
ಬೆಂಗಳೂರು (ಆ. 10): ‘ಕಿರಿಕ್ ಪಾರ್ಟಿ ನಾಯಕನ ಅಪ್ಪ ರೌಡಿ. ಅವನನ್ನು ಕಂಡರೆ ಎಲ್ಲರಿಗೂ ಭಯ ಅನ್ನುವುದನ್ನು ಜನರಿಗೆ ಹೇಳಬೇಕಿತ್ತು. ಅದಕ್ಕೊಂದು ಸೀನ್ ಹೆಣೆಯಬೇಕಿತ್ತು. ನಾನೊಂದು ಸೀನ್ ಮಾಡಿದೆ. ಅದೊಂದು ಸಲೂನ್. ನಾಯಕ ಒಳಗೆ ಬರುತ್ತಾನೆ.
ಅಲ್ಲಿ ಆಗಲೇ ಒಬ್ಬ ಕೂತಿರುತ್ತಾನೆ ಮತ್ತು ಅರ್ಧ ಶೇವಿಂಗ್ ಮಾಡಿ ಆಗಿರುತ್ತದೆ. ನಾಯಕ ಮತ್ತು ಅವನ ಅಪ್ಪ ಬಂದ ಕೂಡಲೇ ಕ್ಷೌರಿಕ ಅಪ್ಪನಿಗೆ ಒಂದು ನಮಸ್ಕಾರ ಹಾಕಿ ಈಗಾಗಲೇ ಶೇವಿಂಗ್ ಮಾಡಲು ಕೂತಿದ್ದವನನ್ನು ಅರ್ಧದಲ್ಲೇ ಬಿಟ್ಟು ರಕ್ಷಿತ್ ಶೆಟ್ಟಿಯನ್ನು ಇನ್ನೊಂದು ಚೇರಲ್ಲಿ ಕೂರಿಸಿ ಕಟ್ಟಿಂಗ್ ಮಾಡಲು ಶುರು ಮಾಡುತ್ತಾನೆ. ಪಕ್ಕದಲ್ಲಿದ್ದವನು ಅಣ್ಣಾ ಬೇಗ, ಅರ್ಜೆಂಟು ಅಂತ ಹೇಳುತ್ತಲೇ ಇರುತ್ತಾನೆ. ಈ ಸೀನ್ ಓದಿದ ತಕ್ಷಣ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಖುಷಿಯಾಗಿಬಿಟ್ಟರು.’
ಈ ಸೀನ್ ಹೇಳಿದ್ದು ಅಭಿಜಿತ್ ಮಹೇಶ್. ಕನ್ನಡ ಚಿತ್ರರಂಗದ ಸದ್ಯದ ಸ್ಟಾರ್ ರೈಟರ್. ಕಳೆದವಾರ ಬಿಡುಗಡೆಯಾದ ಕಥೆಯೊಂದು ಶುರುವಾಗಿದೆ ಚಿತ್ರದ ಇವರ ಬರಹಕ್ಕೆ ಭಾರಿ ಮೆಚ್ಚುಗೆ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಫ್ರೆಂಡು, ರಿಷಬ್ ಶೆಟ್ಟಿ ಪರಮಾಪ್ತ. ಪರಮ್ ವಾಹ್ ಸ್ಟುಡಿಯೋಸ್‌ನ ಈ ಹೆಮ್ಮೆಯ ಬರಹಗಾರ ಚಿತ್ರ ರಂಗಕ್ಕೆ ಬಂದಿದ್ದೇ ಅಚ್ಚರಿ. ಮೂಲ ಮೂಡಬಿದ್ರಿ ಸಮೀಪದ ಕೇಮಾರು. ಬದುಕಿ ಕಟ್ಟಿಕೊಂಡಿದ್ದು ಮತ್ತು ಈಗ ಬದುಕುತ್ತಿರುವುದು ಬೆಂಗಳೂರು.
ಅಪ್ಪ ಮಹೇಶ್ ಮತ್ತು ಅಮ್ಮ ವೀಣಾರ ಮುದ್ದಿನ ಮಗ. ಓದಿದ್ದು ಇಂಜಿನಿಯರಿಂಗು. ಆ ಟೈಮಲ್ಲಿ ಅಟೆಂಡೆನ್ಸ್‌ಗೆ ಅಂತ ಮ್ಯಾಡ್ ಆ್ಯಡ್ಸ್ ಟೀಂ ಕಟ್ಟಿಕೊಂಡಿದ್ದರು. ಬರವಣಿಗೆ ಇವರದೇ. ಅರವತ್ತು ಮ್ಯಾಡ್ ಆ್ಯಡ್ಸ್‌ಗೆ ಸ್ಕ್ರಿಪ್ಟ್ ಬರೆದಿರುವ ಇವರ ಐವತ್ತು ಸ್ಕ್ರಿಪ್ಟ್‌ಗೆ ಪ್ರಶಸ್ತಿ ಬಂದಿದೆ. ಐಟಿ ಕಂಪನಿ ಸೇರಿ ಆ ಟೈಮಲ್ಲೇ ಶಾರ್ಟ್ ಫಿಲ್ಮ್ ಮಾಡುತ್ತಿದ್ದಾಗ ಪರಿಚಯ ಆಗಿದ್ದು ರಕ್ಷಿತ್ ಶೆಟ್ಟಿ. ಐಟಿಯಲ್ಲಿ ಒಂಭತ್ತು ವರ್ಷ ಕೆಲಸ ಮಾಡಿದ ಇವರಿಗೆ ಸಿನಿಮಾ ಕ್ಷೇತ್ರಕ್ಕೆ ಬರುತ್ತೇನೆ ಅನ್ನುವ ಐಡಿಯಾ ಇರಲಿಲ್ಲ.
ಒನ್ ಫೈನ್ ಡೇ ರಕ್ಷಿತ್ ಸಿಕ್ಕಿ ಅವರ ಜೊತೆ ರಿಷಬ್ ಶೆಟ್ಟಿ ಜೊತೆಯಾಗಿ ಕಿರಿಕ್ ಪಾರ್ಟಿ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅಲ್ಲಿಂದ ಮುಂದೆ ಪರಮ್‌ವಾಹ್, ಪುಷ್ಕರ್ ಫಿಲಮ್ಸ್‌ನ ಎಲ್ಲಾ ಚಿತ್ರದಲ್ಲೂ ಇವರ ಕೈವಾಡ ಇದ್ದೇ ಇದೆ.
ಈ ತಂಡ ಸೇರುವ ಮುನ್ನವೇ ಏಳೆಂಟು ಸಿನಿಮಾ ಕತೆಗೆ ಕೆಲಸ ಮಾಡಿದ್ದರು. ಆದರೆ ಯಾವುದೂ ದಡ ಸೇರಲಿಲ್ಲ. ಯೋಗರಾಜ ಭಟ್ಟರ ಮುಂಗಾರು ಮಳೆ, ಉಳಿದವರು ಕಂಡಂತೆ ಚಿತ್ರದ ಪಾತ್ರಗಳನ್ನು ನೋಡಿ ನಾನು ಸ್ಫೂರ್ತಿ ಪಡೆದೆ ಎನ್ನುವ ಅಭಿಗೆ ತಾನೊಂದು ಚಿತ್ರ ನಿರ್ದೇಶಿಸಬೇಕು ಅನ್ನೋ ಕನಸು. ಅವಸರವೇನಿಲ್ಲ, ಆದ್ರೆ ಸೇಫ್ಟಿಗೆ ಟವೆಲ್ ಹಾಕಿದ್ದೀನಿ ಅಂತ ತಮಾಷೆಯಿಂದಲೇ ಹೇಳುವ ಅಭಿಯ ಆಸೆ ನೇರವೇರಲಿ.
-ರಾಜೇಶ್ ಶೆಟ್ಟಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.