
ಕನ್ನಡದ ಮೇರುನಟ, ಸಾಹಸಸಿಂಹ ಖ್ಯಾತಿಯ ವಿಷ್ಣುವರ್ಧನ್ (Vishnuvardhan) ಅವರ ಸಮಾಧಿ ನಿನ್ನೆ, ಅಂದರೆ 08 ಆಗಸ್ಟ್ 2025ರಂದು ನೆಲಸಮ ಆಗಿರೋ ವಿಷಯ ಬಹುತೇಕ ಜನರಿಗೆ ಗೊತ್ತಿದೆ; ಅಭಿಮಾನ್ ಸ್ಡುಡಿಯೋ ಜಾಗದಲ್ಲಿ ನಡೆಸಲಾಗಿದ್ದ ನಟ ವಿಷ್ಣುವರ್ಧನ್ ಅಂತ್ಯಕ್ರಿಯೆ ಜಾಗದಲ್ಲಿ ನಟ ವಿಷ್ಣುವರ್ಧನ್ ಅವರ ಚಿಕ್ಕ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ಅದನ್ನು ನಿನ್ನೆ ಬೆಳಗಿನ ಜಾವ 3 ಗಂಟೆಗೆ ತೆರವು ಮಾಡಲಾಗಿದೆ. ಈ ರಹಸ್ಯ ಕಾರ್ಯಾಚರಣೆ ಬಗ್ಗೆ ನಟ ವಿಷ್ಣುವರ್ಧನ್ ಅಭಿಮಾನಿಗಳು ಸೇರಿದಂತೆ ಹಲವು ನಟನಟಿಯರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ವಿಷ್ಣು ಸಮಾಧಿ ತೆರವಿಗೆ ಬೇಸರ ಹೊರ ಹಾಕಿದ ನಟಿ ಸುಧಾರಾಣಿ:
ಈ ಬಗ್ಗೆ ಮಾತನ್ನಾಡಿರುವ ನಟಿ ಸುಧಾರಾಣಿ (Sudharani) ಅವರು 'ಇದು ನೋವಾಗುವ ವಿಷಯ. ಇದಕ್ಕೆ ಪರಿಹಾರ ಸಿಗುತ್ತೆ ಅನ್ನೋ ನಂಬಿಕೆ ಇತ್ತು. ತುಂಬಾ ಬೇಸರ ಆಗುತ್ತಿದೆ ನನಗೆ. ನನ್ನ ಮನಸಿಗೆ ನೋವಾಗಿದೆ. ಅವರು ಕನ್ನಡ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಮಟ್ಟಕ್ಕೆ ಹೋಗುತ್ತೆ ಅಂತಾ ನಾವು ನಿರೀಕ್ಷೆ ಮಾಡಿರಲಿಲ್ಲ' ಎಂದಿದ್ದಾರೆ.
ಇನ್ನು ನಟಿ ಶ್ರುತಿ ಅವರೂ ಕೂಡ ಬೇಸರ ಹೊರಹಾಕಿದ್ದಾರೆ. ನಟಿ ಶ್ರುತಿ ಅವರು, ತಮಗೆ ಈ ಜಮೀನಿನ ವಿವಾದ ಇರುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಗೊತ್ತಿದ್ದರೆ ವಿಷ್ಣು ಅವರ ಸಮಾಧಿಗೆ ನನ್ನ ಜಮೀನನ್ನೇ ಬಿಟ್ಟುಕೊಡುತ್ತಿದ್ದೆ. ಅವರು ನಮ್ಮೆಲ್ಲರ ಆರಾಧ್ಯ ದೈವ. ಎಷ್ಟೊಂದು ಮಂದಿ ಅವರ ಸಮಾಧಿಗೆ ಸ್ಥಳ ಕೊಡಲು ತಯಾರು ಇದ್ದಾರೆ. ನನ್ನ ಬಳಿಯೂ ಚಿಕ್ಕದೊಂದು ಜಮೀನು ಇದೆ. ಅಲ್ಲಿಯೇ ಕೊಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಇದಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯಷ್ಟೇ ನಟ ವಿಜಯ ರಾಘವೇಂದ್ರ ಅವರು ಈ ಬಗ್ಗೆ ಮಾತನಾಡಿದ್ದರು.
ನಿನ್ನೆ (08 August 2025) ಬೆಳಗಿನ ಜಾವ ಮೂರು ಗಂಟೆಗೆ ಬಾಲಣ್ಣ ಕುಟುಂಬ ಸಮಾಧಿ ತೆರವು ಕಾರ್ಯಾಚರಣೆ ಮಾಡಿದೆ. ಇದನ್ನು ಯಾರಿಗೂ ತಿಳಿಯದ ಹಾಗೆ ಮಾಡಲಾಗಿದೆ. ಕಾರಣ, ವಿಷ್ಣುವರ್ಧನ್ ಅಭಿಮಾನಿಗಳಿಗೆ ಗೊತ್ತಾದರೆ ದೊಡ್ಡ ಸಮಸ್ಯೆ ಆಗುತ್ತೆ ಎಂದು ರಾತ್ರೋ ರಾತ್ರಿ ಸಮಾಧಿ ತೆರವು ಮಾಡಲಾಗಿದೆ ಎನ್ನಲಾಗಿದೆ. ಈಗ ಅಲ್ಲಿರುವ ಅಭಿಮಾನಿಗಳಿಗೆ ಪೊಲೀಸರು ಯಾವುದೇ ಗಲಾಟೆ ಮಾಡದಂತೆ ಹೊರಹೋಗಲು ಸೂಚಿಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ, ಸಮಾಧಿ ಇದ್ದ ಜಾಗದಲ್ಲಿ ಪ್ರೊಟೆಸ್ಟ್ ಮಾಡುತ್ತಿರುವವರನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. 'ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋ ಎದುರು ಧರಣಿ ಮಾಡೋ ಹಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗುತ್ತಿದೆ. 'ಅಂಥ ಮೇರುನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಮಾಧಿ ಇಲ್ಲ. ಅದಕ್ಕೆ ಕೊಡುವಷ್ಟು ಜಾಗವಿಲ್ಲವೇ?' ಎಂದು ಪ್ರಶ್ನೆ ಕೇಳುತ್ತ ಡಾ ವಿಷ್ಣುವರ್ಧನ್ ಅಭಿಮಾನಿಗಳು ಕೊರಗುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.