
ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ 'ಜನ ನಾಯಕನ್' ಸಿನಿಮಾ ಪ್ರದರ್ಶನ ಕಂಡು ವಿಶ್ವಾದ್ಯಂತ ಧೂಳೆಬ್ಬಿಸುತ್ತಿದೆ. ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ಈ ಚಿತ್ರವನ್ನು ಕಣ್ಣುತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಗಳತ್ತ ದಂಡು ದಂಡಾಗಿ ಆಗಮಿಸುತ್ತಿದ್ದಾರೆ. ಆದರೆ, ಇದೇ ಸಿನಿಮಾವನ್ನು ಅಪಾರ ನಿರೀಕ್ಷೆಯೊಂದಿಗೆ ವೀಕ್ಷಿಸಲು ತೆರಳಿದ ಪ್ರಸಿದ್ಧ ನಟಿಯೊಬ್ಬರಿಗೆ ತೀವ್ರ ನಿರಾಶೆಯಾಗಿದೆ. ತಾನು ಪಟ್ಟ ಶ್ರಮ ಮತ್ತು ಕಂಡ ಕನಸು ಸಂಪೂರ್ಣವಾಗಿ ವ್ಯರ್ಥವಾಯಿತಲ್ಲ ಎಂದು ಆ ನಟಿ ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಮಿಳು ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಜೋಡಿ ನಂ. 1 ಸೀಸನ್ 7' ರ ವಿನ್ನರ್ ಆಗಿ ಹೊರಹೊಮ್ಮಿದ್ದ ನಟಿ ಆನಂದಿ, ಬೆಳ್ಳಿಪರದೆ ಮೇಲೆಯೂ ತಮ್ಮ ಸಾಪತ್ಯ ಸಾಬೀತುಪಡಿಸಿದವರು. ಇವರು ನಿರ್ದೇಶಕ ಬಾಲಾ ಅವರ 'ತಾರೈ ತಪ್ಪತ್ತೈ' ಮತ್ತು ಪರಂತು ಚೆಲ್ಲವ ನಂತಹ ಪ್ರಸಿದ್ಧ ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವರಿಗೆ ಕಹಿ ಅನುಭವಗಳೇ ಎದುರಾಗುತ್ತಿವೆ. ರತ್ನಕುಮಾರ್ ನಿರ್ದೇಶನದ '29', ಸೂರ್ಯ ಅಭಿನಯದ 'ಕರುಪ್ಪು' ಮತ್ತು ಇದೀಗ ವಿಜಯ್ ಅಭಿನಯದ 'ಜನ ನಾಯಕನ್' ನಂತಹ ಸತತ ಮೂರು ದೊಡ್ಡ ಚಿತ್ರಗಳಲ್ಲಿ ಇವರು ನಟಿಸಿದ್ದರೂ, ಆ ಎಲ್ಲಾ ದೃಶ್ಯಗಳನ್ನು ಎಡಿಟಿಂಗ್ ಮೇಜಿನ ಮೇಲೆಯೇ ಕತ್ತರಿಸಿ ತೆಗೆದುಹಾಕಲಾಗಿದೆ!
ವಿಜಯ್ ಜೊತೆ ನಟಿಸುವ ಕನಸು!
'ಜನ ನಾಯಕನ್' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಕ್ಷಣ, ತಾನು ಅಭಿನಯಿಸಿದ ದೃಶ್ಯವನ್ನು ತೆರೆಮೇಲೆ ನೋಡುವ ಬೃಹತ್ ನಿರೀಕ್ಷೆಯೊಂದಿಗೆ ಆನಂದಿ ಥಿಯೇಟರ್‌ಗೆ ತೆರಳಿದ್ದರು. ಆದರೆ, ತಮ್ಮ ದೃಶ್ಯವೇ ಸಿನಿಮಾದಲ್ಲಿ ಇಲ್ಲದಿರುವುದನ್ನು ಕಂಡು ಆಘಾತಕ್ಕೊಳಗಾದ ಅವರು, ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕಣ್ಣೀರಿನ ವೀಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
ವೀಡಿಯೊದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಆನಂದಿ, "ನಾನು ಅನೇಕ ಚಿತ್ರಗಳಲ್ಲಿ ಅಭಿನಯಿಸುತ್ತೇನೆ, ಆ ದೃಶ್ಯಗಳನ್ನು ಎಡಿಟಿಂಗ್‌ನಲ್ಲಿ ಅಳಿಸಿಹಾಕಲಾಗುತ್ತದೆ. ಸಾಮಾನ್ಯವಾಗಿ ನನಗೆ ಅದರ ಬಗ್ಗೆ ಅಷ್ಟಾಗಿ ಬೇಸರವಾಗುತ್ತಿರಲಿಲ್ಲ. ಆದರೆ, 'ಜನ ನಾಯಕನ್' ಚಿತ್ರದಲ್ಲಿ ನನ್ನ ದೃಶ್ಯವನ್ನು ಕತ್ತರಿಸಿರುವುದು ನನಗೆ ತೀವ್ರ ದುಃಖ ತಂದಿದೆ. ಏಕೆಂದರೆ, ಈ ಸಿನಿಮಾಗಾಗಿ ನಾನು ಸಹಿ ಮಾಡಿದ ಮೊದಲ ಚಿತ್ರವಿದು. ಈ ಒಂದೇ ಒಂದು ದೃಶ್ಯಕ್ಕಾಗಿ ನಾನು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದೆ," ಎಂದು ಹೇಳಿದ್ದಾರೆ.
ತಮ್ಮ ಆರಾಧ್ಯ ದೈವದ ಜೊತೆ ಅಭಿನಯಿಸಿದ ಕ್ಷಣವನ್ನು ನೆನಪಿಸಿಕೊಂಡ ಆನಂದಿ, "ನಾನು ಚಿತ್ರರಂಗಕ್ಕೆ ಬಂದಿದ್ದೇ ದಳಪತಿ ವಿಜಯ್ ಅವರ ಜೊತೆ ನಟಿಸಬೇಕು ಎಂಬ ಒಂದೇ ಒಂದು ದೊಡ್ಡ ಆಸೆಯಿಂದ. ವಿಜಯ್ ಅವರೊಂದಿಗೆ ಅಭಿನಯಿಸುವುದು ನನ್ನ ಜೀವನದ ಬಹುದೊಡ್ಡ ಕನಸಾಗಿತ್ತು. ಅಂತೆಯೇ ಅವರ ಜೊತೆ ನಟಿಸುವ ಸುವರ್ಣ ಅವಕಾಶವೂ ಸಿಕ್ಕಿತ್ತು. ನಾನು ನಟಿಸಿದ ಸೀನ್ ಪರದೆಯ ಮೇಲೆ ಖಂಡಿತಾ ಇರುತ್ತದೆ ಎಂಬ ಸಂತೋಷ ಮತ್ತು ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಹೋಗಿದ್ದೆ. ಆದರೆ ಆ ದೃಶ್ಯಕ್ಕೆ ಕತ್ತರಿ ಬಿದ್ದಿದೆ. ನಾನು ನಿಜವಾಗಿಯೂ ದುರದೃಷ್ಟವಂತಳು," ಎಂದು ಕಣ್ಣೀರಿಡುತ್ತಾ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಕೊನೆಯಲ್ಲಿ, ತಮ್ಮ ವೈಯಕ್ತಿಕ ಬೇಸರವನ್ನು ಬದಿಗಿಟ್ಟು ಸಿನಿಮಾವನ್ನು ಹೊಗಳಿದ ಆನಂದಿ, "'ಜನ ನಾಯಕನ್' ಸಿನಿಮಾ ನಿಜಕ್ಕೂ ಅತ್ಯದ್ಭುತವಾಗಿ ಮೂಡಿಬಂದಿದೆ. ಚಿತ್ರವು ಮಹಿಳೆಯರ ಪ್ರಗತಿ ಮತ್ತು ಹಕ್ಕುಗಳ ಬಗ್ಗೆ ಗಂಭೀರವಾಗಿ ಮಾತನಾಡುತ್ತದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ವೀಕ್ಷಿಸಬೇಕು," ಎಂದು ವಿನಂತಿಸಿಕೊಂಡಿದ್ದಾರೆ. ಒಬ್ಬ ನಟಿಯಾಗಿ ಶ್ರಮಪಟ್ಟು ನಟಿಸಿದ ಸೀನ್ ಎಡಿಟಿಂಗ್‌ನಲ್ಲಿ ಕಟ್ ಆದಾಗ ಉಂಟಾಗುವ ನೋವು ಎಷ್ಟು ದೊಡ್ಡದು ಎಂಬುದಕ್ಕೆ ನಟಿ ಆನಂದಿ ಅವರ ಈ ವೈರಲ್ ವೀಡಿಯೊ ಸಾಕ್ಷಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.