ಅನಂತನಾಗ್‌ ಮುತ್ತಣ್ಣ ಆಗಿದ್ದು ಹೇಗೆ ಗೊತ್ತಾ?

By Web DeskFirst Published Apr 9, 2019, 9:09 AM IST
Highlights

ಹಿರಿಯ ನಟ ಅನಂತ ನಾಗ್‌ ಅವರಿಗೂ, ಕಾಶ್ಮೀರದ ಅನಂತನಾಗ್‌ ಎಂಬ ಊರಿಗೂ ಏನಾದ್ರೂ ನಂಟು ಉಂಟಾ? ಗೊತ್ತಿಲ್ಲ. ಹಾಗಂತ, ಆ ಹೆಸರಿನ ಹೋಲಿಕೆಯ ನಂಟೇನು ಅಂತ ಯಾರು ಕೂಡ ಬೇಧಿಸುವುದಕ್ಕೆ ಹೋಗಿಲ್ಲ. ಅಷ್ಟೇ ಯಾಕೆ ಅನಂತ ನಾಗ್‌ ಅವರು ಕೂಡ ಆ ಬಗ್ಗೆ ತಲೆಕೆಡಿಸಿಕೊಂಡಿದ್ದಂತೆಯೂ ಕಾಣುತ್ತಿಲ್ಲ. ಆದರೆ ಆ ಹೆಸರಿನ ನಂಟಿನ ಮೂಲಕವೇ ನಿರ್ದೇಶಕ ಹೇಮಂತ್‌ ರಾವ್‌, ‘ಕವಲು ದಾರಿ’ ಚಿತ್ರದಲ್ಲಿನ ಅನಂತ ನಾಗ್‌ ಅವರ ಪಾತ್ರಕ್ಕೆ ಮುತ್ತಣ್ಣ ಅಂತ ಹೆಸರಿಟ್ಟಿದ್ದಾರೆ.

ಆ ಸಂಗತಿ ಈಗ ರಿವೀಲ್‌ ಆಗಿದೆ. ವಿಭಿನ್ನ ಗೆಟಪ್‌, ವಿಭಿನ್ನ ಪಾತ್ರದೊಂದಿಗೆ ಈಗಾಗಲೇ ಸಾಕಷ್ಟುಕುತೂಹಲ ಮೂಡಿಸಿರುವ ಅನಂತ ನಾಗ್‌ ಅವರ ಪಾತ್ರಕ್ಕೆ ಈಗ ಮುತ್ತಣ್ಣ ಎನ್ನುವ ಹೆಸರಿನ ಮೆರಗು ಸಿಕ್ಕಿದೆ. ಅದಕ್ಕೂ ಒಂದು ಇಂಟರೆಸ್ಟಿಂಗ್‌ ಕತೆಯಿದೆ.

‘ಅನಂತ ನಾಗ್‌ ಅವರ ಪಾತ್ರಕ್ಕೆ ಸೂಕ್ತ ಹೆಸರೇ ಬೇಕೆಂದು ಯೋಚಿಸುವಾಗ ಕಾಶ್ಮೀರದ ಅನಂತನಾಗ್‌ದಲ್ಲಿ ಉಗ್ರರ ವಿರುದ್ಧದ ದಾಳಿಯಲ್ಲಿ ಹುತಾತ್ಮರಾದ ಒರ್ವ ಯೋಧ ಮುತ್ತಣ್ಣನ ಹೆಸರು ಸೂಕ್ತ ಎನಿಸಿತು. ಅನಂತ ನಾಗ್‌ ಎನ್ನುವ ಸೆಂಟಿಮೆಂಟ್‌ ಮೂಲಕ ಆ ಹೆಸರು ಕನೆಕ್ಟ್ ಆಯಿತು. ಮುತ್ತಣ್ಣ ಮಡಿಕೇರಿ ಮೂಲದವರು. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಅವರು ಕಾಶ್ಮೀರದ ಅನಂತ ನಾಗ್‌ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದರು. ಹಾಗಾಗಿ ಚಿತ್ರದಲ್ಲಿನ ಅನಂತನಾಗ್‌ ಅವರ ಪಾತ್ರಕ್ಕೆ ಮುತ್ತಣ್ಣ ಅಂತ ಹೆಸರಿಟ್ಟೆ’ ಎನ್ನುತ್ತಾರೆ ನಿರ್ದೇಶಕ ಹೇಮಂತ ರಾವ್‌.

ಹಾಗಾದ್ರೆ, ಚಿತ್ರದಲ್ಲಿನ ಅನಂತನಾಗ್‌ ಅವರ ಪಾತ್ರ ಎಂಥದ್ದು? ಇದೇ ವಾರ ತೆರೆಗೆ ಬರುತ್ತಿರುವ ‘ಕವಲು ದಾರಿ’ ಚಿತ್ರ ಇಂತಹ ಹಲವು ಕುತೂಹಲಕಾರಿ ಸಂಗತಿಗಳಿವೆ. ಮೇಲಾಗಿ ಪುನೀತ್‌ ರಾಜ್‌ಕುಮಾರ್‌ ಹೋಮ್‌ ಬ್ಯಾನರ್‌ ಪಿಆರ್‌ಕೆ ಸಂಸ್ಥೆಯ ನಿರ್ಮಾಣದ ಮೊದಲ ಚಿತ್ರ. ಜತೆಗೆ ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ’ಚಿತ್ರದ ನಂತರ ನಿರ್ದೇಶಕ ಹೇಮಂತ್‌ ಹಾಗೂ ಹಿರಿಯ ನಟ ಅನಂತ ನಾಗ್‌ ಮತ್ತೆ ಒಂದಾಗಿದ್ದಾರೆ. ಅಲ್ಲಿ ತಂದೆ-ಮಗನ ಸಂಬಂಧವನ್ನು ಮನ ತಟ್ಟುವ ಹಾಗೆ ತೆರೆಗೆ ತಂದಿದ್ದ ಹೇಮಂತ್‌, ಇಲ್ಲಿ ಸಸ್ಪೆನ್ಸ್‌, ಥ್ರಿಲ್ಲರ್‌ ಕತೆಯೊಂದನ್ನು ಒರ್ವ ನಿವೃತ್ತ ಪೊಲೀಸ್‌ ಅಧಿಕಾರಿ, ಆತನಷ್ಟೇ ಕರ್ತವ್ಯ ನಿಷ್ಟೆಹೊಂದಿದ ಮತ್ತೊಬ್ಬ ಯುವ ಟ್ರಾಫಿಕ್‌ ಪೊಲೀಸ್‌ ಪಾತ್ರಗಳ ಮೂಲಕ ತೋರಿಸಲು ಬರುತ್ತಿರುವುದು ಅಷ್ಟೇ ರೋಚಕವಾಗಿದೆ. ಇಲ್ಲಿ ಅನಂತನಾಗ್‌ ಅವರನ್ನು ಒರ್ವ ನಿವೃತ್ತ ಪೊಲೀಸ್‌ ಅಧಿಕಾರಿಯನ್ನಾಗಿ ತೋರಿಸಲು ಹೊರಟಿರುವ ಅವರು ಆ ಪಾತ್ರದ ಸೃಷ್ಟಿಗಾಗಿ ಸಾಕಷ್ಟುಅಧ್ಯಯನ ನಡೆಸಿದ್ದಾರಂತೆ. ಅದರ ಫಲವಾಗಿಯೇ ಇಂತಹದೊಂದು ಪಾತ್ರ ಸೃಷ್ಟಿಯಾಯಿತು ಎನ್ನುತ್ತಾರೆ ನಿರ್ದೇಶಕರು.

click me!