
ರೇಟಿಂಗ್ **
ಚಿತ್ರ: ಅಜರಾಮರ
ತಾರಾಗಣ : ಥಾರಕ್, ರೋಷಿನಿ, ಮಿತ್ರ, ಸುಚೇಂದ್ರ ಪ್ರಸಾದ್, ಮಧು ಸೂಧನ್, ಗುರುರಾಜ ಹೋಸಕೋಟೆ
ನಿರ್ದೇಶನ: ರವಿ ಕಾರಂಜಿ
ಸಂಗೀತ: ರಾಜ್ ಕಿಶೋರ್
ಛಾಯಾಗ್ರಹಣ: ಹರಿ ನಾಯ್ಕ
ನಿರ್ಮಾಣ: ಅಭಯ್ ಸಿನಿಮಾಸ್
ತಾರುಣ್ಯದಲ್ಲಿ ಹುಡುಗರು ತಾವಂದುಕೊಂಡಿದ್ದನ್ನು ಎಷ್ಟರಮಟ್ಟಿಗೆ ಸಾಧಿಸುತ್ತಾರೋ ಗೊತ್ತಿಲ್ಲ, ಆದರೆ ತಾವು ಪ್ರೀತಿಸುವ ಹುಡುಗಿಗಾಗಿ ಅಸಾಧ್ಯ ಎನಿಸಿದ್ದನ್ನು ಸಾಧಿಸಿಬಲ್ಲರು. ರವಿ ಕಾರಂಜಿ ನಿರ್ದೇಶನದ ‘ಅಜರಾಮರ' ಚಿತ್ರದ ಒಟ್ಟು ತಿರುಳೇ ಇದು. ಬದುಕೇ ನಿರರ್ಥಕ ಅಂದುಕೊಂಡವನು, ಗೊತ್ತು-ಗುರಿಯೇ ಇಲ್ಲದವನು ಅಸಾಧ್ಯ ಎಂದುಕೊಂಡಿದ್ದನ್ನು ಹೇಗೆ ಸಾಧಿಸಿತೋರಿಸುತ್ತಾನೆ ಎನ್ನುವುದೇ ಚಿತ್ರದ ಒನ್‌ಲೈನ್ ಸ್ಟೋರಿ. ಇಷ್ಟಾಗಿಯೂ ಅದರ ನೋಡುಗನ ಪಾಲಿಗೆ ಚಿತ್ರ ಬೇಸರ ಹುಟ್ಟಿಸುವುದು ಅದರ ಕಟ್ಟುವಿಕೆಯ ಕ್ರಮದಲ್ಲಿ, ಹಾಡು, ಸಂಭಾಷಣೆ ಹಾಗೂ ಸಾಹಸಗಳಲ್ಲಿ ಬಿಗಿ ಹಿಡಿತ ಕಾಣದ ಕಾರಣಕ್ಕೆ.
ಬೋರೋ ಬೋರು..!: ಚಿತ್ರದ ಮೊದಲರ್ಧ ಅರ್ಥವಾಗದ ಶುದ್ಧ ನಿರಾಸೆ ಮೂಡಿಸುವ ಕಥಾನಕ. ಅನಾಥಾಶ್ರಮದಿಂದ ಹೊರಬಿದ್ದ ಹುಡುಗ ಜಯ್, ತಾನೊಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಸುಳ್ಳು ಹೇಳಿ ನಾಯಕಿ ಅಂಬುಜಾ ಮನೆ ಸೇರುತ್ತಾನೆ. ಇಲ್ಲಿ ಅವರಿಬ್ಬರ ಮುಖಾಮುಖಿಗೆ ಅಂಥದ್ದೇನು ರೋಚಕ ಘಳಿಗೆಯೇ ಇಲ್ಲ. ಸಹಜ ಸನ್ನಿವೇಶದಲ್ಲಿ ಇಬ್ಬರ ಭೇಟಿ. ಒಂದು ವಾರದ ಮಟ್ಟಿಗೆ ಉಳಿದುಕೊಳ್ಳುವ ಅವಕಾಶಕ್ಕೆ ನಾಯಕಿ ದಯಪಾಲಿಸಿದ ನಂತರ ಆಕೆಗೆ ಆಗಿದ್ದು ದಾರಿ ಹೋಗುವ ಮಾರಿಯನ್ನು ಮನೆಗೆ ಕರೆ ತಂದ ಅನುಭವ. ಶುದ್ಧ ಕೀಟಲೆ ಹುಡುಗ. ಸುಮ್ಮನೆ ಕೂರುವನಲ್ಲ. ಆದರೆ ಅತ್ಯಂತ ಬುದ್ದಿವಂತ. ಆತನ ತರ್ಲೆ ಕೆಲಸಗಳಿಂದ ಬೇಸತ್ತ ನಾಯಕಿ, ಇನ್ನೇನು ಆತನನ್ನು ಮನೆಯಿಂದ ಹೊರ ಹಾಕಬೇಕೆನ್ನುವ ನಿರ್ಧಾರಕ್ಕೆ ಬರುವ ಹೊತ್ತಿಗೆ ಬಾಕಿ ಉಳಿದಿದ್ದು ಒಂದು ದಿನ ಮಾತ್ರ. ಆಗ ಸಂಭವಿಸುವ ಒಂದು ಘಟನೆ, ಆಕೆಯ ಮನಸ್ಸಲ್ಲಿ ಆತ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ. ಅಲ್ಲಿಂದ ಮುಂದೇನು ಎನ್ನುವುದು ದ್ವಿತೀಯಾರ್ಧದ ಕತೆ. ಆರಂಭದಿಂದ ಇಲ್ಲಿ ತನಕ ಸಾಗಿ ಬರುವ ಕತೆಯ ಪಯಣ ಮಾತ್ರ ಪ್ರೇಕ್ಷಕರ ಪಾಲಿಗೆ ಶುದ್ಧ ಬೇಸರದ ದಾರಿ. ಮುಖ್ಯವಾದ ಘಟ್ಟಕ್ಕೆ ಬರಲು ನಿರ್ದೇಶಕರು, ಇಷ್ಟು ಅವದಿಯನ್ನು ಬಳಸಿಕೊಂಡಿದ್ದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತಿದೆ.
ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಥಾರಕ್, ಶುದ್ಧ ತರ್ಲೆ ಹುಡುಗನಾಗಿ ಗಮನ ಸೆಳೆಯುತ್ತಾರೆ. ಸೆಂಟಿಮೆಂಟ್ ಸನ್ನಿವೇಶಗಳಲ್ಲಿ ಆಪ್ತವಾಗುತ್ತಾರೆ. ನೃತ್ಯ, ಸಾಹಸಗಳಲ್ಲೂ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಾಯಕಿ ರೋಷಿನಿಗೆ ಮಾತ್ರ ಇಲ್ಲಿ ಮಿಶ್ರ ಪ್ರತಿಕ್ರಿಯೆ. ಆರಂಭದಲ್ಲಿ ಬೇಸರ ತರಿಸಿದರೂ, ಕ್ಲೈಮ್ಯಾಕ್ಸ್'ನಲ್ಲಿ ಇಷ್ಟವಾಗುತ್ತಾರೆ. ಸುಚೇಂದ್ರ ಪ್ರಸಾದ್, ರಮೇಶ್ ಭಟ್, ವಿಲನ್ ಮಧುಸೂದನ್ ಚಿತ್ರಕ್ಕೆ ಪ್ಲಸ್. ಚಿತ್ರದಲ್ಲಿರುವ ಒಟ್ಟು ನಾಲ್ಕು ಹಾಡುಗಳಲ್ಲಿ ಕೇಳ್ಳುವುದಕ್ಕೆ ಆಪ್ತ ಎನಿಸಿದ್ದು ಒಂದೇ ಒಂದು ಹಾಡು.
- ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.