‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅನಾರೋಗ್ಯದಿಂದ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದು ಕಾಲದ ಬಹುಬೇಡಿಕೆಯ ನಟಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದಕ್ಕೆ ಚಿತ್ರೋದ್ಯಮ ಕಳವಳಗೊಂಡಿದೆ. ಒಂದಷ್ಟು ವರ್ಷ ಟನೆಯಿಂದ ದೂರ ಉಳಿದಿದ್ದ ಅವರೀಗ ನಟನೆಗೂ ಮನಸ್ಸು ಮಾಡಿದ್ದಾರೆ.
ಇದರ ಬೆನ್ನಲೇ ಆರೋಗ್ಯ ಸುಧಾರಿಸಿದ ತಕ್ಷಣವೇ ಮಹೇಶ್ ನಿರ್ದೇಶನದ ‘ಮದಗಜ’ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುವುದು ಖಾತರಿಯಾಗಿದೆ. ಸದ್ಯಕ್ಕೆ ಈ ಬಗ್ಗೆ ನಟಿ ವಿಜಯಲಕ್ಷ್ಮಿ ಅವರ ಬಳಿ ಯಾವುದೇ ಚರ್ಚೆ ಆಗಿಲ್ಲ. ಆದರೆ ವಿಜಯಲಕ್ಷ್ಮಿಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಪರಿಗಣಿಸಿ, ವಾಣಿಜ್ಯ ಮಂಡಳಿಯ ಹಲವು ಪದಾಧಿಕಾರಿಗಳು ಮಾಡಿಕೊಂಡ ಮನವಿಗೆ ನಿರ್ದೇಶಕ ಮಹೇಶ್ ಹಸಿರು ನಿಶಾನೆ ತೋರಿಸಿದ್ದಾರೆ. ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
‘ಚಿತ್ರೀಕರಣ ಶುರುವಾಗುವುದಕ್ಕೆ ಇನ್ನಷ್ಟು ದಿನಗಳ ಬೇಕಾಗಿದೆ. ಸದ್ಯಕ್ಕೆ ನಾವೀಗ ಕಲಾವಿದರ ಆಯ್ಕೆಯಲ್ಲಿ ಬ್ಯುಸಿ ಆಗಿದ್ದೇವೆ. ಈ ಹಂತದಲ್ಲೇ ವಿಜಯಲಕ್ಷ್ಮಿ ಅವರಿಗೊಂದು ಅವಕಾಶ ನೀಡಿ ಎಂಬುದಾಗಿ ಚಿತ್ರೋದ್ಯಮದ ಕೆಲವು ಗಣ್ಯರು ನನ್ನಲ್ಲಿ ಮನವಿ ಮಾಡಿದ್ದಾರೆ. ಚಿತ್ರದಲ್ಲಿ ಅವರಿಗೊಂದು ವಿಶೇಷ ಪಾತ್ರವನ್ನೇ ನೀಡುತ್ತೇನೆ. ಈ ಮೂಲಕವಾದರೂ ಅವರಿಗೆ ನನ್ನಿಂದ ನೆರವಾದರೆ ಸಾಕು’ ಎನ್ನುತ್ತಾರೆ ನಿರ್ದೇಶಕ ಮಹೇಶ್. ಸದ್ಯಕ್ಕೆ ವಿಜಯಲಕ್ಷ್ಮಿ ಅವರ ಪಾತ್ರವೇನು ಅನ್ನೋದು ಗೊತ್ತಾಗಿಲ್ಲ. ಮಹೇಶ್ ಪ್ರಕಾರ ಚಿತ್ರದಲ್ಲಿ ಅದು ಪ್ರಮುಖ ಪಾತ್ರವೇ ಹೌದು.
ಅಜ್ಜಿಗೂ ಸಿಕ್ಕಿತು ಅವಕಾಶ
ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ ಇತ್ತ ವಿಜಯಲಕ್ಷ್ಮಿ ಅವರನ್ನು ಚಿತ್ರದ ಪಾತ್ರವೊಂದಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದೆಂದು ನಿರ್ದೇಶಕ ಮಹೇಶ್ ಭರವಸೆ ನೀಡಿದ ಬೆನ್ನಲೇ, ಫೇಸ್‌ಬುಕ್‌ನಲ್ಲಿ ನಿವಾಸ ಕಾಣದ ಬದುಕಿನ ಗೋಳಿನ ಕತೆ ಹೇಳಿಕೊಂಡ ಕುಣಿಗಲ್ ತಾಲೂಕಿನ ಸಣ್ಣಘಟ್ಟ ಗ್ರಾಮದ ಹಿರಿಯ ಅಜ್ಜಿ ದ್ಯಾವಮ್ಮ ಅವರನ್ನು ಚಿತ್ರದ ಮತ್ತೊಂದು ಪೋಷಕ ಪಾತ್ರದಲ್ಲಿ ತೋರಿಸಲು ಮುಂದಾಗಿದ್ದಾರೆ. ವಿಷಯ ತಿಳಿದ ಮರು ದಿನವೇ ಸಣ್ಣಘಟ್ಟ ಗ್ರಾಮಕ್ಕೆ ಹೋಗಿ ಅಜ್ಜಿಯನ್ನು ಭೇಟಿ ಮಾಡಿ, ಚಿತ್ರದ ಮೂಲಕ ಆರ್ಥಿಕ ನೆರವು ನೀಡಲು ಭರವಸೆ ನೀಡಿದ್ದಾರೆ. ‘ನನಗೆ ಈ ವಿಷಯ ಗೊತ್ತಾಗಿದ್ದು ಸೋಷಲ್ ಮೀಡಿಯಾ ಮೂಲಕ. ಹತ್ತಾರು ವರ್ಷ ವಾಸಿಸಲು ಒಂದು ಸೂರು ಕಾಣದೆ ಹರಕು ಮುರುಕು ಗುಡಿಸಲಲ್ಲಿ ಬದುಕುತ್ತಿದ್ದ ಆ ಅಜ್ಜಿಯ ಕತೆ ಗೊತ್ತಾಯಿತು. ನನ್ನ ಚಿತ್ರದಲ್ಲೊಂದು ಅಂಥದ್ದೇ ವಯಸ್ಸಾದ ಅಜ್ಜಿಯ ಪಾತ್ರವೊಂದು ಇದೆ. ಆ ಪಾತ್ರಕ್ಕೆ ಅದೇ ಅಜ್ಜಿಯನ್ನು ಆಯ್ಕೆ ಮಾಡಿಕೊಂಡು, ಕೈಯಲ್ಲಾದ ಸಂಭಾವನೆ ಕೊಟ್ಟರೆ ಆ ಅಜ್ಜಿಗೂ ಅನುಕೂಲವಾಗುತ್ತೆ ಎನ್ನುವ ಕಾರಣದೊಂದಿಗೆ ನಿರ್ಮಾಪಕರಿಗೆ ವಿಷಯ ತಿಳಿಸಿದೆ. ಅವರು ನಿಮ್ಮದೇ ನಿರ್ಧಾರ ಅಂದರು. ಅಂತೆಯೇ ಈಗ ಆ ಅಜ್ಜಿಯೂ ನನ್ನ ಚಿತ್ರದ ಒಂದು ಪಾತ್ರಧಾರಿ. ಅವರಿಗೂ ನನ್ನ ಕೈಯಲ್ಲಾದ ಸಹಾಯ ಮಾಡುವ ಉದ್ದೇಶವಿದೆ’ ಎನ್ನುತ್ತಾರೆ ಮಹೇಶ್.