ಕಾಲಿವುಡ್‌ನ ತಾರಾ ಜೋಡಿ, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಹಾಗೂ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ವೈವಾಹಿಕ ಜೀವನದ ಬಗ್ಗೆ ಕಳೆದ ಕೆಲ ದಿನಗಳಿಂದ ಹಬ್ಬಿದ್ದ ವಿಚ್ಛೇದನದ (Divorce) ವದಂತಿಗಳಿಗೆ ಇದೀಗ ತೆರೆಬಿದ್ದಿದೆ. ತಮ್ಮ ಮಗ ಮತ್ತು ಸೊಸೆಯ ಸಂಸಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ನಟ ತಂಬಿ ರಾಮಯ್ಯ ತೀವ್ರ ಆಕ್ರೋಶ ಹೊರಹಾಕಿದ್ದು, ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಹಸೆಮಣೆ ಏರಿದ್ದ ಐಶ್ವರ್ಯಾ ಹಾಗೂ ಉಮಾಪತಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ, ಇಬ್ಬರೂ ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇಂಟರ್‌ವ್ಯೂಗಳಲ್ಲಿ ಅಷ್ಟೊಂದು ಪ್ರೀತಿಯಿಂದ ಮಾತನಾಡುತ್ತಿದ್ದ ಈ ಜೋಡಿಗೆ ಏನಾಯಿತು? ಮದುವೆಯಾಗಿ ಎರಡು ವರ್ಷ ಕಳೆಯುವುದರೊಳಗೆ ಇಂತಹ ನಿರ್ಧಾರವೇ ಎಂದು ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು.
ಈ ಎಲ್ಲಾ ಊಹಾಪೋಹಗಳಿಗೆ ಇತಿಶ್ರೀ ಹಾಡುವ ಸಲುವಾಗಿ ತಂಬಿ ರಾಮಯ್ಯ ಖ್ಯಾತ ಪತ್ರಕರ್ತ ಬಯಲ್‌ವಾನ್ ರಂಗನಾಥನ್ ಅವರ ಮೂಲಕ ಸ್ಪಷ್ಟನೆ ನೀಡಿದ್ದಾರೆ.
"ನಾವು ಎಲ್ಲಾದರೂ ನಮ್ಮ ಮಕ್ಕಳಿಗೆ ವಿಚ್ಛೇದನವಾಗಿದೆ ಎಂದು ಹೇಳಿದ್ದೇವೆಯೇ? ಯಾರು ಈ ರೀತಿಯ ಕೀಳು ವದಂತಿಯನ್ನು ಹಬ್ಬಿಸಿದರೋ ಗೊತ್ತಿಲ್ಲ, ಇದು ನೂರಕ್ಕೆ ನೂರು ಸಂಪೂರ್ಣ ಸುಳ್ಳು. ಇದಕ್ಕೆಲ್ಲಾ ಮುಕ್ತಾಯ ಹಾಡಬೇಕೆಂದರೆ ಸತ್ಯವನ್ನು ಬಹಿರಂಗಪಡಿಸಲೇಬೇಕು. ಉಮಾಪತಿ ಮತ್ತು ಐಶ್ವರ್ಯಾ ಇಬ್ಬರೂ ಚೆನ್ನೈನ ಮೈಲಾಪುರದಲ್ಲಿ ಪ್ರತ್ಯೇಕವಾಗಿ ಸುಂದರವಾದ ಮನೆ ಮಾಡಿಕೊಂಡು, ಅತ್ಯಂತ ಸೌಹಾರ್ದಯುತವಾಗಿ, ತುಂಬಾ ಸಂತೋಷದಿಂದ ಸಂಸಾರ ನಡೆಸುತ್ತಿದ್ದಾರೆ. ಚೆನ್ನಾಗಿ ಬಾಳುತ್ತಿರುವ ಮಕ್ಕಳ ಬದುಕಿನಲ್ಲಿ ಬೆಂಕಿ ಹಾಕುವುದು ಏಕೆ?" ಎಂದು ತಂಬಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅರ್ಜುನ್ ಸರ್ಜಾ ಎರಡನೇ ಮಗಳ ಮದುವೆ ಅಥವಾ ಸಂಬಂಧಿತ ಕಾರ್ಯಕ್ರಮಕ್ಕೆ ಕುಟುಂಬದ ಕೆಲವರು ಗೈರಾಗಿದ್ದರ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, "ಸುಮಾರು 12 ದಿನಗಳ ಕಾಲ ಅಲ್ಲಿಗೆ ಹೋಗಿ ಸಮಯ ಮತ್ತು ಹಣ ಎರಡನ್ನೂ ವ್ಯರ್ಥ ಮಾಡುವುದು ಬೇಡ ಎಂದಷ್ಟೇ ನಾವು ಹೋಗಿರಲಿಲ್ಲ. ಆದರೆ ಶೀಘ್ರದಲ್ಲೇ ಚೆನ್ನೈನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ (Reception) ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನಾವೆಲ್ಲರೂ ಆ ಸಮಾರಂಭಕ್ಕೆ ಹಾಜರಾಗಲಿದ್ದೇವೆ. ಅಷ್ಟರಲ್ಲೇ ಯಾರು ಈ ರೀತಿ ಅಪಪ್ರಚಾರ ಶುರುಮಾಡಿದರೋ ಅರ್ಥವಾಗುತ್ತಿಲ್ಲ," ಎಂದು ಬೇಸರ ಹೊರಹಾಕಿದ್ದಾರೆ.
ತಂಬಿ ರಾಮಯ್ಯ ಅವರ ಈ ಸ್ಪಷ್ಟನೆಯ ಮೂಲಕ ಐಶ್ವರ್ಯಾ ಅರ್ಜುನ್ ಮತ್ತು ಉಮಾಪತಿ ಅವರ ಡಿವೋರ್ಸ್ ಸುದ್ದಿ ಕೇವಲ ಗಾಳಿಸುದ್ದಿ ಎಂಬುದು ಸಾಬೀತಾಗಿದ್ದು, ವದಂತಿಗಳಿಗೆ ಸಂಪೂರ್ಣ ತೆರೆಬಿದ್ದಂತಾಗಿದೆ.
ದೂರದ ಇಟಲಿಯ ಮನಮೋಹಕ ಟುಸ್ಕಾನಿ (Tuscany) ನಗರದಲ್ಲಿ ಅರ್ಜುನ್ ಸರ್ಜಾ ಕುಟುಂಬದಲ್ಲಿ ಇತ್ತೀಚೆಗಷ್ಟೇ ಮದುವೆಯ ಸಂಭ್ರಮ ಕಳೆಗಟ್ಟಿತ್ತು. ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್, ತಮ್ಮ ಬಹುಕಾಲದ ಗೆಳೆಯ ಇಸಯ್ ನಟ್ಟರ್ ಜೊತೆ ಅಕ್ಟೋಬರ್ 19ರಂದು ಹಸೆಮಣೆ ಏರಿದ್ದರು. ಬರೋಬ್ಬರಿ 14 ವರ್ಷಗಳ ಸುದೀರ್ಘ ಪ್ರೀತಿಗೆ ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದರಿಂದ, ಮೊದಲು ಹಿಂದೂ ಸಂಪ್ರದಾಯ ಹಾಗೂ ನಂತರ ಕ್ರಿಶ್ಚಿಯನ್ ಪದ್ಧತಿಯಂತೆ ಎರಡೂ ರೀತಿಯಲ್ಲೂ ವಿವಾಹ ಕಾರ್ಯಗಳು ಅದ್ಧೂರಿಯಾಗಿ ನೆರವೇರಿದವು. ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸ್ವತಃ ಅಂಜನಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದರು.
ಆದರೆ, ಸಂಭ್ರಮದ ನಡುವೆಯೇ ಈ ಫೋಟೋಗಳು ನೆಟ್ಟಿಗರಲ್ಲಿ ಹೊಸ ಅನುಮಾನದ ಕಿಡಿ ಹೊತ್ತಿಸಿದ್ದವು! ಮದುವೆಯ ಯಾವೊಂದು ಫೋಟೋದಲ್ಲೂ ಅರ್ಜುನ್ ಸರ್ಜಾ ಕುಟುಂಬದ ಹಿರಿಯ ಅಳಿಯ, ನಟ ಉಮಾಪತಿ ರಾಮಯ್ಯ ಕಾಣಿಸಿಕೊಂಡಿರಲೇ ಇಲ್ಲ. ಸಮಾರಂಭದಲ್ಲಿ ಅರ್ಜುನ್ ಸರ್ಜಾ, ಪತ್ನಿ ನಿವೇದಿತಾ ಹಾಗೂ ಹಿರಿಯ ಮಗಳು ಐಶ್ವರ್ಯಾ ಅರ್ಜುನ್ ಮಾತ್ರ ಭಾಗಿಯಾಗಿದ್ದರು.
ಭಾರತೀಯ ಸಂಪ್ರದಾಯದಲ್ಲಿ ನಾದಿನಿಯ ಮದುವೆಯಂತಹ ಮಹತ್ವದ ಶುಭಕಾರ್ಯದಲ್ಲಿ ಹಿರಿಯ ಅಳಿಯನೇ ನಾಪತ್ತೆಯಾಗಿರುವುದು ಸಣ್ಣ ವಿಷಯವೇನಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾದವು. ಹಿಂದೂ ಶಾಸ್ತ್ರದಲ್ಲೂ ಇಲ್ಲ, ಅತ್ತ ಕ್ರಿಶ್ಚಿಯನ್ ವೆಡ್ಡಿಂಗ್‌ನಲ್ಲೂ ಉಮಾಪತಿ ರಾಮಯ್ಯ ಗೈರಾಗಿದ್ದನ್ನು ಗಮನಿಸಿದ ನೆಟ್ಟಿಗರು, "ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ನಡುವೆ ಎಲ್ಲವೂ ಸರಿ ಇದೆಯಾ? ಅಥವಾ ದಾಂಪತ್ಯದಲ್ಲಿ ಏನಾದರೂ ಬಿರುಕು ಮೂಡಿದೆಯಾ?" ಎಂದು ಬಲವಾಗಿ ಗುಮಾನಿ ಪಡಲು ಶುರುಮಾಡಿದ್ದರು. ಈ ಫೋಟೋಗಳ ಗೈರುಹಾಜರಿಯೇ ಕೊನೆಗೆ ಇಬ್ಬರ ಡಿವೋರ್ಸ್ ವದಂತಿಗೆ ನಾಂದಿ ಹಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.