ್ಕಿಸಿ ಬೆಂಗಳೂರಿಗೆ ಕರೆಸಿ ಹಾಡನ್ನು ಹಾಡಿಸಲಾಯಿತು. ಈ ಹಾಡು ಕುನಾಲ್ ಗಾಂಜಾವಾಲ ಅವರು ಹಾಡಿದ ಮೊದಲ ಕನ್ನಡ ಗೀತೆ ಎಂಬ ವಿಶೇಷತೆಯನ್ನೂ ಹೊಂದಿದೆ. ಹಾಡಿನ ರೆಕಾರ್ಡಿಂಗ್ ಅದ್ಭುತವಾಗಿ ಮೂಡಿಬಂದಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ‘ನೀನೇ ನೀನೇ’ ಹಾಡು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿತು.
‘ನೀನೇ ನೀನೇ’ ಹಾಡು ಜನಪ್ರಿಯವಾದ ಬಳಿಕ ಡಾ. ರಾಜ್ಕುಮಾರ್ ಅವರು ಕೆ. ಕಲ್ಯಾಣ್ ಅವರನ್ನು ಕರೆಸಿ ತಬ್ಬಿಕೊಂಡು ಅಭಿನಂದಿಸಿದ್ದರಂತೆ. ಸಾಹಿತ್ಯ ತುಂಬಾ ಸರಳವಾಗಿದೆ, ಆದರೆ ಅದರೊಳಗೆ ಬಹಳ ಅರ್ಥವಿದೆ. ಅದ್ಭುತವಾಗಿ ಬರೆದಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.