
ಸ್ಯಾಂಡಲ್ವುಡ್ನಲ್ಲಿ ಖಳನಟನಾಗಿ, ಪೋಷಕ ನಟನಾಗಿ ವಿಭಿನ್ನ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಲ್ಲಿ ಸದ್ಯ ಹೆಚ್ಚು ಕಾಣಿಸಿಕೊಳ್ಳದಿದ್ದರೂ, ಸಾಮಾಜಿಕ ಜಾಲತಾಣ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ 55ನೇ ವಯಸ್ಸಿನಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದು, 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ವಿಚಾರದ ಬಗ್ಗೆ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ.
ಆಶಿಶ್ ವಿದ್ಯಾರ್ಥಿ ಅವರು ನಟಿ ಹಾಗೂ ಗಾಯಕಿ ರಾಜೋಶಿ ಅವರನ್ನು ಮೊದಲ ಮದುವೆಯಾಗಿದ್ದರು. ಈ ದಂಪತಿಗೆ ಅರ್ಧ್ ಎಂಬ ಮಗನಿದ್ದಾನೆ. ಸುಮಾರು 24 ವರ್ಷಗಳ ದಾಂಪತ್ಯ ಜೀವನದ ಬಳಿಕ ಇಬ್ಬರೂ ವಿಚ್ಛೇದನ ಪಡೆದು ಪ್ರತ್ಯೇಕವಾದರು. ಬಳಿಕ ಕೆಲಕಾಲ ಒಂಟಿಯಾಗಿದ್ದ ಆಶಿಶ್, 2023ರಲ್ಲಿ ರೂಪಾಲಿ ಬರುವಾ ಅವರನ್ನು ಎರಡನೇ ಮದುವೆಯಾದರು. ಆಗ 60ನೇ ವಯಸ್ಸಿನಲ್ಲಿ ನಟನ ಎರಡನೇ ಮದುವೆ ಚಿತ್ರರಂಗದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು.
ತುಂಬಾ ಕಷ್ಟವಾಗಿತ್ತು
ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಮದುವೆ, ವಿಚ್ಛೇದನ ಹಾಗೂ ಎರಡನೇ ವಿವಾಹದ ಕುರಿತು ಮಾತನಾಡಿದ ಆಶಿಶ್ ವಿದ್ಯಾರ್ಥಿ, 24 ವರ್ಷಗಳ ದಾಂಪತ್ಯ ಮುರಿದುಬಿದ್ದಾಗ ತಮಗೆ ಎದುರಾದ ನೋವನ್ನು ಹಂಚಿಕೊಂಡಿದ್ದಾರೆ. 24 ವರ್ಷಗಳ ದಾಂಪತ್ಯ ಜೀವನ ಮುಗಿದಾಗ ತುಂಬಾ ಕಷ್ಟವಾಗಿತ್ತು. ಆಗ ನನಗೆ ಸುಮಾರು 55 ವರ್ಷ ವಯಸ್ಸು. ಎಲ್ಲವೂ ಮುಗಿದುಹೋಯಿತು, ಜೀವನವೇ ನಾಶವಾದಂತೆ ಭಾಸವಾಗಿತ್ತು.
ಒಂದು ಸಂಬಂಧದಲ್ಲಿ ಇಷ್ಟೊಂದು ವರ್ಷಗಳು, ಭಾವನೆಗಳು ಹಾಗೂ ಬದುಕನ್ನು ಹೂಡಿಕೆ ಮಾಡಿದ ಬಳಿಕ ಅಂತಹ ಫಲಿತಾಂಶ ಎದುರಾದಾಗ ಅದನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ನಮ್ಮ ಸಂಬಂಧ ಅಂತ್ಯಗೊಂಡಿತು. ಅದರ ಬಗ್ಗೆ ಮಾತನಾಡುವುದರಿಂದ ಯಾರಿಗೂ ಯಾವುದೇ ಪ್ರಯೋಜನವಿಲ್ಲ. ಹೀಗಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅದು ನಡೆದುಹೋಯಿತು ಎಂದು ಹೇಳಿದ್ದಾರೆ. ಇದೇ ವೇಳೆ ವಿಚ್ಛೇದನದ ಬಳಿಕ ತಮ್ಮ ಬಗ್ಗೆ ಜನರು ಮಾಡಿದ ಟೀಕೆಗಳ ಬಗ್ಗೆಯೂ ನಟ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ಒಬ್ಬ ಮೋಟಿವೇಷನಲ್ ಸ್ಪೀಕರ್ ಹಾಗೂ ನಟ. ಆದರೆ ನನ್ನ ಬಗ್ಗೆ ಜನರು ಏನೆಲ್ಲ ಮಾತನಾಡಿದರು, ಅದನ್ನು ನಾನು ಹೇಗೆ ಎದುರಿಸಿದೆ ಎಂಬುದು ನನಗೆ ಗೊತ್ತು. ಒಂದು ಪರಿಸ್ಥಿತಿಯ ಸಂಪೂರ್ಣ ಸತ್ಯ ತಿಳಿಯದಿದ್ದರೂ ಜನರು ಆತ್ಮವಿಶ್ವಾಸದಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇಂತಹ ಘಟನೆ ನಡೆದಾಗ ಒಬ್ಬಿಬ್ಬರಲ್ಲ, ಎಲ್ಲರೂ ಮಾತನಾಡಲು ಶುರುಮಾಡುತ್ತಾರೆ ಎಂದಿದ್ದಾರೆ.
ಅಲ್ಲದೆ, ಎರಡನೇ ಮದುವೆಯ ನಿರ್ಧಾರವನ್ನೂ ಕೆಲವರು ಪ್ರಶ್ನಿಸಿದ್ದರಂತೆ. "ಈಗ ಮತ್ತೆ ಮದುವೆಯಾಗುವ ಅಗತ್ಯವೇನಿತ್ತು? ಮದುವೆಯಾಗುವ ಬದಲು ಸಹಜೀವನ ನಡೆಸಬಹುದಿತ್ತಲ್ಲವೇ?" ಎಂದು ಕೆಲವರು ಪ್ರಶ್ನಿಸಿದ್ದರು. ಇನ್ನೂ ಕೆಲವರು ನನ್ನ ಸಿನಿಮಾ ವೃತ್ತಿಜೀವನ ಮುಗಿದಿದೆ, ಇನ್ನು ಸುಮ್ಮನೆ ಕುಳಿತು ಮಗ ದೊಡ್ಡವನಾಗುವುದನ್ನು ನೋಡಬೇಕು ಎಂದು ಸಲಹೆ ನೀಡಿದ್ದರು. ಕೊನೆಗೆ ಇಂತಹ ಮಾತುಗಳನ್ನು ನಿಲ್ಲಿಸುವಂತೆ ಜನರಿಗೆ ಹೇಳಬೇಕಾಯಿತು ಎಂದು ಆಶಿಶ್ ತಿಳಿಸಿದ್ದಾರೆ.
ಇನ್ನು ಜೀವನದಲ್ಲಿ ಎದುರಾಗುವ ಕಷ್ಟಗಳು ಹಾಗೂ ಟೀಕೆಗಳ ನಡುವೆಯೂ ತಮ್ಮ ಬದುಕಿನ ನಿರ್ಧಾರವನ್ನು ತಾವೇ ತೆಗೆದುಕೊಂಡ ಆಶಿಶ್ ವಿದ್ಯಾರ್ಥಿ ಅವರ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಯಸ್ಸು ಎಂಬುದು ಹೊಸ ಬದುಕು ಆರಂಭಿಸಲು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬ ಸಂದೇಶವನ್ನೂ ಅವರ ಜೀವನದ ಪಯಣ ಸಾರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.