
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟನೆಯ 'ಬ್ಲಾಸ್ಟ್' ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸುಭಾಷ್ ಕೆ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಅಭಿರಾಮಿ ಮತ್ತು ಪ್ರೀತಿ ಮುಕುಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕಲೆಕ್ಷನ್‌ನಲ್ಲೂ ಸದ್ದು ಮಾಡುತ್ತಿದ್ದು, ವಿಶ್ವಾದ್ಯಂತ ಈಗಾಗಲೇ 21 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಗಳು ಹೇಳುತ್ತಿವೆ. ಮೇ 28 ರಂದು ವಿಶ್ವಾದ್ಯಂತ ತೆರೆಕಂಡ ಈ ಚಿತ್ರಕ್ಕೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದೊಂದು ಪಕ್ಕಾ ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ. ಈಗ, ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಟಿ ಅಭಿರಾಮಿ ಹೇಳಿದ ಮಾತುಗಳು ಸಖತ್ ಚರ್ಚೆಯಾಗುತ್ತಿವೆ. ಸಾಮಾನ್ಯವಾಗಿ ತಾನು ಶಾಂತಿ ಇಷ್ಟಪಡುವ ವ್ಯಕ್ತಿ, ಆದರೆ ತನ್ನ ಮಗಳಿಗೆ ಏನಾದರೂ ಅಪಾಯ ಎದುರಾದರೆ, ತನಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ ಎಂದು ಅಭಿರಾಮಿ ಹೇಳಿದ್ದಾರೆ. 'ಬ್ಲಾಸ್ಟ್' ಸಿನಿಮಾದಲ್ಲೂ ಇದೇ ರೀತಿಯ ಭಾವನೆ ಇದೆ ಎಂದು ಅವರು ತಿಳಿಸಿದ್ದಾರೆ.
"ನಾನು ಸಾಮಾನ್ಯವಾಗಿ ಜೀವನದಲ್ಲಿ ಶಾಂತಿ ಇಷ್ಟಪಡುವ ವ್ಯಕ್ತಿ. ಆದರೆ, ನನ್ನ ಮಗಳಿಗೆ ಏನಾದ್ರೂ ಅಪಾಯ ಬಂದ್ರೆ, ನನಗಿಂತ ಅಪಾಯಕಾರಿ ಬೇರೆ ಯಾರೂ ಇರಲ್ಲ. ನಾನು ಅವರನ್ನು ಕೊಂದುಬಿಡುತ್ತೇನೆ, ಅದರಲ್ಲಿ ಯಾವುದೇ ಅನುಮಾನ ಬೇಡ. ಬ್ಲಾಸ್ಟ್ ಸಿನಿಮಾದಲ್ಲೂ ಇದೇ ಭಾವನೆ ಇದೆ. ಸೀರೆ ಉಟ್ಟುಕೊಂಡು ಫೈಟ್ ಮಾಡುವಾಗ ಸಿಗುವ ಆ 'ಫೈರ್' ಬೇರೆ ಯಾವುದರಲ್ಲೂ ಸಿಗಲ್ಲ. ಅದರಲ್ಲಿ ದೇವಿಯ ರೌದ್ರಾವತಾರ ಕಾಣಿಸುತ್ತೆ. ನನ್ನ ಜೀವನದಲ್ಲಿ ನಾನು ಇದುವರೆಗೂ ಯಾರೊಬ್ಬರಿಗೂ ಕೈ ಎತ್ತಿ ಹೊಡೆದಿಲ್ಲ. ಆದರೆ ಇನ್ಮುಂದೆ ಬೇಕಾದ್ರೆ ಹೊಡೀತೀನಿ, ಯಾಕಂದ್ರೆ ಈ ಸಿನಿಮಾಗಾಗಿ ನಾನು ಟ್ರೈನಿಂಗ್ ಕೂಡ ಪಡೆದಿದ್ದೇನೆ," ಎಂದು ಅಭಿರಾಮಿ ಹೇಳಿದ್ದಾರೆ.
ಕರಾಟೆ ಮಾಸ್ಟರ್ ಒಬ್ಬರು ಮತ್ತು ಅವರ ಕುಟುಂಬದ ಜೀವನದಲ್ಲಿ ಕೆಲವರು ಆಹ್ವಾನವಿಲ್ಲದೆ ಬರುತ್ತಾರೆ. ನಂತರ ನಡೆಯುವ ಘಟನೆಗಳೇ 'ಬ್ಲಾಸ್ಟ್' ಸಿನಿಮಾದ ಕಥಾವಸ್ತು. ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಲೆಕ್ಷನ್ ವಿಚಾರದಲ್ಲೂ ಸಿನಿಮಾ ಉತ್ತಮ ಸಾಧನೆ ಮಾಡುತ್ತಿದೆ. ಸ್ಯಾಕ್ನಿಲ್ಕ್ (Sacnilk) ವರದಿ ಪ್ರಕಾರ, ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 21 ಕೋಟಿ ಗಳಿಸಿದೆ. ಭಾರತದಲ್ಲೇ 16.03 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, ವಿದೇಶದಿಂದ 5.15 ಕೋಟಿ ರೂಪಾಯಿ ಗಳಿಸಿದೆ.
ಅರ್ಜುನ್ ಚಿದಂಬರಂ, ದಿಲೀಪನ್, ಬಾಲ ಹಸನ್, ಜಾನ್ ಕೊಕ್ಕೆನ್, ರಮೇಶ್ ನಾರಾಯಣನ್, ಪವನ್, ವಿವೇಕ್ ಪ್ರಸನ್ನ, ಮತ್ತು ವಿನೋದ್ ಸಾಗರ್ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಅರುಣ್ ರಾಧಾಕೃಷ್ಣನ್ ಛಾಯಾಗ್ರಹಣ ಮತ್ತು ಪ್ರದೀಪ್ ರಾಘವ್ ಸಂಕಲನ ಈ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.