‘ರಾತ್ರಿ ಹನ್ನೆರಡು ಗಂಟೆಯಲ್ಲೂ ನಾವು ಮೂವರು ಗೆಳತಿಯರು ಬ್ಯಾಂಕಾಕ್‌ನ ಬೀದಿಗಳಲ್ಲಿ ಓಡಾಡುತ್ತಿದ್ದೆವು. ಬೀಜ್‌ನಲ್ಲಿ ಕೂತು ಬೀಸಿ ಬರುವ ಗಾಳಿಗೆ ಮುಖವೊಡ್ಡುತ್ತಿದ್ದೆವು. ಇಲ್ಲಿ ಎಲ್ಲವೂ ಕೂಲ್ ಕೂಲ್, ಯಾವುದರಲ್ಲೂ ಧಾವಂತ ಇಲ್ಲ..’
ಪ್ರಿಯಾ ಕೆರ್ವಾಶೆ
ಕೆಲವು ದಿನಗಳ ಹಿಂದಷ್ಟೇ ಥೈಲ್ಯಾಂಡ್ ಟ್ರಿಪ್ ಮುಗಿಸಿ ಬಂದಿದ್ದಾರೆ ಅಗ್ನಿಸಾಕ್ಷಿ ಹುಡುಗಿ ವೈಷ್ಣವಿ. ಫ್ರೆಂಡ್ಸ್ ಜೊತೆಗೆ ಇದು ಅವರ ಮೊದಲ ಇಂಟರ್‌ನ್ಯಾಶನಲ್ ಟ್ರಿಪ್. ಫ್ರೆಂಡ್ಸ್ ಯಾರಪ್ಪಾ ಅಂದರೆ ಸ್ಯಾಂಡಲ್‌ವುಡ್ ನಟಿ, ಕಾಲೇಜ್ ಫ್ರೆಂಡ್ ಅಮೂಲ್ಯ ಹಾಗೂ ಕ್ಲಾಸ್‌ಮೇಟ್ ಪೂಜಾ . ಎಷ್ಟೋ ದಿನಗಳ ಹಿಂದೆ ಈ ಮೂರು ಜನ ಫ್ರೆಂಡ್ಸ್ ಒಟ್ಟಾಗಿ ಸಿಕ್ಕಾಗ ಮಾಡಿರೋ ಪ್ಲಾನ್ ಇದು. ಅಷ್ಟುಬೇಗ ಮುಗಿದೂ ಹೋಯ್ತು.
undefined
ಎಂಟು ದಿನಗಳ ವೆಕೇಶನ್ ಟೂರ್. ಇಲ್ಲಾದರೆ ಅಮ್ಮನ ಸುಪರ್ದಿಯಲ್ಲಿ ರಾತ್ರಿ ಒಂಭತ್ತಕ್ಕೆಲ್ಲ ಮನೆ ಸೇರೋ ಹುಡುಗಿಗೆ ವಿದೇಶದಲ್ಲಿ ರಾತ್ರಿ ಹನ್ನೆರಡು ಗಂಟೆಯಲ್ಲೂ ಗೆಳತಿಯರ ಜೊತೆಗೆ ನಿರ್ಭೀತಿಯಿಂದ ಓಡಾಡಿದ್ದು ಥ್ರಿಲ್ಲಿಂಗ್ ಎಕ್ಸ್‌ಪೀರಿಯನ್ಸ್. ಅಲೆಗಳ ಆಟ ನೋಡುತ್ತಲೇ ಬೆಳಗು, ಸಂಜೆ ಕಳೆದದ್ದು ಅವಿಸ್ಮರಣೀಯ ಅನುಭವ.
Candid pic ❤️ @tours_i_go thank u for this trip
A post shared by Amulya_moulya (@amulya_moulya) on Aug 17, 2019 at 6:48pm PDT
ಎಲ್ಲೆಲ್ಲ ಹೋಗಿದ್ದು, ಏನೆಲ್ಲ ನೋಡಿದ್ದು?
ಥೈಲ್ಯಾಂಡ್ ಪ್ರವಾಸ. ಪಟಾಯ, ಪುಕೆಟ್, ಬ್ಯಾಂಕಾಂಕ್‌ಗಳಲ್ಲಿ ತಿರುಗಾಡಿದ್ದು. ಇದರ ಜೊತೆಗೆ ಐಸ್‌ಲ್ಯಾಂಡ್ ಟೂರ್. ಕ್ರಾದಿ ಎಂಬ ಅದ್ಭುತ ದ್ವೀಪದಲ್ಲಿ ಸುತ್ತಾಡಿದ್ದು. ಫೀ ಫೀ ಐಸ್‌ಲ್ಯಾಂಡ್, ಮಂಕೀ ಬೀಚ್ ಐಲ್ಯಾಂಡ್‌ಗಳಲ್ಲಿ ಕಳೆದುಹೋಗಿದ್ದು.
‘ಸಮುದ್ರದಲ್ಲಿ ಆಟ ಆಡೋದು ಒಂದು ಖುಷಿ ಆದರೆ ದಡದಲ್ಲಿ ಅಲೆಗಳನ್ನು ನೋಡ್ತಾ ಕೂರುವ ಅನುಭವವೇ ಬೇರೆ. ಗದ್ದಲಗಳಿಲ್ಲದ ಪ್ರಶಾಂತ ಪರಿಸರ, ಮನಸ್ಸಿಗೆ ಹಾಯೆನಿಸುತ್ತೆ. ಎಂಟು ದಿನಗಳಲ್ಲಿ ಒಂದೊಂದು ದಿನ ಒಂದೊಂದು ಥರ ಷೆಡ್ಯೂಲ್ ಇರ್ತಿತ್ತು. ಬರೀ ಐಸ್‌ಲ್ಯಾಂಡ್ ಟೂರ್ ಒಂದಿನ ಇದ್ರೆ, ಅಲ್ಲಿರುವ ಬೌದ್ಧ ಮೊನಾಸ್ಟ್ರಿ, ದೇವಾಲಯಗಳ ವಿಸಿಟ್ ಮತ್ತೊಂದು ದಿನ ಇರ್ತಿತ್ತು. ಬ್ಯಾಂಕಾಕ್‌ನಿಂದ ಸ್ವಲ್ಪ ಒಳಗೆ ಮರೀನ್ ವಲ್ಡ್‌ರ್ ಇದೆ. ಅಲ್ಲಿಗೆ ಹೋಗಿದ್ವಿ. ಅಲ್ಲಿ ಡಾಲ್ಫಿನ್ ಶೋ, ಚಿಂಪಾಂಜಿ ಶೋಗಳೆಲ್ಲ ಇರುತ್ತವೆ.
ಇನ್ನೊಂದು ಬದಿ ಸಫಾರಿ ಇರುತ್ತೆ. ವಿಸ್ತಾರ ಪ್ರದೇಶದಲ್ಲಿ ಸಿಂಹ, ಹುಲಿಗಳೆಲ್ಲ ಕಾಣ ಸಿಗುತ್ತವೆ. ಅವು ನಮ್ಮನ್ನು ಕ್ಯಾರೇ ಮಾಡದೇ ತಮ್ಮ ಪಾಡಿಗೆ ತಾವಿರುತ್ತವೆ. ನಾವು ಕಾರ್‌ನಲ್ಲಿ ಕೂತು ಗ್ಲಾಸ್‌ಕ್ಲೋಸ್ ಮಾಡಿ ಅವುಗಳನ್ನು ನೋಡ್ತಿದ್ವಿ. ಅವು ನಮ್ಮತ್ತ ಬರುತ್ತಲೇ ಇರಲಿಲ್ಲ. ಅವುಗಳ ಪಾಡಿಗೆ ಇರುತ್ತಿದ್ದವು. ಜೊತೆಗೆ ಇಲ್ಲಿ ವಲಸೆ ಬಂದಿರುವ ಚಿತ್ರ ವಿಚಿತ್ರ ನಮೂನೆಯ ಹಕ್ಕಿಗಳನ್ನೂ ಕಂಡ್ವಿ’ ಅಂತ ಅಲ್ಲಿನ ಅನುಭವಗಳನ್ನು ಕಟ್ಟಿಕೊಡುತ್ತಾರೆ ವೈಷ್ಣವಿ.
ನಮ್ಮ ಗಣೇಶ ಅಲ್ಲೂ ಇದ್ದ!
ಥೈಲ್ಯಾಂಡ್‌ನಲ್ಲಿರುವ ಬಹುಮಂದಿ ಬೌದ್ಧ ಧರ್ಮೀಯರು. ಇಲ್ಲಿ ಬಹಳ ಮೊನಾಸ್ಟ್ರಿಗಳಿವೆ. ‘ಬುದ್ಧ ದೇವಾಲಯಗಳಲ್ಲಿ ನಾವು ದೇವಸ್ಥಾನದಲ್ಲಿ ಪೂಜೆ ಮಾಡೋ ರೀತಿ ಬುದ್ಧನಿಗೆ ಪೂಜೆ ಮಾಡುತ್ತಾರೆ. ಗುಣು ಗುಣು ಅಂತ ಮಂತ್ರ ಪಠಿಸೋದನ್ನೂ ನೋಡಿದೆ. ನಮ್ಮ ಮಂತ್ರದ ಹಾಗೇ ಇರುತ್ತೆ. ಆದರೆ ಉಚ್ಚಾರಣೆ, ಏರಿಳಿತಗಳು ಬೇರೆ. ಮತ್ತೊಂದು ವಿಶೇಷ ನೋಡಿದೆ, ಥೈಲ್ಯಾಂಡ್‌ನಲ್ಲಿ ಗಣೇಶ ವಿಗ್ರಹವೂ ಇದೆ. ಅದಕ್ಕೂ ಪೂಜೆ ಮಾಡ್ತಾರೆ. ಸ್ವಲ್ಪ ಭಿನ್ನವಾಗಿ’ ಎಂದು ಆ ಅನುಭವ ವಿವರಿಸುತ್ತಾರೆ.
ಜನ ಹೇಗಿರ್ತಾರೆ?
ಅಲ್ಲಿನ ಜನರ ನಡವಳಿಕೆ ಈ ಮೂವರು ಗೆಳತಿಯರ ಮೇಲೆ ಬಹಳ ಪ್ರಭಾವ ಬೀರಿದ ಹಾಗಿತ್ತು. ‘ಹೇಳಿ ಕೇಳಿ ಟೂರಿಸಂಗೆ ಹೆಸರಾದ ದೇಶ. ಇಲ್ಲಿನ ಜನರ ಪ್ರಮುಖ ಆದಾಯ ಮೂಲವೂ ಟೂರಿಸಮ್. ತಮಗೆ ನೆಲೆ ಒದಗಿಸಿದ ಪ್ರವಾಸೋದ್ಯಮದ ಬಗ್ಗೆ ಇಲ್ಲಿನವರಿಗೆ ಅಭಿಮಾನವಿದೆ. ಪ್ರವಾಸಿಗರನ್ನು ಎಲ್ಲ ಕಡೆ ಬಹಳ ಪ್ರೀತಿಯಿಂದ ಕಾಣುತ್ತಾರೆ. ಏನೇ ಕೇಳಿದರೂ ಬಿಗುಮಾನವಿಲ್ಲದೇ ಗೈಡ್ ಮಾಡುತ್ತಾರೆ. ನಾನು ಕೆಲವು ಕಡೆ ಗಮನಿಸಿದ ಹಾಗೆ, ಪ್ರವಾಸಿಗರು ಮನಸ್ಸು ನೋಯಿಸುವಂತೆ ಬಿಹೇವ್ ಮಾಡಿದರೂ ಇಲ್ಲಿನವರ ಮುಖದ ಮುಗುಳ್ನಗೆ ಮಾಸುವುದಿಲ್ಲ.’ ಎಂದು ವಿವರಿಸುವ ವೈಷ್ಣವಿ ಅಲ್ಲಿನ ಸ್ಥಳೀಯರ ಜೊತೆಗೆ ಮಾತನಾಡಲು ಹೋಗಿ ಸೋತಿದ್ದಾರೆ.
ಕಾರಣ ಭಾಷೆ. ಸ್ಥಳೀಯ ಥಾಯ್ ಭಾಷೆಯಲ್ಲಿ ‘ನಮಸ್ತೆ’ ಹೇಳಲು ಕಲಿತಿದ್ರು. ಆದರೆ ಈಗ ಮರೆತು ಹೋಗಿದೆ. ‘ಅವರ ಭಾಷೆ ಕೇಳುವಾಗ ಒಂಥರ ಮೂಗಲ್ಲಿ ಮಾತನಾಡಿದ ಹಾಗೆ ಕೇಳಿಸುತ್ತೆ. ಅವರು ಮೂಗಿನ ಸಹಾಯದಿಂದ ಮಾತಾಡೋದು ಹೆಚ್ಚು. ನಮ್ಮ ಹಾಗೆ ಗಂಟಲಿಂದ ಮಾತಾಡಲ್ಲ. ಇಲ್ಲಿಯವರಿಗೆ ಇಂಗ್ಲೀಷ್ ಬರಲ್ಲ. ನಾವು ಏನೇ ಹೇಳಬೇಕಾದ್ರೂ ಸಂಜ್ಞೆಯಿಂದಲೇ ಸಂಭಾಷಿಸಬೇಕು. ಅದು ಸ್ವಲ್ಪ ಕಷ್ಟಆಯ್ತು’ ಅಂತಾರೆ.
ಹಣ್ಣು ತಿಂದೇ ಬದುಕಿದ್ದು!
ವೈಷ್ಣವಿ ಅವರು ಹೇಳಿ ಕೇಳಿ ಸಸ್ಯಾಹಾರಿ. ಥಾಯ್ಲೆಂಡ್‌ನಲ್ಲಿ ಸಸ್ಯಾಹಾರ ಹುಡುಕೋದು ಮೊಸರಲ್ಲಿ ಕಲ್ಲು ಹುಡುಕಿದಷ್ಟೇ ಕಷ್ಟ. ಇಲ್ಲಿನ ನಾನ್‌ವೆಜ್ ತಿನಿಸು ಬಹಳ ಫೇಮಸ್. ಅದರಲ್ಲೂ ಮೊಸಳೆಯನ್ನು ಇಡಿಯಾಗಿ ಬೇಯಿಸಿ ತಯಾರಿಸುವ ಖಾದ್ಯ ಜನಪ್ರಿಯ. ಇವರ ಗೆಳತಿಯರಿಬ್ಬರು ನಾನ್‌ವೆಜ್ ತಿನ್ನೋರಾದ್ರೂ ಮೊಸಳೆಯ ಗೋಜಿಗೆ ಹೋಗಲಿಲ್ಲ. ಅಲ್ಲಿ ಸಿಗೋ ಕೋಳಿಮಾಂಸಕ್ಕೆ ತೃಪ್ತಿ ಪಟ್ಟುಕೊಂಡರು.
‘ಇಲ್ಲಿದ್ದ ಎಂಟೂ ದಿನ ನಾನು ಹಣ್ಣು ತಿಂದು ಎಳನೀರು ಕುಡಿದದ್ದೇ ಹೆಚ್ಚು. ಏಕೆಂದರೆ ಸಸ್ಯಾಹಾರದಲ್ಲಿ ಆಯ್ಕೆಗಳು ಕಡಿಮೆ. ಇಲ್ಲವೇ ಇಲ್ಲ ಅಂತ ಹೇಳ್ಬಹುದು. ಆದರೆ ಥರಾವರಿ ಹಣ್ಣುಗಳು ಹೇರಳವಾಗಿವೆ. ಇಲ್ಲಿನ ಜನ ಬೆಳ್ಳಂಬೆಳಗ್ಗೇ ನಾವು ತಿಂಡಿ ತಿನ್ನೋ ಹಾಗೆ ಹಣ್ಣು ತಿನ್ತಾರೆ. ಲಿಚ್ಚಿ, ಡ್ರ್ಯಾಗನ್ ಫ್ರುಟ್ ಎಲ್ಲ ಇಲ್ಲಿ ಹೇರಳವಾಗಿ ಸಿಗುತ್ತೆ. ನಾನು ಇಲ್ಲಿದ್ದಷ್ಟುದಿನ ಈ ಹಣ್ಣುಗಳಿಂದಲೇ ಹೊಟ್ಟೆತುಂಬಿಸಿಕೊಳ್ಳುತ್ತಿದ್ದೆ. ಲೀಚಿ, ಡ್ರ್ಯಾಗನ್‌ಫ್ರುಟ್ ನಮ್ಮಲ್ಲಿ ಸಿಗೋದಕ್ಕಿಂತ ದೊಡ್ಡದು, ರುಚಿಯೂ ಭಿನ್ನ’ ಎನ್ನುತ್ತಾ ಆ ನೆನಪುಗಳಲ್ಲಿ ಕಳೆದುಹೋದರು ವೈಷ್ಣವಿ.
ಯೋಚಿಸಿದ ಕೂಡಲೇ ಆ ಜಾಗಕ್ಕೆ ಹೋಗಿ ಬೀಳೋ ಹಾಗಿದ್ರೆ..
ಮೊದಲಿನಿಂದಲೂ ವೈಷ್ಣವಿಗೆ ಪ್ರಯಾಣ ಅಂದರೆ ಅಷ್ಟಕ್ಕಷ್ಟೇ. ಹಾಗಂತ ಹೊಸ ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡೋದಿಷ್ಟ. ಆದರೆ ಪ್ರಯಾಣ ಮಾಡೋ ಅವಧಿ ಮಾತ್ರ ಕಷ್ಟ. ‘ಮ್ಯಾಜಿಕ್ ನಡೆದು ಯೋಚಿಸಿದ ಕೂಡಲೇ ಅಂದುಕೊಂಡ ಪಾಯಿಂಟ್ ರೀಚ್ ಆದ್ರೆ ಎಷ್ಟುಚೆನ್ನಾಗಿರುತ್ತೆ ಅಂತ ಅಂದುಕೊಳ್ಳುತ್ತಿರುತ್ತೇನೆ’ ಅನ್ನೋ ವೈಷ್ಣವಿಗೆ ಈ ಬಾರಿಯ ಪ್ರವಾಸ ಮಾತ್ರ ಪ್ರಯಾಸ ಆಗಲಿಲ್ಲವಂತೆ. ಕಾರಣ ಫ್ರೆಂಡ್ಸ್. ‘ಫ್ರೆಂಡ್ಸ್ ಜೊತೆ ಹೋದ ಅನುಭವ ಭಿನ್ನ. ಒಂದೊಂದು ನಿಮಿಷವನ್ನೂ ಎನ್‌ಜಾಯ್ ಮಾಡಿದೆ. ಅಲ್ಲಿ ಕಳೆದ ಪ್ರತೀ ಕ್ಷಣವೋ ಸ್ಮರಣೀಯ’ ಎನ್ನುವ ಅವರ ಮಾತಲ್ಲಿ ಖುಷಿ ತುಂಬಿ ತುಳುಕುತ್ತದೆ.